ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನೇಶ್ ಬಾಬು ಹೇಳಿದ ಹಗಲು ವಾಸ್ತವ!

Last Updated 5 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಹಿರಿಯ ನಿರ್ದೇಶಕ ದಿನೇಶ್ ಬಾಬು ಹೊಸ ಸಿನಿಮಾ ಮಾಡಿ, ‘ಹಗಲು ಕನಸು’ ಎಂಬ ಹೆಸರು ಇಟ್ಟಿದ್ದಾರೆ. ಈ ಸಿನಿಮಾ ಬಗ್ಗೆ ಹೇಳುವುದು ಏನೂ ಇಲ್ಲ, ಬಿಡುಗಡೆ ಆದಾಗ ಸಿನಿಮಾ ನೋಡಿ ಎಂದಷ್ಟೇ ಹೇಳಿದ ಅವರು, ಸಿನಿಮಾ ಜಗತ್ತಿನ ಇತರ ವಿಷಯಗಳ ಬಗ್ಗೆ ಮಾತನಾಡಲು ಉತ್ಸುಕರಾಗಿದ್ದರು. ಆ ಮಾತುಗಳಲ್ಲಿ ಹಗಲು ಕನಸುಗಳಿಗಿಂತಲೂ, ವಾಸ್ತವಗಳ ಬಗ್ಗೆ ಅವರ ಗಮನ ಇತ್ತು. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

* ಹೊಸ ಕಾಲದ ಜೊತೆ ಹೆಜ್ಜೆ ಇರಿಸಲು ನಿಮಗೆ ಸಾಧ್ಯವಾಗುತ್ತಿದೆಯೇ?!

ಜನ ಇತರರನ್ನು ಉದ್ದೇಶಿಸಿ ‘ನಿಮಗೆ ವಯಸ್ಸಾಯಿತು’ ಎನ್ನುತ್ತಿರುತ್ತಾರೆ. ಅದನ್ನು ಕೇಳಿಸಿಕೊಂಡ ನಾವು ‘ಹೌದು ನಮಗೆ ವಯಸ್ಸಾಯಿತು’ ಎಂದು ಹಿಂದಿನ ತಲೆಮಾರಿನ ಜೊತೆ ಹೋಗಿಬಿಡುತ್ತೇವೆ. ಆದರೆ, ಈ ಮಾತನ್ನು ನಾನು ಒಪ್ಪಿಕೊಳ್ಳದೆ ಇದ್ದರೆ? ನಾನು ಹಿಂದಿನ ತಲೆಮಾರಿಗೆ ಸೇರಿದವ ಎಂಬ ಮಾತನ್ನೇ ನಾನು ಒಪ್ಪುವುದಿಲ್ಲ! ನಾನು ಇಂದಿನ ತಲೆಮಾರಿಗೆ ಸೇರಿದವ. ಸಾಹಿತಿ ಕ್ಲಿಂಟ್‌ ಈಸ್ಟ್‌ವುಡ್‌ ಒಂದು ಒಳ್ಳೆಯ ಮಾತು ಹೇಳಿದ್ದಾನೆ. ಈಸ್ಟ್‌ವುಡ್‌ ಬಳಿ ಒಬ್ಬ ಬಂದು ಕೇಳುತ್ತಾನೆ, ‘ನಿಮಗೆ 86 ವರ್ಷ ವಯಸ್ಸಾಯಿತು. ಆದರೂ ಯುವಕರಂತೆ ಹೇಗೆ ಇರುತ್ತೀರಿ?’ ಎಂದು. ಇದಕ್ಕೆ ಈಸ್ಟ್‌ವುಡ್‌, ‘ವೃದ್ಧಾಪ್ಯ ನನ್ನನ್ನು ಆವರಿಸಲು ನಾನು ಅವಕಾಶ ಕೊಡುತ್ತಿಲ್ಲ!’ ಎಂದು ಉತ್ತರಿಸಿದ್ದ.

* ‘ಹಗಲು ಕನಸು’ ಯಾರನ್ನು ಉದ್ದೇಶಿಸಿ ಮಾಡಿದ್ದು, ಹೊಸ ಕಾಲದ ಹುಡುಗರನ್ನಾ?

ಅದು ನನಗೆ ಗೊತ್ತಿಲ್ಲ. ನಾನು ಒಂದು ವಿಷಯ ಆಯ್ಕೆ ಮಾಡಿಕೊಳ್ಳುತ್ತೇನೆ. ಅದು ಜನರಿಗೆ ಇಷ್ಟವಾಗಬಹುದು ಎಂದು ಭಾವಿಸುವೆ. ನಾನು ಯಾವ ಸಿನಿಮಾವನ್ನೂ ‘ಇಂಥ ರೀತಿಯ ಜನರಿಗೆ’ ಎಂದು ವರ್ಗೀಕರಿಸುವ ಕೆಲಸ ಮಾಡುವುದಿಲ್ಲ. ನಾನು ಮಾಡಿದ ಸಿನಿಮಾಗಳಲ್ಲಿ ಕೆಲವೊಂದು ನಿರ್ದಿಷ್ಟ ಗುಂಪಿನ ಜನರಿಗೆ ಹೆಚ್ಚು ಇಷ್ಟವಾಗಿರಬಹುದು. ಆದರೆ ಹಾಗೆ ಮಾಡುವುದು ನ‌ನ್ನ ಉದ್ದೇಶವಲ್ಲ. ಇದು ಕೂಡ ಒಂದು ಸಿನಿಮಾ, ಎಲ್ಲರಿಗಾಗಿ. ಇದು ಹಾಸ್ಯ ‍ಪ್ರಧಾನ ಸಿನಿಮಾ.

*ಸಿನಿಮಾ ನಿರ್ಮಾಣ ಕಂಪನಿಗಳು, ‘ನನಗೆ ಬೇಕಿರುವ ಸಿನಿಮಾವನ್ನು ಮಾಡಿಕೊಡಿ’ ಎಂದು ನಿರ್ದೇಶಕರಿಗೆ ತಾಕೀತು ಮಾಡುವುದರಿಂದ ಸೃಜನಶೀಲತೆಗೆ ಧಕ್ಕೆ ಆಗುವುದಿಲ್ಲವೇ?

ಧಾರಾವಾಹಿ ಲೋಕದಲ್ಲಿ, ಇಂಥದ್ದೇ ರೀತಿಯಲ್ಲಿ ಕಥೆ ತೆಗೆದುಕೊಂಡು ಹೋಗಬೇಕು ಎನ್ನುವ ಪ್ರವೃತ್ತಿ ಇದೆ. ಸೃಜನಶೀಲತೆ ವಿಚಾರದಲ್ಲಿ ಹೇಳುವುದಾದರೆ, ಅದು ಯಾವ ರೀತಿಯ ಸಿನಿಮಾ ಮಾಡುತ್ತೀರಿ ಎಂಬುದನ್ನು ಆಧರಿಸಿದೆ. ಎಲ್ಲ ಸಂದರ್ಭಗಳಲ್ಲೂ ಸೃಜನಶೀಲತೆಗೆ ಧಕ್ಕೆ ಆಗಬೇಕು ಎಂದೇನೂ ಇಲ್ಲ. ಒಳ್ಳೆಯ ಸಿನಿಮಾಗಳೂ ಆಗಬಹುದಲ್ಲ? ಒಟಿಟಿ ವೇದಿಕೆಗಳ ಮೂಲಕ ಪ್ರಸಾರವಾದ ಕೆಲವು ವೆಬ್‌ ಸಿರೀಸ್‌ಗಳಲ್ಲಿ ಬಹಳ ಒಳ್ಳೆಯ ಕಥಾವಸ್ತುಗಳು ಬಂದಿವೆ. ಗೇಮ್‌ ಆಫ್‌ ಥ್ರೋನ್ಸ್‌ ಬಹಳ ಚೆನ್ನಾಗಿತ್ತು. ಇಲ್ಲಿ ಧನಾತ್ಮಕ ಅಂಶಗಳೂ ಇವೆ.

*ಸಿನಿಮಾ ಜಗತ್ತು ಈಗ ಹೊಸ ಸಿನಿಮಾವನ್ನು ಮನೆಯಲ್ಲೇ ಕುಳಿತು, ಬಿಡುಗಡೆಯ ದಿನವೇ ನೋಡುವ ಯುಗವನ್ನು ಪ್ರವೇಶಿಸುತ್ತಿದೆ. ಇದನ್ನು ಹೇಗೆ ಗ್ರಹಿಸುತ್ತೀರಿ?

ಒಟಿಟಿ ವೇದಿಕೆಗಳ ಬೆಳವಣಿಗೆಯಿಂದಾಗಿ ಸಣ್ಣ ಸಿನಿಮಾಗಳು ಚಿತ್ರಮಂದಿರಗಳಿಗಾಗಿ ಅಲೆದಾಡುವುದು, ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ಒದ್ದಾಡುವುದು ತಪ್ಪಬಹುದು. ಮೊದಲ ದಿನದ ಮೊದಲ ಶೋ ಮನೆಯಲ್ಲೇ ತೋರಿಸಬೇಕು ಎಂದಾದರೆ, ಡಿಜಿಟಲ್‌ ಹಕ್ಕು ಖರೀದಿ ಮಾಡುವವರು ನಿರ್ಮಾಪಕರಿಗೆ ಉತ್ತಮ ಮೊತ್ತ ಕೊಡಬೇಕಾಗುತ್ತದೆ. ಇದರಿಂದ ಏಕಪರದೆಯ ಚಿತ್ರಮಂದಿರಗಳು ಮುಂದೊಂದು ದಿನ ಇಲ್ಲವಾಗಲೂಬಹುದು.

ಡಿಜಿಟಲ್ ಕ್ಯಾಮೆರಾಗಳು ಬಂದಾಗ ಕೂಡ ಒಂದಿಷ್ಟು ಬದಲಾವಣೆಗಳು ಆದವು. ಡಿಜಿಟಲ್‌ ವೇದಿಕೆಗಳ ಮೂಲಕ ಸಿನಿಮಾ ‍ಪ್ರದರ್ಶನ ಮಾಡುವ ವ್ಯವಸ್ಥೆಯಿಂದಾಗಿ ಈಗಿರುವ ಚಿತ್ರಪ್ರದರ್ಶನ ವ್ಯವಸ್ಥೆಗೆ ಒಂದಿಷ್ಟು ಏಟು ಬೀಳಬಹುದು. ಆದರೆ, ಕೊನೆಗೊಂದು ದಿನ ಜನ ಪುನಃ ಚಿತ್ರಮಂದಿರಕ್ಕೆ ವಾಪಸ್ ಬರಲೂಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT