ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಚಿತ್ರರಂಗಕ್ಕೆ 50 ವರ್ಷ: ಸುವರ್ಣ ಸಂಭ್ರಮ ಕಿತ್ತುಕೊಂಡ ಕೋವಿಡ್‌

120 ಸಿನಿಮಾಗಳು ತೆರೆಗೆ
Last Updated 25 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಮಂಗಳೂರು: ತುಳು ಚಿತ್ರರಂಗಕ್ಕೆ ‘2021’ ಸುವರ್ಣ ವರ್ಷ. ರಂಗಭೂಮಿಯ ತಳಹದಿಯಿಂದ ಪ್ರಾರಂಭಗೊಂಡ ಕೋಸ್ಟಲ್‌ವುಡ್‌ನ ಐದು ದಶಕದ ಹಾದಿ ಹೂವಿನ ಹಾಸಿಗೆಯಾಗಿಲ್ಲ. 50 ವರ್ಷಗಳಲ್ಲಿ ಸುಮಾರು 120 ಚಿತ್ರಗಳು ಬೆಳ್ಳಿತೆರೆಗೆ ಬಂದಿದ್ದು, ಸಾಕಷ್ಟು ಸವಾಲು, ಸಮಸ್ಯೆ, ಲಾಭ– ನಷ್ಟದ ಜತೆಗೆ ಹೆಜ್ಜೆ ಹಾಕಿವೆ.

ಐವತ್ತು ವರ್ಷಗಳಲ್ಲಿ ನಾಟಕ, ಯಕ್ಷಗಾನ, ಕಾದಂಬರಿ ಆಧರಿಸಿ ಹತ್ತಾರು ಸಿನಿಮಾಗಳುತಯಾರಾಗಿವೆ. ದೈವಾರಾಧನೆ, ನಾಗಾರಾಧನೆ, ಪೌರಾಣಿಕ ಹಿನ್ನೆಲೆಯುಳ್ಳ ಹಲವು ಚಿತ್ರಗಳು ಬಂದಿವೆ. ತುಳುನಾಡಿನ ಸಂಸ್ಕೃತಿ, ಆಚಾರ– ವಿಚಾರಕ್ಕೆ ಸಂಬಂಧಿಸಿದ ಚಿತ್ರಗಳು ಬೆಳ್ಳಿತೆರೆಯಲ್ಲಿ ಮಿನುಗಿವೆ. ಕಳೆದ ಒಂದು ದಶಕದಿಂದ ಹಾಸ್ಯಮಯ ಚಿತ್ರಗಳ ಅಬ್ಬರವೇ ಜಾಸ್ತಿಯಾಗಿದೆ.

1971ರಫೆಬ್ರುವರಿ 19ರಂದು ತೆರೆಕೊಂಡ ಎಸ್‌.ಆರ್‌. ರಾಜನ್‌ ನಿರ್ದೇಶನದ ‘ಎನ್ನತಂಗಡಿ’ (ನನ್ನ ತಂಗಿ) ತುಳು ಭಾಷೆಯಲ್ಲಿ ನಿರ್ಮಾಣವಾದ ಮೊದಲ ಸಿನಿಮಾ. ಡಿ.24ರಂದು ಬಿಡುಗಡೆಯಾಗಿರುವ ರಾಮ್‌ ಶೆಟ್ಟಿ ನಿರ್ದೇಶನದ ‘ಏರೆಗಾವುಯೆ ಕಿರಿಕಿರಿ’ 120ನೇ ಸಿನಿಮಾ. ಈ ನಡುವೆಬಿಡುಗಡೆಯಾದ ಒಟ್ಟು ಸಿನಿಮಾಗಳಲ್ಲಿ ಶೇ 50ರಷ್ಟು ನಿರ್ಮಾಪಕರ ಕೈಸುಟ್ಟಿವೆ. ಶೇ 25ರಷ್ಟು ಸಿನಿಮಾಗಳು ಹಾಕಿದ ಬಂಡವಾಳ ವಾಪಸ್‌ ಬಂದರೆ, ಉಳಿದ ಶೇ 25ರಷ್ಟು ಚಿತ್ರಗಳು ಲಾಭ ಕಂಡಿವೆ. ಇನ್ನು ಕೆಲವು ಚಿತ್ರಗಳು ಆರ್ಥಿಕವಾಗಿ ಲಾಭ ತಂದು ಕೊಡದಿದ್ದರೂ ಕೆಲ ಪ್ರಶಸ್ತಿಯನ್ನು ಪಡೆದಿರುವುದು ಗಮನಾರ್ಹ ಸಂಗತಿ.

ಜ್ಯೋತಿ ಚಲನಚಿತ್ರಮಂದಿರದಲ್ಲಿ ‘ಎನ್ನ ತಂಗಡಿ’ಸಿನಿಮಾ ಎರಡು ವಾರ ಪ್ರದರ್ಶನ ಕಂಡಿತ್ತು. ಈ ಸಿನಿಮಾ ನಿರ್ಮಾಣಕ್ಕೆ ಆಗ ₹ 50 ಸಾವಿರ ಖರ್ಚಾಗಿತ್ತು. ಈ ಚಿತ್ರದ ಚಿತ್ರೀಕರಣಕ್ಕಿಂತಲೂ ಮೊದಲೇ ‘ದಾರೆದ ಬೊಡೆದಿ’ (ಆರೂರು ಪಟ್ಟಾಭಿ ನಿರ್ದೇಶನ) ಎಂಬ ಸಿನಿಮಾದ ಕೆಲಸ ಆರಂಭವಾಗಿತ್ತು. ಆದರೆ, ಮೊದಲಿಗೆ ಬಿಡುಗಡೆಯಾದ ‘ಎನ್ನ ತಂಗಡಿ’ ತುಳು ಭಾಷೆಯ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.

‘ಕರಿಯಣಿ ಕಟ್ಟಂದಿ ಕಂಡನಿ’ (1978) ತುಳುವಿನಮೊದಲ ಕಲರ್‌ ಸಿನಿಮಾವಾಗಿದೆ. ತುಳುವಿಗೆ ಮೊದಲ ರಾಷ್ಟ್ರಪ್ರಶಸ್ತಿಯನ್ನು ತಂದು ಕೊಟ್ಟ ರಿಚರ್ಡ್‌ ಕ್ಯಾಸ್ಟಲಿನೊ ನಿರ್ದೇಶನದ ‘ಬಂಗಾರ್‌ ಪಟ್ಲೇರ್‌’ (1993) 25ನೇ ಚಿತ್ರವಾದರೆ, ರಾಜಶೇಖರ್‌ ಕೋಟ್ಯಾನ್‌ ನಿರ್ದೇಶನದ ‘ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ (2014) 50ನೇ ಚಿತ್ರ. ಸಾಕ್ಷಾತ್‌ ಮಲ್ಪೆ ನಿರ್ದೇಶನದ ‘ಕರ್ಣೆ’ (2018) 100ನೇ ಸಿನಿಮಾ.

ತುಳು ಚಿತ್ರರಂಗದ ಆರಂಭದ ದಶಕದಲ್ಲಿ 17 ಚಿತ್ರಗಳು ನಿರ್ಮಾಣವಾದವು. ನಂತರದ ಎರಡು ದಶಕದಲ್ಲಿ 15 ಸಿನಿಮಾ‌ ಮಾತ್ರ ನಿರ್ಮಾಣವಾದವು. ನಂತರದ ನಾಲ್ಕೈದು ವರ್ಷ ಮಂಕಾದ ಚಿತ್ರರಂಗ, ಮತ್ತೆ ಜೀವಕಳೆ ಪಡೆದು 2013ರವರೆಗೆ ವರ್ಷಕ್ಕೊಂದರಂತೆ ಸಿನಿಮಾ ನಿರ್ಮಾಣವಾದವು. 2013 ತುಳು ಚಿತ್ರರಂಗದ ಪರ್ವ ಕಾಲ. ನಂತರ ಸರಾಸರಿ ತಿಂಗಳಿಗೆ ಒಂದರಂತೆ ಸಿನಿಮಾಗಳು ತೆರೆಗೆ ಬಂದಿವೆ. ಕಳೆದ ಎರಡು ವರ್ಷದಲ್ಲಿ ಕೋವಿಡ್‌ –19 ತುಳು ಚಿತ್ರರಂಗಕ್ಕೆ ದೊಡ್ಡ ಹೊಡೆತ ನೀಡಿದೆ.

ತುಳುವಿನ ಮೊದಲ ಸಿನಿಮಾ ‘ಎನ್ನ ತಂಗಡಿ’ ಚಿತ್ರದ ಪೋಸ್ಟರ್‌
ತುಳುವಿನ ಮೊದಲ ಸಿನಿಮಾ ‘ಎನ್ನ ತಂಗಡಿ’ ಚಿತ್ರದ ಪೋಸ್ಟರ್‌

ತುಳು ಚಿತ್ರರಂಗಕ್ಕೆ ಕೆ.ಎನ್‌. ಟೇಲರ್‌, ಎಸ್‌.ಆರ್‌. ರಾಜನ್‌, ಆರೂರು ಪಟ್ಟಾಭಿ, ಆನಂದ ಶೇಖರ್‌, ಟಿ.ಎ. ಶ್ರೀನಿವಾಸ್‌, ರಿಚರ್ಡ್‌ ಕ್ಯಾಸ್ಟಲಿನೊ, ಸೋಮೇಶ್ವರ ಪುತ್ರನ್‌, ಮಚ್ಚೇಂದ್ರನಾಥ್‌ ಪಾಂಡೇಶ್ವರ, ಸಂಜೀವ ದಂಡೆಕೇರಿ, ಎಂ.ಕೆ. ಸೀತಾರಾಮ ಕುಲಾಲ್‌, ರಾಮ್‌ ಶೆಟ್ಟಿ, ತಮ್ಮ ಲಕ್ಷ್ಮಣ, ಚರಣ್‌ ಕುಮಾರ್‌, ವಿ.ಜಿ.ಪಾಲ್‌, ವಿಜಯಕುಮಾರ್ ಕೊಡಿಯಾಲ್ ಬೈಲ್, ದೇವದಾಸ್ ಕಾಪಿಕಾಡ್, ಕಿಶೋರ್‌ ಡಿ. ಶೆಟ್ಟಿ ಸಹಿತ ಹಲವರ ಕೊಡುಗೆ ಸ್ಮರಣೀಯ.

‘1960ರ ದಶಕದಲ್ಲಿ ತುಳು ರಂಗಭೂಮಿ ಜಿಲ್ಲೆಯಲ್ಲಿ ಗಟ್ಟಿಯಾಗಿ ಬೆಳೆಯತೊಡಗಿತು. ಇದನ್ನೇ ತಳಪಾಯವಾಗಿಸಿ, 70ರ ದಶಕದಲ್ಲಿ ಸಿನಿಮಾ ಹುಟ್ಟಿಕೊಂಡಿತು. ನಾಟಕಗಳ ಯಶಸ್ಸು ಚಿತ್ರ ನಿರ್ಮಾಣಕ್ಕೆ ಪ್ರೇರಣೆ ನೀಡಿರಬಹುದು. ‘ತಗೆ ತಂಗಡಿ’ ತುಳು ನಾಟಕದ ಕಥೆಯನ್ನೇ ತುಳುವಿನ ಮೊದಲ ಸಿನೆಮಾ ‘ಎನ್ನ ತಂಗಡಿ’ಗೆ ಬಳಸಿಕೊಳ್ಳಲಾಗಿದೆ. ಬಳಿಕ 20ಕ್ಕೂ ಅಧಿಕ ಸಿನಿಮಾಗಳು ನಾಟಕದ ಮೂಲಕವೇ ಜೀವ ಪಡೆದಿವೆ’ ಎಂದು ನೆನಪು ಮಾಡಿಕೊಳ್ಳುತ್ತಾರೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಹಿರಿಯ ರಂಗಕರ್ಮಿ ವಿ.ಜಿ. ಪಾಲ್‌.

ಸಡಗರವಿಲ್ಲದೆ ಸುವರ್ಣ ವರ್ಷ ಮುಕ್ತಾಯ
2021 ಫೆ.19ರಂದು ರೂಪೇಶ್‌ ಶೆಟ್ಟಿ ಅವರ ‘ಗಮ್ಜಾಲ್‌’ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ತುಳು ಚಿತ್ರದ 50ರ ಸಂಭ್ರಮವನ್ನು ಸರಳವಾಗಿ ಆಚರಿಸಲಾಗಿತ್ತು. ‘ಸುವರ್ಣ ಸಂಭ್ರಮ’ವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಯುತ್ತಿರುವ ಹೊತ್ತಲ್ಲೇ ಕೋವಿಡ್‌ ಎರಡನೇ ಅಲೆ ಅಪ್ಪಳಿಸಿ, ಸಂಭ್ರಮವನ್ನು ಕಸಿದುಕೊಂಡಿದೆ. ಇದೀಗ ಒಂದೊಂದಾಗಿ ತುಳು ಚಿತ್ರ ತೆರೆಗೆ ಬರುತ್ತಿದ್ದರೂ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಲು ಹಿಂದೇಟು ಹಾಕುತ್ತಿರುವುದು ನಿರ್ಮಾಪಕರನ್ನು ಚಿಂತೆಗೀಡು ಮಾಡಿದೆ. ಹೀಗಾಗಿ, ಯಾವುದೇ ಸಡಗರವಿಲ್ಲದೆ ಸುವರ್ಣ ವರ್ಷ ಮುಕ್ತಾಯಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT