ತಮ್ಮ ನಿರ್ದೇಶನದ ಎರಡು ಸಿನಿಮಾಗಳು ಚಂದನವನದ ತೆರೆಗಳಲ್ಲಿ ಹಿಟ್ ಆದ ಬೆನ್ನಲ್ಲೇ ನಟ, ನಿರ್ದೇಶಕ ದುನಿಯಾ ವಿಜಯ್ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಬಾಕ್ಸ್‌ಆಫೀಸ್‌ನಲ್ಲಿ ‘ಭೀಮ’ ಸಿನಿಮಾ ಸದ್ದು ಮಾಡುತ್ತಿರುವಾಗಲೇ ಹೊಸ ಸಿನಿಮಾ ಘೋಷಣೆಯಾಗಿದೆ. ‘ಸಲಗ’ ಹಾಗೂ ‘ಭೀಮ’ ಸಿನಿಮಾ ತಂಡವೇ ಈ ಹೊಸ ಸಿನಿಮಾದ ಭಾಗವಾಗಿರಲಿದೆ ಎಂದು ವಿಜಯ್ ಹೇಳಿದ್ದಾರೆ.
ಸದ್ಯಕ್ಕೆ ಈ ಸಿನಿಮಾಗೆ ‘VK 30’ ಎಂದರೆ ವಿಜಯ್ ಅವರ 30ನೇ ಸಿನಿಮಾ ಎಂಬ ಶೀರ್ಷಿಕೆ ಇಡಲಾಗಿದೆ. ಸಿನಿಮಾಗೆ ಆರ್‌ಆರ್ ವೆಟ್ರಿ ವೇಲ್(ತಂಬಿ) ಆ್ಯಕ್ಷನ್ ಕಟ್ ಹೇಳಲಿದ್ದು, ಚಿತ್ರದ ಕಥೆಯೂ ಅವರದ್ದೇ ಆಗಿದೆ. ‘ಸಲಗ’ ಮತ್ತು ‘ಭೀಮ’ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಚಿತ್ರದ ಪೋಸ್ಟರ್ ಭಿನ್ನವಾಗಿದ್ದು, ಹೊಸ ಲುಕ್‌ನಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ಕಾಡಿನಲ್ಲಿ ನಡೆಯುವ ಕಥೆಯಂತಿದೆ ಚಿತ್ರದ ಪೋಸ್ಟರ್. ಇದು ಚಿತ್ರದ ಕಥೆಯ ಬಗ್ಗೆಯೂ ಕುತೂಹಲ ಹುಟ್ಟಿಸುವಂತಿದೆ. ಪ್ರಸ್ತುತ ‘ಕಾಟೇರ’ ಕಥೆಗಾರ ಜಡೇಶ್ ಕೆ.ಹಂಪಿ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ತೊಡಗಿಸಿಕೊಂಡಿದ್ದಾರೆ. ಇದು ವಿಜಯ್ ನಟನೆ 29ನೇ ಸಿನಿಮಾವಾಗಿದೆ.
‘ದುನಿಯಾ’ ಸಿನಿಮಾ ಮೂಲಕ ನಾಯಕನಾಗಿ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ದುನಿಯಾ ವಿಜಯ್ ಸಿನಿ ಪಯಣಕ್ಕೆ ‘ಸಲಗ’ ಹಾಗೂ ‘ಭೀಮ’ ದೊಡ್ಡ ತಿರುವನ್ನೇ ನೀಡಿವೆ. ಕನ್ನಡದ ಜೊತೆಗೆ ಟಾಲಿವುಡ್ ಅಂಗಳದಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ ‘ವೀರ ಸಿಂಹರೆಡ್ಡಿ’ ಚಿತ್ರದಲ್ಲಿ ಖಳನಾಯಕನಾಗಿಯೂ ಮಿಂಚಿದ್ದ ವಿಜಯ್ ಇದೀಗ ತಮ್ಮದೇ ತಂಡದಲ್ಲಿದ್ದ ತಂಬಿ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ.