ಸೋಮವಾರ, ಜೂಲೈ 6, 2020
27 °C

ಗ್ಲಾಮರ್‌ ಬೆಡಗಿಯ ಡಿಗ್ಲಾಮರ್‌ ಪಾತ್ರ

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

prajavani

ಚೆಲುವಿನಲ್ಲಿ ಚಂದನದ ಬೊಂಬೆಯಂತಿರುವ ನಟಿ ಅಮೃತಾ ಅಯ್ಯರ್‌ ‘ಗ್ರಾಮಾಯಣ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚೆನ್ನೈನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದ ಈ ಬೆಡಗಿ ಈಗಾಗಲೇ ತಮಿಳಿನ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. 

ತಮಿಳಿನ ‘ಕಾಳಿ’ ಮತ್ತು ವಿಜಯ್‌ ದಳಪತಿ ನಟನೆಯ ಹಿಟ್‌ ಸಿನಿಮಾ ‘ಬಿಗಿಲ್‌’ ಚಿತ್ರದಲ್ಲೂ ಅಮೃತಾ ಸಿನಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಹಾಗೆಯೇ ತೆಲುಗಿನ ಎರಡು ಹೊಸ ಸಿನಿಮಾಗಳಲ್ಲಿ ಅಮೃತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಕನ್ನಡದ ಸಿನಿ ಪ್ರೇಕ್ಷಕರು ಆದರದಿಂದ ಸ್ವೀಕರಿಸುತ್ತಾರೆ ಎನ್ನುವ ನಿರೀಕ್ಷೆಯೊಂದಿಗೆ ಸ್ಯಾಂಡಲ್‌ವುಡ್‌ಗೆ ಅವರು ಅಡಿ ಇಟ್ಟಿದ್ದಾರೆ.

ದೇವನೂರು ಚಂದ್ರು ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಮತ್ತು ವಿನಯ್‌ ರಾಜ್‌ಕುಮಾರ್‌ ನಾಯಕನಾಗಿರುವ ‘ಗ್ರಾಮಾಯಣ’ ಚಿತ್ರದಲ್ಲಿ ಅಮೃತಾ ಅವರದು ಪಕ್ಕಾ ಹಳ್ಳಿ ಹುಡುಗಿಯ ಪಾತ್ರ. ಇಡೀ ಚಿತ್ರದಲ್ಲಿ ಡಿಗ್ಲಾಮರ್‌ ಆಗಿಯೇ ಕಾಣಿಸಿಕೊಳ್ಳಲಿದ್ದಾರಂತೆ. ತಮಿಳಿನ ‘ಪಡೆವೀರನ್‌’ ಚಿತ್ರದಲ್ಲಿ ಇವರು ನಿರ್ವಹಿಸಿರುವ ಹಳ್ಳಿ ಹುಡುಗಿಯ ಪಾತ್ರಕ್ಕೆ ನಿರ್ದೇಶಕ ದೇವನೂರು ಚಂದ್ರು ಮನಸೋತು, ತಮ್ಮ ಗ್ರಾಮಾಯಣದಲ್ಲಿ ಅದ್ಭುತವಾದ ಪಾತ್ರವನ್ನು ಅಮೃತಾಗೆ ನೀಡಿದ್ದಾರಂತೆ. ಹಾಗೆಯೇ ಅಮೃತಾ ಅವರಿಂದ ಬೇಸಾಯ ಮಾಡಿಸಿ, ದನ ಮೇಯಿಸಿ ಸೀದಾಸಾದಾ ಹಳ್ಳಿ ಹುಡುಗಿಯಂತೆ ತೋರಿಸಲಿದ್ದಾರಂತೆ.

‘ಈಗಾಗಲೇ 25 ದಿನಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ಎರಡನೇ ಹಂತದಲ್ಲಿ ಸುಮಾರು 25 ದಿನಗಳ ಚಿತ್ರೀಕರಣದಲ್ಲಿ ನಾನು ಭಾಗಿಯಾಗಬೇಕಾಗಬಹುದು. ಕಥೆ ತುಂಬಾ ಚೆನ್ನಾಗಿದೆ. ನನ್ನ ಪಾತ್ರಕ್ಕೂ ತುಂಬಾ ಸ್ಕೋಪ್‌ ಇದೆ. ಹಾಗಾಗಿಯೇ ಈ ಚಿತ್ರ ಒಪ್ಪಿಕೊಂಡೆ. ಅದರಲ್ಲೂ ವಿನಯ್‌ರಾಜ್‌ಕುಮಾರ್‌ ಅವರಂತಹ ನಟನೊಂದಿಗೆ ನಟಿಸುವುದು ಎಂಥವರಿಗೂ ಖುಷಿಯ ವಿಚಾರ’ ಎಂದು ಅಮೃತಾ ಅಯ್ಯರ್‌ ‘ಸಿನಿಮಾ ಪುರವಣಿ’ಯೊಂದಿಗೆ ಮಾತಿಗಾರಂಭಿಸಿದರು.

‘ನನ್ನ ಮಾತೃಭಾಷೆ ತಮಿಳು ಆಗಿದ್ದರೂ ನಾನು ಕನ್ನಡವನ್ನು ಚೆನ್ನಾಗಿ ಮಾತನಾಡುತ್ತೇನೆ. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಬೇಕಿರುವ ಹಳ್ಳಿ ಸೊಗಡಿನ ಕನ್ನಡ ಭಾಷೆ ಉಚ್ಛರಿಸಲು ನನಗೆ ಮೊದಲು ಕಷ್ಟವಾಯಿತು. ನಿರ್ದೇಶಕರು ಅವಕಾಶ ನೀಡಿದರೆ ನನ್ನ ಪಾತ್ರಕ್ಕೆ ನಾನೇ ಕಂಠದಾನ ಮಾಡಬೇಕೆನ್ನುವ ಆಸೆಯೂ ಇದೆ. ಚಿತ್ರೀಕರಣಕ್ಕೂ ಮೊದಲು ಕಡೂರು ಭಾಗದಲ್ಲಿ ವಾಸ್ತವ್ಯ ಮಾಡಿ, ಕೃಷಿ ಬದುಕನ್ನು ಹತ್ತಿರದಿಂದ ಕಂಡೆನು. ಅಪ್ಪಟ ಕೃಷಿಕಳಂತೆಯೇ ಸ್ಥಳೀಯ ಜನರ ಜತೆ ಬೆರೆತು ಹೊಲದಲ್ಲಿ ಕುಂಟೆ ಹೊಡೆಯುವುದನ್ನು ಕಲಿತೆ. ಪಾತ್ರಕ್ಕಾಗಿ ನಾನು ಕಲಿತ ಕೃಷಿ ಕೆಲಸ ಭವಿಷ್ಯದಲ್ಲಿ ನಾನೂ ಕೃಷಿ ಭೂಮಿ ಹೊಂದಬೇಕು, ತೋಟ ಮಾಡಬೇಕೆಂಬ ಕನಸುಗಳನ್ನು ಅರಳಿಸಿದೆ’ ಎಂದು ಅಮೃತಾ ಖುಷಿಯಿಂದ ಹೇಳಿಕೊಂಡರು.

‘ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ನಟಿಸಬೇಕೆಂಬ ಆಸೆ ಇದೆ. ಚಂದ್ರು ಅವರು ಆರು ವರ್ಷ ಪರಿಶ್ರಮ ಹಾಕಿ ಮಾಡಿರುವ ‘ಗ್ರಾಮಾಯಣ’ದ ಸ್ಕ್ರಿಪ್ಟ್‌ ಅದ್ಭುತವಾಗಿದೆ. ಈ ಚಿತ್ರ ಕನ್ನಡದಲ್ಲಿ ನನಗೆ ಅವಕಾಶಗಳ ಬಾಗಿಲು ತೆರೆಯಲಿದೆ ಎನ್ನುವ ಅಪರಿಮಿತ ವಿಶ್ವಾಸವೂ ಇದೆ. ‘ಪಡೆವೀರನ್‌’ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರ ಮಾಡಿದರೂ ಇಷ್ಟೊಂದು ತಯಾರಿ ಮಾಡಿಕೊಂಡಿರಲಿಲ್ಲ. ನನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ತುಂಬಾ ಡೆಡಿಕೇಟ್‌ ಆಗಿ ತಯಾರಿ ಮಾಡಿಕೊಂಡಿದ್ದೇನೆ’ ಎನ್ನಲು ಅವರು ಮರೆಯಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು