ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಚನ–3 ಕನ್ನಡದಲ್ಲಿ: ಶುಕ್ರವಾರ ತೆರೆಗೆ

Last Updated 23 ಏಪ್ರಿಲ್ 2019, 10:57 IST
ಅಕ್ಷರ ಗಾತ್ರ

ಡಬ್ಬಿಂಗ್ ಚಿತ್ರಗಳನ್ನು ಕನ್ನಡ ಚಿತ್ರರಂಗ ಉಗ್ರವಾಗಿ ವಿರೋಧಿಸಿದ್ದು, ನಂತರ ಡಬ್ಬಿಂಗ್ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಅದಾದ ನಂತರ ತಾನು ಡಬ್ಬಿಂಗ್ ವಿರೋಧಿಸುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಪಷ್ಟಪಡಿಸಿದ್ದು... ಇವೆಲ್ಲ ಈಗ ಇತಿಹಾಸದ ಭಾಗ.

ಈಗೇನಿದ್ದರೂ ಡಬ್ಬಿಂಗ್ ಚಲನಚಿತ್ರಗಳನ್ನು ಬರಮಾಡಿಕೊಳ್ಳುವ ಕಾಲ. ತಮಿಳಿನ ‘ಕಾಂಚನ–3’ ಚಲನಚಿತ್ರ ಈಗ ಕನ್ನಡಕ್ಕೆ ಡಬ್ ಆಗಿ, ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರ ತೆರೆಗೆ ಬರಲಿರುವ ಸುದ್ದಿ ನೀಡಲು ‘ಕಾಂಚನ–3’ಯ ಪ್ರಮುಖರು ಬೆಂಗಳೂರಿಗೆ ಬಂದಿದ್ದರು.

ಈ ಚಿತ್ರದಲ್ಲಿ ಕನ್ನಡದ ಹಾಡುಗಳನ್ನು ತಮಿಳಿನ ಗಾಯಕರೇ ಹಾಡಿದ್ದಾರೆ. ಮೂಲ ಚಿತ್ರದಲ್ಲಿನ ಧ್ವನಿಗೂ ಕನ್ನಡದ ‘ಕಾಂಚನ–3’ನಲ್ಲಿ ಇರಲಿರುವ ಧ್ವನಿಗೂ ವ್ಯತ್ಯಾಸ ಕಾಣಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ. ಚಿತ್ರವನ್ನು ರಾಜ್ಯದಲ್ಲಿ 200 ಕೇಂದ್ರಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡಕ್ಕೆ ಇದೆ.

ಚಿತ್ರದಲ್ಲಿ ಕನ್ನಡದ ನಟಿ ವೇದಿಕಾ ಮತ್ತು ಮಹಾರಾಷ್ಟ್ರದ ನಟಿ ನಿಖಿ ತಂಬೋಲಿ ಅಭಿನಯಿಸಿದ್ದಾರೆ. ‘ಇದು ಮುನಿ ಚಿತ್ರದ ಮುಂದುವರಿದ ಭಾಗ. ಮೊದಲು ಈ ಸಿನಿಮಾ ವಿಚಾರದಲ್ಲಿ ನನಗೆ ಭಯ ಇತ್ತು. ಈಗ ಖುಷಿ ಆಗುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು ವೇದಿಕಾ.

ಮಧ್ಯಂತರದ ಹೊತ್ತಿನಲ್ಲೇ ಈ ಚಿತ್ರ ವೀಕ್ಷಕರ ಪಾಲಿಗೆ ‘ಪೈಸಾ ವಸೂಲ್’ ಎಂಬ ಭಾವನೆ ತಂದಿರಿಸುತ್ತದೆ. ಇದು ಕನ್ನಡದಲ್ಲಿ ಕೂಡ ಅದ್ಭುತ ಯಶಸ್ಸು ದಾಖಲಿಸುತ್ತದೆ ಎಂಬ ವಿಶ್ವಾಸ ವೇದಿಕಾ ಅವರಲ್ಲಿದೆ.

‘ತಮಿಳುನಾಡಿನಲ್ಲಿ ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಕಂಡರೆ, ಇದು ಕನ್ನಡದಲ್ಲಿ ಕೂಡ ಬಹುದೊಡ್ಡ ಯಶಸ್ಸು ಕಾಣುತ್ತದೆ ಎಂಬುದರಲ್ಲಿ ಅನುಮಾನವಿಲ್ಲ’ ಎಂದರು ನಿಖಿ. ರಾಘವ ಲಾರೆನ್ಸ್‌ ಅವರು ಈ ಚಿತ್ರದಲ್ಲಿ ಅಭಿನಯಿಸಲು ತಮಗೆ ಅವಕಾಶ ಕೊಟ್ಟಿದ್ದಕ್ಕೆ ಕೃತಜ್ಞತೆ ಅರ್ಪಿಸಿದರು. ಇದು ನಿಖಿ ವೃತ್ತಿ ಜೀವನದ ಮೊದಲ ಸಿನಿಮಾ.

ಕೊನೆಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ರಾಘವ ಲಾರೆನ್ಸ್‌, ‘ಚಿತ್ರ ಬಿಡುಗಡೆಯಾದ ನಂತರ ಅಂದಾಜು ₹ 60 ಕೋಟಿ ಸಂಗ್ರಹವಾಗಿದೆ’ ಎಂದರು. ಈ ಮಾತನ್ನು ತಮ್ಮ ಸಿನಿಮಾದ ಯಶಸ್ಸಿನ ದ್ಯೋತಕವಾಗಿಯೂ ಹೇಳಿಕೊಂಡರು.

ಈ ಸಿನಿಮಾ ಡಬ್ ಏಕೆ?
‘ನಾನು ಮತ್ತು ಜಾಕ್ ಮಂಜು ಜೊತೆಯಾಗಿ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ, ತಂದಿದ್ದೇವೆ. ಇದನ್ನೇ ಕನ್ನಡಕ್ಕೆ ಡಬ್ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆ ಎದುರಾಗಬಹುದು. ಇದು ಸಾಮಾನ್ಯವಾದ ಸಿನಿಮಾ ಅಲ್ಲ; ಇದೊಂದು ಸರಣಿ’ ಎಂದರು ವಿತರಕ ಯೋಗೀಶ್.

ಇದು ಹಾರರ್‌ ಮತ್ತು ಹಾಸ್ಯದ ಮಿಶ್ರಣ ಇರುವ ಸಿನಿಮಾ. ಬೇರೆ ಬೇರೆ ಬಗೆಯ ಸಿನಿಮಾ ಪ್ರಕಾರಗಳಿವೆ. ಅದರಲ್ಲಿ ಹಾರರ್‌ಗೆ ಹಾಸ್ಯ ಬೆರೆಸುವುದು ಅತ್ಯಂತ ಕಷ್ಟದ ಕೆಲಸ. ಆ ಕಷ್ಟದ ಕೆಲಸವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ. ಆ ಕಾರಣಕ್ಕಾಗಿಯೇ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ ಎಂದರು ಯೋಗೀಶ್.

‘ಮುನಿ, ಕಾಂಚನ–1 ಮತ್ತು ಕಾಂಚನ–2 ಸಿನಿಮಾಗಳನ್ನು ಕನ್ನಡಿಗರು ನೋಡಿದ್ದರು. ಆದರೆ ಕನ್ನಡದಲ್ಲೇ ನೋಡಲು ಸಾಧ್ಯವಾಗಿರಲಿಲ್ಲ. ಬೇರೆ ಭಾಷೆಗಳಲ್ಲಿ ಆ ಸಿನಿಮಾ ನೋಡಬೇಕಾಯಿತು. ಈಗ ಕನ್ನಡದಲ್ಲೇ ಕಾಂಚನ–3 ನೋಡಬಹುದು. ಇದರಲ್ಲಿ ತಾಂತ್ರಿಕಾಗಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT