ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವೆಬ್‌ ಸರಣಿ; ಗರಿಗೆದರಿದ ಭರವಸೆ

Last Updated 11 ಜೂನ್ 2021, 2:00 IST
ಅಕ್ಷರ ಗಾತ್ರ

ಓವರ್‌ ದಿ ಟಾಪ್‌ (ಒಟಿಟಿ) ವೇದಿಕೆಗಳು ಮತ್ತು ವೆಬ್‌ ಸರಣಿಗಳ ನಿರ್ಮಾಣ ಸಮಾನಾಂತರವಾಗಿ ಸಾಗುತ್ತಿವೆ. ದೇಶದಲ್ಲಿ ಬಂಗಾಳಿ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಒಟಿಟಿ ವೇದಿಕೆಗಳು ಮುಂಚೂಣಿಯಲ್ಲಿವೆ. ಹಾಗೂ ಅದಕ್ಕೆ ಬೇಕಾದ ಸಾಮಗ್ರಿಗಳೂ ಭಾರೀ ಪ್ರಮಾಣದಲ್ಲಿ ಸಿದ್ಧವಾಗುತ್ತಿವೆ.

ಇದನ್ನೆಲ್ಲಾ ನೋಡಿಕೊಂಡು ಕನ್ನಡದಲ್ಲಿಯೂ ಒಟಿಟಿ ಮತ್ತು ವೆಬ್‌ ಸರಣಿಯ ಪ್ರಯೋಗಗಳು ಮಂದಗತಿಯಲ್ಲಿ ಆರಂಭವಾಗಿವೆ. ಹೆಚ್ಚಿನವರು ಇಲ್ಲಿ ಅನುಸರಿಸುವುದು ಕಾದು ನೋಡುವ ತಂತ್ರ. ಹಾಗಾಗಿ ಸಣ್ಣ ಬಜೆಟ್‌ನ ವೆಬ್‌ ಸರಣಿಗಳನ್ನು ನಿರ್ಮಿಸಿ ಯೂಟ್ಯೂಬ್‌ನಲ್ಲಿ ಹರಿಯಬಿಟ್ಟು, ಜನರ ಪ್ರತಿಕ್ರಿಯೆ ಗಮನಿಸುತ್ತಾ ಮುಂದುವರಿಯುತ್ತಿದ್ದಾರೆ.

‘ಸೂಪರ್‌ ಕಪಲ್‌’ ಸರಣಿಯ ನಿರ್ಮಾಪಕ, ಮಾಧ್ಯಮ ಅನೇಕ ಯೂಟ್ಯೂಬ್‌ ಚಾನೆಲ್‌ನ ಅರವಿಂದ್‌ ಮೋತಿ ಅವರು ವೆಬ್‌ ಸರಣಿಯ ನಿರ್ಮಾಣ ಮತ್ತು ವೀಕ್ಷಕನ ಮನಸ್ಥಿತಿಯ ಬಗ್ಗೆ ಹೇಳಿದ್ದು ಹೀಗೆ: ‘ಕನ್ನಡ ವೀಕ್ಷಕರ ಅಭಿರುಚಿ ತುಂಬಾ ವಿಸ್ತಾರವಾಗಿದೆ. ಅವರು ಮನರಂಜನೆಗಾಗಿ ಯಾವ ಭಾಷೆಗೆ ಬೇಕಾದರೂ ಹೋಗುತ್ತಾರೆ. ಕನ್ನಡದಲ್ಲಿ ವೆಬ್‌ ಸಿರೀಸ್‌ಗೆ ಒಗ್ಗಿಕೊಳ್ಳುವ ಚಿತ್ರಕಥೆ, ಸಂಭಾಷಣೆ ಬರೆಯುವವರೂ ಬೇಕು. ಏಕೆಂದರೆ ಇದು ಅತ್ತ ಕಿರುತೆರೆಯೂ ಅಲ್ಲ. ಸಿನಿಮಾವೂ ಅಲ್ಲದ ಮಧ್ಯದ ಪ್ರಾಕಾರ. ಅಂಥವರನ್ನು ಸಜ್ಜುಗೊಳಿಸಿ ಪ್ರಯೋಗಕ್ಕಿಳಿದಿದ್ದೇವೆ. ವೆಬ್‌ ಸಿರೀಸ್‌ಗೆ ನಿರ್ಮಾಣದ ವಾತಾವರಣ ರೂಪಿಸಬೇಕಿತ್ತು. ಈ ಪ್ರಯೋಗದ ಫಲವೇ ‘ಸೂಪರ್‌ ಕಪಲ್‌’. ಕನ್ನಡದಲ್ಲಿ ವೆಬ್‌ ಸರಣಿಗೆ ಒಳ್ಳೆಯ ಮಾರುಕಟ್ಟೆ ಇದೆ. ಆದರೆ ವಿಶೇಷವಾದ ಕಂಟೆಂಟ್‌ ಬೇಕು’.

‘ಸದ್ಯಕ್ಕೆ ಕನ್ನಡದ ವೆಬ್‌ ಸರಣಿಗಳು ಇನ್ನೂ ಉದ್ಯಮದ ರೂಪ ಪಡೆದಿಲ್ಲ. ನಾವು ಕಡಿಮೆ ಖರ್ಚಿನಲ್ಲಿ ಒಳ್ಳೆಯ ಕಂಟೆಂಟ್‌ ತರುವತ್ತ ಹಾಗೂ ಸದೃಢ ನಿರ್ಮಾಣ ಸಂಸ್ಥೆಯನ್ನು ಕಟ್ಟುವತ್ತಲೇ ಗಮನ ಕೊಟ್ಟಿದ್ದೇವೆ. ನಮ್ಮದೇ ಆದ ಒಟಿಟಿ ವೇದಿಕೆ ಸ್ಥಾಪಿಸಿ ಅದರಲ್ಲಿ ಈ ಸರಣಿಗಳನ್ನು ಪ್ರಸಾರ ಮಾಡುವ ಉದ್ದೇಶವಿದೆ. ಕೋವಿಡ್‌ ಕಾರಣಕ್ಕಾಗಿ ಸರಣಿ ನಿರ್ಮಾಣಗಳು ತುಂಬಾ ನಿಧಾನಗತಿಗೆ ಇಳಿದಿವೆ’ ಎಂದೂ ಅವರು ಹೇಳುತ್ತಾರೆ.

ತರ್ಲೆ ಬಾಕ್ಸ್‌ ಚಾನೆಲ್‌ನಲ್ಲಿ ಆರಂಭವಾಗಿರುವ ‘ಕ್ಯಾಬರೆ’ ಸರಣಿ ಕೂಡಾ ಇಂಥ ಲಘು ಮನರಂಜನಾ ಅಂಶಗಳನ್ನೇ ಹೊಂದಿದೆ. ಮೂರು ವರ್ಷಗಳ ಹಿಂದೆ ‘ಸಕ್ಕತ್‌ ಸ್ಟುಡಿಯೋ’ ನಿರ್ಮಾಣದ ‘ಲೂಸ್‌ ಕನೆಕ್ಷನ್‌’ ಸರಣಿ ಈಗಲೂ ವೀಕ್ಷಕರ ಪ್ರಮಾಣವನ್ನು ಏರಿಸಿಕೊಳ್ಳುತ್ತಲೇ ಇದೆ. ಕಡಕ್‌ ಚಾಯ್‌ ಚಾನೆಲ್‌ನ ‘ಜಸ್ಟ್‌ ಮ್ಯಾರೀಡ್‌’ ಸರಣಿಯು ತನ್ನ ಶೀರ್ಷಿಕೆಯ ಕಾರಣಕ್ಕೇ ವೀಕ್ಷಕರನ್ನು ಸೆಳೆದಿತ್ತು ಎನ್ನುತ್ತಾರೆ ಹಲವು ಯೂಟ್ಯೂಬರ್‌ಗಳು. ಇದೇ ಸಾಲಿನಲ್ಲಿ ಕಿರುಚಿತ್ರ ‘ಅಮೃತಾಂಜನ’, ‘ಲವ್‌ ಸ್ಕ್ವೇರ್‌’ ಹೀಗೆ ಹಲವು ಸರಣಿಗಳು ನಿಲ್ಲುತ್ತವೆ.

ವೆಬ್‌ ಸರಣಿಗಳಿಗೆ ಕಾಲಮಿತಿ, ಸೆನ್ಸಾರ್‌ ನಿಯಮಗಳ ಹಂಗಿಲ್ಲ. ಹಾಗಾಗಿ 10ರಿಂದ 40 ನಿಮಿಷಗಳವರೆಗಿನ ಸರಣಿಗಳನ್ನು ಕಾಣಬಹುದು. ಹೆಚ್ಚಿನ ಸರಣಿಗಳಲ್ಲಿ ಒಂದೇ ಜಾಗದಲ್ಲಿ ನಡೆಯುವ ಕಡಿಮೆ ಸಂಖ್ಯೆಯ ಪಾತ್ರಗಳಿರುವ ಕಥೆಗಳೇ ಇರುತ್ತವೆ. ಹಾಗಾಗಿ ನಿರ್ಮಾಣ ವೆಚ್ಚ ಕಡಿಮೆ. ಹಂಚಿಕೆಗೆ ಯೂಟ್ಯೂಬ್‌ ಅಂತೂ ಮುಕ್ತ ವೇದಿಕೆ.

ಕಲಾವಿದರಿಗೆ ಸಿನಿಮಾ ಅವಕಾಶ: ‘ಸೂಪರ್‌ ಕಪಲ್‌’ ನಟಿ ತೇಜಸ್ವಿನಿ ಶರ್ಮಾ ಅವರು ಹೇಳುವಂತೆ, ‘ಹೆಚ್ಚು ದೀರ್ಘ ಅಲ್ಲದ, ನವಿರು ಅಂಶಗಳ ಕಥೆಯನ್ನು ಜನ ಸ್ವೀಕರಿಸುತ್ತಾರೆ. ಅವರ ಸಣ್ಣ ವಿರಾಮದ ಅವಧಿಯಲ್ಲಿ ಫೋನ್‌/ ಕಂಪ್ಯೂಟರ್‌ ಮೇಲೆ ಕಣ್ಣು ಹಾಯಿಸಿದಾಗ ತಕ್ಷಣಕ್ಕೆ ಸಿಗುವ ಮನರಂಜನೆಗೆ ಆದ್ಯತೆ ಕೊಡುತ್ತಾರೆ. ಅವರ ಆ ಅವಧಿಯನ್ನು ನಮ್ಮ ಕಂಟೆಂಟ್‌ ಸೆಳೆಯುವಂತಿರಬೇಕು. ಇದರಲ್ಲಿ ‘ಸೂಪರ್‌ ಕಪಲ್‌’ ಯಶಸ್ವಿಯಾಗಿದೆ. ಅದರಿಂದ ಗುರುತಿಸಲ್ಪಟ್ಟ ನನಗೆ ಸಿನಿಮಾ ಅವಕಾಶಗಳು ಬಂದಿವೆ’ ಎನ್ನುತ್ತಾರೆ.

ನಿರ್ಮಾಪಕರಿಗೇನು?: ಸದ್ಯ ನಿರ್ಮಾಪಕರು ಯೂಟ್ಯೂಬ್‌ ಜಾಹೀರಾತಿಗಾಗಿ ವೀಕ್ಷಕರ ಪ್ರಮಾಣವನ್ನು ನಂಬಿಕೊಂಡು ಬಂಡವಾಳ ಹೂಡಬೇಕಾಗಿದೆ. ಯೂಟ್ಯೂಬ್‌ ಮಾನದಂಡ ಪೂರೈಸಬೇಕಾದರೆ ದೀರ್ಘ ಕಾಲ ಕಾಯಬೇಕು. ಅದಕ್ಕಾಗಿ ಅನೇಕರು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಪ್ರಾಯೋಜಕತ್ವ ಪಡೆದುಕೊಂಡು ಸರಣಿಗಳನ್ನು ನಿರ್ಮಿಸುತ್ತಿದ್ದಾರೆ.

ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಅವರು ಕೂಡಾ ವೆಬ್‌ ಸರಣಿ ನಿರ್ಮಿಸುವ ಪ್ರಸ್ತಾವ ಹೊಂದಿದ್ದರು. ಸದ್ಯ ಯಾವುದೇ ಬೆಳವಣಿಗೆ ಆಗಿಲ್ಲ. ಆ ಚಿಂತನೆ ಹಾಗೆಯೇ ಇದೆ ಎನ್ನುತ್ತಾರೆ.

ಕನ್ನಡದಲ್ಲಿ ಬರಲಿದೆ ಆಲ್‌ಫ್ಲಿಕ್ಷ್ಸ್‌: ಹಿರಿಯ ಚಿತ್ರ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞ ಸೆಬಾಸ್ಟಿಯನ್‌ ಡೇವಿಡ್‌ ಅವರು ಕನ್ನಡದಲ್ಲೇ ಒಟಿಟಿ ಆ ವೇದಿಕೆ ರೂಪಿಸಲು ಎಲ್ಲ ಸಿದ್ಧತೆ ಮಾಡಿದ್ದಾರೆ.

ಅವರ ಪ್ರಕಾರ, ‘ಒಟಿಟಿ ಕ್ಷೇತ್ರವನ್ನು ಆಳವಾಗಿ ವಿಶ್ಲೇಷಿಸಿದ್ದೇನೆ. ಹಾಗಾಗಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಜನ ಬಯಸುವ ಕಂಟೆಂಟ್‌ ಕೊಟ್ಟರೆ ಖಂಡಿತವಾಗಿಯೂ ಮಾರುಕಟ್ಟೆ ನಮಗಿದೆ. ಆಲ್‌ಫ್ಲಿಕ್ಸ್‌ ವೇದಿಕೆಯಲ್ಲಿ ಸಾಕಷ್ಟು ಚಿತ್ರಗಳು ಉಚಿತ ವೀಕ್ಷಣೆಗೆ ಲಭ್ಯ ಇರಲಿವೆ. ಹೊಸ ಕಥೆಗಳನ್ನು ಸರಣಿ ರೂಪದಲ್ಲಿ ತಂದಾಗ ಅದನ್ನು ಕನಿಷ್ಠ ನಾಲ್ಕು ಭಾಷೆಗಳಲ್ಲಿ ಕೊಡುತ್ತೇನೆ. ಒಂದು ಕಥೆ ನಾಲ್ಕು ಭಾಷೆಗಳಲ್ಲಿ ವಿಶ್ವದ ಮೂಲೆ ಮೂಲೆಯನ್ನು ತಲುಪುವ ವಿಶ್ವಾಸವಿದೆ. ಜನ ಕನ್ನಡಿಗರ ಪ್ರಯತ್ನವನ್ನು ಬೆಂಬಲಿಸುವ ವಿಶ್ವಾಸ ಇದೆ ಎನ್ನುತ್ತಾರೆ ಅವರು.

ಹೀಗೆ ಭವಿಷ್ಯದ ಇಂಟರ್‌ನೆಟ್‌, ಬದಲಾಗುತ್ತಿರುವ ತಂತ್ರಜ್ಞಾನ ಗಮನಿಸುತ್ತಲೇ ಕನ್ನಡದ ಒಟಿಟಿ, ವೆಬ್‌ ಸರಣಿಗಳು ಬರುತ್ತಿವೆ. ನಿರ್ಮಾಪಕರು ವೀಕ್ಷಕರ ನಾಡಿ ಮಿಡಿತದ ಮೇಲೆ ಈಗ ನಿಧಾನವಾಗಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT