ಮಂಗಳವಾರ, ಮಾರ್ಚ್ 21, 2023
21 °C

ನನ್ನೊಂದಿಗೆ ದೇವರು, ಅಮ್ಮನ ಆಶೀರ್ವಾದವಿದೆ: ವಿಜಯ್ ದೇವರಕೊಂಡ ಹೀಗೆ ಹೇಳಿದ್ದೇಕೆ?

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಬಾಯ್ಕಾಟ್‌ ಅಭಿಯಾನದ ಬಗ್ಗೆ ಮಾತನಾಡಿರುವ ನಟ ವಿಜಯ್‌ ದೇವರಕೊಂಡ, ಸತ್ಯದ ಪರ ನಿಲ್ಲುವುದಾಗಿ ಮತ್ತು ಜೀವನದಲ್ಲಿ ಎದುರಾಗುವ ಯಾವುದೇ ಸವಾಲಿಗೂ ಅಂಜುವುದಿಲ್ಲ ಎಂದು ಹೇಳಿದ್ದಾರೆ. 'ದೇವರ ಮೇಲೆ ನಂಬಿಕೆ ಇಟ್ಟಿದ್ದೇನೆ. ಅಮ್ಮನ ಆಶೀರ್ವಾದ ನನ್ನೊಂದಿಗೆ ಇದೆ' ಎಂದೂ ತಿಳಿಸಿದ್ದಾರೆ.

ಬಿಡುಗಡೆಗೆ ಸಜ್ಜಾಗಿರುವ 'ಲೈಗರ್‌' ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಜಯ್‌, 'ನಾನು ಈ ಹಂತಕ್ಕೆ ತಲುಪಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ನಾನು ಹಣ ಹಾಗೂ ಗೌರವಕ್ಕಾಗಿ ಸಂಘರ್ಷ ನಡೆಸಿದ್ದೇನೆ. ಕೆಲಸ ಗಿಟ್ಟಿಸಿಕೊಳ್ಳುವುದಕ್ಕೂ ಹೋರಾಡಿದ್ದೇನೆ. ನನ್ನ ಮೊದಲ ಸಿನಿಮಾ ಬಿಡುಗಡೆಯಾಗುವ ಮುನ್ನ, ನನ್ನ ಬಳಿ ಸಾಕಷ್ಟು ಹಣವಿರಲಿಲ್ಲ. ಹಣ ತೆಗೆದುಕೊಳ್ಳದೆ ಕೆಲಸ ಮಾಡಿದ್ದೂ ಇದೆ' ಎಂದು ಹೇಳಿಕೊಂಡಿದ್ದಾರೆ.

ಚಿತ್ರ ಜಗತ್ತಿಗೆ ಬಂದ ಆರಂಭದ ದಿನಗಳ ಕುರಿತು ಮಾತನಾಡಿರುವ ಅವರು, 'ನನ್ನ ಸಿನಿಮಾ ಅರ್ಜುನ್‌ ರೆಡ್ಡಿ ಬಿಡುಗಡೆ ಸಂದರ್ಭದಲ್ಲಿ ಸಾಕಷ್ಟು ಮಂದಿ ವಿರೋಧಿಸಿದ್ದರು. ಆದರೆ, ಅದು ಯಶಸ್ವಿ ಪ್ರದರ್ಶನ ಕಂಡಿತು. ನಾನು ಎಲ್ಲವನ್ನೂ ಅನುಭವಿಸಿದ್ದೇನೆ. ಇಂದು ನನಗೆ ಭಯವಿಲ್ಲ. ನಾನೀಗ ಜನರಿಗಾಗಿ ಸಿನಿಮಾ ಮಾಡುತ್ತಿದ್ದೇನೆ. ಕೆಲವೊಂದು ನಾಟಕಗಳು ನಡೆಯಲೇಬೇಕಿವೆ. ನಾನು ಹೋರಾಟಕ್ಕೆ ಸಿದ್ಧನಿದ್ದೇನೆ' ಎನ್ನುವ ಮೂಲಕ 'ಲೈಗರ್‌' ವಿರುದ್ಧ ಬಹಿಷ್ಕಾರ ಕೂಗುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.

ಮನರಂಜನೆ ಕ್ಷೇತ್ರದ ಯಶಸ್ಸಿಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿರುವ ನಟ, 'ಒಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಅದಕ್ಕಾಗಿ ಸಾಕಷ್ಟು ಜನರು ಶ್ರಮಿಸಿರುತ್ತಾರೆ. ಆ ಚಿತ್ರವೇನಾದರೂ ಬಾಕ್ಸ್‌ಆಫೀಸ್‌ನಲ್ಲಿ ಸೋತರೆ, ಎಲ್ಲರನ್ನೂ ಬಾಧಿಸುತ್ತದೆ. ಹಾಗಾಗಿ ಒಬ್ಬರಿಗೊಬ್ಬರ ಯಶಸ್ಸಿಗಾಗಿ ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ' ಎಂದು ಕಿವಿಮಾತು ಹೇಳಿದ್ದಾರೆ.

ರಾಷ್ಟ್ರರಾಜಧಾನಿಯಲ್ಲಿ ತಮ್ಮ ಸಿನಿಮಾ ಬಗ್ಗೆ ಜನರಿಂದ ವ್ಯಕ್ತವಾಗಿರುವ ಪ್ರತಿಕ್ರಿಯೆ ಕುರಿತು ಮಾತನಾಡಿರುವ ಅವರು, 'ಜನರು ತೋರುತ್ತಿರುವ ಈ ಪ್ರೀತಿ ನನ್ನೊಂದಿಗೆ ಸದಾ ಉಳಿಯಲಿದೆ. ಭಾವಪರವಶನಾಗಿದ್ದೇನೆ' ಎಂದು ತಿಳಿಸಿದ್ದಾರೆ.

ಲೈಗರ್‌ಗೆ ಬಾಯ್ಕಾಟ್‌ ಬಿಸಿ
ಅಮೀರ್‌ ಖಾನ್‌ ಅಭಿನಯದ ಹಾಗೂ ಇತ್ತೀಚೆಗೆ ತೆರೆಕಂಡ 'ಲಾಲ್ ಸಿಂಗ್ ಚಡ್ಡಾ' ಸಿನಿಮಾಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಾಯ್ಕಾಟ್‌ ಬಿಸಿ ತಟ್ಟಿದೆ. ಈ ಸಿನಿಮಾ ಬಗ್ಗೆ ಮಾತನಾಡಿದ್ದ ವಿಜಯ್‌, ಅದು (ಲಾಲ್ ಸಿಂಗ್ ಚಡ್ಡಾ) ಕೇವಲ ಆಮೀರ್ ಖಾನ್ ಅವರ ಸಿನಿಮಾವಲ್ಲ. ಆ ಸಿನಿಮಾ ನಿರ್ಮಾಣದ ಹಿಂದೆ ಸಾಕಷ್ಟು ಜನರ ಶ್ರಮವಿದೆ. ಬಾಯ್ಕಾಟ್ ಮಾಡಬೇಡಿ ಎಂದಿದ್ದರು.

ಇದರಿಂದಾಗಿ ಇದೀಗ ವಿಜಯ್‌ ಅವರ 'ಲೈಗರ್‌'ಗೂ ಬಾಯ್ಕಾಟ್‌ ಭೀತಿ ಶುರುವಾಗಿದೆ. ಇದರ ನಡುವೆಯೂ ತಮ್ಮ ಸಿನಿಮಾ ಬಹಿಷ್ಕರಿಸುವವರ ಬಗ್ಗೆ ಪ್ರತಿಕ್ರಿಯಿಸಿ ಶನಿವಾರ ಟ್ವೀಟ್ ಮಾಡಿರುವ ವಿಜಯ್‌, ಧರ್ಮದ ಪ್ರಕಾರ ನಡೆಯುತ್ತಿದ್ದೇವೆ. ಇತರರ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಹೋರಾಟ ಮುಂದುವರಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಆಗಸ್ಟ್‌ 11ರಂದು ಬಿಡುಗಡೆಯಾದ 'ಲಾಲ್ ಸಿಂಗ್ ಚಡ್ಡಾ' ಬಾಕ್ಸ್‌ ಆಫೀಸ್‌ನಲ್ಲಿ ಸಾಧಾರಣ ಗಳಿಕೆ ಕಂಡಿದೆ. ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ ಎಂದು ವಿತರಕರೂ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಕ್ಷಯ್‌ ಕುಮಾರ್‌ ಅವರ ‘ರಕ್ಷ ಬಂಧನ್‌‘ ಚಿತ್ರ ಬಿಡುಗಡೆಯಾಗಿತ್ತು.

'ಲಾಲ್ ಸಿಂಗ್ ಚಡ್ಡಾ' ಸಿನಿಮಾ ನೋಡುವಂತೆ ಅಕ್ಷಯ್‌ ಮನವಿ ಮಾಡಿದ್ದಕ್ಕೆ, 'ರಕ್ಷಾ ಬಂಧನ್‌' ಕೂಡ ಬಾಯ್ಕಾಟ್‌ ಹೊಡೆತಕ್ಕೆ ಸಿಲುಕಿತ್ತು.

ಅಮೀರ್‌ ಸಿನಿಮಾ ಕುರಿತು ಮೆಚ್ಚುಗೆ ಮಾತನಾಡಿದ್ದ ಹೃತಿಕ್ ರೋಷನ್‌ ಅವರ ‘ವಿಕ್ರಮ ವೇದಾ' ಚಿತ್ರದ ವಿರುದ್ಧವೂ ಬಾಯ್ಕಾಟ್‌ ಅಭಿಯಾನ ಆರಂಭವಾಗಿದೆ.

ಇದರ ಬೆನ್ನಲೇ ಶಾರುಖ್‌ ಖಾನ್‌ ಅಭಿನಯದ 'ಪಠಾಣ್' ಸಿನಿಮಾ ಬಾಯ್ಕಾಟ್‌ ಮಾಡಿ, ಪ್ರಭಾಸ್‌ ಅಭಿನಯದ 'ಆದಿಪುರುಷ್' ಸಿನಿಮಾ ಬೆಂಬಲಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು