ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಮಾರ್ಚ್‌ ಮೊದಲ ವಾರ ನಡೆಯುವುದು ಅನುಮಾನ

Last Updated 14 ಜನವರಿ 2023, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 14ನೇ ಆವೃತ್ತಿಯ ಸಿದ್ಧತಾ ಕೆಲಸಗಳು ಇನ್ನೂ ಪ್ರಾರಂಭವಾಗಿಲ್ಲ. ಇನ್ನೆರಡು ದಿನಗಳಲ್ಲಿ ಲಾಂಛನ ಅನಾವರಣಗೊಳ್ಳುವ ನಿರೀಕ್ಷೆ ಇದ್ದು, ಮಾರ್ಚ್ ಮೊದಲ ವಾರದಲ್ಲಿ ಚಿತ್ರೋತ್ಸವ ಶುರುವಾಗುವುದು ಅನುಮಾನವಾಗಿದೆ.

‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು ಕೆಲವು ದಿನಗಳ ಕಾಲ ರಜೆಯಲ್ಲಿದ್ದರು. ಸಚಿವ ಆರ್. ಅಶೋಕ ಅವರೊಟ್ಟಿಗೆ ಕಳೆದ ವಾರದಿಂದ ನಿರಂತರ ಸಂಪರ್ಕದಲ್ಲಿರುವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಚಿತ್ರೋತ್ಸವಕ್ಕೆ ಸಂಬಂಧಿಸಿದ ಮಾಹಿತಿ ಅಧಿಕೃತವಾಗಿ ಹೊರಬೀಳುವ ನಿರೀಕ್ಷೆ ಇದೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ತಿಳಿಸಿದರು.

‘ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ ತೆರೆಕಂಡಿದ್ದು ಮಾರ್ಚ್‌ನಲ್ಲಿ. ಹೀಗಾಗಿ ಆ ನೆನಪಿನಲ್ಲಿ ಅದೇ ತಿಂಗಳಲ್ಲಿ ಚಿತ್ರೋತ್ಸವ ಆಯೋಜಿಸಬೇಕು ಎನ್ನುವುದು ಎಲ್ಲರ ಬಯಕೆ. ಈ ಕುರಿತು ಅಧಿಕೃತವಾಗಿ ಸರ್ಕಾರಿ ಆದೇಶವೇನೂ ಆಗಿಲ್ಲ. ಈ ಬಾರಿಯೂ ಮಾರ್ಚ್‌ನಲ್ಲಿಯೇ ಆಯೋಜಿಸಲು ಶತಾಯಗತಾಯ ಯತ್ನಿಸುತ್ತೇವೆ’ ಎಂದು ಅವರು ಹೇಳಿದರು.

‘ಒಂದು ಚಿತ್ರೋತ್ಸವವನ್ನು ಆಯೋಜನೆ ಮಾಡಲು ಕನಿಷ್ಠ 70 ದಿನಗಳ ಪೂರ್ವಭಾವಿ ತಯಾರಿಬೇಕು. ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕನಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಎರಡು ತಿಂಗಳ ಹಿಂದೆ ನನಗೆ ಅಧಿಕೃತ ಪತ್ರ ಬಂದಿದೆ. ಇಂತಹ ದಿನದಿಂದ ಚಿತ್ರೋತ್ಸವ ಪ್ರಾರಂಭವಾಗುತ್ತದೆ ಎನ್ನುವುದು ನಿಶ್ಚಯವಾದ ಮೇಲೆ ಉಳಿದ ಕೆಲಸಗಳು ಶುರುವಾಗಲಿವೆ’ ಎಂದು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎಚ್‌.ಎನ್. ನರಹರಿ ರಾವ್ ಪ್ರತಿಕ್ರಿಯಿಸಿದರು.

‘ಗುಣಮಟ್ಟದ ಚಿತ್ರೋತ್ಸವವನ್ನು ತರಾತುರಿಯಿಂದ ನಡೆಸಲಾಗದು. ಸ್ಪರ್ಧೆಗೆ ಬರುವ ಸಿನಿಮಾಗಳನ್ನು ಸೋಸಿ, ಗಟ್ಟಿಯಾದುದನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ತೀರ್ಪುಗಾರರ ಸಮಿತಿಗಳನ್ನೂ ಇನ್ನೂ ರಚಿಸಿಲ್ಲ. ಕಾನ್‌ ಮತ್ತಿತರ ಕಡೆ ಪ್ರದರ್ಶಿತವಾದ ಬೇರೆ ಭಾಷೆಯ ಸಿನಿಮಾಗಳನ್ನು ಇಲ್ಲಿಗೆ ಬೇಗ ತರುವುದೇನೊ ಸಾಧ್ಯ. ಅದನ್ನೂ ಮೀರಿ, ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೇ ವಿಶೇಷ ಎನ್ನುವಂತಹ ಸಿನಿಮಾಗಳನ್ನು ಸೇರಿಸಿಕೊಳ್ಳಬೇಕಾದರೆ ಅದಕ್ಕೂ ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ಕಳೆದ ಬಾರಿ ಡಿಸೆಂಬರ್‌ನಲ್ಲೇ ಚಿತ್ರೋತ್ಸವದ ಪೂರ್ವ ಸಿದ್ಧತಾ ಕೆಲಸಗಳು ಶುರುವಾಗಿದ್ದವು’ ಎಂದು ಆಗ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯರಾಗಿದ್ದ ಪ್ರದೀಪ್ ಕೆಂಚನೂರು ಅನುಭವ ಹಂಚಿಕೊಂಡರು. ವಿಧಾನಸಭಾ ಚುನಾವಣೆ ಕೂಡ ಸಮೀಪಿಸುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಾಗುವುದರೊಳಗೆ ಚಿತ್ರೋತ್ಸವವನ್ನು ಮುಗಿಸಬೇಕಾದ ಒತ್ತಡದಲ್ಲಿ ಅಕಾಡೆಮಿ ಹಾಗೂ ಸಂಬಂಧಪಟ್ಟ ಸಿನಿಮಾ ಕ್ಷೇತ್ರದ ಸಂಸ್ಥೆಗಳಿವೆ.

‘ಇನ್ನೆರಡು ದಿನಗಳಲ್ಲಿ ಲಾಂಛನ’
‘ವಿಧಾನಸಭಾ ಚುನಾವಣೆ ಬರಲಿದೆ ಎನ್ನುವುದು ನಿಜ. ಆದರೆ, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇದರಿಂದ ವಿಳಂಬವೇನೂ ಆಗದು. ಇನ್ನೆರಡು ದಿನಗಳಲ್ಲಿ ಲಾಂಛನ ಬಿಡುಗಡೆ ಮಾಡುತ್ತೇವೆ. ಮಾರ್ಚ್‌ನಲ್ಲೇ ಚಿತ್ರೋತ್ಸವವನ್ನು ಸುಸೂತ್ರವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಕಳೆದ ಬಾರಿ ₹5 ಕೋಟಿ ಬಜೆಟ್ ನೀಡಲಾಗಿತ್ತು. ಈ ಸಲ ₹6 ಕೋಟಿಯನ್ನು ನಿರೀಕ್ಷಿಸಲಾಗಿದೆ’ ಎಂದು ಚಿತ್ರೋತ್ಸವದ ಸಂಘಟನಾ ಸಮಿತಿಯ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT