ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ನಟ ಕಪಾಳಕ್ಕೆ ಹೊಡೆದಿದ್ದನ್ನು ಸಮರ್ಥಿಸಿದ್ದ ಕಂಗನಾ: ಹರಿದಾಡಿದ ಹಳೆ ಪೋಸ್ಟ್‌

Published 8 ಜೂನ್ 2024, 13:57 IST
Last Updated 8 ಜೂನ್ 2024, 13:57 IST
ಅಕ್ಷರ ಗಾತ್ರ

ಮುಂಬೈ: ನಟಿ, ಸಂಸದೆ ಕಂಗನಾ ರನೌತ್ ಅವರಿಗೆ ಸಿಐಎಸ್‌ಎಫ್‌ ಮಹಿಳಾ ಕಾನ್‌ಸ್ಟೆಬಲ್ ಕಪಾಳಕ್ಕೆ ಹೊಡೆದಿರುವ ಕುರಿತು ಪರ– ವಿರೋಧ ಚರ್ಚೆ ನಡೆಯುತ್ತಿದೆ. ಈ ನಡುವೆಯೇ ಸಮಾರಂಭವೊಂದರಲ್ಲಿ ನಿರೂಪಕ ಕ್ರಿಸ್ ರಾಕ್‌ ಅವರಿಗೆ ಹಾಲಿವುಡ್ ನಟ ವಿಲ್‌ ಸ್ಮಿತ್ ಅವರು ಕಪಾಳಮೋಕ್ಷ ಮಾಡಿದ್ದನ್ನು ಸಮರ್ಥಿಸಿ ಕಂಗನಾ ಅವರು ಮಾಡಿದ್ದ ಹಳೆ ಪೋಸ್ಟ್‌ ಇದೀಗ ಮುನ್ನೆಲೆಗೆ ಬಂದಿದೆ.

2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ವೇದಿಕೆ ಮೇಲೆ ಬಂದ ವಿಲ್‌ ಸ್ಮಿತ್ ಕ್ರಿಸ್ ರಾಕ್‌ ಅವರ ಕಪಾಳಕ್ಕೆ ಹೊಡೆದಿದ್ದರು. ತಮ್ಮ ಪತ್ನಿಯ ಬೋಳು ತಲೆಯ ಬಗ್ಗೆ ರಾಕ್ ತಮಾಷೆ ಮಾಡಿರುವುದು ಸ್ಮಿತ್ ಅವರ ಕೋಪಕ್ಕೆ ಕಾರಣವಾಗಿತ್ತು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಪರ–ವಿರೋಧ ಚರ್ಚೆಯನ್ನು ಹುಟ್ಟುಹಾಕಿತ್ತು. ಇದಾದ ಬಳಿಕ ಸ್ಮಿತ್ ಬಹಿರಂಗ ಕ್ಷಮೆಯಾಚಿಸಿದ್ದರು.

ವಿಲ್‌ ಸ್ಮಿತ್ ಕಪಾಳಮೋಕ್ಷ ಮಾಡಿರುವುದನ್ನು ಆಗ ಸಮರ್ಥಿಸಿಕೊಂಡಿದ್ದ ಕಂಗನಾ ರನೌತ್, ಆ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.

ಕಂಗನಾ ಹಳೆ ಪೋಸ್ಟ್‌

ಕಂಗನಾ ಹಳೆ ಪೋಸ್ಟ್‌

'ಮೂರ್ಖರ ಗುಂಪನ್ನು ನಗಿಸುವುದಕೋಸ್ಕರ ಒಬ್ಬ ಅವಿವೇಕಿ ನನ್ನ ತಾಯಿ ಅಥವಾ ಸಹೋದರಿಯ ಅನಾರೋಗ್ಯವನ್ನು ಬಳಸಿಕೊಂಡಿದ್ದರೆ ವಿಲ್ ಸ್ಮಿತ್ ಮಾಡಿದಂತೆಯೇ ನಾನು ಕೂಡ ಕಪಾಳಕ್ಕೆ ಹೊಡೆಯುತ್ತಿದ್ದೆ’ ಎಂದು ಸ್ಮಿತ್ ಬೆಂಬಲಕ್ಕೆ ನಿಂತಿದ್ದರು.

ಗುರುವಾರ(ಜೂ.6) ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರು ಕಂಗನಾ ಅವರ ಕಪಾಳಕ್ಕೆ ಹೊಡೆದಿದ್ದು, ರೈತರ ಹೋರಾಟದ ಬಗ್ಗೆ ಕಂಗನಾ ಹಗುರವಾಗಿ ಮಾತನಾಡಿರುವುದೇ ಕಪಾಳ ಹೊಡೆಯಲು ಕಾರಣ ಎಂದು ಕೌರ್ ತಿಳಿಸಿದ್ದರು.

ಕಪಾಳಮೋಕ್ಷ ಪ್ರಕರಣವನ್ನು ಕೆಲವರು ಖಂಡಿಸಿದರೆ, ಇನ್ನು ಕೆಲವರು ಸಮರ್ಥಿಸಿಕೊಂಡಿದ್ದರು. ಈ ನಡುವೆಯೇ ಈ ಹಳೆ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT