ಸೋಮವಾರ, ಜೂನ್ 27, 2022
21 °C

ಖ್ಯಾತ ನಟಿ ಬಿ.ಜಯಾ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನಟಿ ಬಿ.ಜಯಾ ನಿಧನ

ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಬಿ.ಜಯಾ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. 

ಅನಾರೋಗ್ಯದ ಕಾರಣ ತಿಂಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಳ್ಳೇಗಾಲ ಮೂಲದವರಾದ ಬಿ.ಜಯಾ ಅವರ ತಂದೆ ರಂಗಭೂಮಿ ಕಲಾವಿದರು. 1958ರಲ್ಲಿ ‘ಭಕ್ತ ಪ್ರಹ್ಲಾದ’ ಸಿನಿಮಾ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದ ಜಯಾ ಅವರು ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿ 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯನಟಿಯಾಗಿ ಖ್ಯಾತಿ ಪಡೆದಿದ್ದ ಅವರು, 2004-05ರ ಸಾಲಿನಲ್ಲಿ ‘ಗೌಡ್ರು’ ಚಿತ್ರಕ್ಕೆ ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದರು.

ಹಾಸ್ಯನಟರಾದ ನರಸಿಂಹರಾಜು, ದ್ವಾರಕೀಶ್‌ ಮುಂತಾದವರ ಜೊತೆಗಿನ ಜಯಾ ಅವರ ನಟನೆ ಇನ್ನೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ರಂಗಭೂಮಿ, ಕಿರುತೆರೆಯಲ್ಲೂ ಹಲವು ಪಾತ್ರಗಳನ್ನು ನಿಭಾಯಿಸಿದ್ದ ಜಯಾ ಅವರು, ಹೆಚ್ಚಾಗಿ ಡಾ.ರಾಜ್‌ಕುಮಾರ್‌ ನಟನೆಯ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.

ಇದನ್ನೂ ಓದಿ– ಬೆಳ್ಳಿ ಹೆಜ್ಜೆ: ನೆಮ್ಮದಿ ಜೀವನಕ್ಕೆ ನಟಿ ಬಿ.ಜಯಾ ಸೂತ್ರ

‘ಕನ್ನಡ ಸಿನಿಮಾ, ಕಿರುತೆರೆಯ ಹಿರಿಯ ನಟಿ ಬಿ.ಜಯಾ ಅವರ ನಿಧನದ ಸುದ್ದಿ ಬೇಸರ ತರಿಸಿದೆ. ತಿಂಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಚಿಕಿತ್ಸೆಗೆ ಸರ್ಕಾರ ನೆರವಾಗಿತ್ತು. ಅಲ್ಲದೆ, ಚಲನಚಿತ್ರ ಅಕಾಡೆಮಿ ಮೂಲಕ ಅವರಿಗೆ ನೆರವನ್ನು ನೀಡಲಾಗಿತ್ತು. ಆದಾಗ್ಯೂ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಇದು ತೀವ್ರ ನೋವಿನ ಸಂಗತಿ. ಬಿ.ಜಯಾ ಅವರು ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಜನಪ್ರಿಯ ಹಾಸ್ಯನಟಿ. ಅಲ್ಲದೆ ರಂಗಭೂಮಿಯಲ್ಲೂ ತಮ್ಮ ಅಭಿನಯ ಛಾಪನ್ನು ಮೂಡಿಸಿದ್ದವರು’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು