ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭು ಮತ್ತು ‘ಸಂಸ’ ಬಿಂಬ!

Last Updated 19 ಜುಲೈ 2018, 19:30 IST
ಅಕ್ಷರ ಗಾತ್ರ

ನಟ ಶ್ರೀನಿವಾಸ ಪ್ರಭು ಅವರ ಧ್ವನಿ, ಅವರ ವೈಶಿಷ್ಟ್ಯಪೂರ್ಣ ನಟನೆಯನ್ನು ಇಷ್ಟಪಡುವವರು ಹಲವರಿದ್ದಾರೆ. ಅವರನ್ನು ಇಷ್ಟಪಡುವವರು, ಇನ್ನಷ್ಟು ಇಷ್ಟಪಡಲು ಈಗ ಒಂದು ಕಾರಣ ಒದಗಿಬಂದಿದೆ. ಪ್ರಭು ಅವರು ‘ಬಿಂಬ’ ಹೆಸರಿನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಈ ಸಿನಿಮಾದಲ್ಲಿ ಅಭಿನಯಿಸಿದ ಮಾತ್ರಕ್ಕೇ ಅವರನ್ನು ಇಷ್ಟಪಡಬೇಕೇ?! ಇಲ್ಲೊಂದು ವಿಶೇಷ ಇದೆ. ಈ ಸಿನಿಮಾದಲ್ಲಿ ನಟಿಸಿರುವವರು ಪ್ರಭು ಮಾತ್ರ. ಇದು ಒಂದು ಗಂಟೆ, ನಲವತ್ತಮೂರು ನಿಮಿಷಗಳ ಸಿನಿಮಾ. ಇಡೀ ಸಿನಿಮಾವನ್ನು ಒಂದೇ ಟೇಕ್‌ನಲ್ಲಿ ಚಿತ್ರೀಕರಿಸಲಾಗಿದೆ! ಚಿತ್ರೀಕರಣ ನಡೆದಿರುವುದು ಒಂದೇ ಸ್ಥಳದಲ್ಲಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಂದರೆ, ಪ್ರಭು ಅವರು ಒಂಚೂರೂ ತಪ್ಪಿಲ್ಲದೆ ಅಭಿನಯಿಸಲು, ಸಂಭಾಷಣೆ ಒಪ್ಪಿಸಲು ಅದೆಷ್ಟು ಬಾರಿ ತಾಲೀಮು ನಡೆಸಿದ್ದರೋ?

ಚಿತ್ರದ ಬಗ್ಗೆ ಮಾಹಿತಿ ನೀಡಲು ಪ್ರಭು ಹಾಗೂ ನಿರ್ಮಾಪಕ ಜಿ. ಮೂರ್ತಿ ತಮ್ಮ ಇಡೀ ತಂಡದ ಜೊತೆ ಪತ್ರಿಕಾಗೋಷ್ಠಿ ಕರೆದಿದ್ದರು. ‘ಇದು ಸಾಹಿತ್ಯಿಕ ಸಿನಿಮಾ. ಸಾಹಿತ್ಯವೇ ಈ ಚಿತ್ರದ ಬೆನ್ನೆಲುಬು’ ಎನ್ನುತ್ತ ಮಾತು ಆರಂಭಿಸಿದರು ಪ್ರಭು.

ಸಾಹಿತಿ ಸಂಸ ಅವರ ಜೀವನವನ್ನು ಆಧರಿಸಿದ ಸಿನಿಮಾ ಇದು. ‘ಸಂಸ ಅವರು ತಮ್ಮನ್ನು ಪೊಲೀಸರು ಬಂಧಿಸಬಹುದು, ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಭಯದಲ್ಲಿ ಯಾವತ್ತೂ ಇರುತ್ತಿದ್ದರು. ಆದರೆ, ಯಾಕೆ ಆ ರೀತಿಯ ಭಯ ಅವರಲ್ಲಿ ಇತ್ತು ಎಂಬುದು ಗೊತ್ತಿಲ್ಲ. ಅವರಿಗೆ ಆಪ್ತರಾಗಿದ್ದ ಕೆಲವರು ಭರವಸೆ ತುಂಬುವ ಕೆಲಸ ಮಾಡಿದರೂ ಪ್ರಯೋಜನ ಆಗಲಿಲ್ಲ. ಕೊನೆಯಲ್ಲಿ ಸಂಸ ಅವರು ಆತ್ಮಹತ್ಯೆ ಮಾಡಿಕೊಂಡರು’ ಎಂದರು ಪ್ರಭು. ಕೊನೆಯ ತೊಂಬತ್ತು ನಿಮಿಷಗಳಲ್ಲಿ ತಮ್ಮ ಇಡೀ ಬದುಕಿನ ಸಿಂಹಾವಲೋಕನ ನಡೆಸಿ, ಆತ್ಮಹತ್ಯೆ ಮಾಡಿಕೊಳ್ಳುವವರೆಗಿನ ಸಿನಿಮಾ ಇದು ಎಂದರು.

ಇದು ಪ್ರಭು ಅವರು ಅಭಿನಯಿಸಿದ್ದ ‘ಸಾಮಿಯ ಸ್ವಗತ’ ನಾಟಕದ ಸಿನಿಮಾ ರೂಪ. ಸಿನಿಮಾಕ್ಕಾಗಿ ನಾಟಕದಲ್ಲಿ ಕೆಲವು ಮಾರ್ಪಾಡುಗಳನ್ನು ಪ್ರಭು ಅವರು ಮಾಡಿದ್ದಾರಂತೆ. ಪ್ರಭು ಅವರನ್ನು ಹೊರತುಪಡಿಸಿದರೆ ಇದರಲ್ಲಿ ಇನ್ಯಾವ ಪಾತ್ರವೂ ಇಲ್ಲ. ನಾಲ್ಕು ವ್ಯಕ್ತಿಗಳ ಧ್ವನಿ ಮಾತ್ರ ಸಿನಿಮಾದಲ್ಲಿ ಕೇಳಿಸುತ್ತವೆ ಎಂದು ಚಿತ್ರತಂಡ ಹೇಳಿದೆ.

ಪ್ರಭು ಅವರ ನಾಟಕ ವೀಕ್ಷಿಸಿದ ನಂತರ ಮೂರ್ತಿ ಅವರು ಇದನ್ನು ಸಿನಿಮಾ ರೂಪದಲ್ಲಿ ತರಬಹುದೇ ಎಂದು ಕೇಳಿದ್ದರಂತೆ. ಸಿನಿಮಾ ಮಾಡುವ ಬಗ್ಗೆ ಒಂದೂವರೆ ವರ್ಷ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಯಿತು ಎಂದು ಮೂರ್ತಿ ಹೇಳಿದರು.

ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದವರು ಪಿ.ಕೆ.ಎಚ್. ದಾಸ್. ‘ಒಂದೇ ಟೇಕ್‌ನಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದು ಬಹಳ ಕಷ್ಟದ ಕೆಲಸವಾಗಿತ್ತು’ ಎಂದರು ದಾಸ್. ಈ ಸಿನಿಮಾ ಚಿತ್ರೀಕರಣ ಮಾಡಿದ್ದನ್ನು ಇನ್ನೊಂದು ಕ್ಯಾಮೆರಾ ಬಳಸಿ ಚಿತ್ರೀಕರಿಸಿಕೊಳ್ಳಲಾಗಿದೆ. ಅದನ್ನು ಗಿನ್ನೆಸ್‌ ದಾಖಲೆಗೆ ಕಳುಹಿಸಲಾಗುವುದು ಎಂದು ಚಿತ್ರತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT