ಕೆಜಿಎಫ್ ಚಾಪ್ಟರ್ 2 ಟ್ರೇಲರ್ ಬಿಡುಗಡೆ: ಯಶ್ ಮಾತಿಗೆ ತಲೆದೂಗಿದ ತಮಿಳು ನಟ

ಚೆನ್ನೈ: ಕೆಜಿಎಫ್ ಚಾಪ್ಟರ್ 2 ಮತ್ತು ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಒಡ್ಡಲಿವೆ ಎನ್ನುವ ಕುರಿತು ನಟ ಯಶ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಆಡಿದ ಮಾತುಗಳಿಗೆ ತಮಿಳು ಸಿನಿರಂಗದ ಯುವ ನಟ ಹರೀಶ್ ಕಲ್ಯಾಣ್ ಮೆಚ್ಚುಗೆ ಸೂಚಿಸಿದ್ದಾರೆ.
ಈ ಕುರಿತು ಟ್ವಿಟರ್‌ನಲ್ಲಿ ಯಶ್ ಮಾತನಾಡಿರುವ ಕ್ಲಿಪ್ ಅನ್ನು ಹಂಚಿಕೊಂಡಿದ್ದು, 'ಯಶ್‌ಗಾರು ಹೇಳಿರುವ ಮಾತು ಹೃದಯಸ್ಪರ್ಶಿ ಆಗಿದೆ. ಸೂಪರ್ ಸರ್, ತುಂಬಾ ಚೆನ್ನಾಗಿ ಹೇಳಿದಿರಿ. ಇದು ಬೀಸ್ಟ್ vs ಕೆಜಿಎಫ್ ಚಾಪ್ಟರ್ 2 ರ ವಿಚಾರ. ಎಲ್ಲೆಡೆ ಪ್ರೀತಿ ಮತ್ತು ಸಕಾರಾತ್ಮಕತೆಯನ್ನೇ ಹರಡೋಣ! ಅವರು ತಮ್ಮ ಹಿರಿಯ ನಟರನ್ನು ಗೌರವಿಸುವ ಪರಿಯೂ ನನಗೆ ಇಷ್ಟವಾಯಿತು' ಎಂದಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ‘ಬೀಸ್ಟ್’ ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು, ಆ ಸಿನಿಮಾದೊಂದಿಗಿನ ಕ್ಲ್ಯಾಶ್ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಯಶ್ ಅವರು, 'ಬೀಸ್ಟ್ ವರ್ಸಸ್ ಕೆಜಿಎಫ್ ಎಂದು ಹೇಳಬಾರದು. ಅದನ್ನು ಬೀಸ್ಟ್ ಮತ್ತು ಕೆಜಿಎಫ್ ಎನ್ನಬೇಕು. ಎರಡೂ ಕೂಡ ಭಾರತೀಯ ಸಿನಿಮಾಗಳು' ಎಂದಿದ್ದಾರೆ.
This speech by @TheNameIsYash gaaru is really heart warming .. super sir,well said. #Beast & #KGFChapter2 it is .. lets spread love & positivity ! I also love the way he respects his senior actors ❤️👍 pic.twitter.com/BdsafMClwp
— Harish Kalyan (@iamharishkalyan) March 28, 2022
'ಇದು ಎಲೆಕ್ಷನ್ ಅಲ್ಲ. ಚುನಾವಣೆಯಲ್ಲಿ ಮಾತ್ರ ಯಾರಾದರೂ ಒಬ್ಬರಿಗೆ ಮಾತ್ರ ಮತ ಚಲಾಯಿಸಬಹುದು. ಮತ ಪಡೆಯಲು ಹೋರಾಟ ಮಾಡಬೇಕಾಗುತ್ತದೆ. ಒಬ್ಬರು ಗೆದ್ದರೆ, ಮತ್ತೊಬ್ಬರು ಸೋಲಬೇಕಾಗುತ್ತದೆ. ಇದು ಸಿನಿಮಾ. ನೀವು ಅವರ ಸಿನಿಮಾವನ್ನು ನೋಡಬಹುದು, ನನ್ನ ಸಿನಿಮಾವನ್ನೂ ನೋಡಬಹುದು' ಎಂದು ಯಶ್ ಹೇಳಿದ್ದಾರೆ.
'ನಮ್ಮದು ಪ್ಯಾನ್ ಇಂಡಿಯಾ ಸಿನಿಮಾ ಮತ್ತು ಸಿನಿಮಾ ಬಿಡುಗಡೆ ಬಗ್ಗೆ 8 ತಿಂಗಳ ಹಿಂದೆಯೇ ಘೋಷಿಸಿದ್ದೆವು. ಯಾವೆಲ್ಲ ಸಿನಿಮಾಗಳು ಆಗ ಬಿಡುಗಡೆಯಾಗಬಹುದೆಂದು ನಮಗೆ ತಿಳಿದಿರಲಿಲ್ಲ. ವಿಜಯ್ ಸರ್ ಅಭಿಮಾನಿಗಳಿಗೂ ಕೂಡ ಕೆಜಿಎಫ್ ಚಾಪ್ಟರ್ 2 ಸಿನಿಮಾ ಖಂಡಿತವಾಗಿಯೂ ಇಷ್ಟವಾಗುತ್ತದೆ. ಎರಡೂ ಸಿನಿಮಾಗಳನ್ನೂ ಎಲ್ಲರೂ ನೋಡಲಿ. ನಾನು ಬೀಸ್ಟ್ ಸಿನಿಮಾವನ್ನು ನೋಡುತ್ತೇನೆ. ಎಲ್ಲರೂ ಒಟ್ಟಿಗೆ ಸಂಭ್ರಮಿಸೋಣ' ಎಂದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.