ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ್‌ ಸಂದರ್ಶನ: ಕಳೆದ ಜನ್ಮದಲ್ಲಿ ನಾನೂ ಭಟ್ರು ಗಂಡ ಹೆಂಡ್ತಿ ಆಗಿದ್ವಿ!

Last Updated 15 ಜುಲೈ 2021, 19:30 IST
ಅಕ್ಷರ ಗಾತ್ರ

‘ನಮಸ್ಕಾರ ನಮಸ್ಕಾರ ನಮಸ್ಕಾರ’ ಎನ್ನುತ್ತಾ ಕಿರುತೆರೆಯಿಂದ ‘ಚೆಲ್ಲಾಟ’ದ ಮುಖಾಂತರ ಚಂದನವನಕ್ಕೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರು ಕಾಲಿಟ್ಟು 15 ವರ್ಷಗಳಾಗಿವೆ. ಸಿನಿ ಪಯಣದಲ್ಲಿ ಹಲವು ಏರಿಳಿತ ಕಂಡ ಗಣೇಶ್‌, ಇದೀಗ ‘ಸಖತ್‌’ ಆಗಿ ‘ಗಾಳಿಪಟ–2’ ಹಾರಿಸುತ್ತಿದ್ದಾರೆ. ‘ತ್ರಿಬಲ್‌ ರೈಡಿಂಗ್‌’ನಲ್ಲಿ ‘ದಿ ಸ್ಟೋರಿ ಆಫ್‌ ರಾಯಗಡ’ ಹೇಳಲು ಹೊರಟಿರುವ ಗಣೇಶ್‌ ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕರು.

* 2006ರಲ್ಲಿ ‘ಚೆಲ್ಲಾಟ’ ಬಿಡುಗಡೆಯಾಯಿತು. ಅಲ್ಲಿಂದೀಚೆಗೆ ಇಲ್ಲಿಯವರೆಗೂ ಚಂದನವನದಲ್ಲಿ 15 ವರ್ಷದ ಸಿನಿ ಪಯಣ ಹೇಗಿತ್ತು?

ಈ 15 ವರ್ಷಗಳ ಪಯಣ ಬಹಳ ಖುಷಿ ಕೊಟ್ಟಿದೆ. ನನಗೆ ಬಹಳ ಆನಂದ ಹಾಗೂ ಉತ್ಸಾಹ ಕೊಡುವ ಕೆಲಸವನ್ನು ನಾನು ಆಯ್ಕೆ ಮಾಡಿಕೊಂಡು ಬಂದಿದ್ದೇನೆ. ಸಿನಿಮಾಗೆ ಪ್ರವೇಶಿಸುವ ಮುನ್ನ ಉದ್ಯಮ ಅದು, ಇದು ಎಂದು ಎಲ್ಲ ಕ್ಷೇತ್ರಗಳಲ್ಲೂ ನನ್ನ ಲಕ್‌ ಪ್ರಯತ್ನಿಸಿದ್ದೆ. ಆದರೆ ನನ್ನ ಮನಸ್ಸು ಇದ್ದಿದ್ದು, ಸಿನಿಮಾದಲ್ಲಿ. 2005ರಲ್ಲಿ ‘ಚೆಲ್ಲಾಟ’ ಪಯಣ ಆರಂಭವಾಯಿತು. 2006ರಲ್ಲಿ ಇದು ತೆರೆ ಕಂಡಿತು. ನಾವು ಇಷ್ಟಪಟ್ಟಿದ್ದ ಉದ್ಯೋಗವನ್ನು ಆರಿಸಿ ಕೆಲಸ ಮಾಡುವುದು ಒಂದು ರೀತಿ ತಪಸ್ಸಿದ್ದಂತೆ. ಅದರ ಬಗ್ಗೆಯೇ ಧ್ಯಾನ ಮಾಡಿರುತ್ತೇವೆ. ಇಷ್ಟುಪಟ್ಟು ಮಾಡುವ ಕೆಲಸ ಖುಷಿ ಕೊಡುತ್ತದೆ. ಚಿತ್ರೀಕರಣದಲ್ಲಿ ತಲ್ಲೀನವಾಗಿರುವುದೇ ನನಗೆ ಹೆಚ್ಚು ಖುಷಿ ನೀಡುತ್ತದೆ. ವೈದ್ಯರಾಗಲು ನಾಲ್ಕೈದು ವರ್ಷ ಬೇಕಾಗುತ್ತದೆ. ಅದೇ ರೀತಿ ನಟನಾಗಲೂ ವರ್ಷಾನುಗಟ್ಟಲೆ ಬೇಕಲ್ಲವೇ? ಧಾರಾವಾಹಿಯಿಂದ ಪ್ರಾರಂಭವಾದ ನನ್ನ ಪಯಣ, ಇಲ್ಲಿಯವರೆಗೂ ಬಂದಿದೆ. ನಮಗೂ ಖುಷಿ, ಜೊತೆಗೆ ಸಿನಿಮಾ ನೋಡಲು ಬರುವವರಿಗೂ ಖುಷಿ ನೀಡುವುದು ಮತ್ತಷ್ಟು ಖುಷಿಯ ಕೆಲಸ.

*ಮುಂಗಾರು ಮಳೆ ಸಮಯವಿದು. ಅದರಲ್ಲಿ ನೆನೆದ ಕ್ಷಣವನ್ನು ನೆನಪಿಸಿಕೊಂಡರೆ?

ಕಿರುತೆರೆಯಲ್ಲಿ ‘ಕಾಮಿಡಿ ಟೈಂ ಗಣೇಶ್‌’ ನನಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ಇದೇ ಸಮಯದಲ್ಲಿ ಯೋಗರಾಜ್‌ ಭಟ್‌ ಅವರು ಈ ಕಥೆ ರೂಪಿಸಿದ್ದರು. ಪ್ರೀತಂ ಗುಬ್ಬಿ ನನ್ನ ಶಾಲಾ ಸ್ನೇಹಿತ. ಅವನು ಈ ಕಥೆಯನ್ನು ನನಗೆ ಹೇಳಿದ. ಭಟ್ರು ಹಾಗೂ ಪ್ರೀತಂ ಇದನ್ನು ಮಾಡುತ್ತಿದ್ದಾರೆ ಎಂದರು. ಆವಾಗ ತಾನೆ ಹೀರೋ ಆಗಿ ಎರಡನೇ ಚಿತ್ರವಲ್ಲವೇ? ಜೋಷ್‌ ಬಹಳವಿತ್ತು. ಮೊದಲ ದಿನವೇಸಕಲೇಶಪುರ ಘಾಟ್‌ನಲ್ಲಿ ಫೈಟಿಂಗ್‌ ದೃಶ್ಯದ ಚಿತ್ರೀಕರಣವಿತ್ತು. ನಮಗೂ ಜೋಷ್‌, ಮಳೆಯಲ್ಲಿ ಎದ್ದು ಬಿದ್ದು ಮೈಯೆಲ್ಲ ಪರಚಿಕೊಂಡಿದ್ದೆ. ಸಂಜೆ ಸ್ನಾನ ಮಾಡುವಾಗ ಬಿಸಿನೀರು ಹಾಕಿಕೊಂಡಾಗ ಉರಿಯುತ್ತಿತ್ತು. ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದರ ಪರಿಣಾಮ ಅದಾಗಿತ್ತು. ಆ ದಿನಗಳನ್ನು ನೆನಪಿಸಿಕೊಂಡರೇ ಖುಷಿಯಾಗುತ್ತದೆ. 42 ದಿನದಲ್ಲಿ ಮುಗಿಸಿದ ಸಿನಿಮಾ ಅದು. ಅದೊಂದು ಅದ್ಭುತ ಅನುಭವ.

*15 ವರ್ಷದ ಸಿನಿಪಯಣದಲ್ಲಿ ಒಂದಿಷ್ಟು ಏರಿಳಿತಗಳನ್ನು ಕಂಡಿರಲ್ಲವೇ?

ಹೌದು. ನನ್ನ ಮೊದಲ ಎಂಟು ಚಿತ್ರಗಳು ಹಿಟ್‌ ಆದವು. ನಂತರ ಕೆಲ ಚಿತ್ರಗಳು ಅಷ್ಟೊಂದು ಯಶ ಕಾಣಲಿಲ್ಲ. ನಂತರದಲ್ಲಿ ‘ಮಳೆಯಲಿ ಜೊತೆಯಲಿ’, ‘ಮುಗುಳು ನಗೆ’, ‘ಶ್ರಾವಣಿ ಸುಬ್ರಹ್ಮಣ್ಯ‘, ‘ಚಮಕ್‌’ ಹಿಟ್‌ ಆದವು. ‘ಮುಗುಳು ನಗೆ’ ನೋಡಿ ನನ್ನ ಹಾಗೂ ಯೋಗರಾಜ್‌ ಭಟ್ ಅವರ ಕಾಂಬಿನೇಷನ್‌ ಜನ ಮತ್ತೆ ಮೆಚ್ಚಿದರು. ಸಿನಿ ಪಯಣದಲ್ಲಿ ಏರಿಳಿತ ಇದ್ದೇ ಇರುತ್ತದೆ. ಹೀಗಾದರಷ್ಟೇ ಜೀವನ. ಬರೇ ಏರುತ್ತಿದ್ದರೆ ಅದರಲ್ಲಿ ಯಾವುದೇ ಖುಷಿ ಇಲ್ಲ. ಹೃದಯದ ಬಡಿತದಂತೆ ಏರಿಳಿತ ಇರಲೇಬೇಕು. ಇಲ್ಲವಾದಲ್ಲಿ ಜೀವವಿಲ್ಲದಂತೆ. ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳಲು, ಸವಾಲು ಸ್ವೀಕರಿಸಲು ಈ ಏರಿಳಿತ ಕಲಿಸುತ್ತದೆ. ನನ್ನ ಕೆಲಸ ಒಳ್ಳೆಯ ಪಾತ್ರಗಳ ಮುಖಾಂತರ ಜನರನ್ನು ಮನರಂಜಿಸುವುದು. ಇದೀಗ ಪ್ರಯೋಗಗಳನ್ನು ಮಾಡುವ ಸಮಯ. ಒಟಿಟಿ ಎನ್ನುವುದು ವಿಶ್ವದ ಸಿನಿಮಾ ಪ್ರಪಂಚವನ್ನು ಅಂಗೈಯಲ್ಲಿ ಇರಿಸಿದೆ. ನಮ್ಮ ಅಭಿನಯದ ಜೊತೆಗೆ ಕಂಟೆಂಟ್‌ ಕೂಡಾ ಬಹಳ ಮುಖ್ಯವಾಗಿದೆ. ಕಳೆದ 10 ವರ್ಷದಲ್ಲಿ ಆದ ಬದಲಾವಣೆ ಇದು. ಲಾಕ್‌ಡೌನ್‌ ಎನ್ನುವುದು ಜನರಿಗೆ ಬೇರೆಯದೇ ಆಯಾಮ ನೀಡಿದೆ. ನಾನು ಈ ಅವಧಿಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಒಂದೂವರೆ ವರ್ಷ ಮಕ್ಕಳ ಜೊತೆಯೇ ಕಳೆದೆ. ಈಗ ಮತ್ತೆ ಚಿತ್ರೀಕರಣದಲ್ಲಿ ತಲ್ಲೀನನಾಗಿದ್ದೇನೆ.

* ಗಾಳಿಪಟ ಜೋಡಿ ಇದೀಗ ಮತ್ತೆ ಒಂದಾಗಿದೆ. ಹೇಗಿರುತ್ತೆ ಹೊಸ ಕಚಗುಳಿ. ಗಣಿ ಕಾಗುಣಿತ ಕಲಿತ್ರಾ?
ಈ ಜನ್ಮದಲ್ಲಿ ನಮ್ಮದೂ ಭಟ್ರದ್ದೂ ಜಾತಕ ಕೂಡಿ ಬಂದಿದೆ. ಬಹುಷಃ ಕಳೆದ ಜನ್ಮದಲ್ಲಿ ಗಂಡ ಹೆಂಡತಿ ಆಗಿದ್ದೆವು. ಆ ಜನ್ಮದಲ್ಲಿ ಕಿರಿಕ್‌ ಆಗಿದೆ. ಈ ಜನ್ಮದಲ್ಲಿ ಅವರು ನನ್ನ ಮೇಲೆ ನಿರ್ದೇಶಕರಾಗಿ ಕೋಪ ತೀರಿಸಿಕೊಳ್ಳುತ್ತಿದ್ದಾರೆ. ನಾನು ಅಭಿನಯದ ಮೂಲಕ ಕೋಪ ತೀರಿಸಿಕೊಳ್ಳುತ್ತಿದ್ದೇನೆ. ‘ಏನ್ರಿ ಹುಚ್ಚುಚ್ಚಾಗಿ ಡೈಲಾಗ್‌ ಬರೀತೀರಿ, ಏನ್ರಿ ಇದು’ ಎಂದು ಭಟ್ರನ್ನ ಕೇಳುತ್ತಿರುತ್ತೇನೆ. ಇದೊಂದು ಕಾಂಬಿನೇಷನ್‌. ಆಕಸ್ಮಿಕವಾಗಿ ಆದ ಜೋಡಿ ಇದು. ಜನರ ಮನಸ್ಸಿನಲ್ಲೂ ಅಚ್ಚಳಿಯದೆ ಕುಳಿತಿದೆ. ನಮ್ಮಿಬ್ಬರಿಗೂ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇದೆ. ನಾನು ಏನೇ ಬರೆದರೂ ಗಣೇಶ್‌ ನಟಿಸುತ್ತಾನೆ ಎಂಬ ನಂಬಿಕೆ ಭಟ್ರಿಗಿದೆ. ಅವರು ಬರೆದ ಡೈಲಾಗ್‌ಗಿಂತ ಚೆನ್ನಾಗಿ ಅಭಿನಯಿಸಬೇಕು ಎನ್ನುವ ಆಸೆ ನನಗಿದೆ. ಈ ಹಗ್ಗಜಗ್ಗಾಟ ನಮ್ಮಿಬ್ಬರ ನಡುವೆ ಇದ್ದೇ ಇರುತ್ತದೆ. ನಮ್ಮ ಕಾಂಬಿನೇಷನ್‌ನಲ್ಲಿ ಮೂಡಿಬಂದ ಚಿತ್ರಗಳ ಪೈಕಿ ‘ಗಾಳಿಪಟ–2’ ಅತ್ಯದ್ಭುತವಾಗಿರುತ್ತದೆ. ನಾನು ಕಾಗುಣಿತ ಕಲಿತ್ನಾ ಇಲ್ವಾ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಗಾಳಿಪಟ ಮೊದಲ ಭಾಗದಲ್ಲಿ ಇದ್ದ ಹಾಸ್ಯ, ಭಾವುಕತೆ ಎರಡನೇ ಭಾಗದಲ್ಲಿ ಹತ್ತುಪಟ್ಟು ಹೆಚ್ಚಿದೆ.

*‘ಸಖತ್‌’ನಲ್ಲಿ ಕುರುಡನ ಪಾತ್ರದ ಸವಾಲು ಹೇಗಿದೆ?
ಪ್ರಸ್ತುತ ಇದೇ ಸಿನಿಮಾದ ಚಿತ್ರೀಕರಣದಲ್ಲಿದ್ದೇನೆ. ಈ ಪಾತ್ರ ನನಗೆ ಸವಾಲಾಗಿದೆ. ಯಾವತ್ತೂ ತೆರೆಯ ಮೇಲೆ ಕಾಣಿಸದೇ ಇರುವ ಗಣೇಶ್‌ನನ್ನು ತೆರೆಯ ಮೇಲೆ ತೋರಿಸಬೇಕು. ಯಾವತ್ತೂ ಮಾಡದೇ ಇರುವ ಪಾತ್ರವಿದು. ನಮ್ಮ ಮೇಲೆ ನಂಬಿಕೆ ಇಟ್ಟು ಬರುವ ನಿರ್ದೇಶಕರು ಊಹಿಸಿದಕ್ಕಿಂತಲೂ ಚೆನ್ನಾಗಿ ನಾವು ಆ ಪಾತ್ರ ನಿಭಾಯಿಸಬೇಕು. ‘ಸಖತ್‌’ ಸಿನಿಮಾ ಬಹಳ ಮನರಂಜನೆ ಹಾಗೂ ಥ್ರಿಲ್‌ ನೀಡಲಿದೆ. ‘ತ್ರಿಬಲ್‌ ರೈಡಿಂಗ್‌’ ಚಿತ್ರ ಸಂಪೂರ್ಣ ಕಮರ್ಷಿಯಲ್‌ ಚಿತ್ರ. ‘ದಿ ಸ್ಟೋರಿ ಆಫ್‌ ರಾಯಗಡ’ ಸಂಪೂರ್ಣ ವಿಭಿನ್ನ ಚಿತ್ರ. ಗಣೇಶ್‌–ಸುನಿ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾಗಳಲಿದ್ದ ಹಾಸ್ಯ, ಭಾವುಕತೆ ಇದರಲ್ಲೂ ಇದೆ. ನನ್ನ ಹೊಸ ವರ್ಷನ್‌ ನಿಮಗೆ ನೋಡಲು ಸಿಗಲಿದೆ. ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

* ‘ಕೂಲ್‌’ ಬಳಿಕ ನಿರ್ದೇಶನದ ಬಗ್ಗೆ ನೀವು ಯೋಚನೆ ಮಾಡಿದ್ರಾ?
ನಿರ್ದೇಶನ ಎನ್ನುವುದು ನನಗೆ ಬಹಳ ಇಷ್ಟವಾದ ಕೆಲಸ. ಖಂಡಿತವಾಗಿಯೂ ಮುಂದೆ ಮತ್ತೆ ನಿರ್ದೇಶನಕ್ಕೆ ಇಳಿಯುತ್ತೇನೆ. ಸಮಸ್ಯೆ ಏನೆಂದರೆ ಇದಕ್ಕಾಗಿ ಒಂದೂವರೆ ಎರಡು ವರ್ಷ ಮುಡಿಪಿಡಬೇಕು. ‘ಕೂಲ್‌’ನಲ್ಲಿ ‘ಆ್ಯಕ್ಸಿಡೆಂಟಲ್‌ ಡೈರೆಕ್ಟರ್‌’ ನಾನು. ಲಾಕ್‌ಡೌನ್‌ನಲ್ಲಿ ತಂಡದ ಜೊತೆ ಸೇರಿ ಕೆಲ ಸ್ಕ್ರಿಪ್ಟ್‌ ಮಾಡಿದ್ದೆ. ಸದ್ಯಕ್ಕೆ ಒಟಿಟಿ ಕಂಟೆಂಟ್‌ ಅಥವಾ ವೆಬ್‌ಸೀರಿಸ್‌ ಬಗ್ಗೆ ಯಾವುದೇ ಚಿಂತನೆ ಇಲ್ಲ.

-ಗಣೇಶ್‌
-ಗಣೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT