ಮಂಗಳವಾರ, ಮೇ 17, 2022
25 °C

ಚಿತ್ರಮಂದಿರ ಭರ್ತಿ: ಹೊಸ ಚಿತ್ರಗಳ ನಿರ್ಮಾಪಕರ ನಿಟ್ಟುಸಿರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿ ಅನುಮತಿ ನೀಡಿರುವ ಬೆನ್ನಲ್ಲೇ ಇಂದು (ಫೆ. 5) ಬಿಡುಗಡೆಯಾದ ಹೊಸ ಚಿತ್ರಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ನಗರದ ಬಹುತೇಕ ಚಿತ್ರಮಂದಿರಗಳಲ್ಲಿ ಆಸನಗಳು ಭರ್ತಿಯಾಗಿವೆ. ಬುಕ್‌ಮೈ ಶೋ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ತಾಣದಲ್ಲಿ ಮಲ್ಟಿಪ್ಲೆಕ್ಸ್‌ ಹಾಗೂ ನಗರದ ವೀರೇಶ್‌, ಗೋವರ್ಧನ, ಪ್ರಸನ್ನ ಸೇರಿದಂತೆ ಪ್ರಮುಖ ಚಿತ್ರಮಂದಿರಗಳ ಅಪರಾಹ್ನ ಮತ್ತು ಸಂಜೆಯ ಪ್ರದರ್ಶನಗಳ ಆಸನಗಳು ಭರ್ತಿಯಾಗಿರುವುದು ಕಾಣಿಸಿತು. ನನ್ನ ಆಯ್ಕೆಯ ಪ್ರದರ್ಶನ ಅವಧಿಗೆ ಟಿಕೆಟ್‌ ಸಿಗಲಿಲ್ಲ’ ಎಂದು ಸಿನಿಮಾ ವೀಕ್ಷಕ ಸಂತೋಷ್‌ ಹೇಳಿದರು.

‘ದಾವಣಗೆರೆ, ಹುಬ್ಬಳ್ಳಿ ಹಾಗೂ ಹೊಸಪೇಟೆಯ ಪ್ರಮುಖ ಚಿತ್ರಮಂದಿರಗಳು ಭರ್ತಿಯಾಗಿವೆ. ಆ್ಯಕ್ಷನ್‌ ಸಿನಿಮಾ ‘ಶ್ಯಾಡೋ’ ಹಾಗೂ ‘ಇನ್ಸ್‌ಪೆಕ್ಟರ್‌ ವಿಕ್ರಂ’, ಹಾಸ್ಯ ಪ್ರಧಾನ ಕೌಟುಂಬಿಕ ಚಿತ್ರ ‘ಮಂಗಳವಾರ ರಜಾದಿನ’ ಇಂದು ಬಿಡುಗಡೆಯಾಗಿವೆ. ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ಸಿಕ್ಕಿರುವ ಪ್ರಯುಕ್ತ ಹೊಸ ಚಿತ್ರಗಳು ಆನ್‌ಲೈನ್‌ ವೇದಿಕೆಗಳಲ್ಲಿ ಬಿಡುಗಡೆ ಆಗಿಲ್ಲ. ಹೀಗಾಗಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಖ ಮಾಡಿದ್ದಾರೆ’ ಎಂದು ಚಿತ್ರಮಂದಿರಗಳ ಮಾಲೀಕರೊಬ್ಬರು ಹೇಳಿದರು.

ಚಿತ್ರಮಂದಿರಗಳ ಪ್ರವೇಶ ದ್ವಾರದಲ್ಲಿ ಜನಜಂಗುಳಿ ಉಂಟಾಗದಂತೆ ಆಯಾ ಪ್ರದೇಶದಲ್ಲಿ ಕಾವಲುಗಾರರು ನಿಗಾ ವಹಿಸಿದ್ದಾರೆ. ಪ್ರವೇಶದ್ವಾರದಲ್ಲಿ ತಾಪಮಾನ ತಪಾಸಣೆ ನಡೆಸಿ ಪ್ರೇಕ್ಷಕರನ್ನು ಬಿಡಲಾಗುತ್ತಿದೆ. ಕೋವಿಡ್‌ ಮುಂಜಾಗ್ರತಾ ಸಂದೇಶಗಳನ್ನು ಸಿನಿಮಾ ಆರಂಭಕ್ಕೆ ಮುನ್ನ ತೆರೆಯ ಮೇಲೆ ಪ್ರದರ್ಶಿಸಲಾಗುತ್ತಿದೆ.

ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಪಾಲನೆಯಾಗುತ್ತಿವೆಯೇ ಇಲ್ಲವೇ ಎಂಬುದನ್ನು ಆಯಾ ಸ್ಥಳೀಯಾಡಳಿತದ ವಿಚಕ್ಷಣಾ ದಳದ ಅಧಿಕಾರಿಗಳು ಅಲ್ಲಲ್ಲಿ ಪರಿಶೀಲನೆ ನಡೆಸಿದ್ದಾರೆ.

ಚಿತ್ರಮಂದಿರಗಳಿಗೆ ನಾಲ್ಕು ವಾರಗಳ ಮಟ್ಟಿಗೆ ಪ್ರಾಯೋಗಿಕ ನೆಲೆಯಲ್ಲಿ ಶೇ 100ರಷ್ಟು ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಕೋವಿಡ್‌ –19 ಪರಿಸ್ಥಿತಿ ನೋಡಿಕೊಂಡು ಮತ್ತು ಸಿನಿಮಾ ಮಂದಿರಗಳಲ್ಲಿ ಶೇ 100ರ ಆಸನ ಭರ್ತಿಗೆ ಅವಕಾಶ ಮುಂದುವರಿಸಬೇಕೇ ಬೇಡವೇ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದರು. ಅದಕ್ಕೆ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌, ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅದ್ಯಕ್ಷ ಕೆ.ವಿ. ಚಂದ್ರಶೇಖರ್‌ ಮತ್ತು ಸಿನಿರಂಗದ ಪ್ರಮುಖರು ಸಮ್ಮತಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು