ಸೋಮವಾರ, ಆಗಸ್ಟ್ 15, 2022
22 °C

ವಿಷ್ಣುವರ್ಧನ್‌, ಉಪೇಂದ್ರ, ಶ್ರುತಿಗೆ ಜನ್ಮದಿನದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಂದು ಕನ್ನಡ ಚಿತ್ರರಂಗದ ಪಾಲಿಗೆ ವಿಶೇಷ ದಿನ. ‘ಸಾಹಸ ಸಿಂಹ’ ವಿಷ್ಣುವರ್ಧನ್‌, ‘ರಿಯಲ್ ಸ್ಟಾರ್’ ಉಪೇಂದ್ರ ಹಾಗೂ ನಟಿ ಶ್ರುತಿ ಅವರಿಗೆ (ಸೆ.18ರಂದು) ಇಂದು ಜನ್ಮದಿನದ ಸಂಭ್ರಮ. ಈ ಮೂವರು ಕಲಾವಿದರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.

ಸದಭಿರುಚಿಯ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದ ವಿಷ್ಣುವರ್ಧನ್ ಅವರ 70ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದಲೇ ಆಚರಿಸುತ್ತಿದ್ದಾರೆ. ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿದ ‘ನಾಗರಹಾವು’ ಸಿನಿಮಾ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸಿದ ಅವರು, ಕನ್ನಡದ ಮೊದಲ ಪಂಚಭಾಷಾ ನಟ ಕೂಡ ಹೌದು. ಹಿಂದಿಯ ನಾಲ್ಕು ಚಿತ್ರಗಳಲ್ಲಿ ನಟಿಸಿದ ಕನ್ನಡದ ಏಕೈಕ ನಟ ಎಂಬ ಹೆಗ್ಗಳಿಕೆ ಅವರದ್ದು.

ಭಾರತೀಯ ಚಿತ್ರರಂಗಕ್ಕೆ ನೂರು ವರ್ಷ ಪೂರೈಸಿದ ವೇಳೆ ಅಂಚೆ ಇಲಾಖೆಯು ಐವತ್ತು ಕಲಾವಿದರು ಮತ್ತು ತಂತ್ರಜ್ಞರ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿತ್ತು. ಕನ್ನಡ ಚಿತ್ರರಂಗದಿಂದ ಈ ಗೌರವಕ್ಕೆ ಭಾಜನರಾದ ಏಕೈಕ ನಟ ಎಂದರೆ ವಿಷ್ಣುವರ್ಧನ್. ಅವರ ಜನ್ಮದಿನದ ಅಂಗವಾಗಿ ಅಂಚೆ ಇಲಾಖೆಯು ಹೊರತಂದಿರುವ ವಿಶೇಷ ಲಕೋಟೆಯನ್ನು ಇಂದು ಮಧ್ಯಾಹ್ನ 3ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ.

ವಿಷ್ಣುವರ್ಧನ್ 200 ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಂಕರನಾಗ್ ಆ್ಯಕ್ಷನ್‌ ಕಟ್‌ ಹೇಳಿದ್ದ ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲೂ ಬಣ್ಣ ಹಚ್ಚಿದ್ದರು. ಅವರು ನಟಿಸಿದ ಕೊನೆಯ ಚಿತ್ರ ‘ಆಪ್ತರಕ್ಷಕ’. ‘ನಾಗರಹಾವು’, ‘ಹೊಂಬಿಸಿಲು’, ‘ಬಂಧನ’, ‘ಲಯನ್ ಜಗಪತಿರಾವ್’, ‘ಲಾಲಿ’, ‘ವೀರಪ್ಪನಾಯ್ಕ’ ಹಾಗೂ ‘ಆಪ್ತರಕ್ಷಕ’ ಸಿನಿಮಾಗಳಲ್ಲಿನ ಮನೋಜ್ಞ ಅಭಿನಯಕ್ಕಾಗಿ ಏಳು ಬಾರಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಟ ದರ್ಶನ್, ‘ಅಭಿನಯ ಭಾರ್ಗವ, ನಮ್ಮೆಲ್ಲರ ನಲ್ಮೆಯ ಸಾಹಸ ಸಿಂಹ ಡಾ.ವಿಷ್ಣು ಸರ್ ಅವರ 7ಂನೇ ವರ್ಷದ ಹುಟ್ಟುಹಬ್ಬದ ಸವಿನೆನಪಿನಲ್ಲಿ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು’ ಎಂದು ಟ್ವೀಟ್‌ ಮಾಡಿದ್ದಾರೆ. ನಿನ್ನೆ ನಟ ಸುದೀಪ್‌ ಅವರು ವಿಷ್ಣುವರ್ಧನ್‌ ಜನ್ಮದಿನದ ಕಾಮನ್‌ ಸಿಪಿಡಿಯನ್ನು ಬಿಡುಗಡೆ ಮಾಡಿದ್ದರು.


ಉಪೇಂದ್ರ

ಉಪ್ಪಿಯ ನೋಟ

‘ಅನಂತನ ಅವತಾರ’ ಚಿತ್ರದಲ್ಲಿ ನಟಿಸುವ ಮೂಲಕ ಉಪೇಂದ್ರ ಬೆಳ್ಳಿತೆರೆ ಪ್ರವೇಶಿಸಿದರು. ಇದು ತೆರೆಕಂಡಿದ್ದು 1989ರಲ್ಲಿ. ಅವರು ನಿರ್ದೇಶಿಸಿದ ಮೊದಲ ಚಿತ್ರ ‘ತರ್ಲೆ ನನ್ಮಗ’. ಬಳಿಕ ಹಲವು ಸಿನಿಮಾಗಳನ್ನು ನಿರ್ದೇಶಿಸಿದ ಅವರು ‘ಎ’ ಸಿನಿಮಾದ ಮೂಲಕ ನಾಯಕ ನಟನಾದರು. 

ಉಪ್ಪಿ ನಿರ್ದೇಶಿಸಿದ ‘ಓಂ’ ಸಿನಿಮಾ ಇಂದಿಗೂ ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅವರು ಕೊನೆಯದಾಗಿ ನಿರ್ದೇಶಿಸಿದ ಚಿತ್ರ ‘ಉಪ್ಪಿ 2’. ಮತ್ತೆ ತಾವು ನಿರ್ದೇಶನದತ್ತ ಹೊರಳುವುದಾಗಿ ಘೋಷಿಸಿದ್ದಾರೆ.

ಉಪ್ಪಿ ನಟನೆಯ ‘ಹೋಮ್‌ ಮಿನಿಸ್ಟರ್‌’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ‘ತ್ರಿಶೂಲಂ’, ‘ಕಬ್ಜ’, ‘ಬುದ್ಧಿವಂತ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹರಿಪ್ರಿಯ ಜೊತೆಗೆ 'ಲಗಾಮ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.


ನಟಿ ಶ್ರುತಿ

ಬಹುಭಾಷಾ ನಟಿ ಶ್ರುತಿ

ನಟಿ ಶ್ರುತಿ ಕನ್ನಡದಲ್ಲಿ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ‘ಶ್ರುತಿ’. ತೆಲುಗು, ತಮಿಳು, ಮಲಯಾಳ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಧಾರಾವಾಹಿ, ಬಿಗ್‌ಬಾಸ್‌ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿರುವ ಅವರು ಸದ್ಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಎರಡು ವರ್ಷದ ಹಿಂದೆ ತೆರೆಕಂಡ ‘ದಂಡುಪಾಳ್ಯ 3’ ಬಳಿಕ ಅವರು ಕನ್ನಡದ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಈಗ ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು