ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ತ್ರೀ ಸೌಂದರ್ಯದ ಮಾನದಂಡ ಅತ್ಯಂತ ಅವಾಸ್ತವಿಕ: ಚೇತನಾ ರಾಜ್ ಸಾವಿಗೆ ರಮ್ಯಾ ಸಂತಾಪ

ಅಕ್ಷರ ಗಾತ್ರ

ಬೆಂಗಳೂರು: ಚಿತ್ರೋದ್ಯಮವು ಸ್ತ್ರೀಯರ ಸೌಂದರ್ಯಕ್ಕೆ ಸಂಬಂಧಿಸಿ ಅತ್ಯಂತ ಅವಾಸ್ತವಿಕ ಮಾನದಂಡ ನಿಗದಿಪಡಿಸುತ್ತಿದೆ. ಇದರಿಂದಾಗಿ ನಿರ್ದಿಷ್ಟ ರೀತಿಯಲ್ಲಿಯೇ ಕಾಣಬೇಕು ಎಂಬ ಒತ್ತಡ ನಟಿಯರ ಮೇಲಾಗುತ್ತಿದೆ ಎಂದು ನಟಿ ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಸ್ಮೆಟಿಕ್‌ ಸರ್ಜರಿಗೆ ಒಳಗಾಗಿದ್ದ ಕಿರುತೆರೆ ನಟಿ ಚೇತನಾ ರಾಜ್‌ (22) ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಅವರು, ಚಿತ್ರೋದ್ಯಮದಲ್ಲಿ ಕಂಡುಬರುವ ತಾರತಮ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಬರಹವೊಂದನ್ನೂ ಪೋಸ್ಟ್ ಮಾಡಿದ್ದಾರೆ.

ರಮ್ಯಾ ಬರೆದಿರುವುದು ಹೀಗಿದೆ;

‘ಪ್ಲಾಸ್ಟಿಕ್ ಸರ್ಜರಿ ಬಳಿಕ ನಟಿ ನಿಧನರಾದ ಸುದ್ದಿ ಓದಿದೆ. ಚಿತ್ರೋದ್ಯಮವು ಸ್ತ್ರೀಯರ ಸೌಂದರ್ಯಕ್ಕೆ ಸಂಬಂಧಿಸಿ ಅತ್ಯಂತ ಅವಾಸ್ತವಿಕ ಮಾನದಂಡ ನಿಗದಿಪಡಿಸುತ್ತಿದೆ. ಇದರಿಂದಾಗಿ ನಿರ್ದಿಷ್ಟ ರೀತಿಯಲ್ಲಿಯೇ ಕಾಣಬೇಕು ಎಂಬ ಒತ್ತಡ ನಟಿಯರ ಮೇಲಾಗುತ್ತಿದೆ.

2018ರಲ್ಲಿ ನನ್ನ ಕಾಲಿನಿಂದ ಗಡ್ಡೆಯನ್ನು ತೆಗೆದುಹಾಕಲಾಗಿತ್ತು. ಆ ಬಳಿಕ ನಾನೂ ಸಹ ನನ್ನದೇ ಸಮಯದ ಮಿತಿಯಲ್ಲಿ ತೂಕ ಕಳೆದುಕೊಳ್ಳಲು ಒದ್ದಾಡಿದ್ದೆ.

ತ್ವರಿತವಾಗಿ ತೂಕ ಕಳೆದುಕೊಳ್ಳಬೇಕು ಎಂಬ ಪ್ರಲೋಭನೆಗೆ ಒಳಗಾಗುವ ಹಲವು ನಿದರ್ಶನಗಳಿವೆ. ಜೀವ ಕಳೆದುಕೊಂಡಿರುವ ನಟಿಯ ಬಗ್ಗೆ ಸಹಾನುಭೂತಿ ಇದೆ.

ಈ ಮಾನದಂಡವು ಪುರುಷರಿಗೆ ಅನ್ವಯವಾಗುವುದಿಲ್ಲ (ಯಾರಿಗೂ ಈ ರೀತಿ ಮಾನದಂಡ ನಿಗದಿಪಡಿಸಬೇಕು ಎಂದು ನಾನು ಬಯಸುವುದಿಲ್ಲ).

ಹೀರೋ ಆದವನು ಡೊಳ್ಳುಹೊಟ್ಟೆಯವನಾದರೂ ಆಗಬಹುದು, ಕೂದಲಿಲ್ಲದವನಾದರೂ ಆಗಿರಬಹುದು. 65 ವರ್ಷ ವಯಸ್ಸಾದರೂ ಹೀರೋ ಎಂದು ಪರಿಗಣಿಸಲಾಗುತ್ತಿದೆ. ಆದರೆ, ಸ್ತ್ರೀಯರ ಸ್ಥಿತಿ ಹೀಗಿಲ್ಲ. ಆಕೆಯ ತೂಕ ಸ್ವಲ್ಪ ಹೆಚ್ಚಾದರೂ ಸಾಕು; ಆಂಟಿ, ಬುಡ್ಡಿ, ಅಜ್ಜಿ ಇತ್ಯಾದಿ ಹಣೆಪಟ್ಟಿ ಕಟ್ಟಿಟ್ರೋಲ್ ಮಾಡಲಾಗುತ್ತದೆ.

ಮಹಿಳೆಯರು ಇದನ್ನು ಅರಿತುಕೊಳ್ಳಬೇಕು. ಹಾಗಿರಲು ಸಾಧ್ಯವಿಲ್ಲ, ನೀವು ನೀವಾಗಿಯೇ ಇರಬೇಕು. ನೀವು ಹೇಗಿರಬೇಕು ಎಂಬುದನ್ನು ಜಗತ್ತು ನಿಮಗೆ ಹೇಳಬೇಕಾಗಿಲ್ಲ. ಉದ್ಯಮವು ಮಹಿಳೆಯರಿಗೂ ಸರಿಯಾದ ಪಾತ್ರಗಳನ್ನು ನೀಡಬೇಕು. ಇದು ನಿಯಮ ಬದಲಾಗಬೇಕಾದ ಸಮಯ.

ಅದು ವೇತನ ಇರಬಹುದು, ಪಾತ್ರ ಇರಬಹುದು, ಸೌಂದರ್ಯ ಇರಬಹುದು ಅಥವಾ ಬೇರಾವುದೇ ತಾರತಮ್ಯ ಇರಬಹುದು, ಈ ಧೋರಣೆ ವಿರುದ್ಧ ಮಹಿಳೆ ಹಾಗೂ ಪುರುಷರು ಒಟ್ಟಾಗಿ ಹೋರಾಡಬೇಕು’ ಎಂದು ರಮ್ಯಾ ಪತ್ರದಲ್ಲಿ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT