ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Oscars 2022: ವೇದಿಕೆಯಲ್ಲಿ ಸಹನಟನ ಕೆನ್ನೆಗೆ ಹೊಡೆದಿದ್ದ ಸ್ಮಿತ್ ಕ್ಷಮೆಯಾಚನೆ

Last Updated 29 ಮಾರ್ಚ್ 2022, 5:43 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಪ್ರಸಕ್ತ ಸಾಲಿನ 'ಅತ್ಯುತ್ತಮ ನಟ' ಆಸ್ಕರ್‌ ಪ್ರಶಸ್ತಿ ವಿಜೇತ ವಿಲ್ ಸ್ಮಿತ್ ಅವರು, ಹಾಸ್ಯನಟ ಕ್ರಿಸ್ ರಾಕ್ ಅವರಲ್ಲಿ ಕ್ಷಮೆ ಕೇಳಿದ್ದಾರೆ. ಸ್ಮಿತ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆರಾಕ್ ಕೆನ್ನೆಗೆ ಬಾರಿಸಿದ್ದರು.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಅವರು, 'ಕ್ರಿಸ್, ನಾನು ನಿಮ್ಮಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಲು ಬಯಸುತ್ತಿದ್ದೇನೆ. ನಾನು ಮುಜುಗರಗೊಂಡಿದ್ದೇನೆ ಮತ್ತು ನಾನು ನಡೆದುಕೊಂಡಂತೆ ಇರಲು ಬಯಸುವುದಿಲ್ಲ. ಪ್ರೀತಿ ಮತ್ತು ಕರುಣೆಯ ಪ್ರಪಂಚದಲ್ಲಿಹಿಂಸೆಗೆ ಜಾಗವಿರುವುದಿಲ್ಲ' ಎಂದಿದ್ದಾರೆ.

'ಹಿಂಸೆಯು ಎಲ್ಲ ರೀತಿಯಿಂದಲೂ ವಿಷಕಾರಿ ಮತ್ತು ವಿನಾಶಕಾರಿ. ಕಳೆದ ರಾತ್ರಿಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿನ ನನ್ನ ವರ್ತನೆಯು ಒಪ್ಪುವಂತಹದಲ್ಲ ಮತ್ತು ಕ್ಷಮೆಗೂ ಅರ್ಹವಲ್ಲ. ನನ್ನ ವಿಚಾರದಲ್ಲಿ ಹಾಸ್ಯ ಮಾಡಿದ್ದರೆ, ಕೆಲಸದ ಒಂದು ಭಾಗವಾಗಿರುತ್ತಿತ್ತು. ಆದರೆ, ಜೇಡ (ಜೇಡ ಪಿಂಕೆಟ್‌, ಸ್ಮಿತ್‌ ಅವರ ಪತ್ನಿ) ಅವರ ಆರೋಗ್ಯ ಸ್ಥಿತಿ ಬಗ್ಗೆ ತಮಾಷೆ ಮಾಡಿದ್ದು ಅತಿ ಎನಿಸಿತು. ತಡೆದುಕೊಳ್ಳಲಾಗದೆ, ಭಾವನಾತ್ಮಕವಾಗಿ ಪ್ರತಿಕ್ರಿಯಿಸಿಬಿಟ್ಟೆ' ಎಂದೂ ವಿವರಿಸಿದ್ದಾರೆ.

ರಾಕ್‌ ಅವರಲ್ಲಿ ಮಾತ್ರವಲ್ಲದೆ ಅಕಾಡೆಮಿ ಬಳಿಯೂ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ:Oscars 2022: ವೇದಿಕೆ ಮೇಲೆ ಸಹ ನಟನ ಕೆನ್ನೆಗೆ ಹೊಡೆದ ನಟವಿಲ್‌ ಸ್ಮಿತ್

'ಅಕಾಡೆಮಿ, ಕಾರ್ಯಕ್ರಮ ನಿರೂಪಕರು, ನಿರ್ಮಾಪಕರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಮತ್ತು ವಿಶ್ವದಾದ್ಯಂತ ಕಾರ್ಯಕ್ರಮ ವೀಕ್ಷಿಸಿದ ಎಲ್ಲರಲ್ಲೂ ಕ್ಷಮೆ ಕೋರಲು ಬಯಸುತ್ತೇನೆ. 'ಕಿಂಗ್‌ ರಿಚರ್ಡ್‌' ಚಿತ್ರತಂಡವನ್ನೂ ಕ್ಷಮೆ ಕೇಳುತ್ತೇನೆ. ಎಲ್ಲರ ಸುಂದರ ಪ್ರಯಾಣವುನನ್ನ ವರ್ತನೆಯಿಂದ ಹಾಳಾದುದ್ದಕ್ಕೆ ತೀವ್ರವಾಗಿ ವಿಷಾಧಿಸುತ್ತೇನೆ' ಎಂದೂ ಹೇಳಿದ್ದಾರೆ.

94ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್‌ಏಂಜಲೀಸ್‌ನ ಡೊಲ್ಡಿ ಸಭಾಂಗಣದಲ್ಲಿ ಭಾನುವಾರ ಜರುಗಿತ್ತು.

'ಕಿಂಗ್‌ ರಿಚರ್ಡ್‌' ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ಮಿತ್‌, ‘ನಾನು ಅಕಾಡೆಮಿ, ನಾಮನಿರ್ದೇಶನಗೊಂಡ ನಟರ ಕ್ಷಮೆಯಾಚಿಸುತ್ತೇನೆ. ಪ್ರೀತಿ ಎನ್ನುವುದು ವಿಲಕ್ಷಣವಾದುದನ್ನು ನಿಮ್ಮಿಂದ ಮಾಡಿಸುತ್ತದೆ. ನಿಂದನೆ ಹಾಗೂ ನಿಮ್ಮ ಕುರಿತು ಇತರರು ವಿಚಿತ್ರವಾಗಿ ಮಾತನಾಡಿದರೆ ಅದನ್ನು ತಡೆದುಕೊಳ್ಳುವ ಶಕ್ತಿ ನಿಮ್ಮಲ್ಲಿ ಇರಬೇಕು. ಇದನ್ನು ನಗುತ್ತಾ ಸ್ವೀಕರಿಸಿ, ಏನೂ ಆಗಿಲ್ಲ ಎಂಬತೆ ಇರಬೇಕು’ ಎಂದಿದ್ದರು. ಆದರೆ ನೇರವಾಗಿ ರಾಕ್‌ ಅವರ ಕ್ಷಮೆಯನ್ನು ಅವರು ಕೋರಿರಲಿಲ್ಲ.

ಘಟನೆ ಕುರಿತು ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದ ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್ಸ್‌ ಆರ್ಟ್ಸ್‌ ಆ್ಯಂಡ್‌ ಸೈನ್ಸ್‌ (ಎಎಂಪಿಎಎಸ್‌), ‘ಯಾವುದೇ ರೀತಿಯ ಹಿಂಸೆಯನ್ನು ನಾವು ಕ್ಷಮಿಸುವುದಿಲ್ಲ’ ಎಂದಿತ್ತು.

ಆಗಿದ್ದೇನು?
ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಘೋಷಣೆ ಮಾಡಲು ವೇದಿಕೆಗೆ ರಾಕ್‌ ಆಗಮಿಸಿದ್ದರು. ಪ್ರಶಸ್ತಿ ಘೋಷಣೆ ಮಾಡುವುದಕ್ಕೂ ಮುನ್ನ, ವಿಲ್‌ ಸ್ಮಿತ್‌ ಅವರ ಪತ್ನಿ ಜೇಡ ಪಿಂಕೆಟ್‌ ಸ್ಮಿತ್‌ ಕುರಿತು ರಾಕ್‌ ಚಟಾಕಿಯೊಂದನ್ನು ಹಾರಿಸಿದರು. ‘ಜೇಡ, ಜಿ.ಐ.ಜೇನ್‌ ಸಿನಿಮಾದ ಎರಡನೇ ಭಾಗದಲ್ಲಿ ನಿಮ್ಮನ್ನು ನೋಡಲು ಕಾತುರದಿಂದಿದ್ದೇನೆ’ ಎಂದಿದ್ದರು.

ಇದನ್ನೂ ಓದಿ:Oscars 2022 | ‘ಕೋಡ’ ಅತ್ಯುತ್ತಮ ಚಿತ್ರ, ವಿಲ್‌ ಸ್ಮಿತ್‌ ಅತ್ಯುತ್ತಮ ನಟ

ಕೂದಲುದುರುವಿಕೆಯ ಕಾಯಿಲೆಯಿಂದ (ಅಲೊಪೀಸಿಯಾ) ಬಳಲುತ್ತಿರುವ ಜೇಡ ಅವರ ಬೋಳುತಲೆಯನ್ನು ಉದ್ದೇಶಿಸಿ ರಾಕ್‌ ಈ ರೀತಿ ಹೇಳಿಕೆ ನೀಡಿದ್ದರು. 1997ರಲ್ಲಿ ಬಿಡುಗಡೆಯಾಗಿದ್ದ ‘ಜಿ.ಐ.ಜೇನ್‌’ ಸಿನಿಮಾದಲ್ಲಿ ನಟಿ ಡೆಮಿ ಮೋರ್‌ ಈ ರೀತಿ ಬೋಳುತಲೆ ಮಾಡಿಸಿಕೊಂಡಿದ್ದರು.

ನಗುತ್ತಲೇ ಈ ಹೇಳಿಕೆಯನ್ನು ಸ್ವೀಕರಿಸಿದ ಸ್ಮಿತ್‌, ತದನಂತರ ಏಕಾಏಕಿ ವೇದಿಕೆ ಏರಿ ರಾಕ್‌ ಕೆನ್ನೆಗೆ ಬಾರಿಸಿದರು. ಈ ಘಟನೆಯು ಸಭಿಕರನ್ನು, ಪ್ರೇಕ್ಷಕರನ್ನು ಕ್ಷಣಕಾಲ ಗಲಿಬಿಲಿಗೊಳಿಸಿತು. ವೇದಿಕೆಯಿಂದ ಇಳಿದ ಸ್ಮಿತ್‌, ‘ನಿನ್ನ ಬಾಯಿಯಲ್ಲಿ ನನ್ನ ಪತ್ನಿಯ ಹೆಸರು ಬರಬಾರದು’ ಎಂದು ರಾಕ್‌ಗೆ ಅವಾಚ್ಯ ಶಬ್ದಗಳನ್ನು ಬಳಸಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT