ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ವಿಚಾರಣೆ

ಎನ್‌ಸಿಬಿ ಎದುರು ಮತ್ತೊಮ್ಮೆ ಹಾಜರಾದ ಪಡುಕೋಣೆ ಮ್ಯಾನೇಜರ್‌ ಕರಿಷ್ಮಾ
Last Updated 26 ಸೆಪ್ಟೆಂಬರ್ 2020, 16:48 IST
ಅಕ್ಷರ ಗಾತ್ರ

ಮುಂಬೈ:ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೆ ಸಂಬಂಧಿಸಿದ ಡ್ರಗ್ಸ್‌ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಮಾದಕವಸ್ತುಗಳ ನಿಯಂತ್ರಣ ಸಂಸ್ಥೆ (ಎನ್‌ಸಿಬಿ), ಬಾಲಿವುಡ್‌ ನಟಿಯರಾದ ದೀಪಿಕಾ ಪಡುಕೋಣೆ,ಶ್ರದ್ಧಾ ಕಪೂರ್‌, ಸಾರಾ ಅಲಿ ಖಾನ್‌ ಅವರನ್ನು ಅವರನ್ನು ಶನಿವಾರ ವಿಚಾರಣೆಗೆ ಒಳಪಡಿಸಿತು.

ಕೊಲಾಬಾದಲ್ಲಿರುವ ಎನ್‌ಸಿಬಿಯ ಈವಲೀನ್‌ ಅತಿಥಿ ಗೃಹದಲ್ಲಿ ಎನ್‌ಸಿಬಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆ ನಡೆಸಿತು.

ಆರು ಗಂಟೆಗೂ ಹೆಚ್ಚು ಕಾಲ ನಟಿಯರು ಅಧಿಕಾರಿಗಳ ಪ್ರಶ್ನೆಗಳನ್ನು ಎದುರಿಸಿದರು. ವಿಚಾರಣೆಗೆ ಒಳಗಾದ ನಂತರ ಹೊರ ಬಂದ ಮೂವರು ನಟಿಯರು ಕ್ಷೋಭೆಗೆ ಒಳಗಾದವರಂತೆ ಕಂಡುಬಂದರು.

ದೀಪಿಕಾ ಮ್ಯಾನೇಜರ್‌ ಕರಿಷ್ಮಾ ಪ್ರಕಾಶ್‌ ಹಾಗೂ ನಟಿ ರಕುಲ್‌ ಪ್ರೀತ್‌ ಸಿಂಗ್‌ ಅವರನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸಲಾಗಿತ್ತು. ಕರಿಷ್ಮಾ ಅವರನ್ನು ಶನಿವಾರ ಪುನಃ ವಿಚಾರಣೆಗೆ ಒಳಪಡಿಸಲಾಯಿತು.

‘ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್‌, ಶ್ರದ್ಧಾ ಕಪೂರ್ ಹಾಗೂ ಕರಿಷ್ಮಾ ಪ್ರಕಾಶ್‌‌ ಅವರ ವಿಚಾರಣೆ ನಡೆಸಿದ್ದೇವೆ. ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವ ಸಂಬಂಧ ಯಾರಿಗೂ ಹೊಸದಾಗಿ ಸಮನ್ಸ್‌ ಜಾರಿ ಮಾಡಿಲ್ಲ’ ಎಂದು ಎನ್‌ಸಿಬಿಯ ಉಪಮಹಾ ನಿರ್ದೇಶಕ ಎಂ.ಅಶೋಕ್‌ ಜೈನ್‌ ಹೇಳಿದರು.

‘ಚಿತ್ರ ನಿರ್ಮಾಪಕ ಕರಣ್‌ ಜೋಹರ್‌ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲಾಗುವುದೇ’ ಎಂಬ ಪ್ರಶ್ನೆಗೆ, ‘ಇಂತಹ ಕಲ್ಪಿತ ಪ್ರಶ್ನೆಗಳಿಗೆ ಉತ್ತರ ಕೊಡುವುದಿಲ್ಲ’ ಎಂದು ಜೈನ್‌ ಪ್ರತಿಕ್ರಿಯಿಸಿದರು.

ಕ್ಷಿತಿಜ್‌ ರವಿಪ್ರಸಾದ್‌ ವಿಚಾರಣೆ: ಪ್ರೊಡಕ್ಷನ್‌ ಎಕ್ಸಿಕ್ಯುಟಿವ್‌ ಕ್ಷಿತಿಜ್‌ ರವಿಪ್ರಸಾದ್‌ ಅವರನ್ನು ಬಲ್ಲಾರ್ಡ್‌ ಎಸ್ಟೇಟ್‌ನಲ್ಲಿರುವ ಎನ್‌ಸಿಬಿಯ ಪ್ರಾದೇಶಿಕ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು.

ಅವರನ್ನು ವಶಕ್ಕೆ ಪಡೆದಿರುವ ಎನ್‌ಸಿಬಿ, ಭಾನುವಾರ ಕೋರ್ಟ್‌ಗೆ ಹಾಜರುಪಡಿಸಲಿದೆ ಎಂದು ಮೂಲಗಳು ಹೇಳಿವೆ.

ಕ್ಷಿತಿಜ್‌ ರವಿಪ್ರಸಾದ್‌, ನಿರ್ಮಾಪಕ ಕರಣ್‌ ಜೋಹರ್‌ ಮಾಲೀಕತ್ವದ ಧರ್ಮಾ ಪ್ರೊಡಕ್ಷನ್ಸ್‌ನ ಅಂಗಸಂಸ್ಥೆಯಾದ ಧರ್ಮಾಟಿಕ್‌ ಎಂಟರ್‌ಟೇನ್‌ಮೆಂಟ್‌ನಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ 2019ರಲ್ಲಿ ಸಂಸ್ಥೆಯನ್ನು ಸೇರಿದರು ಎಂದು ಮೂಲಗಳು ಹೇಳಿವೆ.

‘ಕ್ಷಿತಿಜ್‌ ಹಾಗೂ ಅನುಭವ್‌ ಚೋಪ್ರಾ ನನ್ನ ಆಪ್ತರು ಎಂಬುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಇಬ್ಬರು ನನಗೆ ವೈಯಕ್ತಿಕವಾಗಿ ಪರಿಚಯ ಇಲ್ಲ. ಪ್ರಾಜೆಕ್ಟ್‌ವೊಂದರಲ್ಲಿ ಕಾರ್ಯ ನಿರ್ವಹಿಸುವ ಸಂಬಂಧ ಕ್ಚಿತಿಜ್,‌ ಧರ್ಮಾಟಿಕ್‌ ಎಂಟರ್‌ಟೇನ್ಮೆಂಟ್‌ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ. ಆದರೆ, ಉದ್ದೇಶಿತ ಪ್ರಾಜೆಕ್ಟ್‌ ಆರಂಭವಾಗಲೇ ಇಲ್ಲ’ ಎಂದು ಕರಣ್ ಜೋಹರ್‌ ಪ್ರತಿಕ್ರಿಯಿಸಿದರು.

ತನಿಖೆಯ ಪ್ರಗತಿ ಪರಿಶೀಲನೆ: ಜೈನ್‌

‘ಡ್ರಗ್ಸ್‌ ಜಾಲ ಕುರಿತಂತೆ ತನಿಖೆ ಕೈಗೊಂಡಿರುವ ಎನ್‌ಸಿಬಿಯ ಎಸ್‌ಐಟಿ ಮತ್ತು ಮುಂಬೈನ ಪ್ರಾದೇಶಿಕ ಕಚೇರಿ ಅಧಿಕಾರಿಗಳು 2–3 ದಿನದಲ್ಲಿ ಸಭೆ ನಡೆಸಿ, ಈ ವರೆಗಿನ ತನಿಖೆಯಲ್ಲಾದ ಪ್ರಗತಿಯ ಪರಿಶೀಲನೆ ನಡೆಸುವರು. ಮುಂದಿನ ದಿನಗಳಲ್ಲಿ ಕೈಗೊಳ್ಳುವ ತನಿಖೆಯ ಸ್ವರೂಪ ಹೇಗಿರಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಲಾಗುವುದು’ ಎಂದುಎನ್‌ಸಿಬಿಯ ಉಪಮಹಾ ನಿರ್ದೇಶಕ ಎಂ.ಅಶೋಕ್‌ ಜೈನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT