ಶನಿವಾರ, ಡಿಸೆಂಬರ್ 14, 2019
23 °C
ಇಂದಿನಿಂದ ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವ

ಒಂದೇ ವೇದಿಕೆಯಲ್ಲಿ ಅಮಿತಾಭ್–ರಜನಿ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಪಣಜಿ: ಅಮಿತಾಭ್ ಬಚ್ಚನ್ ಅವರಿಂದ ಉದ್ಘಾಟನೆ, ‘ಐಕಾನ್ ಆಫ್ ಗೋಲ್ಡನ್ ಜುಬಿಲಿ ಪ್ರಶಸ್ತಿ’ ಪಡೆಯಲು ರಜನೀಕಾಂತ್ ಉಪಸ್ಥಿತಿ, ಕರಣ್ ಜೋಹರ್ ನಿರೂಪಣೆ, ಶಂಕರ್ ಮಹದೇವನ್ ಸಂಗೀತ... ಈ ಸಲದ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ಮುಖ್ಯಾಂಶ ಇದು.

ಅಮಿತಾಭ್ ಬರುವರೋ ಬಾರದೇ ಇರುವರೋ ಎಂಬ ಅನುಮಾನದ ನಡುವೆಯೂ ನಿರೀಕ್ಷೆ ಉಳಿದಿದೆ.

ಚಿತ್ರೋತ್ಸವಕ್ಕೀಗ ಸ್ವರ್ಣ ಸಂಭ್ರಮ. ಬುಧವಾರ ಗೋವಾ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭದ ಮೂಲಕ ಪರದೆ ಸರಿದ ಮೇಲೆ ರಸಿಕರಿಗೆ ಒಂಬತ್ತು ದಿನಗಳ ಕಾಲ (ನ. 28ರವರೆಗೆ) ತರಹೇವಾರಿ ಸಿನಿಮಾಗಳ ದರ್ಶನ.

‘ಡಿಸ್ಪೈಟ್ ದಿ ಫಾಗ್’ ಇಟಾಲಿಯನ್ ಚಿತ್ರ ಪ್ರದರ್ಶನದೊಂದಿಗೆ ಉತ್ಸವ ಪ್ರಾರಂಭವಾಗಲಿದೆ. 76 ದೇಶಗಳ 200 ಚಿತ್ರಗಳಲ್ಲಿ ಅಭಿರುಚಿಗೆ ತಕ್ಕಂಥದ್ದನ್ನು ನೋಡುಗರು ಆಯ್ಕೆ ಮಾಡಿಕೊಳ್ಳಬಹುದು.

ಚೊಚ್ಚಲ ನಿರ್ದೇಶಕರಿಗೆಂದೇ ವಿಶೇಷ ಸ್ಪರ್ಧೆಯೊಂದು ಇದ್ದು, 7 ಚಿತ್ರಗಳು ಅದಕ್ಕಾಗಿ ಆಯ್ಕೆಯಾಗಿವೆ. ಅಭಿಷೇಕ್ ಶಾ ನಿರ್ದೇಶನದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಹಿಲಾರೋ’ (ಗುಜರಾತಿ) ಹಾಗೂ ಮನು ಅಶೋಕನ್ ಅವರ ಮಲಯಾಳಂ ಸಿನಿಮಾ ‘ಉಯರೆ’ ಈ ಸ್ಪರ್ಧಾಕಣದಲ್ಲಿವೆ. ಭಾರತೀಯ ಪನೋರಮಾ ವಿಭಾಗ
ದಲ್ಲಿ 26 ಚಲನಚಿತ್ರಗಳು ಹಾಗೂ 15 ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ. ದಯಾಳ್ ಪದ್ಮನಾಭನ್ ನಿರ್ದೇಶಿಸಿರುವ ‘ರಂಗನಾಯಕಿ’ ಈ ವಿಭಾಗದಲ್ಲಿ ಇರುವ ಕನ್ನಡದ ಏಕೈಕ ಸಿನಿಮಾ.

ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ 15 ಚಿತ್ರಗಳಿದ್ದು, ಲಿಜೊ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ಮಲಯಾಳಂ ಸಿನಿಮಾ ‘ಜಲ್ಲಿಕಟ್ಟು’ ಕೂಡ ರೇಸ್‌ನಲ್ಲಿದೆ. ‘ಮಾಯ್ ಘಾಟ್: ಕ್ರೈಮ್ ನಂ. 103/205’ ಮರಾಠಿ ಸಿನಿಮಾ ಸ್ಪರ್ಧಾಕಣದಲ್ಲಿರುವ ಭಾರತದ ಇನ್ನೊಂದು ಚಿತ್ರ. ಗೆಲ್ಲುವ ಚಿತ್ರಕ್ಕೆ ಸ್ವರ್ಣ ಮಯೂರ ಪ್ರಶಸ್ತಿ (₹ 40 ಲಕ್ಷ ಬಹುಮಾನದ ಸಹಿತ) ಸಲ್ಲಲಿದೆ.

ಗಿರೀಶ ಕಾರ್ನಾಡರ ನೆನಪಿನಲ್ಲಿ ಅವರದ್ದೇ ನಿರ್ದೇಶನದ ‘ಕಾನೂರು ಹೆಗ್ಗಡಿತಿ’ ಚಿತ್ರ ಪ್ರದರ್ಶನವಿದೆ. ಇಟಲಿ
ಯದ್ದೇ ‘ಮಾರ್ಗ್ ಅಂಡ್ ಹರ್ ಮದರ್’ ಸಿನಿಮಾ ಪ್ರದರ್ಶನದ ಮೂಲಕ ಚಿತ್ರೋತ್ಸವಕ್ಕೆ ತೆರೆ
ಬೀಳಲಿದೆ.

2014ರಲ್ಲಿ ರಜನೀಕಾಂತ್ ಅವರಿಗೆ ಶತಮಾನದ ಶ್ರೇಷ್ಠ ನಟ ಗೌರವಕ್ಕೆ ಭಾರತ ಸರ್ಕಾರ ಆಯ್ಕೆ ಮಾಡಿತ್ತು. ಈಗ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ನೀಡುತ್ತಿರುವುದು ಚೆನ್ನೈನಲ್ಲಿ ಬಿಜೆಪಿ ಪ್ರಭಾವ ಬೀರಲು ಆರಿಸಿಕೊಂಡಿರುವ ರಾಜಕೀಯ ತಂತ್ರ ಎಂಬ ಆರೋಪವೂ ಕೇಳಿಬಂದಿದೆ.

ಅದೇನೇ ಇರಲಿ, ಐನಾಕ್ಸ್ ಚಿತ್ರ ಮಂದಿರದ ಕಾಂಪ್ಲೆಕ್ಸ್‌ನ 4 ತೆರೆಗಳು, ಗೋವಾ ಮೆಡಿಕಲ್ ಕಾಲೇಜಿನ ಹಳೆಯ ಕಟ್ಟಡದ 2 ಚಿಕ್ಕ ಚಿತ್ರಮಂದಿರಗಳು ಹಾಗೂ ಕಲಾ ಅಕಾಡೆಮಿಯ ದೊಡ್ಡ ಥಿಯೇಟರ್‌ನಲ್ಲಿ ಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು