ಗುರುವಾರ , ಫೆಬ್ರವರಿ 2, 2023
27 °C

ಲವ್‌ಸ್ಟೋರಿ ಟ್ರ್ಯಾಕ್‌ ಬಿಟ್ಟು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲವ್‌ಸ್ಟೋರಿ ಸಿನಿಮಾಗಳಲ್ಲೇ ಮುಳುಗಿರುವ ನಟ ‘ಡಾರ್ಲಿಂಗ್‌’ ಕೃಷ್ಣ ಈ ಟ್ರ್ಯಾಕ್‌ನಿಂದ ಕೊಂಚ ಹೊರಹೆಜ್ಜೆ ಇಡುವ ಯೋಚನೆಯಲ್ಲಿದ್ದಾರೆ. ‘ಮಿ.ಬ್ಯಾಚುಲರ್‌’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕ ಕೃಷ್ಣ ಅವರು ತಮ್ಮ ಹಿಂದಿನ ಹೆಜ್ಜೆಗಳು, ಮುಂದಿನ ಕನಸನ್ನು ಬಿಚ್ಚಿಟ್ಟಿದ್ದಾರೆ...  

‘ಹುಚ್ಚ–2 ಸಿನಿಮಾ ಸೋಲಿನ ದಿನಗಳಲ್ಲಿ ಬಂದ ಪ್ರಾಜೆಕ್ಟ್‌ ‘ಮಿ.ಬ್ಯಾಚುಲರ್‌’. ಈ ಸಿನಿಮಾ ಒಪ್ಪಿಕೊಂಡಾಗ ನನ್ನ ಮನಸ್ಸಲ್ಲಿ ‘ಲವ್‌ ಮಾಕ್ಟೇಲ್‌’ ಸಿನಿಮಾದ ಸಣ್ಣ ಸುಳಿವೂ ಇರಲಿಲ್ಲ. ‘ಮಿ.ಬ್ಯಾಚುಲರ್‌’ ನಿರ್ಮಾಪಕರು ನನಗೆ ಒಂದೆರಡು ಲಕ್ಷ ರೂಪಾಯಿ ಅಡ್ವಾನ್ಸ್‌ ನೀಡಿದ್ದರು. ಇದಾಗಿ ನಾಲ್ಕೈದು ತಿಂಗಳು ಕಳೆದರೂ ಈ ಚಿತ್ರದ ಶೂಟಿಂಗ್ ಆರಂಭವಾಗಿರಲಿಲ್ಲ. ಈ ನಡುವೆ ನನ್ನ ತಲೆಯಲ್ಲಿ ‘ಲವ್‌ ಮಾಕ್ಟೇಲ್‌’ ನಶೆ ಹತ್ತಿತ್ತು. ಹೀಗಾಗಿ ‘ಮಿ.ಬ್ಯಾಚುಲರ್‌’ ಸಿನಿಮಾದ ಚಿತ್ರೀಕರಣಕ್ಕಿಂತ ಮೊದಲೇ ‘ಲವ್‌ ಮಾಕ್ಟೇಲ್‌’ ಸೆಟ್ಟೇರಿತ್ತು. ಮೈಸೂರಿನಲ್ಲಿ ಈ ಸಿನಿಮಾದ ಫಸ್ಟ್‌ಹಾಫ್‌ ಮುಗಿಯುವ ಸಂದರ್ಭದಲ್ಲಿ ‘ಮಿ.ಬ್ಯಾಚುಲರ್‌’ ಮುಹೂರ್ತ ನಡೆಯಿತು. ನಿಜ ಹೇಳಬೇಕೆಂದರೆ ನನ್ನ ನಿರ್ದೇಶನದ ಮೊದಲ ಸಿನಿಮಾಗೆ ‘ಮಿ.ಬ್ಯಾಚುಲರ್‌’ ಸಿನಿಮಾದ ಅಡ್ವಾನ್ಸ್‌ ಹಣವೇ ಮೊದಲ ಹೂಡಿಕೆ’ ಎನ್ನುತ್ತಾರೆ ಕೃಷ್ಣ.  

‘ಮದುವೆ ಎಂದರೆ ಜೀವನದಲ್ಲಿ ನಡೆಯುವ ದೊಡ್ಡ ಹಬ್ಬ ಎಂಬ ಅಮ್ಮನ ಮಾತನ್ನು ಕೇಳಿ, ಚಿಕ್ಕ ಹುಡುಗನಾಗಿದ್ದಾಗಲಿಂದಲೇ ಮದುವೆಯ ಕನಸನ್ನೇ ಕಟ್ಟಿಕೊಂಡು ಬೆಳೆದ ಹುಡುಗನ ಜೀವನದ ಕಥೆಯೇ
‘ಮಿ.ಬ್ಯಾಚುಲರ್‌’. ನಾಯ್ಡು ಅವರ ನಿರ್ದೇಶನದ ಚೊಚ್ಚಲ ಚಿತ್ರವಿದು. ಹೊಸಬರ ಜೊತೆ ಕೆಲಸ ಮಾಡಿದಾಗ ಚಿತ್ರದಲ್ಲೂ ಹೊಸತನವಿರುತ್ತದೆ. ಇದು ಈ ಸಿನಿಮಾದಲ್ಲಿದೆ’ ಎನ್ನುವುದು ಕೃಷ್ಣ ಅವರ ಮಾತು.

‘ಲವ್‌ ಮಾಕ್ಟೇಲ್‌’ ಹುಟ್ಟಿದ್ದು...   

‘ಗಂಡಿನ ಮನೆಗೆ ಬರುವ ಶಾಸ್ತ್ರಕ್ಕಾಗಿ ಮಿಲನಾ ಅವರ ಮನೆಯವರು ನಮ್ಮ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ನನ್ನ ಸಿನಿಮಾ ಪಥ ಎತ್ತ ಸಾಗುತ್ತಿದೆ? ಏನೇನು ಸಿನಿಮಾಗಳನ್ನು ಮಾಡುತ್ತಿದ್ದೇನೆ? ಮದುವೆ ಎಂಬ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧನಾಗಿದ್ದೇನೆಯೇ? ಹೀಗೆ ಯೋಚಿಸುತ್ತಿರುವಾಗ, ನಾನೇ ನಿರ್ದೇಶನಕ್ಕೆ ಇಳಿಯಬೇಕು ಎಂದು ತೆಗೆದುಕೊಂಡ ನಿರ್ಧಾರದ ಫಲವೇ ಲವ್‌ ಮಾಕ್ಟೇಲ್‌’ ಎಂದು ನೆನಪಿಸಿಕೊಂಡರು ಕೃಷ್ಣ.

2022 ಲಕ್ಕಿ ಇಯರ್!

‘2022, ಖಂಡಿತವಾಗಿಯೂ ನನ್ನ ಲಕ್ಕಿ ವರ್ಷ. ನಾಲ್ಕು ಸಿನಿಮಾಗಳು ಬಿಡುಗಡೆಯಾದವು. ಈ ಸಿನಿಮಾಗಳಲ್ಲಿ ಎಲ್ಲ ಅನುಭವವೂ ಆಯಿತು. ‘ಲವ್‌ ಮಾಕ್ಟೇಲ್‌–2’ ಬ್ಲಾಕ್‌ಬಸ್ಟರ್‌ ಆಯಿತು, ‘ಲಕ್ಕಿಮ್ಯಾನ್‌’ ಕೂಡಾ ಹಿಟ್‌ ಆಯ್ತು. ‘ದಿಲ್‌ಪಸಂದ್‌’ ಹಾಗೂ ‘ಲೋಕಲ್‌ ಟ್ರೈನ್‌’ ವಿಮರ್ಶೆಯ ಪಟ್ಟಿಯಲ್ಲಿ ಎವರೇಜ್‌ ಫಿಲ್ಮ್‌ ಎಂದು ಗುರುತಿಸಿಕೊಂಡಿತು. ಈ ಪೈಕಿ ‘ಲಕ್ಕಿಮ್ಯಾನ್‌’, ನಟನಾಗಿ ಬಹಳ ಆನಂದಿಸಿ ಮಾಡಿದ ಸಿನಿಮಾ. ಪುನೀತ್‌ ಅವರ ಜೊತೆಗೆ ತೆರೆ ಹಂಚಿಕೊಂಡು ನಟಿಸಿದ ಅನುಭವವೇ ಅದ್ಭುತ. ‘ಲವ್‌ ಮಾಕ್ಟೇಲ್‌’ನಲ್ಲಿ ಒಬ್ಬ ನಿರ್ದೇಶಕನಾಗಿ ನನಗೆ ಹೆಚ್ಚಿನ ಜವಾಬ್ದಾರಿ ಇತ್ತು. ಆದರೆ ‘ಲಕ್ಕಿಮ್ಯಾನ್‌’ನಲ್ಲಿ ನಟನಾಗಿ ಬಹಳ ಇಷ್ಟಪಟ್ಟು ಮಾಡಿದ ಪಾತ್ರವದು. ಆ ಪಾತ್ರ ಸುಲಭದ್ದಾಗಿರಲಿಲ್ಲ. ಪ್ರತಿಯೊಂದು ಸಿನಿಮಾ ಬಳಿಕ ನಮ್ಮ ನಟನಾ ಸಾಮರ್ಥ್ಯ ಹೆಚ್ಚುತ್ತದೆ. ‘ಲವ್‌ ಮಾಕ್ಟೇಲ್‌’ ಮೊದಲ ಭಾಗ ಹಾಗೂ ‘ಲಕ್ಕಿಮ್ಯಾನ್‌’ನಲ್ಲಿನ ಪಾತ್ರ ನನ್ನಿಂದ ಬಹಳ ನಟನೆಯನ್ನು ಬಯಸಿತ್ತು. ಇದಕ್ಕೆ ಹೋಲಿಸಿದರೆ ‘ಲವ್‌ ಮಾಕ್ಟೇಲ್‌–2’ನಲ್ಲಿನ ನನ್ನ ಪಾತ್ರ ಹೆಚ್ಚು ನಟನೆಯನ್ನು ಬಯಸಲಿಲ್ಲ. ನಟನಾಗಿ ಈ ಸಿನಿಮಾ ನನಗೆ ಸವಾಲಾಗಿರಲಿಲ್ಲ. ಸ್ಕ್ರಿಪ್ಟ್‌ ಚೆನ್ನಾಗಿದ್ದು, ಅದಕ್ಕೆ ಪೂರಕವಾಗಿ ನಟರು ನಟಿಸಿದಾಗ ಸಿನಿಮಾ ಅದ್ಭುತವಾಗಿಯೇ ಬರುತ್ತದೆ’ ಎನ್ನುತ್ತಾರೆ ಕೃಷ್ಣ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.