ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ: ಮಸ್ತ್‌ ಮನರಂಜನೆಯ ಗಿರ್ಮಿಟ್‌

Last Updated 8 ನವೆಂಬರ್ 2019, 13:35 IST
ಅಕ್ಷರ ಗಾತ್ರ

ಚಿತ್ರ: ಗಿರ್ಮಿಟ್

ನಿರ್ಮಾಣ:ಎನ್.ಎಸ್. ರಾಜಕುಮಾರ್‌

ನಿರ್ದೇಶನ:ರವಿ ಬಸ್ರೂರು

ತಾರಾಗಣ:ಆಶ್ಲೇಷ ರಾಜ್, ಶ್ಲಾಘಾ ಸಾಲಿಗ್ರಾಮ, ಶ್ರಾವ್ಯಾ ಮರವಂತೆ, ನಾಗರಾಜ್ ಜಪ್ತಿ, ತನಿಶಾ ಕೋಣೆ, ಆರಾಧ್ಯ ಶೆಟ್ಟಿ

ಹೆಣ್ಣೆತ್ತವರ ಗೋಳು ಅವರಿಗಷ್ಟೇ ಗೊತ್ತು ಎನ್ನುವುದು ಲೋಕರೂಢಿ ಮಾತು. ಮೂವರು ಹೆಣ್ಣು ಮಕ್ಕಳನ್ನು ಹೆತ್ತ ಸಾಮಾನ್ಯ ಕುಟುಂಬವೊಂದರ ದಂಪತಿ ಆ ಮಕ್ಕಳಿಗೆ ಸರಿಯಾದ ಪ್ರಾಯಕ್ಕೆ ಗಂಡು ಹುಡುಕಿಮದುವೆ ಮಾಡಲು ಹೆಣಗಾಡುತ್ತಿರುತ್ತಾರೆ. ಇಂತಹ ಕೌಟುಂಬಿಕ ಪ್ರಧಾನ ಕಥೆಗೆಹಾಸ್ಯ, ಭಾವುಕತೆ, ಪ್ರೀತಿ–ಪ್ರೇಮದ ಎಳೆಯನ್ನು ಸೇರಿಸಿ, ಇದಕ್ಕೆ ಒಂದಿಷ್ಟು ಹೊಡಿಬಡಿ ದೃಶ್ಯಗಳ ಆ್ಯಕ್ಷನ್‌ ಅಂಶಗಳನ್ನೂಒಗ್ಗರಣೆಯಂತೆ ಬೆರೆಸಿ ಕಾರಮಂಡಕ್ಕಿಯನ್ನು (ಗಿರ್ಮಿಟ್‌) ಸವಿಯಲು ಕೊಟ್ಟಂತೆ ನಿರ್ದೇಶಕ ರವಿ ಬಸ್ರೂರು ಮಕ್ಕಳ ಚಿತ್ರವನ್ನುಪ್ರೇಕ್ಷಕರ ಮುಂದಿಟ್ಟಿದ್ದಾರೆ.

‘ಕಟಕ’ ಚಿತ್ರದ ನಿರ್ದೇಶನ ಮತ್ತು ಕೆಜಿಎಫ್‌ ಚಿತ್ರದ ಸಂಗೀತ ನಿರ್ದೇಶನದ ಅನುಭವವನ್ನು ಅವರು ಈ ಪ್ರಯೋಗಾತ್ಮಕ ಚಿತ್ರದಲ್ಲಿ ಒರೆಗೆ ಹಚ್ಚಿನೋಡಿರುವಂತಿದೆ.

ಮಕ್ಕಳು ದೊಡ್ಡವರ ರೀತಿ ಯೋಚಿಸುವಂತೆ, ದೊಡ್ಡವರು ಸಣ್ಣ ಮಕ್ಕಳಂತೆ ಕುಳಿತು ಸಿನಿಮಾ ನೋಡುವಂತೆ ಮಾಡಿರುವ ಅವರ ತಂತ್ರ ಇಲ್ಲಿ ಫಲಿಸಿದೆ. ಏಕೆಂದರೆ ದೊಡ್ಡವರು ನಿಭಾಯಿಸುವ ಪಾತ್ರಗಳಲ್ಲಿ ಮಕ್ಕಳು ದೊಡ್ಡವರಿಗಿಂತ ನಾವೇನು ಕಡಿಮೆ ಇಲ್ಲವೆನ್ನುವಂತೆ ಮೀಸೆ ಹಚ್ಚಿಕೊಂಡು, ತಲೆಗೆ ಬಿಳಿ ಬಣ್ಣ ಹಚ್ಚಿಕೊಂಡು ಪ್ರಾಯದವರು, ಮಧ್ಯಮ ವಯಸ್ಕರು ಹಾಗೂ ವೃದ್ಧರಾಗಿಯೂ ನಟಿಸಿದ್ದಾರೆ.

ಚಿತ್ರದ ನಾಯಕ ಆಶ್ಲೇಷ ರಾಜ್‌ಗೆ (ರಾಜ) ನಟ ಯಶ್‌ ಮತ್ತು ನಾಯಕಿಶ್ಲಾಘಾ ಸಾಲಿಗ್ರಾಮಗೆ (ರಶ್ಮಿ)ರಾಧಿಕಾ ಪಂಡಿತ್‌ ಧ್ವನಿ ನೀಡಿದ್ದಾರೆ. ಹಾಗೆಯೇ ಪೋಷಕ ಪಾತ್ರಗಳಿಗೆ ಅಚ್ಯುತ್‌ಕುಮಾರ್‌, ರಂಗಾಯಣ ರಘು, ತಾರಾ ಅನುರಾಧಾ, ಶಿವರಾಜ್‌ ಕೆ.ಆರ್‌. ಪೇಟೆ, ಹೊನ್ನವಳ್ಳಿ ಕೃಷ್ಣ, ಅನುಪಮಾ ಗೌಡ, ಅನುಪಮಾ ಭಟ್‌, ಸುಧಾ ಬೆಳವಾಡಿ, ಪುನೀತ್ ರುದ್ರನಾಗ್‌, ರವಿ ಬಸ್ರೂರ್‌, ಆಶಾ ಲಕ್ಷ್ಮಣ್‌, ಎಂ.ಎಸ್‌. ಜಹಾಂಗೀರ್‌,ಪ್ರಮೋದ್‌ ಶೆಟ್ಟಿ ಧ್ವನಿ ನೀಡಿದ್ದಾರೆ. ಇವರೆಲ್ಲರೂ ಚಿತ್ರದಲ್ಲಿ ನಟಿಸದಿದ್ದರೂ ಧ್ವನಿಯಿಂದಲೇ ಚಿತ್ರವನ್ನು ಆವರಿಸಿಕೊಳ್ಳುತ್ತಾರೆ.ಸಾಧುಕೋಕಿಲ ಧ್ವನಿಯಲ್ಲಿ‌ ಚಿತ್ರದ ಪಾತ್ರಗಳ ಹಿನ್ನೆಲೆ, ಮುನ್ನೆಲೆಯನ್ನು ಪರಿಚಯಿಸಿರುವ ಕ್ರಮವೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

ಆಶ್ಲೇಷ ರಾಜ್‌, ಶ್ಲಾಘಾ ನಟನೆಯಲ್ಲಿ ಭವಿಷ್ಯದ ತಾರೆಗಳಾಗಿ ಕಾಣಿಸುತ್ತಾರೆ.ಶ್ರಾವ್ಯ ಮರವಂತೆ,ನಾಗರಾಜ್ ಜಪ್ತಿ,ಆದಿತ್ಯ ಕುಂದಾಪುರ,ಜಯೇಂದ್ರ ವಕ್ವಾಡಿ,ಮನೀಶ್ ಶೆಟ್ಟಿ,ಸಹನಾ ಬಸ್ರೂರು ಅವರ ನಟನೆ ಮನಸಿನಲ್ಲಿ ಉಳಿಯುತ್ತದೆ.ಸದಭಿರುಚಿಯ ಹಾಸ್ಯವು ಪ್ರೇಕ್ಷಕನನ್ನು ಮನಸಾರೆ ನಗಿಸುತ್ತದೆ. ಮಂಡ್ಯ, ಬೆಂಗಳೂರು, ಕುಂದ್ರಾಪ ಹಾಗೂ ಹುಬ್ಬಳ್ಳಿ ಭಾಗದ ಭಾಷಾ ಸೊಗಡು ಇದರಲ್ಲಿದೆ.

‘ಡ್ರಾಮಾ ಜೂನಿಯರ್ಸ್‌’ ಮತ್ತು ‘ಕಾಮಿಡಿ ಕಿಲಾಡಿ’ ರಿಯಾಲಿಟಿ ಶೋಗಳ ಛಾಯೆ ಇಲ್ಲಿ ಕಾಣಿಸಿದರೆ ಅದು ಪ್ರೇಕ್ಷಕರ ತಪ್ಪಲ್ಲ. ಹಾಗೆಯೇ ದೊಡ್ಡವರ ಸಿನಿಮಾದಂತೆ ಮಕ್ಕಳ‌ ಕೈಗೆ ಆಯುಧಗಳನ್ನು ಕೊಡಿಸಿ ಬಡಿದಾಡಿಸಬಾರದಿತ್ತು ಎನಿಸುವುದೂ ಸಹಜ.ಚಿತ್ರದ ಕಥೆಯಲ್ಲಿ ಹೊಸತನ, ವಿಶೇಷತೆ ಇಲ್ಲದಿದ್ದರೂಆ ಕೊರತೆಯನ್ನು ಸಂಭಾಷಣೆಯಿಂದ ಸರಿದೂಗಿಸಿರುವುದು ಕಾಣಿಸುತ್ತದೆ. ರವಿ ಬಸ್ರೂರುಸಂಗೀತದಲ್ಲಿ ಪುನೀತ್‌ ರಾಜ್‌ಕುಮಾರ್‌ ಹಾಡಿರುವ ‘ಧೂಮ್‌ ರಟ್ಟಾ’ ಹಾಡು ಗುನುಗುವಂತಿದೆ.ಸಚಿನ್ ಬಸ್ರೂರು ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗೆ ಸಹ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT