ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಟಿ ಶ್ರೀದೇವಿ ಅವರ 60ನೇ ಜನ್ಮದಿನವನ್ನು ವಿಶೇಷ ಡೂಡಲ್ ಮೂಲಕ ಸ್ಮರಿಸಿದ ಗೂಗಲ್

Published 13 ಆಗಸ್ಟ್ 2023, 9:17 IST
Last Updated 13 ಆಗಸ್ಟ್ 2023, 9:17 IST
ಅಕ್ಷರ ಗಾತ್ರ

ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ದಿವಂಗತ ಶ್ರೀದೇವಿ ಅವರ 60ನೇ ಜನ್ಮದಿನವನ್ನು ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗೌರವಿಸಿದೆ.

1963 ಆಗಸ್ಟ್‌ 13ರಂದು ತಮಿಳುನಾಡಿನಲ್ಲಿ ಜನಿಸಿದ ಶ್ರೀದೇವಿ ಅವರು ಬಾಲ್ಯದಲ್ಲಿಯೇ ಚಲನಚಿತ್ರಗಳಲ್ಲಿ ನಟಿಸುವ ಕನಸು ಕಂಡಿದ್ದರು. ನಾಲ್ಕನೇ ವಯಸ್ಸಿನಲ್ಲಿ ತಮಿಳು ಚಿತ್ರ ‘ಕಂದನ್‌ ಕರುನೈ’ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಪಂಚಭಾಷಾ ಸಿನಿಮಾಗಳಲ್ಲಿ ನಟಿಸಿದ್ದ ಶ್ರೀದೇವಿ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು

‘ಇಂದಿನ ದಿನದ ಡೂಡಲ್‌ ಅನ್ನು ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಶ್ರೀದೇವಿ ಅವರಿಗೆ ಅರ್ಪಿಸಲಾಗಿದೆ. ಈ ಡೂಡಲ್‌ ಅನ್ನು ಮುಂಬೈ ಮೂಲದ ಕಲಾವಿದೆ ಭೂಮಿಕಾ ಮುಖರ್ಜಿ ಅವರು ರಚಿಸಿದ್ದಾರೆ. ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಮಿಂಚಿದ ಶ್ರೀದೇವಿ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅಭೂತಪೂರ್ವ ನಟನೆಯ ಮೂಲಕ ಪುರುಷ ಪ್ರಧಾನ ಚಿತ್ರರಂಗದಲ್ಲಿ ಮೇಲುಗೈ ಸಾಧಿಸಿದ ಕೀರ್ತಿ ಶ್ರೀದೇವಿ ಅವರಗಿದೆ’ ಎಂದು ಸರ್ಚ್‌ ಎಂಜಿನ್‌ ಗೂಗಲ್‌ ತಿಳಿಸಿದೆ.

2018ರಲ್ಲಿ ದುಬೈನಲ್ಲಿ ತಂಗಿದ್ದ ವೇಳೆ ಶ್ರೀದೇವಿ ನಿಧನರಾಗಿದ್ದರು. ಆಗ ಅವರಿಗೆ 54 ವರ್ಷ ವಯಸ್ಸಾಗಿತ್ತು.

ಬಾಲಿವುಡ್‌ನಲ್ಲಿ ಮಿನುಗು ತಾರೆಯಾಗಿ ಮೆರೆದ ಶ್ರೀದೇವಿ

ವೃತ್ತಿ ಜೀವನದ ಆರಂಭದಲ್ಲಿ ತೆಲುಗು, ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಶ್ರೀದೇವಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. 1976ರಲ್ಲಿ ಅವರು ನಟಿಸಿದ ತಮಿಳು ಚಿತ್ರ ‘ಮೂಂಡ್ರು ಮುಡಿಚು’ ಅಪಾರ ಜನ ಮನ್ನಣೆ ಗಳಿಸಿತ್ತು . ಈ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ ಸಹ ನಟರಾಗಿದ್ದರು. ಈ ಚಿತ್ರ ಶ್ರೀದೇವಿಯವರಿಗೆ ಚಿತ್ರರಂಗದಲ್ಲಿ ಹೊಸ ಬದುಕನ್ನು ಕಲ್ಪಿಸಿಕೊಟ್ಟಿತ್ತು.

‘ಹಿಮ್ಮತ್‌ ವಾಲಾ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಶ್ರೀದೇವಿ, ತಮ್ಮ ಅಮೋಘ ನಟನೆಯ ಮೂಲಕ ಬಾಲಿವುಡ್ ಅಂಗಳದಲ್ಲಿ ಶಾಶ್ವತ ನೆಲೆ ಕಂಡುಕೊಂಡರು. ಸದ್ಮಾ, ಚಾಲ್ಬಾಜ್, ಲಮ್ಹೆ, ಚಾಂದನಿಯಂತಹ ಹಿಟ್‌ ಚಿತ್ರಗಳಲ್ಲಿ ನಟಿಸಿದ್ದರು. 2012ರಲ್ಲಿ ತೆರೆಕಂಡ ‘ಇಂಗ್ಲಿಷ್- ವಿಂಗ್ಲಿಷ್’ ಚಿತ್ರ ಶ್ರೀದೇವಿ ಅವರ ಚಿತ್ರ ಬದುಕಿಗೆ ಇನ್ನೊಂದು ತಿರುವು ನೀಡಿತ್ತು. 2017ರಲ್ಲಿ ನಟಿಸಿದ್ದ ‘ಮಾಮ್’ ಅವರ ಕೊನೆಯ ಚಿತ್ರವಾಗಿದೆ.

ಕೌಟುಂಬಿಕ ಬದುಕು

ನಿರ್ಮಾಪಕ ಬೋನಿ ಕಪೂರ್‌ ಅವರನ್ನು ವರಿಸಿದ್ದ ಶ್ರೀದೇವಿ ಅವರಿಗೆ ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜಾಹ್ನವಿ ಕಪೂರ್‌ ಇದೀಗ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಡೂಡಲ್‌ ಗೌರವ
ಡೂಡಲ್‌ ಗೌರವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT