ಬುಧವಾರ, ಜೂನ್ 3, 2020
27 °C

ಎಡಿಟಿಂಗ್‌ ಹೌಸ್‌ಗಳ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿನಿಮಾ, ಧಾರಾವಾಹಿ, ಕಿರುಚಿತ್ರ, ಸಾಕ್ಷ್ಯಚಿತ್ರಗಳ ಸಂಕಲನ ಮಾಡುತ್ತಿದ್ದ ಎಡಿಟಿಂಗ್‌ ಹೌಸ್‌ಗಳ ಮೇಲೆಯೂ ಕೋವಿಡ್ ‌19 ಬಿಸಿ ತಟ್ಟಿದೆ. ಪರದೆ ಮೇಲೆ ಸಿನಿಮಾಗಳ ಅಂದಚೆಂದ ಹೆಚ್ಚಿಸುವ ಸಂಕಲನಕಾರರ ಕಥೆ ಶೋಚನೀಯವಾಗಿದೆ.

ಹೊಸಬರಿಗೆ ಕಡಿಮೆ ಖರ್ಚಿನಲ್ಲಿ ಡಬ್ಬಿಂಗ್‌, ವಿಡಿಯೊ ಮತ್ತು ಆಡಿಯೊ ಸಂಕಲನ ಮಾಡಿಕೊಡಬೇಕು ಎಂಬ ಆಸೆ ಇಟ್ಟುಕೊಂಡು ಆರಂಭವಾಗಿದ್ದೇ ಶಂಕ್ರಣ್ಣ ಸ್ಟುಡಿಯೊ. ಈ ಸ್ಟುಡಿಯೊ ಈಗ ಖಾಲಿ ಹೊಡೆಯುತ್ತಿದೆ. ‘ಕಟ್ಟಡ ಬಾಡಿಗೆ, ವಿದ್ಯುತ್‌ ಹೀಗೆ ಎಲ್ಲದಕ್ಕೂ ಹಣ ಹೊಂದಿಸುವುದು ಎಲ್ಲಿಂದ? ಇಲ್ಲಿ ಕೆಲಸ ಮಾಡುವವರಿಗೆ ಸಂಬಳ ಕೊಡಬೇಕು. ಎಡಿಟಿಂಗ್‌ ಸೌಲಭ್ಯಗಳಿಗೆ ಹಾಕಿದ ಬಂಡವಾಳವೂ ಬರುತ್ತಿಲ್ಲ’ ಎಂದು ನೋವು ತೋಡಿಕೊಳ್ಳುತ್ತಾರೆ ಸ್ಟುಡಿಯೊ ಮಾಲೀಕ ಜೀವನ್‌ ಗಂಗಾಧರಯ್ಯ.

ಮನೆಯಲ್ಲೇ ಪುಟ್ಟ ಸ್ಟುಡಿಯೊ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ಸಂಕಲನಕಾರರ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಮನೆಯಲ್ಲಿಯೇ ಕಂಪ್ಯೂಟರ್‌ ಇಟ್ಟುಕೊಂಡು ಸಾಕ್ಷ್ಯಚಿತ್ರಗಳನ್ನು ಎಡಿಟ್‌ ಮಾಡಿಕೊಂಡಿದ್ದ ಅಶ್ವಿನಿ ಲೋಕೇಶ್‌ ಅವರು ಕಳೆದ ಎರಡು ತಿಂಗಳಿಂದ ನಿರುದ್ಯೋಗಿಯಾಗಿದ್ದಾರೆ.  

ಸಣ್ಣ ಸ್ಟುಡಿಯೊಗಳ ಕಥೆ ಹೀಗಾದರೆ, ದೊಡ್ಡ ಸ್ಟುಡಿಯೊಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿವೆ. ‘ನಮ್ಮ ಸ್ಟುಡಿಯೊದಲ್ಲಿ ‘ದಂತ ಪುರಾಣ’, ‘ತಲೆದಂಡ’, ‘ಅಮೃತ ಅಪಾರ್ಟ್‌ಮೆಂಟ್ಸ್’ ಸಿನಿಮಾಗಳ ಸಂಕಲನ ನಡೆಯುತಿತ್ತು. ಕೊರೊನಾ ಲಾಕ್‌ಡೌನ್‌ನಿಂದ ಎಲ್ಲವೂ ಸ್ಥಗಿತಗೊಂಡಿದೆ. ನಾವಿಲ್ಲಿ ಸಂಕಲನ ಮಾಡದೆ ಡಬ್ಬಿಂಗ್‌ ಕೂಡ ಸಾಧ್ಯವಿಲ್ಲ. ನಮಗೆ ವರ್ಕ್‌ ಫ್ರಮ್‌ ಹೋಂ ಇಲ್ಲ. ಆನ್‌ಲೈನ್‌ ಮೂಲಕ ಸಂವಹನ ಮಾಡಿ ಕೆಲಸ ಮಾಡಲು ಸಾಧ್ಯವಿಲ್ಲ. ತಾಂತ್ರಿಕ ತಂಡವು ಜತೆಯಲ್ಲೇ ಇರಬೇಕು. ಧಾರಾವಾಹಿಯ ಪ್ರತಿದಿನ ಸಂಚಿಕೆಯಂತೆ ಚಿತ್ರೀಕರಣವಾಗಬೇಕು. ಅದು ಸಂಪೂರ್ಣ ಬಂದ್ ಆಗಿದೆ’ ಎನ್ನುತ್ತಾರೆ ನೆನಪಿರಲಿ ಎಡಿಟಿಂಗ್ ಸ್ಟುಡಿಯೊ ಹಾಗೂ ಲ್ಯಾಟಿಟ್ಯೂಡ್‌ ಫ್ರೇಮ್‌ ಟು ಸ್ಕ್ರೀನ್‌ ಡಿಜಿಟಲ್‌ ಲ್ಯಾಬ್‌ ಮಾಲೀಕರಾದ ಸಂಪತ್‌ ಹಾಗೂ ಬಿ.ಎಸ್‌. ಕೆಂಪರಾಜು.

ಸಂಘದಿಂದ ನೆರವು

ಕರ್ನಾಟಕ ಸಂಕಲನಕಾರರ ಸಂಘದ ಸದಸ್ಯರಿಗೆ ಆಹಾರದ ಕಿಟ್‌ ವಿತರಿಸಲಾಗಿದೆ. ಜೊತೆಗೆ ಸ್ವಯಂ ಸೇವಾ ಸಂಸ್ಥೆಯ ಒಕ್ಕೂಟ, ಕಲ್ಯಾಣ್‌ ಜ್ಯುವೆಲ್ಲರಿ, ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಮೂರು ಸಾವಿರ ರಿಲೈನ್ಸ್‌ ಓಚರ್‌ ಮತ್ತು ಫಿಲಂ ಚೇಂಬರ್‌ನಿಂದ 50 ಮೂಟೆ ಅಕ್ಕಿ ವಿತರಿಸಲಾಗಿದೆ. ತೀರ ಕಷ್ಟದಲ್ಲಿ ಇರುವವರಿಗೆ ಸಂಕಲನಕಾರರಾದ ಬಸವರಾಜ್‌ ಅರಸ್ (ಶಿವು), ಸಂಪತ್ ಆರ್ಥಿಕ ಸಹಾಯ ನೀಡುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು