ಮಂಗಳವಾರ, ಫೆಬ್ರವರಿ 25, 2020
19 °C

ಶೈನ್ ಶೆಟ್ಟಿ ಮಾತು | ಸೋತು ಸುಣ್ಣವಾದಾಗ ಗೆಲುವು ಕಾದಿರುತ್ತದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಜೀವನದಲ್ಲಿ ಎಲ್ಲರೂ ಒಂದು ಹಂತದಲ್ಲಿ ಸೋಲುತ್ತಾರೆ, ಇನ್ನೊಂದು ಹಂತದಲ್ಲಿ ಗೆಲ್ಲುತ್ತಾರೆ. ಆದರೆ ಸೋತು ಸೋತು ಸುಣ್ಣವಾದಾಗ ಮುಂದೆ ಗೆಲುವು ಬರುತ್ತದೆ ಎಂಬ ವಿಶ್ವಾಸ ಇರಬೇಕು...’

– ಬಿಗ್‌ ಬಾಸ್‌ ರಿಯಾಲಿಟಿ ಶೋನ ಏಳನೆಯ ಆವೃತ್ತಿಯ ವಿಜೇತ ಶೈನ್‌ ಶೆಟ್ಟಿ ಅವರು ‘ಪ್ರಜಾ ಪ್ಲಸ್’ ಪುರವಣಿ ಜೊತೆ ಮಾತಿಗೆ ಸಿಕ್ಕಾಗ ಆಡಿದ ಮಾತು ಇದು.

‘ಗೆಲುವನ್ನು ಹೇಗೆ ಸ್ವೀಕರಿಸಿದ್ದೀರಿ’ ಎಂದು ಪ್ರಶ್ನಿಸಿದಾಗ, ‘ಭಯಂಕರ ಖುಷಿ ಆತಿತ್ ಮಾರ್‍ರೆ’ (ಬಹಳ ಖುಷಿ ಆಗುತ್ತಿದೆ) ಎಂದು ಹೇಳಿದರು ಶೈನ್‌. ಇವರು ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರು. ಉಡುಪಿಯಲ್ಲಿ ಕಾಲೇಜು ಶಿಕ್ಷಣ ಪಡೆದವರು. ನಂತರ ಬದುಕು ಅರಸಿ ಬಂದಿದ್ದು ಬೆಂಗಳೂರಿಗೆ.

‘ನಾನು ಬಿಗ್‌ ಬಾಸ್‌ನಲ್ಲಿ ಜಯ ಸಾಧಿಸುವೆ ಎಂಬ ನಿರೀಕ್ಷೆ ಖಂಡಿತ ಇರಲಿಲ್ಲ. ಒಂದಿಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದು ಬರೋಣ ಎಂದು ಅಲ್ಲಿಗೆ ಹೋಗಿದ್ದೆ. ಆದರೆ, ಜನರ ಪ್ರೀತಿ, ಅವರು ನನ್ನ ಪರವಾಗಿ ಚಲಾಯಿಸಿದ ಮತಗಳು ನನ್ನನ್ನು ಗೆಲ್ಲಿಸಿದವು’ ಎಂದು ಒಂದೇ ಉಸಿರಿನಲ್ಲಿ ಹೇಳುತ್ತಾರೆ ಶೈನ್.

ಅಂದಹಾಗೆ, ಶೈನ್ ಅವರು ಬಿಗ್ ಬಾಸ್‌ ಮನೆಯಿಂದ ಈಗ ನೇರವಾಗಿ ಸಿನಿಮಾ ಸೆಟ್‌ ಕಡೆ ತೆರಳಲಿದ್ದಾರೆ. ‘ಸಿನಿಮಾ ಒಂದರಲ್ಲಿ ಕಲಾವಿದನಾಗಿ ಪಾತ್ರ ನಿಭಾಯಿಸುವ ಬಗ್ಗೆ ಭಾನುವಾರ ಒಂದು ಹಂತದ ಮಾತುಕತೆ ನಡೆದಿದೆ. ನಾನು ಬಿಗ್‌ ಬಾಸ್ ಮನೆಗೆ ತೆರಳುವ ಮೊದಲೇ, ಆ ಕುರಿತು ಒಂದು ಸುತ್ತಿನ ಮಾತುಕತೆ ನಡೆದಿತ್ತು. ಭಾನುವಾರ ಮತ್ತೊಂದು ಸುತ್ತಿನ ಮಾತುಕತೆ ಆಗಿದೆ’ ಎಂದು ಅವರು ತಿಳಿಸಿದರು. ಆದರೆ ಚಿತ್ರದ ಹೆಸರು ಏನು, ನಿರ್ದೇಶಕ ಯಾರು, ನಿರ್ಮಾಣ ಸಂಸ್ಥೆ ಯಾವುದು ಎಂಬುದರ ಮಾಹಿತಿ ನೀಡಲಿಲ್ಲ.

113 ದಿನಗಳ ಪಾಠ:

‘113 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ನನಗೆ ಜನರ ಅಭಿಮಾನ ಮತ್ತು ಪ್ರೀತಿಯ ಬಗ್ಗೆ ಪಾಠ ಹೇಳಿಕೊಟ್ಟಿತು. ಅತ್ಯಂತ ಕಠಿಣ ಸನ್ನಿವೇಶಗಳನ್ನು ಎದುರಿಸಲು ನಾವು ಸದಾ ಸನ್ನದ್ಧರಾಗಿ ಇರಬೇಕು ಎಂಬುದನ್ನೂ ಅದು ಹೇಳಿಕೊಟ್ಟಿತು’ ಎಂದು ತಮ್ಮ ಅನುಭವ ಹಂಚಿಕೊಂಡರು.

18 ಜನರ ಬಿಗ್ ಬಾಸ್ ಮನೆ ಒಂದು ಕೂಡು ಕುಟುಂಬದಂತೆ ಇತ್ತು. ಅಲ್ಲಿ ಎಲ್ಲರೂ ಬೇರೆ ಬೇರೆ ರೀತಿಯ ಜನ. ಎಲ್ಲರ ಜೊತೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳುವುದು ಹೇಗೆಂಬುದು ಅಲ್ಲಿ ಗೊತ್ತಾಯಿತು ಎಂದರು.

ರಿಷಬ್ ನಿರ್ಮಾಣ?

ಮೂಲಗಳ ಪ್ರಕಾರ ಶೈನ್‌ ಶೆಟ್ಟಿ ಅಭಿನಯಿಸುತ್ತಿರುವ ಮುಂದಿನ ಸಿನಿಮಾವನ್ನು ‘ರಿಷಬ್ ಶೆಟ್ಟಿ ಫಿಲಂಸ್’ ನಿರ್ಮಾಣ ಮಾಡುತ್ತಿದೆ. ಈ ಚಿತ್ರದ ನಿರ್ದೇಶಕ ಯಾರು ಎಂಬುದು ಇನ್ನೂ ಅಂತಿಮ ಆಗಿಲ್ಲ.

‘ಕಥಾಸಂಗಮ ಚಿತ್ರದ ಏಳು ನಿರ್ದೇಶಕರ ಪೈಕಿ ಯಾರಾದರೂ ಒಬ್ಬರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಶೈನ್ ಅವರು ಬಿಗ್‌ ಬಾಸ್‌ ಸ್ಪರ್ಧಿಯಾಗಿ ಆಯ್ಕೆಯಾಗುವ ಮೊದಲೇ ಈ ಚಿತ್ರದ ಕುರಿತ ಮಾತುಕತೆ ನಡೆದಿತ್ತು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು