ಸೋಮವಾರ, ಮಾರ್ಚ್ 27, 2023
33 °C

ಮರ್ಯಾದೆಗೇಡು ಹತ್ಯೆ ಆಧರಿಸಿ ಸಿನಿಮಾ: ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ಪ್ರಕರಣ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರಾಮ್‌ ಗೋಪಾಲ್‌ ವರ್ಮಾ ಮತ್ತು ಮರ್ಡರ್‌ ಸಿನಿಮಾದ ಪೋಸ್ಟರ್‌

ಹೈದರಾಬಾದ್: ಸಿನಿಮಾ ನಿರ್ದೇಶಕ, ನಿರ್ಮಾಪಕ ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ. ತೆಲಂಗಾಣದಲ್ಲಿ 2018ರಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆ ಆಧರಿಸಿ ರಾಮ್‌ ಗೋಪಾಲ್‌ ವರ್ಮಾ 'ಮರ್ಡರ್‌' ಹೆಸರಿನ ಸಿನಿಮಾ ನಿರ್ಮಿಸುತ್ತಿದ್ದಾರೆ.

ಗರ್ಭಿಣಿಯಾಗಿದ್ದ ಪತ್ನಿ ಅಮೃತಾಳನ್ನು ತಪಾಸಣೆಗೆಂದು ಪತಿ ಪ್ರಣಯ್‌ ಕುಮಾರ್ (24) ತೆಲಂಗಾಣದ ಮಿರ್ಯಾಲಗುಡದಲ್ಲಿನ ಆಸ್ಪತ್ರೆಯೊಂದಕ್ಕೆ ಕರೆತಂದಿದ್ದರು. ಅದೇ ವೇಳೆ ಪ್ರಣಯ್‌ ಮೇಲೆ ಕೆಲವರು ದಾಳಿ ಮಾಡಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಅಮೃತಾಳ ತಂದೆ ಮಾರುತಿ ರಾವ್‌ನನ್ನು ಪೊಲೀಸರು ಬಂಧಿಸಿದ್ದರು. ಅಮೃತಾ ವರ್ಷಿಣಿ, ಪ್ರಣಯ್‌ ಪ್ರೀತಿಸಿ ಮದುವೆಯಾಗಿದ್ದರು. ಪ್ರಣಯ್ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರಿಂದ ಜಾತಿ ಮತ್ತು ಪ್ರತಿಷ್ಠತೆಯ ವಿಷಯವಾಗಿ ಮಾವ ಮಾರುತಿ ರಾವ್‌ ಕುಟುಂಬದವರಿಗೆ ಆತನ ಮೇಲೆ ದ್ವೇಷವಿತ್ತು. ಅದೇ ಕಾರಣದಿಂದಾಗಿ ಸುಪಾರಿ ನೀಡಿ ಪ್ರಣಯ್‌ ಹತ್ಯೆ ಮಾಡಿಸಲಾಗಿದೆ ಎಂದು ಆರೋಪವಿದೆ.

ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದೇ ವರ್ಷ ಮಾರ್ಚ್‌ನಲ್ಲಿ ಆರೋಪಿ ಮಾರುತಿ ರಾವ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಅಮೃತಾ ಮತ್ತು ಹತ್ಯೆಗೀಡಾದ ಪ್ರಣಯ್‌

ಕೋರ್ಟ್‌ನಲ್ಲಿ ಪ್ರಕರಣ ಇನ್ನೂ ಇತ್ಯಾರ್ಥವಾಗಿರದ ಸಮಯದಲ್ಲಿ ಅದೇ ವಿಷಯದ ಮೇಲೆ ಸಿನಿಮಾ ಮಾಡುವುದು ಸರಿಯಲ್ಲ ಎಂದು ಪ್ರಸ್ತಾಪಿಸಿ ಪ್ರಣಯ್‌ ತಂದೆ ಬಾಲಾಸ್ವಾಮಿ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಸಮ್ಮತಿ ಪಡೆಯದೆಯೇ ತಮ್ಮ ಫೋಟೊಗಳನ್ನು ಬಳಸಲಾಗಿದೆ ಎಂದೂ ಬಾಲಾಸ್ವಾಮಿ ತಿಳಿಸಿದ್ದಾರೆ. ಅವರ ಮನವಿಯ ಮೇರೆಗೆ ಕೋರ್ಟ್‌ ನೀಡಿರುವ ಆದೇಶದ ಅನ್ವಯ ರಾಮ್‌ ಗೋಪಾಲ್‌ ವರ್ಮಾ, ಸಿನಿಮಾದ ನಿರ್ಮಾಪಕರ ವಿರುದ್ಧ ಸಹ ಪ್ರಕರಣ ದಾಖಲಾಗಿದೆ.

ಸೆಕ್ಷನ್‌ 153ಎ (ಧರ್ಮ, ಜಾತಿ, ಸ್ಥಳ, ಭಾಷೆಯ ಮೇಲೆ ಸಮೂಹಗಳ ನಡುವೆ ವೈಷಮ್ಯ ಮೂಡಿಸುವ ಪ್ರಯತ್ನ) ಹಾಗೂ ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಯಂತ್ರಣ ತಿದ್ದುಪಡಿ ಕಾಯ್ದೆ, 2015ರ ಅನ್ವಯ ಮಿರ್ಯಾಲಗುಡದಲ್ಲಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಶನಿವಾರ ಪೊಲೀಸರಿಗೆ ಕೋರ್ಟ್‌ ಆದೇಶ ತಲುಪಿದೆ.

ಜೂನ್‌ 21, ಅಪ್ಪಂದಿರ  ದಿನದಂದು ರಾಮ್‌ ಗೋಪಾಲ್‌ ವರ್ಮಾ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಿದ್ದರು. 'ತಂದೆ ಮಗಳನ್ನು ಅತಿಯಾಗಿ ಪ್ರೀತಿಸಿದರ ಅಪಾಯ....' ಎಂದು ಒಕ್ಕಣೆಯೊಂದಿಗೆ ಪೋಸ್ಟರ್‌ ಹಂಚಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು