ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಮಾನ್ ನವರಸ; ’ಡ್ರೀಮ್‌ಗರ್ಲ್‌‘ನಲ್ಲಿ ಕಚಗುಳಿಯ ವರಸೆ

Last Updated 13 ಸೆಪ್ಟೆಂಬರ್ 2019, 9:38 IST
ಅಕ್ಷರ ಗಾತ್ರ

ಚಿತ್ರ: ಡ್ರೀಮ್‌ ಗರ್ಲ್ (ಹಿಂದಿ)
ನಿರ್ಮಾಣ: ಏಕ್ತಾ ಕಪೂರ್, ಶೋಭಾ ಕಪೂರ್, ನಚಿಕೇತ್
ನಿರ್ದೇಶನ: ರಾಜ್ ಶಾಂಡಿಲ್ಯ
ತಾರಾಗಣ: ಆಯುಷ್ಮಾನ್ ಖುರಾನಾ, ಅನ್ನು ಕಪೂರ್, ಮಂಜೋತ್ ಸಿಂಗ್, ನುಶ್ರತ್ ಭರೂಚಾ, ವಿಜಯ್ ರಾಜ್

**

ಕಿರುತೆರೆಗೆ 650ಕ್ಕೂ ಹೆಚ್ಚು ಚಿತ್ರಕಥೆಗಳನ್ನು ಬರೆದು, ಲಿಮ್ಕಾ ದಾಖಲೆ ನಿರ್ಮಿಸಿರುವ ರಾಜ್ ಶಾಂಡಿಲ್ಯ ಹಿರಿತೆರೆ ನಿರ್ದೇಶಕರಾಗಿ ಪದಾರ್ಪಣೆ ಸಿನಿಮಾದಲ್ಲಿಯೇ ಛಾಪು ಮೂಡಿಸಿದ್ದಾರೆ. ಆಯುಷ್ಮಾನ್ ಖುರಾನಾ ಎಂಬ ನವರಸನಾಯಕನನ್ನು ಇಟ್ಟುಕೊಂಡು, ಲವಲವಿಕೆಯ ಸಂಭಾಷಣೆ, ಸರಳ ಕತೆಯಿಂದಲೇ ಕಚಗುಳಿ ಇಟ್ಟಿರುವುದು ಶ್ಲಾಘನೀಯ.

ನಾಯಕ ಕರಮ್‌ವೀರ್ ಸಿಂಗ್‌ ಲಲನೆಯ ಕಂಠದಲ್ಲೂ ಮಾತನಾಡಬಲ್ಲ; ಅದೂ ಮಾದಕವಾಗಿ. ಬಾಲ್ಯದಿಂದಲೂ ರಾಮಾಯಣದ ಸೀತಾ, ಕೃಷ್ಣಲೀಲೆಯ ರಾಧೆಯಾಗಿ ಸಣ್ಣ ಪಟ್ಟಣದ ಭಕ್ತವೃಂದವನ್ನು ಹಿಡಿದಿಟ್ಟುಕೊಂಡ ಕಲಾವಿದ. ಹೀಗಿದ್ದೂ ನಿರುದ್ಯೋಗಿ. 70 ಸಾವಿರ ರೂಪಾಯಿ ಸಂಬಳ ಕೊಡುವ ಕೆಲಸದ ಜಾಹೀರಾತನ್ನು ಅವನು ಬಸ್‌ನಲ್ಲಿ ನೋಡುತ್ತಾನೆ. ವಿದ್ಯುತ್ ಉಪಕರಣಗಳನ್ನು ಮಾರಾಟ ಮಾಡುವ ದುಕಾನು ಹೊರಗೆ. ಅದರ ಒಳಮನೆಯಲ್ಲಿ ರಾತ್ರಿ ಮಾದಕವಾಗಿ ಮಾತನಾಡುತ್ತಾ ಎಷ್ಟೋ ಪುರುಷರಿಗೆ ಕಂಠಸಂಗಾತಿಗಳಾಗುವ ಗಮನಾರ್ಹ ಹೆಣ್ಣುಮಕ್ಕಳು. ಅಲ್ಲಿಗೆ ನಾಯಕ ಕೆಲಸಕ್ಕೆ ಸೇರುತ್ತಾನೆ; ಅದೂ ತನ್ನ ಕಂಠದಿಂದಾಗಿ. ಅದೇ ಆ 70 ಸಾವಿರ ಸಂಬಳ ತರುವ ಕಾಲ್‌ಸೆಂಟರ್. ಪೂಜಾ ಎಂಬ ಹೆಸರಿನಲ್ಲಿ ಅವನು ತನ್ನದೇ ಪರಿಸರದ ಪಾತ್ರಗಳ ಜತೆಗೆ ಭಾವನಾತ್ಮಕ ಸಂಬಂಧ ಕಟ್ಟಿಕೊಳ್ಳುವ ಬೆರಗಿನ ಕಥನ ಸಿನಿಮಾದ್ದು.

ಅಶ್ಲೀಲತೆಯಿಂದ ಅದ್ದಿ ತೆಗೆದು, ದೊಡ್ಡವರ ಸಿನಿಮಾ ಆಗಿಸುವ ದಟ್ಟ ಸಾಧ್ಯತೆಗಳ ವಸ್ತುವಿಷಯ ಇದು. ಆದರೆ, ನಿರ್ದೇಶಕ ಹಾಗೆ ಮಾಡದೆ ರಸಾನುಭವವನ್ನು ಮುಗ್ಧ ಪಾತ್ರಗಳ ಚೌಕಟ್ಟಿನಲ್ಲೇ ತುಳುಕಿಸಿರುವುದು ಅಗ್ಗಳಿಕೆ. ಎಲ್ಲ ಪಾತ್ರಗಳ ನಡುವಿನ ಅನೂಹ್ಯ ನಂಟು, ಅವುಗಳ ನಡುವೆಯೇ ಗೋಜಲುಗಳು...ಇಷ್ಟನ್ನು ಮಾತ್ರ ಹದವರಿತಂತೆ ರಾಜ್ ಶಾಂಡಿಲ್ಯ ಕಥಾಶಿಲ್ಪವಾಗಿಸಿದ್ದಾರೆ. ಸಂಭಾಷಣೆಯಂತೂ ಹರಿತ, ಹಾಸ್ಯಭರಿತ. ಘಟವಾಣಿಯ ಪೊಲೀಸ್ ಪತಿಯಾಗಿ ವಿಜಯ್ ರಾಜ್ ಕವಿಯಾಗಿ ಹೊಸೆಯುವ ಚುಟುಕುಗಳು ಅದರ ನಮೂನೆಗಳು.

ನಾಟಕದ ರೂಹಿನ ಚಿತ್ರಕಥೆಯನ್ನೇ ಸಿನಿಮಾಗೆ ಒಗ್ಗಿಸಿರುವ ಬಗೆ ಸ್ತುತ್ಯರ್ಹ. ‘ಕಾಮಿಡಿ ಆಫ್ ಎರರ್ಸ್’ ಕಟ್ಟಿಕೊಡುವ ರಸಾನುಭವವನ್ನೇ ಇದೂ ಮೊಗೆದುಕೊಡುತ್ತದೆ. ನಾಯಕ ಆಯುಷ್ಮಾನ್ ಖುರಾನಾ ತಮ್ಮ ಆಂಗಿಕ ಅಭಿನಯದಿಂದಷ್ಟೇ ಅಲ್ಲದೆ ಲಲನೆಯಂತೆ ಮಾತನಾಡುವುದರಿಂದಲೂ ಆವರಿಸಿಕೊಳ್ಳುತ್ತಾರೆ. ಪ್ರತಿ ಸಿನಿಮಾ ಕೂಡ ಹೊಸ ಪ್ರಯೋಗಶಾಲೆ ಎಂದು ಅವರು ಪರಿಗಣಿಸಿರುವುದು ಸ್ಪಷ್ಟ. ಅವರದ್ದೇ ಅಭಿನಯದ ಹಿಂದಿನ ‘ಅಂಧಾಧುನ್’, ‘ಬಧಾಯಿ ಹೋ’, ‘ಆರ್ಟಿಕಲ್ 15’ ಹಿಂದಿ ಚಿತ್ರಗಳು ಕೂಡ ಪ್ರಯೋಗವೈವಿಧ್ಯಕ್ಕೆ ಸಾಕ್ಷ್ಯಗಳು. ಅನ್ನು ಕಪೂರ್ ಭಾವಾಭಿನಯದ ‘ಟೈಮಿಂಗ್’ ಸಿನಿಮಾದ ದೊಡ್ಡ ರಂಜನೆ. ನಾಯಕನ ಆಪ್ತಸ್ನೇಹಿತನಾಗಿ ಮಂಜೋತ್ ಸಿಂಗ್ ಕೂಡ ಇಷ್ಟವಾಗುತ್ತಾರೆ. ನಾಯಕಿ ನುಶ್ರತ್ ಭರೂಚಾ ಸಿಕ್ಕಿರುವ ಅವಕಾಶವನ್ನು ಹಣ್ಣಾಗಿಸಿಕೊಂಡಿದ್ದಾರೆ.

ಅಸೀಮ್ ಮಿಶ್ರಾ ಸಿನಿಮಾಟೊಗ್ರಫಿ, ಹೇಮಲ್ ಕೊಠಾರಿ ಸಂಕಲನ ಕೌಶಲ ಸಿನಿಮಾದ ಉದ್ದೇಶಕ್ಕೆ ಪೂರಕವಾಗಿವೆ. ಮೀಟ್‌ ಬ್ರೋಸ್ ಸ್ವರ ಸಂಯೋಜಿಸಿರುವ ಹಾಡುಗಳನ್ನು ಕಥನ ಚೌಕಟ್ಟಿನೊಳಗೇ ಅಚ್ಚುಕಟ್ಟಾಗಿ ಬೆಸೆದಿರುವುದು ನಿರ್ದೇಶಕರ ಇನ್ನೊಂದು ಜಾಣ್ಮೆ.

‘ನಗೆ ನಮ್ಮ ಕುಲದೇವರು’ ಎಂದುಕೊಂಡವರೆಲ್ಲ ಚಿಂತೆ ಬಿಟ್ಹಾಕಿ ಈ ‘ಕಾಮಿಡಿ ಆಫ್ ಎರರ್’ ಅನ್ನು ಆಸ್ವಾದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT