ಶುಕ್ರವಾರ, ಜನವರಿ 27, 2023
23 °C

ಡಿಸೆಂಬರ್‌ ಒಳಗೆ ವಿಷ್ಣುವರ್ಧನ್‌ ಸ್ಮಾರಕ ಉದ್ಘಾಟನೆ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ‘ಸಾಹಸ ಸಿಂಹ’, ನಟ ದಿವಂಗತ ವಿಷ್ಣುವರ್ಧನ್‌ ಅವರ ಸ್ಮಾರಕವನ್ನು ಡಿಸೆಂಬರ್‌ ಒಳಗೆ ಉದ್ಘಾಟನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಜಯನಗರದಲ್ಲಿ ಈ ಹಿಂದೆ ವಿಷ್ಣುವರ್ಧನ್‌ ಅವರಿದ್ದ ಮನೆಯ ಜಾಗದಲ್ಲೇ ಹೊಸ ಮನೆಯ ನಿರ್ಮಾಣವಾಗಿದ್ದು, ‘ವಲ್ಮೀಕ’ ಹೆಸರಿನ ಈ ಮನೆಯ ಗೃಹಪ್ರವೇಶ ಭಾನುವಾರ(ನ.27) ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ, ‘ವಿಷ್ಣುವರ್ಧನ್‌ ಅವರ ಮನೆ ಗೃಹಪ್ರವೇಶಕ್ಕೆ ಭಾರತಿ ವಿಷ್ಣುವರ್ಧನ್‌ ಅವರು ಖುದ್ದಾಗಿ ಬಂದು ಆಹ್ವಾನಿಸಿದ್ದರು. ವಿಷ್ಣುವರ್ಧನ್‌ ಅವರಿದ್ದ ಮನೆಯ ನವೀಕರಣವಾಗಿದೆ. ಇದರಲ್ಲಿ ಭಾರತಿ ಅವರ ಶ್ರಮ ಕಾಣುತ್ತಿದೆ. ಮೈಸೂರಿನಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್‌ ಅವರ ಸ್ಮಾರಕ ಮತ್ತು ವಸ್ತುಸಂಗ್ರಹಾಲಯ ಉದ್ಘಾಟನೆ ಮಾಡುವ ಹಂತಕ್ಕೆ ಬಂದಿದೆ. ಡಿಸೆಂಬರ್‌ ಒಳಗಾಗಿ ಈ ಸ್ಮಾರಕದ ಉದ್ಘಾಟನೆಯನ್ನು ವೈಭವದಿಂದ ಮಾಡುವ ತೀರ್ಮಾನ ಮಾಡಿದ್ದೇವೆ. ಹೆಚ್ಚಿನ ವಿವರವನ್ನು ಕುಟುಂಬದ ಸದಸ್ಯರ ಜೊತೆ ಚರ್ಚಿಸಿ ತಿಳಿಸುತ್ತೇವೆ. ಸಾಹಸಸಿಂಹ ಅವರ ಮೇರುವ್ಯಕ್ತಿತ್ವ, ಘನತೆಗೆ ತಕ್ಕ ಹಾಗೆ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುತ್ತೇವೆ’ ಎಂದರು.

ಮೈಸೂರು ನಗರ ಹೊರವಲಯದ, ಎಚ್.ಡಿ.ಕೋಟೆ ರಸ್ತೆಯ ಉದ್ಬೂರು ಬಳಿಯ ಹಾಲಾಳು ಗ್ರಾಮದಲ್ಲಿ ಸರ್ಕಾರ ನೀಡಿರುವ ಐದು ಎಕರೆಯಲ್ಲಿ ₹11 ಕೋಟಿ ವೆಚ್ಚದಲ್ಲಿ ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣವಾಗುತ್ತಿದೆ. 2020ರಲ್ಲಿ ಇದರ ಶಂಕುಸ್ಥಾಪನೆಯಾಗಿತ್ತು. ವಿಷ್ಣುವರ್ಧನ್‌ ಅವರ ಪ್ರತಿಮೆ, ಅವರ ನೂರಾರು ಛಾಯಾಚಿತ್ರಗಳುಳ್ಳ ಗ್ಯಾಲರಿ, ರಂಗತರಬೇತಿ ಶಿಬಿರಗಳ ಆಯೋಜನೆಗೆ ಸ್ಥಳಾವಕಾಶವೂ ಈ ಸ್ಮಾರಕದಲ್ಲಿ ಇರಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು