ದೊಡ್ಡ ಬಜೆಟ್ ಸಿನಿಮಾಗಳಿಗೆ ಕೂಡಿ ಬಂತು ಬಿಡುಗಡೆ ಭಾಗ್ಯ

ಕೊರೊನಾ ಕಷ್ಟಕಾಲ ಕಳೆದು ಒಳ್ಳೆಯ ದಿನಗಳು ಚಿತ್ರರಂಗಕ್ಕೆ ಬರುತ್ತಿರುವ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಹೊಸ ಚಿತ್ರಗಳು ಸೆಟ್ಟೇರುವ ಜತೆಗೆ, ಈಗಾಗಲೇ ನಿರ್ಮಣವಾಗಿ ಬಾಕ್ಸ್ ಆಫೀಸಿನಲ್ಲಿ ಕಾದು ಕುಳಿತಿರುವ ಚಿತ್ರಗಳು ಈಗ ಒಂದೊಂದೆ ಬಿಡುಗಡೆಯ ಭಾಗ್ಯ ಕಾಣಲು ಹತ್ತಿರವಾಗುತ್ತಿವೆ.
ಕೋವಿಡ್ ಕಾರಣಕ್ಕೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಶೇ 50ಕ್ಕೆ ಮಿತಿಗೊಳಿಸಿರುವುದರಿಂದ ದೊಡ್ಡ ಬಜೆಟ್ ಚಿತ್ರಗಳನ್ನು ಬಿಡುಗಡೆ ಮಾಡಲು ಚಿತ್ರ ನಿರ್ಮಾಪಕರು ಹಿಂದೇಟು ಹಾಕುತ್ತಿದ್ದರು. ಲಾಕ್‌ಡೌನ್ ವೇಳೆ ತೊಂದರೆಗೆ ಸಿಲುಕಿದ್ದ ಚಿತ್ರಗಳನ್ನು ಅನ್‌ಲಾಕ್ ವೇಳೆ ಪುನಃ ಮರುಬಿಡುಗಡೆ ಮಾಡಿ, ಒಂದಿಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಯತ್ನವನ್ನು ಚಿತ್ರರಂಗ ಮಾಡಿತು. ಈಗ ಕಾಲಿವುಡ್‌ನ ಖ್ಯಾತ ನಟ ದಳಪತಿ ವಿಜಯ್ ನಟನೆಯ ಬಿಗ್‌ಬಜೆಟ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಳ್ಳೆಯ ಕಲೆಕ್ಷನ್ ಕಾಣುತ್ತಿರುವಾಗ ಸ್ಯಾಂಡಲ್‌ವುಡ್‌ನಲ್ಲೂ ನಿರ್ಮಾಪಕರಿಗೆ ಧೈರ್ಯಬಂದಂತೆ, ಆಸೆ ಚಿಗುರಿದಂತೆ ಕಾಣಿಸುತ್ತಿದೆ. ಈಗ ಒಬ್ಬೊಬ್ಬರಾಗಿಯೇ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಲಾರಂಭಿಸಿದ್ದಾರೆ.
ನಟ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹು ನಿರೀಕ್ಷೆಯ ಚಿತ್ರ ‘ಪೊಗರು’ ಫೆಬ್ರುವರಿ 19ರಂದು ಬಿಡುಗಡೆಯಾಗಲಿದೆ. ಈ ಸುದ್ದಿಯನ್ನು ನಟ ಧ್ರುವಸರ್ಜಾ ಅವರು ಫೇಸ್‌ಬುಕ್ ಲೈವ್‌ನಲ್ಲಿ ಪ್ರಕಟಿಸಿದ್ದಾರೆ. ಚಿತ್ರತಂಡ ಕೂಡ ಸಾಮಾಜಿಕ ಜಾಲತಾಣಗಳ ತನ್ನ ಅಧಿಕೃತ ಪುಟಗಳಲ್ಲಿ ದಿನಾಂಕ ಪ್ರಕಟಿಸಿದೆ. ಈ ಚಿತ್ರವನ್ನು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಏಕ ಕಾಲಕ್ಕೆ ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು ನಿರ್ಧರಿಸಿದ್ದಾರೆ.
ಇನ್ನು ದರ್ಶನ್ ನಟನೆಯ ಬಹು ನಿರೀಕ್ಷೆಯ ಚಿತ್ರ ‘ರಾಬರ್ಟ್’ ಬಿಡುಗಡೆಯ ದಿನಾಂಕವೂ ಘೋಷಣೆಯಾಗಿದೆ. ಈ ಚಿತ್ರವನ್ನು ಮಾರ್ಚ್ 11ರಂದು ಅಂದರೆ, ಮಹಾಶಿವರಾತ್ರಿ ಹಬ್ಬದಂದು ಬಿಡುಗಡೆ ಮಾಡುವುದಾಗಿ ದರ್ಶನ್ ಕೂಡ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅದೂ ಅಲ್ಲದೇ ಈ ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವುದಾಗಿ ದರ್ಶನ್ ಚಾಲೆಂಜ್ ಹಾಕಿದ್ದಾರೆ.
ಇದನ್ನೂ ಓದಿ: ಜನವರಿ 24ಕ್ಕೆ ಹಸೆಮಣೆ ಏರಲಿದ್ದಾರಾ ನಟ ವರುಣ್ ಧವನ್?
ಇನ್ನು ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ಪುನೀತ್ ನಟನೆಯ ‘ಯುವರತ್ನ’, ಸುದೀಪ್ ನಟನೆಯ ‘ಕೋಟಿಗೊಬ್ಬ–3’, ದುನಿಯಾ ವಿಜಯ್ ನಟನೆಯ ‘ಸಲಗ’ ಇನ್ನಿತರ ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಈ ಚಿತ್ರಗಳ ನಿರ್ಮಾಪಕರು ಒಬ್ಬೊಬ್ಬರಾಗಿ ಬಿಡುಗಡೆಯ ದಿನವನ್ನು ಪ್ರಕಟಿಸುವ ನಿರೀಕ್ಷೆ ಇದೆ. ಜತೆಗೆ ಶಿವರಾಜ್‌ಕುಮಾರ್, ರವಿಚಂದ್ರನ್, ಉಪೇಂದ್ರ, ರಮೇಶ್ ಅರವಿಂದ್, ಶ್ರೀಮುರಳಿ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ, ಗಣೇಶ್, ಪ್ರೇಮ್ ಸೇರಿದಂತೆ ಒಂದಿಷ್ಟು ಹೊಸಬರ ಬಹು ನಿರೀಕ್ಷೆಯ ಚಿತ್ರಗಳು ಈ ವರ್ಷ ತೆರೆ ಕಾಣಲು ಸಜ್ಜಾಗಿವೆ.
ಇದನ್ನೂ ಓದಿ: ಮಾಲ್ಡೀವ್ಸ್ನಲ್ಲಿ ಯಶ್-ರಾಧಿಕಾ ದಂಪತಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.