ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತಾ ಭಟ್ ವಿಷಕನ್ಯೆ ಎಂದ ಗುರುಪ್ರಸಾದ್!

ಶ್ರುತಿ ಹರಿಹರನ್ ವಿರುದ್ಧವೂ ಗುರು ಗುಡುಗು
Last Updated 30 ಅಕ್ಟೋಬರ್ 2018, 14:46 IST
ಅಕ್ಷರ ಗಾತ್ರ

‘ಕುಷ್ಕ’ ಎಂಬ ಸಿನಿಮಾ ಪತ್ರಿಕಾಗೋಷ್ಠಿಗೆ ಬಂದಿದ್ದ ನಿರ್ದೇಶಕ ಗುರುಪ್ರಸಾದ್ ಸಿಡಿಯಲಿಕ್ಕೆಂದೇ ಕಾದುಕೂತಿದ್ದ ಪಟಾಕಿಯಂತಿದ್ದರು. ಪತ್ರಕರ್ತರಿಂದ ಚೂರು ಪ್ರಶ್ನೆಯ ಕಿಡಿ ತಾಕಿದ್ದೇ ಅವರು ಸಿಡಿಯಲಾರಂಭಿಸಿದರು. ಮೀ ಟೂ ಅಭಿಯಾನದಲ್ಲಿ ಹೆಸರು ಹೇಳದೆಯೇ ಆರೋಪ ಮಾಡಿದ್ದ ಸಂಗೀತಾ ಭಟ್ ಮತ್ತು ಅರ್ಜುನ್ ಸರ್ಜಾ ಅವರ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿರುವ ಶ್ರುತಿ ಹರಿಹರನ್ ಅವರ ವಿರುದ್ಧ ಅವರು ಹೆಸರು ಹೇಳದೆಯೇ ಹರಿಹಾಯ್ದರು.

‘ನಾವು ಸುಮ್ಮನಿದ್ದೇನೆ ಎಂದರೆ ಮಾತಾಡಲು ಬರುವುದಿಲ್ಲ ಎಂದಲ್ಲ. ನಾವು ಕೌಂಟರ್ ಕೊಡಲು ಶುರುಮಾಡಿದರೆ ಆ ಹೆಣ್ಣುಮಕ್ಕಳು ಎಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೇನೋ ಎಂಬ ಭಯದಿಂದ ಸುಮ್ಮನಿದ್ದೇನೆ’ ಎಂದ ಅವರ ಮಾತುಗಳು ಹಲವು ಸಲ ಆತ್ಮಘನತೆಯ ಎಲ್ಲೆಯನ್ನೂ ಮೀರಿತ್ತು. ಸಂಗೀತಾ ಭಟ್ ಹೆಸರು ಹೇಳದೆಯೇ ಬರೆದುಕೊಂಡ ಸ್ಟೇಟಸ್‌ನಲ್ಲಿ ಗುರುಪ್ರಸಾದ್ ಹೆಸರೂ ಇದೆ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಅವರ ಪ್ರತಿಕ್ರಿಯೆಯನ್ನು ಅವರ ಮಾತುಗಳಲ್ಲಿಯೇ ಓದಿ:

‘ಬೆತ್ತಲೆ ಬೆನ್ನಿನ ದೃಶ್ಯ ಚಿತ್ರೀಕರಿಸುವಾಗ ನನ್ನ ಪತ್ನಿ ಮತ್ತು ಮಗಳು ನನ್ನ ಪಕ್ಕದಲ್ಲಿಯೇ ಇದ್ದರು. ನಾನು ಮುಖ ನೋಡಿದ ಕೂಡಲೇ ಒಬ್ಬ ವ್ಯಕ್ತಿಯನ್ನು ಜಡ್ಜ್‌ ಮಾಡಬಲ್ಲೆ. ಅವಳು ವಿಷಕನ್ಯೆ ಎನ್ನುವುದು ನನಗೆ ಗೊತ್ತಿತ್ತು.

ಮುಖ್ಯವಾಗಿ ಇಬ್ಬರು ಮದುವೆಯಾಗಿ, ಅವಕಾಶಕ್ಕಾಗಿ ಮದುವೆಯ ವಿಷಯವನ್ನು ಮುಚ್ಚಿಟ್ಟು ಈಗ ಡ್ರಾಮಾ ಮಾಡ್ತಿದ್ದಾರೆ. ಯಾಕೆ? ತನ್ನ ಗಂಡನ ಜತೆ, ಅತ್ತೆ ಮಾವನ ಎದುರು ತಾವು ಪರಮ ಪತಿವ್ರತೆಯರು ಎಂಬುದನ್ನು ಸಾಬೀತು ಮಾಡಹೊರಟಿದ್ದಾರೆಯೇ? ಖಂಡಿತ ಇದರ ಪರಿಣಾಮವನ್ನು ಅವರು ಅನುಭವಿಸುತ್ತಾರೆ.

ಎಲ್ಲ ಅನುಕೂಲಗಳನ್ನು ಪಡೆದುಕೊಂಡು, ನಿಮ್ಮ ವ್ಯಾವಹಾರಿಕ ಕಿಲಾಡಿತನಗಳೆಲ್ಲ ಮುಗಿದ ಮೇಲೆ ಯಾವತ್ತೋ ಒಂದು ದಿನ ಹೀಗೆ ಆರೋಪ ಮಾಡುವುದು, ನಾವು ಚೆನ್ನಾಗಿರಬೇಕು, ಇನ್ನೊಬ್ಬರ ಬದುಕು ಹಾಳಾಗಿ ಹೋಗಬೇಕು ಎನ್ನುವುದು ಎನ್ನುವ ಮನೋಭಾವ ಇವರದ್ದು. ಇಂಥವರನ್ನು ನಾನು ಸಾಕಷ್ಟು ನೋಡಿದ್ದೇನೆ.

‘ನಾವು ಸ್ಕ್ರಿಪ್ಟ್‌ ರೈಟರ್‌ಗಳು. ಅವರಿಂತ ಚೆನ್ನಾಗಿ ಬರೆಯಬಲ್ಲೆವು. ನಮಗಿರುವ ಚಾತುರ್ಯಕ್ಕೆ, ಜ್ಞಾನಕ್ಕೆ ಪೂರ್ತಿ ತಿರುಗಿಸಿಬಿಡಬಹುದು. ಆದರೆ ಗಂಡಸರಿಗೆ ಇರುವ ಭಯ ಒಂದೇ. ನಾವು ಏನಾದರೂ ಅವರು ಹೇಳಿದ್ದಕ್ಕೆ ಕೌಂಟರ್ ಕೊಡಲು ಶುರುಮಾಡಿದರೆ ಅವರು ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಾರೆ, ಅವರ ಲೈಫ್‌ ಹಾಳಾಗುತ್ತದೆ’ ಎಂಬ ಆತಂಕದಿಂದ ಸುಮ್ಮನಿರುತ್ತೇವೆ’

‘ನನಗೆ ಸಿನಿಮಾ ಮಾಡುವುದು ಮುಖ್ಯ. ನನಗೆ ಒಂದೊಮ್ಮೆ ಯಾರನ್ನಾದರೂ ಮುಟ್ಟಲೇ ಬೇಕು ಎಂಬ ಆಸೆ ಹುಟ್ಟಿದರೆ ಖಂಡಿತ ಪಡೆಯುತ್ತೇನೆ. ಆಫ್‌ ದಿ ರೆಕಾರ್ಡ್‌. ಯಾರಿಗೂ ಗೊತ್ತಾಗುವುದಿಲ್ಲ’

ಇಬ್ಬರು ಮುಖ್ಯವಾಗಿ ಮೀ ಟೂ ಕ್ಯಾಂಪೇನ್‌ನಲ್ಲಿ ಮಾತಾಡುತ್ತಿದ್ದಾರೆ. ಅವರಲ್ಲಿ ಒಬ್ಬರು ತಮಿಳು ಮಾತೃಭಾಷೆಯ, ಮಲಯಾಳಂ ಕೂಡ ಗೊತ್ತಿರುವಂಥ ಕನ್ನಡದಲ್ಲಿ ಅನ್ನ ತಿನ್ನುತ್ತಿರುವ ಹುಡುಗಿ. ಅವರು ಹಿಂದೊಮ್ಮೆ ಒಂದು ಸಿನಿಮಾ ಮಾಡಿದ್ದರು. ಆ ಸಿನಿಮಾದ ಕಥೆಯಲ್ಲಿ ನಾಯಕ ನಾಯಕಿಗೆ ಪ್ರೀತಿಯಾಗುತ್ತದೆ. ಅವರು ನಗರಕ್ಕೆ ಬರುತ್ತಾರೆ. ಆಗ ಅವಳಿಗೆ ಪೀರಿಯಡ್ಸ್ ಆಗುತ್ತದೆ. ಆ ಸಿನಿಮಾಗೆ ತಿರುವು ಸಿಕ್ಕಿದ್ದೇ ಅಲ್ಲಿ. ಆ ಸಿನಿಮಾ ಇಷ್ಟ ಆಗಲಿಲ್ಲ ನನಗೆ. ಸಿನಿಮಾ ಮುಗಿದ ಮೇಲೆ ಚಿತ್ರದ ನಿರ್ದೇಶಕ ಮತ್ತು ನಾಯಕ ನನ್ನ ಅಭಿಪ್ರಾಯ ಕೇಳಿದರು. ನಾನು ಕೇಳಬೇಡಿ ಅಂದೆ ಆದರೂ ಕೇಳದೆ ಒತ್ತಾಯ ಮಾಡಿದರು. ಆಗ ನಾನು ಹೇಳಿದೆ ‘ಇದು ಪೀಡಿಯಾಡಿಕಲ್ ಸ್ಟೋರಿ’ ಅಂದೆ. ಅವರು ‘ಹೌದಾ ಸರ್?’ ಎಂದರು. ನಾನು ‘ಆ ಪೀರಿಯಾಡಿಕಲ್ ಅಲ್ಲ ನಾನು ಹೇಳಿದ್ದು’ ಅಂದೆ. ಆ ಸಿನಿಮಾದ ಹೆಸರೇ ಅದರ ಟ್ಯಾಗ್‌ಲೈನ್‌ ‘ರಾಜ ರಾಣಿ ಕಥೆ’ ಅಂತ ಇದೆ. ನನಗೆ ಆ ಟೈಟಲ್ಲೇ ಇಷ್ಟ ಆಗಲಿಲ್ಲ. ಇದು ರಾಜ ರಾಣಿ ಕಥೆ ಅಲ್ಲ, ರಜಾ ರಾಣಿ ಕಥೆ ಎಂದೆ. ರಾಜ್‌ಕುಮಾರ್‌ ಅವರ ಒಂದು ಸಿನಿಮಾ ಇದೆಯಲ್ಲ ‘ಒಂದು ಮುತ್ತಿನ ಕಥೆ’ ಎಂದು. ಇವರು ಈ ಚಿತ್ರಕ್ಕೆ‘ಒಂದು ಮುಟ್ಟಿನ ಕಥೆ’ ಅಂತ ಇಡಬಹುದಿತ್ತು.

‘ನಾನು ಯಾವ ಸಿನಿಮಾ ಕಲಾವಿದೆಯರ ಜತೆಗೆ ಮಾತನಾಡಿದರೂ ಆ ಚಾಟ್ ಹಿಸ್ಟರಿ ಪ್ರಿಂಟ್‌ ಔಟ್‌ ತೆಗೆದಿಟ್ಟಿರ್ತೀನಿ. ಅವಳು ನನಗೆ ಎಂಥ ಫೋಟೊ ಕಳಿಸಿದ್ದಳು ಎನ್ನುವುದು ಈಗಲೂ ನನ್ನ ಬಳಿಯೇ ಇದೆ. ನಾನು ಮಾತನಾಡಲು ಹೋದರೆ ಏನೇನೋ ಆಗುತ್ತದೆ. ಆದರೆ ಬೇಡ. ಹಿಂದೊಮ್ಮೆ ನನ್ನ ಜತೆ ಕೆಲಸ ಮಾಡುತ್ತಿದ್ದವನೊಬ್ಬ ಬಿಟ್ಟು ಹೋದ. ಈಗ ನನ್ನ ಮೇಲೆ ಆರೋಪ ಮಾಡಿರುವ ನಾಯಕಿ ಚಿತ್ರರಂಗದಿಂದ ಹೊರಗೆ ಹೋಗುತ್ತಿದ್ದಾಳೆ. ಕೆಲವರು ಹೊರಗೆ ಹೋಗುವುದರಿಂದ ಚಿತ್ರರಂಗದ ಆರೋಗ್ಯ ವೃದ್ಧಿಸುತ್ತದೆ.

‘ಇವರು ಏನೇನೋ ಚೇಷ್ಟೆಗಳನ್ನು ಮಾಡಿಕೊಂಡಿರುತ್ತಾರೆ ಎಂದು ಎಷ್ಟು ದಿನ ತಡೆದುಕೊಂಡಿರೋಣ? ಎಲ್ಲರೂ ಅದೇ ಪ್ರಶ್ನೆ ಕೇಳುತ್ತಾರೆ ನನ್ನನ್ನು, ‘ಅದು ನಿಜಾನಾ ಸಾರ್? ರುಬ್ಬಿದ್ರಾ ಸಾರ್’ ಅಂತ ಕೇಳ್ತಾರೆ. ಎಷ್ಟು ಅಂತ ಸಿಮ್ ಚೇಂಜ್ ಮಾಡೋಣ?

‘ಕಳ್ಳ ಬ್ಯಾಗ್ ಕಿತ್ಕೊಂಡೋದ ಅಂತಿಟ್ಕೊಳ್ಳಿ. ಎರಡು ವರ್ಷ ಆದಮೇಲೆ ಕಂಪ್ಲೇಂಟ್ ಮಾಡ್ತೀರಾ? ನಾನು ಹೆದರಿಸೋಕೆ ಹೇಳ್ತಿಲ್ಲ. ಆದರೆ ಇವರಿಬ್ಬರೂ ತುಂಬ ತೊಂದರೆ ಅನುಭವಿಸುತ್ತಾರೆ. ಹೊಸ ಅಭಿಯಾನ ಬಂದಾಗ, ಹೊಸ ವೇದಿಕೆಗಳು ಸೃಷ್ಟಿಯಾದಾಗ ಕೆಲವು ಅಪ್ರಬುದ್ಧ ಮನಃಸ್ಥಿತಿಗಳು ಅದನ್ನಿಟ್ಟುಕೊಂಡು ತಾನು ಬೆಳೆದುಬಿಡಬಹುದು, ಪ್ರಪಂಚವನ್ನೇ ಆಟವಾಡಿಸಬಹುದು ಎಂದುಕೊಳ್ಳುತ್ತಾರೆ. ಆದರೆ ಪ್ರಪಂಚ ಹೀಗೆ ತಿರುಗಿಬೀಳುತ್ತದೆ ಎಂಬ ಪರಿಕಲ್ಪನೆ ಇರುವುದಿಲ್ಲ ಅವರಿಗೆ. ಈಗ ಜಗತ್ತು ತಿರುಗಿಬಿದ್ದಿದೆ. ಊಟ ಮಾಡಿರಲ್ಲ, ನಿದ್ದೆ ಮಾಡಿರಲ್ಲ ಅವರು. ತುಂಬ ಸಿಂಪಲ್ ಅದು. ಒಬ್ಬ ಕಳ್ಳ ಚೀಲ ಕಿತ್ಕೊಂಡೋದ. ಎರಡು ವರ್ಷದ ನಂತರ ಕಂಪ್ಲೇಂಟ್ ಮಾಡ್ತೀಯಾ. ಒಂದೇ ಅಕ್ಷರ ಬದಲಿಸ್ತೀನಿ ಇದರಲ್ಲಿ. ಒಬ್ಬ ಕಳ್ಳ ಶೀಲ ಕಿತ್ಕೊಂಡೋದ. ಎರಡು ವರ್ಷದ ಮೇಲೆ ಕಂಪ್ಲೇಂಟ್ ಮಾಡ್ತಿದೀರಿ. ಥಿಂಕ್ ಎಬೌಟ್ ಯುವರ್ ಇಂಟಲೆಕ್ಚುವಲ್ ಕೆಪಾಸಿಟಿ.

‘ಅರ್ಜುನ್ ಸರ್ಜಾ ಅವರು ಕಲಾವಿದನಾಗಿ ಕನ್ನಡಕ್ಕೆ ತುಂಬ ಒಳ್ಳೆಯ ಹೆಸರು ತಂದಿದ್ದಾರೆ. ಇದು ತಮಿಳಲ್ಲಿ ಕನ್ನಡದಲ್ಲಿ ಹೋಗಿ ಮಾಡಿರುವ ಸಾಧನೆ. ಅಂಥ ಕಲಾವಿದನನ್ನು ಎದುರು ಹಾಕಿಕೊಂಡರೆ ತಮಿಳು ಮತ್ತು ಮಲಯಾಳಂನಲ್ಲಿ ನನ್ನ ಮಾರ್ಕೆಟ್‌ ಕುದುರುತ್ತದೆ ಎನ್ನುವುದು ಅವರ ಮೇಲೆ ಆರೋಪ ಮಾಡಿರುವವರ ಲೆಕ್ಕಾಚಾರ ಇರಬಹುದು. ಯಾವುದೂ ಸತ್ಯ ಅಂತಲ್ಲ. ಅವಳ ತಲೆಯಲ್ಲಿ ಏನೇನು ಓಡಿರಬಹುದು ಎಂದು ಊಹಿಸುತ್ತಿದ್ದೇನೆ. ಅವಳು ಸಣ್ಣ ಪುಟ್ಟವರ ಮೇಲೆ ಆರೋಪ ಮಾಡಿದರೆ ಗಂಡ ‘ಏ ಬಾರೆ’ ಎಂದು ಸದರ ತೋರಬಹುದು. ಆದರೆ ಅರ್ಜುನ್ ಸರ್ಜಾ ಅವರಂಥವರ ವಿರುದ್ಧ ಆರೋಪ ಮಾಡಿದರೆ ‘ಅವನು ನನ್ನ ಬಯಸಿದ್ದ. ಅವನಿಗೆ ಸಿಕ್ಕಿಲ್ಲ, ನಿನಗೆ ಸಿಕ್ಕಿದ್ದೇನೆ. ನೀನು ನನ್ನ ಗುಲಾಮನಾಗಿರಬಹುದು’ ಎಂದು ಹೇಳಬಹುದು ಎಂಬ ಅಹಂಕಾರವೂ ಇರಬಹುದು. ನನ್ನ ತಂಗಿಗೆ ಈ ಆಲೋಚನೆ ಬಂದಿದ್ದರೆ ನಾನು ಕಪಾಳಕ್ಕೆ ಹೊಡೆಯುತ್ತಿದ್ದೆ.

‘ನಾನು ನನಗೆ ಮದುವೆಯಾಗಿದೆ ಎಂದು ಹೇಳಿಕೊಳ್ಳುತ್ತೇನೆ. ನಾನು ಹೇಳಿಕೊಂಡಿಲ್ಲ ಎಂದರೆ ನನ್ನ ಹೆಂಡತಿ ನನಗೆ ಹೊಡೆಯುತ್ತಾಳೆ. ನೀನು ಹೆಣ್ಣುಮಗು ನೀನ್ಯಾಕೆ ಹೇಳುತ್ತಿಲ್ಲ? ಏನು ಉದ್ದೇಶ ಇದೆ ಅದರ ಹಿಂದೆ?ನನಗೆ ಮದುವೆಯಾಗಿದೆ. ನನಗೆ ಗಂಡ ಇದ್ದಾನೆ. ನಾನು ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ನಾನು ಪತಿವ್ರತೆ. ನಾನು ನನ್ನ ಗಂಡನ ಕಾಲನ್ನು ಬಿಟ್ಟು ಇನ್ಯಾರ ಮುಖವನ್ನೂ ನೋಡಿಲ್ಲ’ ಹೀಗೆ ಹೇಳುವುದು ಸರಿಯಾದದ್ದು.

‘ಅವಳ ಮಾತಿನಲ್ಲಿ, ಬಾಡಿ ಲ್ಯಾಂಗ್ವೇಜ್‌ನಲ್ಲಿ ಕೃತಕತೆ ಎದ್ದು ಕಾಣುತ್ತಿದೆ. ಒಬ್ಬ ನಾಯಕನಟ ಆ ಹುಡುಗಿಯನ್ನು ನನ್ನ ‘ಎರಡನೇ ಸಲ’ ಸಿನಿಮಾಕ್ಕೆ ನಾಯಕಿಯನ್ನಾಗಿ ಮಾಡಿ ಎಂದು ಕೇಳಿಕೊಂಡಿದ್ದರು. ‘ನಿಮ್ಮ ಕಮಿಟ್‌ಮೆಂಟ್ ಏನು ಅಂತ ನನಗೆ ಗೊತ್ತಿಲ್ಲ. ಆದರೆ ಆಕೆ ಸುಂದರಿಯೂ ಅಲ್ಲ, ಕಲಾವಿದೆಯೂ ಅಲ್ಲ. ನಾನು ಮಾಡಿಸುವುದಿಲ್ಲ’ ಎಂದು ಹೇಳಿ ಕಳಿಸಿದ್ದೆ.

‘ಇವರಿಗೆಲ್ಲ ತುಂಬ ಸುಲಭವಾಗಿ ಅವಕಾಶ ಸಿಕ್ಕಿಬಿಟ್ಟಿರುತ್ತದೆ. ಅಂದವಾಗಿ ಹುಟ್ಟುವುದು ಪ್ರಕೃತಿಯ ಕೊಡುಗೆ. ಅದಕ್ಕೆ ಏನು ಸಾಧನೆ ಮಾಡಬೇಕಾಗಿಲ್ಲ. ಯಾವನೋ ನಿರ್ದೇಶಕ, ಬರಹಗಾರ, ಹೀರೊ ತುಂಬ ಕಷ್ಟಪಟ್ಟಿರುತ್ತಾರೆ. ಲೈಟ್ ಬಾಯ್‌ ಹೀರೊ ಆಗುವಲ್ಲಿ ತುಂಬ ಕಷ್ಟಪಟ್ಟಿರುತ್ತಾನೆ. ಅಂಥವರನ್ನು ಒಂದು ಸ್ಟೇಟ್‌ಮೆಂಟ್ ಮೂಲಕ ಹೊಡೆದು ಬಿಸಾಕುಬಿಡ್ತೀನಿ ಎನ್ನುವ ಅಹಂ ತೃಪ್ತಿಗೋಸ್ಕರ ಮಾತಾಡ್ತೀರಾ? ಬನ್ನಿ ನಾವು ಉತ್ತರ ಕೊಡ್ತೀವಿ.

‘ಯಾರ್ಯಾರು ನೊಂದಿದೀರಿ ದಯವಿಟ್ಟು ನನ್ನ ಸಂಪರ್ಕ ಮಾಡಿ. ನಾನು ಅವರ ಪರವಾಗಿ ನಿಂತ್ಕೊತೀನಿ. ಯಾವಾಗ ಮಲಗಲಿಕ್ಕೆ ಕರೆಯುವ ಮೆಸೇಜ್ ಬಂತೋ ಆಗ ತಕ್ಷಣ ನನಗೆ ಹೇಳಿ. ಅದಕ್ಕೊಂದು ಹಾಟ್‌ಲೈನ್ ಇಡಿ. ನೀವು ಹಾಟ್‌ ಆಗಿ ಇರುವುದಲ್ಲ.ನಾವು ಕಷ್ಟಪಟ್ಟು ಬಂದು ನಮ್ಮ ವೇದಿಕೆಯನ್ನು ನಾವೇ ರೂಪಿಸಿಕೊಂಡು ಅದರ ಮೇಲೆ ಡಾನ್ಸ್ ಮಾಡಿರುವವರು. ಇವರೆಲ್ಲ ಬೇರೆಯವರ ವೇದಿಕೆಯ ಮೇಲೆ ಡಾನ್ಸ್ ಮಾಡುವವರು. ಬೇರೆಯವರು ವೇದಿಕೆ ಹಾಕಲಿ ಎಂದು ಕಾಯುತ್ತಿರುತ್ತಾರೆ. ಹಾಕಿದ ಮೇಲೆ ಅದರ ಮೇಲೆ ಡಾನ್ಸ್ ಮಾಡಿ ಜನಪ್ರಿಯರಾಗೋಣ ಎಂದು ಕಾಯುತ್ತಿರುತ್ತಾರೆ.

ಮೀ ಟೂ ಸಿನಿಮಾ:

ಮೀ ಟೂ ಅಭಿಯಾನವನ್ನೇ ಇಟ್ಟುಕೊಂಡೇ ಒಂದು ಸಿನಿಮಾ ಮಾಡ್ತಿದೀನಿ. ನಾನೇ ಅದಕ್ಕೆ ನಾಯಕನಟ. ಕಳೆದ ಎರಡು ತಿಂಗಳಿಂದ ಅದರ ಬಗ್ಗೆ ಯೋಚಿಸುತ್ತಿದ್ದೀನಿ. ಈ ಸಿನಿಮಾದಲ್ಲಿ ನಿಜವಾದ ಕಾಂಬಿನೇಷನ್ ಇರುವುದು ಎರಡೇ. ಒಂದು ಅರ್ಜುನ್ ಸರ್ಜಾ ಮತ್ತು ಶ್ರುತಿಹರಿಹರನ್. ಅದು ಬಿಟ್ಟರೆ ಸಂಗೀತಾ ಭಟ್ ಮತ್ತು ಗುರುಪ್ರಸಾದ್. ಎರಡೇ ಕಾಂಬಿನೇಷನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT