ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಧನಂಜಯ

Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
ಅಕ್ಷರ ಗಾತ್ರ

ಟಿ.ಎಸ್. ನಾಗಾಭರಣ ಅವರ ನಿರ್ದೇಶನದ ಸಿನಿಮಾದಲ್ಲಿ ನಟ ಧನಂಜಯ ನಟಿಸುತ್ತಿದ್ದಾರೆ ಎನ್ನುವ ಸುಳಿವು ಮೊದಲೇ ಸಿಕ್ಕಿತ್ತು. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತಾದ ‘ನಾಡಪ್ರಭು ಕೆಂಪೇಗೌಡ’ ಎಂಬ ಸಿನಿಮಾಗೆ ನಾಗಾಭರಣ ಅವರು ಆ್ಯಕ್ಷನ್‌ ಕಟ್‌ ಹೇಳಲಿದ್ದು, ಇದೀಗ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. 

ಬಹುನಿರೀಕ್ಷಿತ ಐತಿಹಾಸಿಕ ಚಿತ್ರ ಇದಾಗಿದ್ದು, ಕೆಂಪೇಗೌಡರ ಜೀವನ ಚರಿತ್ರೆಯನ್ನು ಹೇಳುವ ಕಥೆ ಸಿನಿಮಾದಲ್ಲಿದೆ ಎಂದಿದೆ ಚಿತ್ರತಂಡ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿದ್ದಾರೆ. ಚಿತ್ರವನ್ನು ಎಂ.ಎನ್.ಶಿವರುದ್ರಪ್ಪ ಮತ್ತು ಶುಭಂ ಗುಂಡಲ‌ ಈಶ್ವರ ಎಂಟರ್‌ಟೈನ್‌ಮೆಂಟ್‌ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

‘ಬಂಗಾರದ ಜಿಂಕೆ’, ‘ಜನುಮದ ಜೋಡಿ’, ‘ಕಲ್ಲರಳಿ ಹೂವಾಗಿ’ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಎರಡು ದಶಕಗಳ ಕನಸಿನ ಕೂಸು ಈ ಸಿನಿಮಾ. ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಸದ್ದು ಮಾಡಿರುವ ಜೀವನ ಚರಿತ್ರೆಯ ಕಥನ ಇದಾಗಿದೆ. ನಾಗಾಭರಣ ಅವರು ಹಲವು ವರ್ಷಗಳ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಸದ್ಯ ‘ಉತ್ತರಕಾಂಡ’ ಮತ್ತು ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಧನಂಜಯ, ಇವುಗಳನ್ನು ಪೂರ್ಣಗೊಳಿಸಿ ಕೆಂಪೇಗೌಡರ ಪಾತ್ರಕ್ಕೆ ಬಣ್ಣಹಚ್ಚುವ ಸಾಧ್ಯತೆ ಇದೆ. ಜೊತೆಗೆ ಡಾಲಿ ಪಿಕ್ಚರ್ಸ್‌ನಡಿ ‘ಜೆಸಿ’ ಮತ್ತು ‘ವಿದ್ಯಾಪತಿ’ ಎಂಬ ಸಿನಿಮಾವನ್ನು ಧನಂಜಯ ನಿರ್ಮಾಣ ಮಾಡುತ್ತಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT