ಶನಿವಾರ, ಜುಲೈ 31, 2021
28 °C

ನೀವು ಕೃತಜ್ಞತೆ ಇಲ್ಲದವರು: ಸೋನು ನಿಗಮ್ ವಿಡಿಯೊಗೆ ದಿವ್ಯಾ ಖೋಸ್ಲಾ ಕುಮಾರ್‌ ಟೀಕೆ

ಪ್ರಜಾವಾಣಿ ವೆಬ್‌ Updated:

ಅಕ್ಷರ ಗಾತ್ರ : | |

ಟಿ– ಸಿರೀಸ್ ಸಂಗೀತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ಅವರ ವಿರುದ್ಧ ಗಾಯಕ ಸೋನು‌ ನಿಗಮ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊವೊಂದನ್ನು ಹರಿಬಿಟ್ಟಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಭೂಷಣ್ ಪತ್ನಿ ದಿವ್ಯಾ ಖೋಸ್ಲಾ ಕುಮಾರ್ ‘ಕೆಲವರು ಕೃತಜ್ಞತೆ ಇಲ್ಲದವರು, ಪ್ರಚಾರಕ್ಕಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ’ ಎಂದು ನಿಂದಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್‌ ಸಾವಿನ ದಿನದಿಂದ ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ವಿವಾದಗಳು ಬೆಳಕಿಗೆ ಬರುತ್ತಲೇ ಇವೆ. ಸುಶಾಂತ್ ಸಾವನ್ನೇ ನೆಪವಾಗಿರಿಸಿಕೊಂಡು ಬಾಲಿವುಡ್‌ನಲ್ಲಿ ಒಬ್ಬರನ್ನೊಬ್ಬರು ನಿಂದಿಸಿಕೊಳ್ಳುತ್ತಿದ್ದಾರೆ. ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಸ್ವಜನಪಕ್ಷಪಾತವೇ ಸುಶಾಂತ್‌ ಸಾವಿಗೆ ಕಾರಣ ಎನ್ನುತ್ತಿದ್ದಾರೆ. ಈಗ ಬಗ್ಗೆ ಭಾರತೀಯ ಸಂಗೀತ ಲೋಕದ ಪ್ರಮುಖ ಸೋನು ನಿಗಮ್ ಕೂಡ ಮೌನ ಮುರಿದಿದ್ದಾರೆ. ಸಂಗೀತ ಕ್ಷೇತ್ರದಲ್ಲಿನ  ಸ್ವಜನಪಕ್ಷಪಾತದ ಬಗ್ಗೆ ಸೋನು ನಿಗಮ್‌ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಮೊದಲು ಮಾಡಿದ ವಿಡಿಯೊದಲ್ಲಿ ಸಂಗೀತ ಕ್ಷೇತ್ರವನ್ನು ‘ಮಾಫಿಯಾ’ ಎಂದು ಕರೆದಿರುವ ಸೋನು ಸಂಗೀತ ಉದ್ಯಮದಲ್ಲಿ ಗಾಯಕರನ್ನು ಶೋಷಿಸುವ ಮತ್ತು ಗ್ಯಾಂಗ್ ರಚಿಸಿಕೊಳ್ಳುವ ಮಾಫಿಯಾಗಳಿವೆ ಎಂದಿದ್ದರು.

ಈಗ ಮತ್ತೊಂದು ವಿಡಿಯೊ ಮಾಡಿರುವ ಸೋನು ಟಿ– ಸೀರಿಸ್ ಸಂಗೀತ ಸಂಸ್ಥೆಯ ಭೂಷಣ್‌ ಕುಮಾರ್ ಅವರೇ ಬಹು ದೊಡ್ಡ ಮಾಫಿಯಾ ಎಂದು ಬಹಿರಂಗ ಪಡಿಸಿದ್ದಾರೆ. 

ಈ ಕುರಿತು ದಿವ್ಯಾ ಖೋಸ್ಲಾ ಸೋನು ನಿಗಮ್‌ ವಿಡಿಯೊಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿರುವ ಆಕೆ ‘ಈಗ ಎಲ್ಲರೂ ಒಳ್ಳೆಯ ಪ್ರಚಾರದ ಹಿಂದೆ ಓಡುತ್ತಾರೆ. ಜನರು ಇಂದು ತಮ್ಮ ಬಲವಾದ ಅಭಿಯಾನಗಳೊಂದಿಗೆ ಸುಳ್ಳು, ಮೋಸಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಸೋನು ನಿಗಮ್‌ರಂತಹ ವ್ಯಕ್ತಿಗಳಿಗೆ ಜನರ ಮನಸ್ಸಿನ ಜೊತೆ ಹೇಗೆ ಆಟವಾಡಬೇಕು ಎಂಬುದು ತಿಳಿದಿದೆ. ನಮ್ಮ ಜಗತ್ತನ್ನು ದೇವರೆ ಕಾಪಾಡಬೇಕು’ ಎಂದಿದ್ದಾರೆ.

ಇನ್ನೊಂದು ಸ್ಟೋರಿಯಲ್ಲಿ ‘ಸೋನು ನಿಗಮ್‌ ಜಿ, ಟಿ– ಸಿರೀಸ್‌ ಸಂಸ್ಥೆಯೇ ಈ ಕ್ಷೇತ್ರದಲ್ಲಿ ನಿಮಗೆ ಬ್ರೇಕ್ ನೀಡಿದ್ದು. ನೀವು ಮುಂದೆ ಬಂದಿದ್ದೀರಿ. ಈಗ ಇಷ್ಟೆಲ್ಲಾ ಮಾತನಾಡುವ ನೀವು ಮೊದಲೇ ಭೂಷಣ್ ಬಗ್ಗೆ ಯಾಕೆ ಮಾತನಾಡಲಿಲ್ಲ. ಈಗ ಪ್ರಚಾರಕ್ಕಾಗಿ ಹೀಗೆಲ್ಲಾ ಯಾಕೆ ಮಾಡುತ್ತಿದ್ದೀರಾ? ನೀವು ಹಿಂದಿನ ದಾರಿಯನ್ನು ಮರೆತಿದ್ದೀರಿ, ಕೆಲವರು ಕೃತಜ್ಞತೆ ಇಲ್ಲದವರು’ ಎಂದು ಬರೆದುಕೊಂಡಿದ್ದಾರೆ.

ಭೂಷಣ್ ಕುಮಾರ್ ತಮ್ಮ ಬಳಿ ಮ್ಯೂಸಿಕ್ ಅಲ್ಬಂಗಳಿಗೆ ಹಾಡವಂತೆ ಬೇಡಿಕೊಂಡಿದ್ದರು ಹಾಗೂ ಪಾತಕಿ ಅಬು ಸಲೇಂ ಕಡೆಯಿಂದ ಬೆದರಿಕೆ ಬಂದಾಗ ಸಹಾಯಕ್ಕಾಗಿ ತನ್ನ ಬಳಿ ಕೇಳಿಕೊಂಡಿದ್ದರು ಎಂಬ ವಿಷಯವನ್ನು ವಿಡಿಯೊದಲ್ಲಿ ತಿಳಿಸಿದ್ದಾರೆ ಸೋನು‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು