ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕ ಕೆ.ಎಂ. ರಘು ಸಂದರ್ಶನ: ‘ಬೋರೇಗೌಡ್ರ’ ಸಾರಥಿ

Last Updated 16 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಊರಲ್ಲಿ ಟಿ.ವಿ.ಯೂ ಇಲ್ಲದಿದ್ದ ಕಾಲದಲ್ಲಿ ನಿರ್ದೇಶನದ ಕನಸು ಕಂಡವರು ಕೆ.ಎಂ. ರಘು. ವಿದ್ಯಾರ್ಥಿ ಜೀವನದಲ್ಲೇ ಕಥೆ ಬರೆಯುವ, ದೃಶ್ಯ ಕಲ್ಪನೆ ಮಾಡಿಕೊಳ್ಳುವ ಹವ್ಯಾಸ ಅವರನ್ನು ಸಾಕ್ಷ್ಯಚಿತ್ರಕಾರನನ್ನಾಗಿಸಿ, ನಿರ್ದೇಶಕನವರೆಗೆ ತಂದು ನಿಲ್ಲಿಸಿದೆ. ಅವರ ನಿರ್ದೇಶನ ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಪಡೆದಿತ್ತು. ಈಗ ‘...ಬೋರೇಗೌಡ’ ಚಿತ್ರಮಂದಿರಕ್ಕೆ ಬರುವ ಹೊತ್ತು. ಈ ಸಂದರ್ಭದಲ್ಲಿ ನಿರ್ದೇಶಕರ ಜೊತೆಗೊಂದಿಷ್ಟು ಮಾತು.

* ಸಿನಿಮಾ ಕ್ಷೇತ್ರಕ್ಕೆ ಬರಲು ಪ್ರೇರಣೆಯೇನು?
ನೆನೆಸಿಕೊಂಡರೇ ನಗು ಬರುತ್ತದೆ. ನಮ್ಮೂರು ಅರಕಲಗೂಡು ಸಮೀಪದ ಕೆಬ್ಬೆಕೊಪ್ಪಲಿಗೆ ಇನ್ನೂ ಟಿ.ವಿ.ಯೂ ಬಂದಿರಲಿಲ್ಲ. ಆ ಕಾಲದಲ್ಲಿ ನಾವು ಟಿ.ವಿ.ಯನ್ನು ಬಾಡಿಗೆಗೆ ತಂದು ಸಿನಿಮಾ ಹಾಕಿ ನೋಡುತ್ತಿದ್ದೆವು. ಎತ್ತಿನ ಗಾಡಿಯಲ್ಲಿ ಬಾಡಿಗೆ ಟಿ.ವಿ. ತರುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. ಆ ಕಾಲದಲ್ಲೇ ನಿರ್ದೇಶಕನಾಗಬೇಕು ಎಂಬ ಕನಸು ಕಂಡವನು ನಾನು. ಶಾಲೆಯಲ್ಲಿಯೂ ನನ್ನ ಮನಸ್ಸು ಸಿನಿಮಾ, ತೆರೆಯ ಸುತ್ತಲೇ ಸುತ್ತುತ್ತಿತ್ತು. ಇದನ್ನೆಲ್ಲಾ ಗಮನಿಸಿದ ನನ್ನ ತಂದೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸೋಮನಹಳ್ಳಿಯ ಹಾಸ್ಟೆಲ್‌ಗೆ ಸೇರಿಸಿದರು. ದ್ವಿತೀಯ ಪಿಯುವರೆಗೆ ಶಿಕ್ಷಣ ಆಯಿತು. ಆ ಹಾಸ್ಟೆಲ್‌ ಕಾಡಿನ ಮಧ್ಯೆ ಇತ್ತು. ಅಲ್ಲಿಯೂ ಮರದ ಅಡಿ ಕುಳಿತು ನೋಟ್‌ ಪುಸ್ತಕದಲ್ಲಿ ಕಥೆ ಬರೆಯುತ್ತಿದ್ದೆ. ಪಿಯು ಮುಗಿದ ಬಳಿಕ ಬೆಂಗಳೂರಿಗೆ ಬಂದು ಕೆಲಕಾಲ ಬಾರ್‌ಮನ್‌ ಆಗಿಯೂ ದುಡಿದಿದ್ದೆ. ಆಗಲೂ ಗಾಂಧಿನಗರದಲ್ಲಿ ಅಲೆಯುತ್ತಿದ್ದೆ. ಯಾರನ್ನು ಭೇಟಿ ಮಾಡಬೇಕು ಎಂದೂ ಗೊತ್ತಿರಲಿಲ್ಲ. ಇದನ್ನೆಲ್ಲಾ ಗಮನಿಸಿದ ತಂದೆಯವರು ಒಬ್ಬರು ಶಾಸಕರನ್ನು ಭೇಟಿ ಮಾಡಿಸಿದರು. ಸುಮಾರು 8 ತಿಂಗಳ ಕಾಲ ಅಲೆದಾಡಿಸಿದ ಆ ಶಾಸಕರು ಕೊನೆಗೂ ನಿರ್ದೇಶಕ ಕೋಟಗಾನಹಳ್ಳಿ ರಾಮಯ್ಯ ಅವರ ಬಳಿ ಕಳುಹಿಸಿದರು. ಅವರು ಮಹೇಶ್‌ ಸುಖಧರೆ ಅವರನ್ನು ಪರಿಚಯಿಸಿದರು. ಅವರ ಬಳಿ ಸಹಾಯಕ ನಿರ್ದೇಶಕನಾಗಿ ದುಡಿದೆ. ಈ ಕ್ಷೇತ್ರದಲ್ಲಿ ಸುಮಾರು 13 ವರ್ಷ ಸಂಭಾವನೆ ಇಲ್ಲದೆ ದುಡಿದದ್ದೇ ಹೆಚ್ಚು. ಕ್ರಮೇಣ ಕೇಂದ್ರ ಸರ್ಕಾರದ ಸಾಕ್ಷ್ಯಚಿತ್ರಗಳು ಬಂದವು. ಹಾಗೆ ದುಡಿಯುತ್ತಾ ‘ತರ್ಲೆ ವಿಲೇಜ್‌’, ‘ಪರಸಂಗ’, ಇದೀಗ ‘...ಬೋರೇಗೌಡ’ನವರೆಗೆ ಬಂದಿದ್ದೇನೆ.

* ನಿಮ್ಮ ಚಿತ್ರಗಳಲ್ಲಿ ಗ್ರಾಮ ಚಿತ್ರಣವೇ ಹೆಚ್ಚು ಇದೆಯಲ್ಲ?
ಹೌದು, ನಮ್ಮ ವ್ಯವಸ್ಥೆ ಹಾಗೆಯೇ ಇದೆ. ಒಬ್ಬ ಸಾಮಾನ್ಯ ವ್ಯಕ್ತಿ ಗ್ರಾಮ ಪಂಚಾಯಿತಿಗೆ ಹೋದಾಗ ಅವರು ಹೇಗೆ ನಡೆಸಿಕೊಳ್ಳುತ್ತಾರೆ, ಎಷ್ಟು ಸತಾಯಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಇಲ್ಲಿ ಮನೆ ಅನ್ನುವುದು ಹಳ್ಳಿ ಅಥವಾ ಪಟ್ಟಣದ ಪ್ರತಿಯೊಬ್ಬರಿಗೂ ಹೆಚ್ಚು ಆಪ್ತವಾಗುವ ವಸ್ತು. ಈ ಚಿತ್ರದಲ್ಲಿ ಮನೆ ಕಟ್ಟಲು ಬಡವನೊಬ್ಬ ಮುಂದಾದಾಗ ಏನೇನನ್ನೆಲ್ಲಾ ಅನುಭವಿಸುತ್ತಾನೆ ಎಂಬುದನ್ನು ಹೇಳಿದ್ದೇನೆ. ಭಾರತದಾದ್ಯಂತ ಗ್ರಾಮಗಳಲ್ಲಿ ಇರುವ ಚಿತ್ರಣವೇ ಇದು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ವಾಸ್ತವ ಪರಿಶೀಲಿಸುವುದೇ ಇಲ್ಲ. ಪಂಚಾಯಿತಿ ಸದಸ್ಯರಂತೂ ಕೊನೆವರೆಗೂ ಸ್ವಜನ ಪಕ್ಷಪಾತಿಗಳಾಗಿರುತ್ತಾರೆ. ಈ ಚಿತ್ರ ದೇಶದ ಅಷ್ಟೂ ಗ್ರಾಮ ಪಂಚಾಯಿತಿಗಳಿಗೆ, ಅಲ್ಲಿನ ಮುಖಂಡರಿಗೆ ತಲುಪಿ ಒಂದಿಷ್ಟು ಬದಲಾವಣೆ ಆದರೆ ಸಾಕು. ಅದು ಸಿನಿಮಾದ ಸಾರ್ಥಕತೆ. ಸಹಜ ವಸ್ತು, ಪಾತ್ರಗಳು ಇದ್ದಷ್ಟೂ ಸಿನಿಮಾ ಅಷ್ಟೇ ಸಹಜವಾಗಿ ಮೂಡಿಬರುತ್ತದೆ. ಆ ಪ್ರಯತ್ನ ಇಲ್ಲಿ ನಡೆದಿದೆ.

* ಸಿನಿಮಾಕ್ಕಾಗಿ ಮನೆ ಕಟ್ಟಿ ದಾನ ಮಾಡಿದಿರಿ...
ಚಿತ್ರೀಕರಣಕ್ಕೆ ಸೆಟ್‌ ಹಾಕುವುದಕ್ಕೂ ಅಥವಾ ಮನೆಯೊಂದನ್ನು ಕಟ್ಟುವುದಕ್ಕೂ ಆಗುವ ವೆಚ್ಚ ಒಂದೇ ಆಗಿತ್ತು. ಆದ್ದರಿಂದ ಮೈಸೂರಿನ ದಬ್ಬಿಗೆ ಎಂಬ ಊರಿನಲ್ಲಿ ಒಬ್ಬರ ನಿವೇಶನ ಇತ್ತು. ಅವರಿಗೂ ಮನೆಯ ಅವಶ್ಯಕತೆ ಇತ್ತು. ಹಾಗಾಗಿ ಮನೆ ಕಟ್ಟುವ ದೃಶ್ಯಗಳ ಚಿತ್ರೀಕರಣವೂ ಆಯಿತು. ಮನೆಯೂ ನಿರ್ಮಾಣವಾಯಿತು. ಚಿತ್ರೀಕರಣದ ಬಳಿಕ ನಿವೇಶನದ ಮಾಲೀಕರಿಗೆ ಮನೆಯನ್ನು ಬಿಟ್ಟುಕೊಟ್ಟೆವು. ಅವರೂ ಖುಷಿಯಾದರು.

* ಸರಳ ಬದುಕು, ಒಂದಿಷ್ಟು ಆದರ್ಶ... ಏನಿದರ ಗುಟ್ಟು?
ನಾವೇನೇ ಗಳಿಸಿದರೂ ಕೊನೆಗೆ ಎಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗಬೇಕಲ್ವಾ. ಅಷ್ಟು ತಿಳಿದಿದ್ದರೆ ಬದುಕು ತುಂಬಾ ಸರಳ. ಇದ್ದು ಹೋಗುವ ಬದುಕಿನ ಮಧ್ಯೆ ಏನು ಮಾಡುತ್ತೇವೆ ಅನ್ನುವುದು ಮುಖ್ಯ. ತುಂಬಾ ಪುಸ್ತಕಗಳನ್ನು ಓದುತ್ತೇನೆ. ಸಜ್ಜನರ ಒಡನಾಟವಿದೆ. ಹಾಗಾಗಿ ಇದ್ದಹಾಗೆ ಬದುಕುತ್ತಿದ್ದೇನೆ.

-ಕೆ.ಎಂ. ರಘು
-ಕೆ.ಎಂ. ರಘು

ಪ್ರಶಸ್ತಿಯ ನಿರೀಕ್ಷೆ ಇತ್ತಾ?
ಚಿತ್ರೀಕರಣ ನಡೆಯುವಾಗಲೇ ಕೆಲವೊಂದು ದೃಶ್ಯಗಳು ಮೂಡಿಬಂದ ಬಗೆ ನೋಡಿ ಈ ಚಿತ್ರಕ್ಕೆ ಪ್ರಶಸ್ತಿ ಬರುತ್ತದೆ ಎಂದು ಒಳಮನಸ್ಸು ಹೇಳಿತ್ತು. ವಸ್ತು ಪ್ರೇಕ್ಷಕನಿಗೆ ಇಷ್ಟವಾಗುತ್ತದೋ ಇಲ್ಲವೋ ಎನ್ನುವುದು ನಿರ್ದೇಶಕನಿಗೆ ಗೊತ್ತಿರಬೇಕು. ಹಾಗೆ ಒಂದು ಬಗೆಯ ಅಂದಾಜು ಇತ್ತು.

ಇಂಥ ಚಿತ್ರಗಳ ವಾಣಿಜ್ಯ ಯಶಸ್ಸು ಏನು?
ಯಾವ ಚಿತ್ರಕ್ಕೆ ಜನರು ಚಿತ್ರಮಂದಿರದೊಳಗೆ ಎರಡು ಗಂಟೆ ಕುಳಿತು ಮನರಂಜನೆ ಪಡೆಯುತ್ತಾರೋ ಅದೇ ಆ ಚಿತ್ರದ ವಾಣಿಜ್ಯ ಯಶಸ್ಸು. ಅವರಿಗೆ ಚಿತ್ರಕ್ಕೆ ಎಷ್ಟು ವೆಚ್ಚವಾಗಿದೆ, ಎಷ್ಟು ಹೊಡೆದಾಟಗಳಿವೆ ಎಂಬುದು ಮುಖ್ಯವಾಗುವುದಿಲ್ಲ. ನಾವು ಜನರ ಮನಸ್ಥಿತಿಯನ್ನು ಬದಲಾಯಿಸಿದ್ದೇವೆ. ಹಾಗಾಗಿ ಚಿತ್ರದ ವಸ್ತುವಿಗೆ (ಕಂಟೆಂಟ್‌) ಜನ ಆದ್ಯತೆ ಕೊಡುತ್ತಾರೆ. ಅದನ್ನು ನಮ್ಮ ಚಿತ್ರ ನೀಡಿದೆ.

ಮುಂದಿನ ಯೋಜನೆಗಳು?
ನಗರದ ಯುವಜನರಿಗೆ ಇಷ್ಟವಾಗುವ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ‘ಜಸ್ಟ್‌ಪಾಸ್‌’ ಅನ್ನುವುದು ನನ್ನ ಹೊಸ ಚಿತ್ರದ ಹೆಸರು. ಒಂದಿಷ್ಟು ಶೂಟಿಂಗ್‌ ನಡೆದಿದೆ. ಜಸ್ಟ್‌ಪಾಸ್‌ ಆದವರಿಗೆ ಮಾತ್ರ ಪ್ರವೇಶ ನೀಡುವ ಕಾಲೇಜಿನ ಕಥೆ ಇದು. ಹೀಗೆ ಏನಾದರೊಂದು ಹೊಸದನ್ನು ಕೊಡುವ ಪ್ರಯತ್ನ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT