ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಚಿತ್ರರಂಗವೇ ಮುಳುಗುತ್ತದೆಂಬ ಭಯವಿದೆ: ಚಂದನ್‌ ಶೆಟ್ಟಿ

Published : 19 ಜುಲೈ 2024, 0:36 IST
Last Updated : 19 ಜುಲೈ 2024, 0:36 IST
ಫಾಲೋ ಮಾಡಿ
Comments
ಪ್ರ

ಈ ಚಿತ್ರದಲ್ಲಿ ನಿಮ್ಮ ಪಾತ್ರವೇನು?

ಚಿತ್ರದ ಮೊದಲಾರ್ಧದಲ್ಲಿ ಗುಮಾಸ್ತನಾಗಿ ಕಾಣಿಸಿಕೊಳ್ಳುತ್ತೇನೆ. ಆದರೆ ದ್ವಿತೀಯಾರ್ಧದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುತ್ತೇನೆ. ಗೇಮ್‌ ಡೆವೆಲಪರ್‌ ಪಾತ್ರ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಕಾಲೇಜಿನ ಕಥೆ. ಹೀಗಾಗಿ ಚಿತ್ರದಲ್ಲಿ ನಾಯಕ ಎಂದಿಲ್ಲ. ನಾಲ್ಕು ಪ್ರಮುಖ ಪಾತ್ರಗಳಿವೆ. ಅದರಲ್ಲಿ ಒಂದು ಪಾತ್ರ ನನ್ನದು.

ADVERTISEMENT
ಪ್ರ

ಚಿತ್ರೀಕರಣದ ಅನುಭವ ಹೇಗಿತ್ತು?

ನಟನಾಗಿ ನನಗೆ ಇದು ಮೊದಲ ಸಿನಿಮಾ. ಹೀಗಾಗಿ ನಟನೆಗೆ ಸಾಕಷ್ಟು ತಯಾರಿ ಬೇಕಿತ್ತು. ಪಾತ್ರವಾಗಿ ತೊದಲುತ್ತ ಮಾತನಾಡಬೇಕಿತ್ತು. ಇದು ನನಗೆ ಬಹಳ ಸವಾಲು ಎನಿಸಿತು. ಇಲ್ಲಿ ತನಕ ನಾನು ರಿಚ್‌ ಆಗಿರುವ ಚಿತ್ರೀಕರಣಗಳಲ್ಲಿಯೇ ಭಾಗಿಯಾಗಿದ್ದೆ. ಆದರೆ ಇಲ್ಲಿ ನನ್ನದು ಗುಮಾಸ್ತನ ಪಾತ್ರ. ಹೀಗಾಗಿ ಗೆಟಪ್‌ನಿಂದ ಹಿಡಿದು ಎಲ್ಲವೂ ಸವಾಲಾದವು. ನನ್ನ ಕಂಫರ್ಟ್‌ ಜೋನ್‌ನಿಂದ ಹೊರಬರಬೇಕಿತ್ತು. ಮೊದಲು ಕೆಲವು ದಿನಗಳ ಚಿತ್ರೀಕರಣ ಸ್ವಲ್ಪ ಕಷ್ಟವಾಯ್ತು.

ಪ್ರ

ನಿಮ್ಮ ಮುಂದಿನ ಸಿನಿಮಾಗಳು...

ನಾನು ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಿರುವ ‘ಸೂತ್ರಧಾರಿ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ‘ಎಲ್ಲರ ಕಾಲೆಳೆಯುತ್ತೆ ಕಾಲ’ ಕೂಡ ಬಿಡುಗಡೆಯಾಗಬೇಕಿದೆ. ನಿವೇದಿತಾ ಗೌಡ ಜೊತೆ ‘ಕ್ಯಾಂಡಿಕ್ರಶ್‌’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಬೇರೆ ಯಾವ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ.

ಪ್ರ

ಸಂಗೀತ ಮತ್ತು ನಟನೆಗೆ ಹೋಲಿಸಿದರೆ ನಿಮಗೆ ಯಾವುದು ಸುಲಭ?

ಎರಡೂ ಸುಲಭವಲ್ಲ. ಆದರೆ ಸಂಗೀತದಲ್ಲಿ ಹಿಡಿತ ಹೆಚ್ಚಿದೆ. ನಟನೆ ಹೊಸತು. ಸಂಗೀತದಲ್ಲಿ ಏಳುಬೀಳುಗಳನ್ನೆಲ್ಲ ನೋಡಿಯಾಗಿದೆ. ನಟನಾಗಿ ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ, ಭಯವಿದೆ. ಜನರ ಪ‍್ರತಿಕ್ರಿಯೆ ಹೇಗಿರುತ್ತದೆ ಎಂದು ನೋಡಬೇಕು. ಕಾರ್ಯಕ್ರಮಗಳಲ್ಲಿ ನನ್ನ ಮ್ಯೂಸಿಕ್‌ಗೆ ಹುಚ್ಚೆದ್ದು ಕುಣಿಯುವ ಅಭಿಮಾನಿಗಳೆಲ್ಲ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆಯೇ ಎಂಬ ಪ್ರಶ್ನೆಯಿದೆ. ಸಂಗೀತದಲ್ಲಿ ಸೋಲು, ತಪ್ಪುಗಳು ಅಭ್ಯಾಸವಾಗಿದೆ. ಏನೇ ಸೋಲಾದ್ರು ಧೈರ್ಯ ತಂದುಕೊಳ್ಳುತ್ತೇನೆ. ಅಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಇಲ್ಲಿ ಎಲ್ಲವನ್ನೂ ಹೊಸತಾಗಿ ಕಲಿಯುತ್ತಿದ್ದೇನೆ. 

ಪ್ರ

ಇವತ್ತಿನ ಸ್ಥಿತಿಯಲ್ಲಿ ಸ್ಟಾರ್‌ಗಳ ನಡುವೆ ಹೊಸ ನಟನಿಗೆ ಭವಿಷ್ಯವಿದೆ ಎನ್ನಿಸುತ್ತದೆಯಾ?

ಬಹಳ ಕಷ್ಟವಿದೆ. ಒಳ್ಳೆಯ ಸಿನಿಮಾದ ವ್ಯಾಖ್ಯಾನವೇ ಕಷ್ಟವಾಗಿದೆ. ಕೆಲ ಒಳ್ಳೆಯ ಸಿನಿಮಾಗಳಿಗೆ ಜನರ ಬರಲಿಲ್ಲ ಎಂಬುದನ್ನು ಕೇಳಿದ್ದೇನೆ. ಇವತ್ತು ಚಿತ್ರ ಚೆನ್ನಾಗಿದೆ, ಸರಾಸರಿಯಾಗಿದೆ ಎಂದರೆ ಜನ ಚಿತ್ರಮಂದಿರಕ್ಕೆ ಬರುವುದಿಲ್ಲ. ಅತ್ಯದ್ಭುತವಾಗಿದೆ, ನೋಡಲೇಬೇಕು ಎಂಬ ರಿಪೋರ್ಟ್‌ ಬಂದರೆ ಮಾತ್ರ ಜನ ಬರುತ್ತಾರೆ. ಇಲ್ಲವಾದರೆ ಆ ಸಿನಿಮಾ ಕಥೆ ಮುಗಿಯಿತು ಎಂದರ್ಥ. ಈಗಿನ ಪರಿಸ್ಥಿತಿ ನೋಡಿದರೆ ಕನ್ನಡ ಚಿತ್ರರಂಗವೇ ಮುಳುಗುವ ಹಂತ ತಲುಪುತ್ತಿದೆಯೇನೋ ಎಂಬ ಆತಂಕ ಮನೆ ಮಾಡಿದೆ. ತಮಿಳು, ಮಲಯಾಳಂ ಭಾಷೆಗಳಂತೆ ಇಲ್ಲಿಯೂ ದೊಡ್ಡ ನಟರುಗಳು ಹೊಸಬರ ಬೆಂಬಲಕ್ಕೆ ಬರಬೇಕು. ಒಳ್ಳೆಯ ಸಿನಿಮಾಗಳು ಬಂದಾಗ ಜೊತೆಗೆ ನಿಂತು ಪ್ರಚಾರ ಮಾಡಬೇಕು. ಆಗ ಮಾತ್ರ ಉದ್ಯಮ ಬೆಳೆಯಲು ಸಾಧ್ಯ. ಹೆಚ್ಚು ಸ್ಟಾರ್‌ಗಳು ಹುಟ್ಟಿದಾಗಲೇ ಉದ್ಯಮದ ವಿಸ್ತಾರವಾಗುತ್ತದೆ. ಆದರೆ ನಮ್ಮಲ್ಲಿ ಆ ಕೆಲಸ ನಡೆಯುತ್ತಿಲ್ಲ.

ಪ್ರ

ಸಂಗೀತ ನಿರ್ದೇಶಕನಾಗಿ ನಿಮ್ಮ ಬಳಿ ಇರುವ ಪ್ರಾಜೆಕ್ಟ್‌ಗಳು ಬಗ್ಗೆ...

ನನ್ನ ಸಂಯೋಜನೆಯ ‘ಕರಾಬು’ ಹಾಡನ್ನು 31 ಕೋಟಿ ಜನ ನೋಡಿದ್ದಾರೆ. ಇದು ಇವತ್ತಿಗೂ ನಂಬರ್‌ ಒನ್‌ ಸಾಂಗ್‌. ನಾನೇ ಸ್ವತಂತ್ರವಾಗಿ (...ನೋಡಿದ) ‘ಮೂರೇ ಮೂರು ಪೆಗ್ಗಿಗೆ’ ಹಾಡು ಕೂಡ ಯೂಟ್ಯೂಬ್‌ನಲ್ಲಿ ದಾಖಲೆಯ ವೀಕ್ಷಣೆ ಪಡೆದಿದೆ. ಇಷ್ಟಾಗಿಯೂ ಸಂಗೀತ ನಿರ್ದೇಶಕನಾಗಿ ನನ್ನ ಕೈಯ್ಯಲ್ಲಿ ಸಿನಿಮಾಗಳಿಲ್ಲ. ಯಾಕೆ ಎಂಬ ಪ್ರಶ್ನೆ ಯಾವಾಗಲೂ ಕಾಡುತ್ತಿದೆ. ಯೂಟ್ಯೂಬ್‌ ನನಗೆ ಒಂದು ರೀತಿ ಜೀವನಾಧಾರ. ನನ್ನ ಆದಾಯದ ಮೂಲ. ಹೀಗಾಗಿ ಅಲ್ಲಿ ನನ್ನ ಕೆಲಸಗಳು ಮುಂದುವರಿಯುತ್ತವೆ. ವರ್ಷಕ್ಕೆ 2–3 ಹೊಸ ಹಾಡು ಬಿಡುಗಡೆ ಮಾಡುತ್ತೇನೆ. ಆ ನಿಟ್ಟಿನಲ್ಲಿ ಕೆಲಸ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT