ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿಯಾ ಹಾಗೂ ಬನ್ಸಾಲಿ ವಿರುದ್ಧ ದೂರು ದಾಖಲಿಸಿದ ಗಂಗೂಬಾಯಿ ಕಾಥಿಯಾವಾಡಿ ಪುತ್ರ

Last Updated 27 ಡಿಸೆಂಬರ್ 2020, 13:17 IST
ಅಕ್ಷರ ಗಾತ್ರ

ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರಕ್ಕೆ ಶೀರ್ಷಿಕೆಯೇ ಮುಳುವಾಗಿದೆ. ಗಂಗೂಬಾಯಿ ಕಾಥಿಯಾವಾಡಿ ಎಂಬ ಕಾಮಾಟಿಪುರದ ಮಹಿಳೆಯೊಬ್ಬರ ಜೀವನಕಥೆಯನ್ನು ಸಂಜಯ್ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಚಿತ್ರಕ್ಕೆ ಆಕೆಯ ಹೆಸರನ್ನೇ ಇರಿಸಲಾಗಿದೆ. ಆ ಕಾರಣಕ್ಕೆ ಗಂಗೂಬಾಯಿ ಅವರ ಪುತ್ರ ಬಾಪೂಜಿ ರಾವ್‌ಜಿ ಶಾ ನಟಿ ಆಲಿಯಾ ಭಟ್ ಹಾಗೂ ಬನ್ಸಾಲಿ ಪ್ರೊಡಕ್ಷನ್ ವಿರುದ್ಧ ದೂರು ದಾಖಲಿಸಿದ್ದಾರೆ.

ಅಷ್ಟೇ ಅಲ್ಲದೇ ದಿ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಪುಸ್ತಕದಬರಹಗಾರ ಹುಸೇನ್ ಜೈದಿ ಅವರ ಮೇಲೂ ಬಾಪೂಜಿ ದೂರು ದಾಖಲಿಸಿದ್ದಾರೆ. ಗಂಗೂಬಾಯಿ ಕಾಥಿಯಾವಾಡಿ ಸಿನಿಮಾವು ಈ ಪುಸ್ತಕವನ್ನು ಆಧರಿಸಿದ್ದಾಗಿದೆ. ವರದಿಗಾರ ಜೇನ್ ಬೊರ್ಗೆಸ್ ಅವರ ಸಂಶೋಧನೆಯು ಈ ಪುಸ್ತಕದ ಪ್ರಮೇಯವಾಗಿದೆ.

‘ಈ ಸಿನಿಮಾದಲ್ಲಿನ ಕೆಲವು ಅಂಶಗಳು ಮಾನಹಾನಿ ಉಂಟು ಮಾಡುವಂತಿದೆ. ಅಲ್ಲದೇ ಚಿತ್ರದಲ್ಲಿ ಗೌಪ್ಯತೆ, ಸ್ವಾಭಿಮಾನ ಹಾಗೂ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ’ ಎಂದು ಬಾಪೂಜಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

‘ಮಾನಹಾನಿ, ಮಹಿಳೆಯನ್ನು ಅಸಭ್ಯವಾಗಿ ಪ್ರಾತಿನಿಧಿಸಿದ್ದು, ಅಶ್ಲೀಲ ಹಾಗೂ ಅಸಭ್ಯವಾಗಿ ಪ್ರಸಾರ ಮಾಡಿರುವ ಅಂಶಗಳನ್ನು ಇರಿಸಿಕೊಂಡು ಅವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವ ಸಾಧ್ಯತೆ ಇದೆ’ ಎಂದಿದ್ದಾರೆ ಬಾಪೂಜಿ ಪರ ವಕೀಲ ನರೇಂದ್ರ ದುಬೆ.

ಈ ಪ್ರಕರಣಕ್ಕೆ ಸಂಬಂಧಿಸಿ ಬಾಂಬೆ ಸಿವಿಲ್ ಕೋರ್ಟ್‌ನಲ್ಲಿ ಮೊದಲ ಹಂತದ ವಿಚಾರಣೆ ಮಂಗಳವಾರ ನಡೆಯಲಿದ್ದು, ಜನವರಿ 7ರಂದು ಈ ದೂರಿಗೆ ಪ್ರತಿಕ್ರಿಯೆ ನೀಡಬೇಕು ಎಂದು ಸಂಬಂಧ ಪಟ್ಟವರಿಗೆ ಕೋರ್ಟ್ ತಿಳಿಸಿದೆ.

ಚಿತ್ರದಲ್ಲಿ ಆಲಿಯಾ ಭಟ್ಗಂಗೂಬಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದು ಆಲಿಯಾ ಹಾಗೂ ಸಂಜಯ್ ಅವರ ಕಾಂಬಿನೇಷನ್‌ನ ಮೊದಲ ಚಿತ್ರ.‌

ಈ ಚಿತ್ರವು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇತ್ತು, ಆದರೆ ಕೊರೊನಾ ಕಾರಣದಿಂದ ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಈಗ ಸಿನಿಮಾವನ್ನು ಮುಂದಿನ ವರ್ಷ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT