ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಜಗ್ಗೇಶ್‌ ಸಂದರ್ಶನ: ‘ಕಾಮಿಡಿಗಷ್ಟೇ ಸೀಮಿತವಲ್ಲ..

Last Updated 17 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಚಿತ್ರಮಂದಿರಗಳಲ್ಲಿ ಈ ವರ್ಷ ನವರಸದ ಭರ್ಜರಿ ಭೋಜನವಿರಲಿದೆ. ಜಗ್ಗೇಶ್‌ ಅವರ ಸಿನಿಮಾಗಳು ಸಾಲು ಸಾಲಾಗಿ ತೆರೆಗೆ ಬರಲು ಸಜ್ಜಾಗಿವೆ. ಇದರ ನಡುವೆ, ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಳೆದುಕೊಂಡ ದುಃಖದಲ್ಲಿ ತಮ್ಮ ಜನ್ಮದಿನವನ್ನೂ ಆಚರಿಸದೆ ಮಂತ್ರಾಲಯದಲ್ಲಿ ಅಪ್ಪುವಿನ ನೆನಪಿನಲ್ಲಿ ಜಗ್ಗೇಶ್‌ ಧ್ಯಾನ ಮಾಡಿದ್ದಾರೆ. ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಾಗ ತಮ್ಮ ಸಿನಿ ಪಯಣವನ್ನು ಜಗ್ಗೇಶ್‌ ಅವರು ಬಿಚ್ಚಿಟ್ಟಿದ್ದು ಹೀಗೆ..

**
60ರ ಹೊಸ್ತಿಲು. 42 ವರ್ಷಗಳ ಸಿನಿ ಪಯಣವನ್ನು ಹಿಂತಿರುಗಿ ನೋಡಿದರೆ...
ಪ್ರತಿಯೊಬ್ಬ ಮನುಷ್ಯನೂ ಸಸಿಯಾಗಿ ಹುಟ್ಟಿ ಮರವಾಗಿ ಬೆಳೆಯಬೇಕು. ಆ ಮರಕ್ಕೆ ಮುದಿತನವೂ ಬರಬೇಕು. ನಾನು ತುಂಬಾ ಅದೃಷ್ಟವಂತ. ನನ್ನಂಥ ಅದೃಷ್ಟವಂತ ಕನ್ನಡ ಚಿತ್ರರಂಗದಲ್ಲಿ ಯಾರೂ ಇರಲು ಸಾಧ್ಯವಿಲ್ಲ. ಕಾರಣ ಏನೆಂದರೆ, ನಾನು ಈ ಕ್ಷೇತ್ರಕ್ಕೆ ಕಾಲಿಟ್ಟಾಗ ಯಾರ ಪರಿಚಯವೂ ನನಗೆ ಇರಲಿಲ್ಲ. ಯಾವುದೇ ಪರಿಚಯವೇ ಇಲ್ಲದ, ಸಾಧನೆ ಮಾಡದ ಕುಟುಂಬದಿಂದ ನಾನು ಇಲ್ಲಿಗೆ ಹೆಜ್ಜೆ ಇಟ್ಟಿದ್ದೆ. ಇಷ್ಟರ ಮಟ್ಟಿಗೆ ಜನರ ಹೃದಯದಲ್ಲಿ ಜಾಗ ಪಡೆಯುವುದಕ್ಕೆ ಬಹಳ ಅದೃಷ್ಟ ಮಾಡಿರಬೇಕು. 42ವರ್ಷವಾದರೂ ಅದೇ ಪ್ರೀತಿ, ಅದೇ ಬೇಡಿಕೆ ಉಳಿಸಿಕೊಂಡಿರುವುದಕ್ಕೆ ನಾನು ಕೃತಜ್ಞ.

ಜಗ್ಗೇಶ್‌, ಈ ಚಿತ್ರರಂಗದಲ್ಲಿ ಬೇರೂರಲು, ರೂಪ ಪಡೆಯಲು ಹಿರಿಯ ನಟರ ಸಹಾಯವೇ ಕಾರಣ. ವರನಟ ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌, ಶಂಕರ್‌ನಾಗ್‌, ಅಂಬರೀಷ್‌, ಪ್ರಭಾಕರ್‌ ಮುಂತಾದ ನಟರ ಜೊತೆ ಇದ್ದೆ, ನಟಿಸಿದ್ದೆ ಎನ್ನುವುದೇ ನನಗೆ ಹೆಮ್ಮೆ. ಇವರೆಲ್ಲರೂ ಆಶೀರ್ವಾದ, ಶಕ್ತಿ ನೀಡಿ, ‘ಬೆಳೆಯಿರಪ್ಪಾ’ ಎಂದು ಬೆಳೆಸಿದರು. ಈ ಅದೃಷ್ಟ ಕೂಡಾ ಯಾರಿಗೂ ಸಿಗಲು ಸಾಧ್ಯವಿಲ್ಲ.

‘ತೋತಾಪುರಿ’ ಈರೇಗೌಡ ಹೇಗಿದ್ದಾರೆ? ಚಿತ್ರದ ಬಗ್ಗೆ ನಿರೀಕ್ಷೆ ಹೇಗಿದೆ?
ಈ ಸಿನಿಮಾ ಬಂದ ಮೇಲೆ ಹೆಣ್ಣುಕುಲವು, ಇವತ್ತಿನ ಜಗ್ಗೇಶ್‌ ಏನಿದ್ದಾನೆ ಆತನನ್ನು ನೂರುಪಟ್ಟು ಹೆಚ್ಚು ಪ್ರೀತಿಸುತ್ತದೆ. ಏಕೆಂದರೆ ಅಷ್ಟು ಜವಾಬ್ದಾರಿಯುತವಾದ ಪಾತ್ರವದು. ‘ಬಾಗ್ಲು ತೆಗಿ ಮೇರಿ ಜಾನ್‌’ ಹಾಡಿನಲ್ಲಿ ತಮಾಷೆಯಾಗಿ ಕಾಣಿಸಬಹುದು. ಆದರೆ ಚಿತ್ರದಲ್ಲಿ ತುಂಬಾ ಪ್ರಭಾವ ಬೀರುವ ಪಾತ್ರವದು. ಇದೊಂದು ಸಾಮಾನ್ಯ ವ್ಯಕ್ತಿಯೊಬ್ಬನ ಜೀವನ. ಪ್ರತಿಯೊಬ್ಬರೂ ತಮ್ಮನ್ನು ತಾವು ಅದಕ್ಕೆ ಹೋಲಿಸುತ್ತಾರೆ. ನಟನೊಬ್ಬ ವೈಭವೀಕರಿಸುವ ಪಾತ್ರ ಮಾಡಿದಾಗ ಜನರಿಂದ ದೂರ ಉಳಿದುಬಿಡುತ್ತಾನೆ. ಜನರ ಹತ್ತಿರವಿರುವ ಪಾತ್ರದಲ್ಲೇ ಅಭಿನಯಿಸಿದಾಗ ಜನರೂ ಹತ್ತಿರವಾಗುತ್ತಾರೆ. ಹೀಗಾಗಿ ಈರೇಗೌಡ ಸಾಮಾನ್ಯನಿಗೂ ಇಷ್ಟವಾಗುವ ಪಾತ್ರ.

ಈಗ ಬಿಡುಗಡೆಯಾಗಿರುವ ಹಾಡನ್ನಷ್ಟೇ ಗಮನಿಸಿ ಯಾವುದೇ ನಿರ್ಧಾರಕ್ಕೆ ಬರಬೇಡಿ. ಒಬ್ಬ ವ್ಯಕ್ತಿಯನ್ನು ಆತನ ಪಾತ್ರದಲ್ಲಿ ಅಥವಾ ದುಡ್ಡಲ್ಲಿ ಅಥವಾ ಹಾಕಿದ ಬಟ್ಟೆಯಲ್ಲಿ ಅಳೆದರೆ ಅದು ಮೂರ್ಖತನವಾಗುತ್ತದೆ. ಅವನ ಸಾಧನೆ, ಚಿಂತನೆಗಳಲ್ಲಿ ಅವನನ್ನು ಅಳೆಯಬೇಕು. ಇದನ್ನು ಅಳೆಯುವುದು ಕಷ್ಟ. ಆದರೆ ಅಳತೆಗೆ ಸಿಕ್ಕರೆ ಅದು ಬಹಳ ತೂಕವಿರುತ್ತದೆ. That is the beauty of life. ನಾನು ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ, ಪ್ರತಿನಿತ್ಯ ನಿರೀಕ್ಷೆಯಲ್ಲೇ ಬದುಕುತ್ತಿದ್ದೇನೆ. ಸಕಾರಾತ್ಮಕವಾಗಿ ಕೆಲಸ ಮಾಡುತ್ತಿದ್ದೇನೆ. ಈ ಆಶಾಭಾವ ಇಲ್ಲದೇ ಇದ್ದರೆ, ನಮಗೇ ತಿಳಿಯದಂತೆ ನಾವು ಸೋಲುತ್ತೇವೆ.

‘ರಾಘವೇಂದ್ರ ಸ್ಟೋರ್ಸ್‌’ನಲ್ಲಿ ವಿಶೇಷವಾದ ಖಾದ್ಯವೇನಿದೆ?
ಆರು ವರ್ಷದ ಮಗುವಿನಿಂದ ಹಿಡಿದು 80 ವರ್ಷದ ಹಿರಿಯರವರೆಗೂ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲು ಇಷ್ಟಪಡುತ್ತಾರೆ. ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರು ಬದುಕಿನ ಒಂದು ಚಕ್ರವನ್ನೇ ಸಿನಿಮಾ ಮಾಡಿದ್ದಾರೆ. ನನ್ನ ಬದುಕಿಗೆ ಈ ಚಿತ್ರ ನವಿಲುಗರಿಯಾಗಲಿದೆ. ಈ ಚಿತ್ರವನ್ನು ಮಾಡಿದ್ದೇನೆ ಎನ್ನುವ ಹೆಮ್ಮೆಯೂ ಇದೆ. ನವರಸದ ಖಾದ್ಯ ಇಲ್ಲಿದೆ. ಜಗ್ಗೇಶ್‌ನನ್ನು ನವರಸ ನಾಯಕ ಎನ್ನುತ್ತಾರೆ. ಇದನ್ನು ನಿರೂಪಿಸಲು ಈ ಒಂದು ಸಿನಿಮಾ ಸಾಕು. ಮರುಪ್ರಶ್ನೆಯೇ ಹುಟ್ಟುವುದಿಲ್ಲ ಎನ್ನುವ ಭರವಸೆ ನನಗೆ ಇದೆ. ಜಗ್ಗೇಶ್‌ಗೆ ಈ ಬಿರುದು ಸೂಕ್ತ ಎನ್ನಬೇಕು, ಜೊತೆಗೆ ನ್ಯಾಯ ಒದಗಿಸಿದ ಪಾತ್ರವದು.

ಸಿನಿಮಾ ಆಯ್ಕೆ ವಿಚಾರದಲ್ಲೂ ಜಗ್ಗೇಶ್‌ ಬಹಳ ಕಠಿಣವಾದಂತಿದೆ..
ನೂರಕ್ಕೆ ನೂರು ಸತ್ಯ.‘ಉದರ ನಿಮಿತ್ತಂ ಬಹುಕೃತ ವೇಷಂ’ ಎನ್ನುವಂತೆ ಮುಂಚೆ ಕೆಲಸ ಸಿಕ್ಕಿದರೆ ಸಾಕಿತ್ತು. ಹೀಗಾಗಿ ಸಿನಿಮಾ ಮಾಡುತ್ತಿದ್ದೆ. ಈಗ ಈ ಕ್ಷೇತ್ರದಲ್ಲಿ ಬೆಳೆದು ದೊಡ್ಡವನಾದ ಮೇಲೆ, ಜವಾಬ್ದಾರಿಯುತವಾದ ಸಿನಿಮಾ ಆಯ್ಕೆ ಮಾಡಿಕೊಳ್ಳುವ ಅವಕಾಶ ನನಗೆ ಸಿಕ್ಕಿದೆ. ಪಾತ್ರದ ಮುಖಾಂತರ ನಗಿಸುತ್ತಾ ಯಾವ ಸಂದೇಶ ನೀಡಬಹುದು ಎನ್ನುವುದು ನನ್ನ ಈಗಿನ ಪ್ರಾಶಸ್ತ್ಯ. ಕಥೆಯ ವಿಷಯದಲ್ಲಿ ತೂಕವಿರಬೇಕು.

ಕೊರೊನಾ ಬಂದ ಮೇಲೆ ಸಿನಿಮಾಗೆ ಹೊಡೆತ ಬಿತ್ತು ಎನ್ನುತ್ತಾರೆ. ಆದರೆ ನನ್ನ ಪ್ರಕಾರ, ಕೊರೊನಾ ಬಂದ ಮೇಲೆ ಸಿನಿಮಾ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಸಿನಿಮಾಗೆ ತುಂಬಾ ಬೇಡಿಕೆ ಇದೆ, ಆದರೆ ಕಂಟೆಂಟ್‌ ಮೇಲೆ ಇದು ಆಧಾರವಾಗಿದೆ. ಆ್ಯಕ್ಷನ್‌, ಕಮರ್ಷಿಯಲ್‌, ಲವ್‌ ಇದೆಲ್ಲದರಿಂದ ಜನರಿಗೆ ವಾಕರಿಕೆ ಬಂದು ಹೋಗಿದೆ. ಒಟಿಟಿ ವೇದಿಕೆ ಬಂದ ಮೇಲೆ ಸಾವಿರಾರು ಸಿನಿಮಾಗಳು ಜನರ ಕೈಯಲ್ಲೇ ಇವೆ. ಇವೆಲ್ಲ ಸಿನಿಮಾಗಳಿಗಿಂತ ಭಿನ್ನವಾದ ಕಥೆ, ವಿಷಯ ಹೊಂದಿದ ಸಿನಿಮಾ ಮಾಡುವುದು ಮುಖ್ಯ. ಕಥೆಯ ಆಯ್ಕೆ ಶ್ರೇಷ್ಠವಾಗಬೇಕು.

ಹಾಸ್ಯಪ್ರಧಾನ ಗಂಭೀರ ವಿಷಯದ ಪಾತ್ರಗಳಲ್ಲೇ ಜಗ್ಗೇಶ್‌ ಕಾಣಿಸಿಕೊಳ್ಳುತ್ತಾರಾ?
ಹಿಂದಿನ ಸಿನಿಮಾಗಳಲ್ಲಿ ಜಗ್ಗೇಶ್‌ನನ್ನು ನೋಡಿದ ಬಳಿಕ, ‘ಪ್ರೀಮಿಯರ್‌ ಪದ್ಮಿನಿ’, ‘ಕಾಳಿದಾಸ ಕನ್ನಡ ಮೇಷ್ಟ್ರು’, ‘8ಎಂಎಂ’ ಸಿನಿಮಾದಲ್ಲಿನ ಜಗ್ಗೇಶ್‌ನನ್ನು ನೋಡಿ ಶಾಕ್‌ ಆದರು. ಗಂಭೀರವಾದ ಪಾತ್ರಗಳನ್ನೇ ಮಾಡುವ ಆಸೆ ಇದೆ. ಕಲಾವಿದನಿಗೆ ಇರುವ ಆಶೀರ್ವಾದ ಏನೆಂದರೆ, ಅವನು ಯಾವುದೇ ಪಾತ್ರ ಮಾಡುವುದಕ್ಕೂ ಯೋಗವಿದೆ. ನಾನು ಯುವಕನಾಗಿ, ಲವರ್‌ ಬಾಯ್‌ ಆಗಿಯೂ ಕಾಣಿಸಿಕೊಳ್ಳಬಹುದು, ಮಧ್ಯವಯಸ್ಕ ಅಥವಾ ಅಜ್ಜನ ಪಾತ್ರವನ್ನೂ ಮಾಡಬಹುದು. ಬಹಳ ನಟರಿಗೆ ಈ ಅವಕಾಶ ಸಿಗುವುದಿಲ್ಲ. ಜನರು, ಚಿತ್ರರಂಗದವರು ಇಂಥ ಪಾತ್ರಗಳಲ್ಲಿ ಈಗ ನನ್ನನ್ನು ಒಪ್ಪಿಕೊಳ್ಳುತ್ತಾರೆ. ಈ ಹಿಂದೆ ನಮಗೆ ಈ ಸ್ವಾತಂತ್ರ್ಯ ಕೊಟ್ಟಿರಲಿಲ್ಲ. ‘ನೀವು ಕಾಮಿಡಿಗೆ ಸೀಮಿತ. ಕಾಮಿಡಿಯೇ ಮಾಡಿ’ ಎನ್ನುತ್ತಿದ್ದರು. ಈಗ, ‘ನೀವು ಒಳ್ಳೆಯ ಪಾತ್ರಮಾಡಿ. ನಾವು ನೋಡುತ್ತೇವೆ’ ಎನ್ನುತ್ತಿದ್ದಾರೆ. ಕಲಾವಿದನಿಗೆ ವಯಸ್ಸಾಗುತ್ತಿದ್ದಂತೆಯೇ ಪ್ರೇಕ್ಷಕರಿಗೆ ಆತ ಮತ್ತಷ್ಟು ಹತ್ತಿರವಾಗುತ್ತಾನೆ. ಇದು ಸೌಭಾಗ್ಯ.

ಈ ವರ್ಷ ಹಾಗಿದ್ದರೆ ಚಿತ್ರಮಂದಿರಗಳಲ್ಲಿ ನವರಸದ ಭರ್ಜರಿ ಭೋಜನವಿದೆ?
ಜೂನ್‌ ಒಳಗಡೆ ‘ತೋತಾಪುರಿ’ ಭಾಗ–1 ಬಿಡುಗಡೆಯಾಗಲಿದೆ. ಇದೇ ಚಿತ್ರದ ಭಾಗ ಎರಡು ಯಾವಾಗ ಬಿಡುಗಡೆ ಎನ್ನುವುದನ್ನು ನಿರ್ಮಾಪಕರು ನಿರ್ಧರಿಸುತ್ತಾರೆ. ಅದೇ ರೀತಿ ‘ರಾಘವೇಂದ್ರ ಸ್ಟೋರ್ಸ್‌’ ಮತ್ತು ‘ರಂಗನಾಯಕ’ವೂ ಬಿಡುಗಡೆಗೊಳುತ್ತದೆ. ನಾನು ಅಷ್ಟು ಸುಲಭವಾಗಿ ಸ್ಕ್ರಿಪ್ಟ್‌ ಒಪ್ಪಿಕೊಳ್ಳುವುದಿಲ್ಲ. ಇತ್ತೀಚೆಗೆ ಇನ್ನೆರಡು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಇದರಲ್ಲಿನ ಪಾತ್ರಗಳನ್ನು ಜನರು ಖಂಡಿತವಾಗಿಯೂ ಪ್ರೀತಿಸುತ್ತಾರೆ. ಮುಂದಿನ ದಿನಗಳಲ್ಲಿ ಇದರ ಮಾಹಿತಿ ನೀಡುತ್ತೇನೆ.

ತೋತಾಪುರಿ ಸಿನಿಮಾದ ಪೋಸ್ಟರ್‌
ತೋತಾಪುರಿ ಸಿನಿಮಾದ ಪೋಸ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT