ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘777 ಚಾರ್ಲಿ’ ಡಿಜಿಟಲ್‌ ಹಕ್ಕು ಪಡೆದ ವೂಟ್‌

Last Updated 26 ಏಪ್ರಿಲ್ 2022, 6:40 IST
ಅಕ್ಷರ ಗಾತ್ರ

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ನಟ ರಕ್ಷಿತ್‌ ಶೆಟ್ಟಿ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ‘777 ಚಾರ್ಲಿ’ ವಿಶ್ವದಾದ್ಯಂತ ಜೂನ್‌ 10ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಕನ್ನಡ ಆವೃತ್ತಿಯ ಡಿಜಿಟಲ್‌ ಹಾಗೂ ಸ್ಯಾಟಲೈಟ್‌ ಪ್ರಸಾರದ ಹಕ್ಕನ್ನು ದೊಡ್ಡ ಮೊತ್ತಕ್ಕೆ ಕಲರ್ಸ್‌ ಕನ್ನಡ ಹಾಗೂ ವೂಟ್‌ ಪಡೆದುಕೊಂಡಿದೆ. ಆದರೆ ಮೊತ್ತವನ್ನು ಪರಂವಃ ಸ್ಟುಡಿಯೋಸ್‌ ಬಹಿರಂಗಪಡಿಸಿಲ್ಲ.

ಚಿತ್ರ ವೀಕ್ಷಿಸಿ ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕಲರ್ಸ್‌ ಕನ್ನಡ ಬಿಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌, ‘ಚಾರ್ಲಿ ಸಿನಿಮಾ ಕೊಟ್ಟಿದ್ದು ಒಂದು ಹಿತವಾದ ಅನುಭವ. ಮನಸ್ಸನ್ನು ತೀವ್ರವಾಗಿ ಕಾಡುವ ಯಾವುದೇ ಕತೆ ಒಳ್ಳೆಯದಾಗಿರಲೇ ಬೇಕು! ಕಿರಣ್ ರಾಜ್ ಎಂಬ ಕತೆಗಾರ, ನಿರ್ದೇಶಕ ಕನ್ನಡದಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಕೊಡಬಹುದು ಎಂಬ ಭರವಸೆ ಕೊಟ್ಟಿದ್ದು ಚಾರ್ಲಿ. ಐದು ವರ್ಷಗಳ ಶ್ರಮ, ಸಿನಿಮಾ ಪ್ರೀತಿ, ಸೂಕ್ಷ್ಮ ಅವಲೋಕನ ಮತ್ತು ನನಗೆ ಅನಿಸಿದ್ದನ್ನೇ ಮಾಡುತ್ತೇನೆ ಎಂಬ ಸ್ಪಷ್ಟತೆ ಕಾಸರಗೋಡಿನ ಈ ಹುಡುಗನನ್ನು ತುಂಬಾ ಎತ್ತರಕ್ಕೆ ಕರೆದುಕೊಂಡು ಹೋಗಲಿಕ್ಕಿದೆ ಅನಿಸಿತು. ರಕ್ಷಿತ್ ಅಭಿನಯ ಮತ್ತು ಚಾರ್ಲಿ ಎಂಬ ನಾಯಿ ತಂದ ಜೀವಂತಿಕೆ ಜೊತೆ ಮನಸ್ಸು ತಟ್ಟುವ ಸಂಭಾಷಣೆ ಈ ಸಿನಿಮಾದ ಪ್ಲಸ್ ಪಾಯಿಂಟ್ಸ್’ ಎಂದಿದ್ದಾರೆ.

‘777 ಚಾರ್ಲಿ’ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ದೊರಕಿದೆ. ಚಿತ್ರವು ಕಳೆದ ಡಿ.31ಕ್ಕೇ ಬಿಡುಗಡೆಯಾಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಚಿತ್ರ ಬಿಡುಗಡೆಯನ್ನು ಚಿತ್ರತಂಡವು ಮುಂದೂಡಿತ್ತು. ಕೋವಿಡ್‌ ಮೂರನೇ ಅಲೆ, ಸಾಲು ಸಾಲು ಪ್ಯಾನ್‌ ಇಂಡಿಯಾ ಸಿನಿಮಾಗಳ ಬಿಡುಗಡೆ ಚಿತ್ರ ಮುಂದೂಡಿಕೆಗೆ ಕಾರಣವಾಗಿತ್ತು.

ಈ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ. ಸಂಗೀತಾ ಶೃಂಗೇರಿ ಚಿತ್ರದ ನಾಯಕಿ. ಚಿತ್ರದಲ್ಲಿ ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಡ್ಯಾನಿಶ್‌ ಸೇಠ್‌ ತಾರಾಗಣದಲ್ಲಿದ್ದಾರೆ. ಜಿ.ಎಸ್‌.ಗುಪ್ತ ಹಾಗೂ ರಕ್ಷಿತ್‌ ಶೆಟ್ಟಿ ಈ ಚಿತ್ರದ ನಿರ್ಮಾಪಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT