ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದಂಬರ ಕಾಲದ ‘ಕಾಂತಾರ’ ಮೊದಲ ಅಧ್ಯಾಯ: ಏನು ವಿಶೇಷ?

Kantara Chapter 1
Published 27 ನವೆಂಬರ್ 2023, 8:01 IST
Last Updated 27 ನವೆಂಬರ್ 2023, 8:01 IST
ಅಕ್ಷರ ಗಾತ್ರ

ಬೆಂಗಳೂರು: ನಟ ರಿಷಬ್‌ ಶೆಟ್ಟಿ ‘ಕಾಂತಾರ–ಒಂದು ದಂತಕಥೆ’ಯ ಮೊದಲ ಅಧ್ಯಾಯದ ಚಿತ್ರೀಕರಣಕ್ಕೆ ಮುನ್ನುಡಿ ಬರೆದಿದ್ದಾರೆ. ಚಿತ್ರದ ಫಸ್ಟ್‌ ಲುಕ್‌ ಹಾಗೂ ಟೀಸರ್‌ ಬಿಡುಗಡೆಯಂದೇ ಉಡುಪಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದೆ. 

2022ರ ಸೆ.30ರಂದು ತೆರೆಕಂಡಿದ್ದ ‘ಕಾಂತಾರ–ಒಂದು ದಂತಕಥೆ’ಯ ದೊಡ್ಡ ಯಶಸ್ಸು, ಈಗ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಹೆಚ್ಚಿನ ಬಜೆಟ್‌ ನೀಡಿದೆ ಎನ್ನುವುದು ಟೀಸರ್‌ ಹಾಗೂ ಫಸ್ಟ್‌ಲುಕ್‌ನಲ್ಲಿ ಸ್ಪಷ್ಟವಾಗಿದೆ. ದೊಡ್ಡ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎನ್ನುವುದಕ್ಕೆ ಟೀಸರ್‌ ಸಾಕ್ಷ್ಯವಾಗಿದೆ. ಜೊತೆಗೆ ಇಂಗ್ಲಿಷ್‌ನಲ್ಲೂ ಟೀಸರ್‌ ಬಿಡುಗಡೆಯಾಗಿದ್ದು, ಇದು ವಿಶ್ವದಾದ್ಯಂತ ‘ಕಾಂತಾರ’ ಸೃಷ್ಟಿಸಿರುವ ನಿರೀಕ್ಷೆಯನ್ನು ಬಿಂಬಿಸಿದೆ. ‘ಇದು ಬರಿ ಬೆಳಕಲ್ಲ, ದರ್ಶನ’ ಎನ್ನುವ ಮೂಲಕ ಸಿನಿಮಾದ ಪ್ರೀಕ್ವೆಲ್‌ ಆರಂಭವಾಗುತ್ತದೆ. ಕದಂಬರ ಆಳ್ವಿಕೆಯ ಕಾಲದಲ್ಲಿ ಹುಟ್ಟಿದ ದಂತಕಥೆಯ ಕಥಾಹಂದರ ಎಂದು ಟೀಸರ್‌ನಲ್ಲಿ ಉಲ್ಲೇಖಿಸಲಾಗಿದೆ. ಕೊಡಲಿ ಹಾಗೂ ತ್ರಿಶೂಲವನ್ನು ಹಿಡಿದಿರುವ ರಿಷಬ್‌ ಅವರು ಯಾವ ಪಾತ್ರವನ್ನು ತೆರೆಗೆ ತರುತ್ತಿದ್ದಾರೆ ಎನ್ನುವುದು ನಿಗೂಢವಾಗಿದೆ. ಕನ್ನಡ, ಇಂಗ್ಲಿಷ್‌ ಸೇರಿದಂತೆ ಏಳು ಭಾಷೆಗಳಲ್ಲಿ ಏಕಕಾಲದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. 

‘‘ಕಾಂತಾರ’ದ ಅಧ್ಯಾಯ–1ನ್ನು ಪ್ರಾರಂಭಿಸಿದ್ದೇವೆ. ಅಧ್ಯಾಯ–2ನ್ನು ಈಗಾಗಲೇ ನೋಡಿದ್ದೀರಿ. ಇದರ ಪೂರ್ಣ ಯಶಸ್ಸನ್ನು ಕನ್ನಡಿಗರಿಗೆ ಅರ್ಪಿಸುತ್ತೇನೆ. ಚಿತ್ರದ ಪ್ರೀಕ್ವೆಲ್‌(ಹಿಂದಿನ ಕಥೆ) ನಿರ್ಮಾಣವನ್ನು ಒಂದು ಜವಾಬ್ದಾರಿಯಾಗಿ ತೆಗೆದುಕೊಂಡಿದ್ದೇನೆ. ಆನೆಗುಡ್ಡೆ ಎಂದರೆ ನಾವು ನಂಬಿದ ದೇವಸ್ಥಾನ. ಲಕ್ಕಿ ಕೂಡಾ. ನಿರ್ಮಾಪಕರಾದ ವಿಜಯ್‌ ಕಿರಗಂದೂರ್‌ ಅವರಿಗೂ ಇಲ್ಲಿನ ದೇವರ ಬಗ್ಗೆ ನಂಬಿಕೆ ಇದೆ. ಕಳೆದ ಬಾರಿಯೂ ಈ ದೇವಸ್ಥಾನದಲ್ಲೇ ಮುಹೂರ್ತ ನಡೆದಿತ್ತು. ಡಿಸೆಂಬರ್‌ನಲ್ಲಿ ಪ್ರೀಕ್ವೆಲ್‌ನ  ಚಿತ್ರೀಕರಣ ಆರಂಭವಾಗಲಿದೆ. ಮಾತಿಗಿಂತ ಕೆಲಸ ಮುಖ್ಯ. ಹಾಗಾಗಿ ಮೊದಲ ಅಧ್ಯಾಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ. ಕರಾವಳಿ ಭಾಗಕ್ಕೆ ಸಂಬಂಧಿಸಿದ ಕಥೆ ಆಗಿರುವುದರಿಂದ ಇದೇ ಭಾಗದಲ್ಲಿ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ಕನ್ನಡದ ಕಲಾವಿದರಿಗೆ ಮೊದಲ ಆದ್ಯತೆ. ಮತ್ತಷ್ಟು ಹೊಸ ಪ್ರತಿಭೆಗಳನ್ನು, ರಂಗಭೂಮಿ ಕಲಾವಿದರನ್ನು ಈ ಭಾಗದಲ್ಲಿ ಹೆಚ್ಚಾಗಿ ಪರಿಚಯಿಸಲಿದ್ದೇವೆ. ‘ಕಾಂತಾರ’ ಈ ಮಟ್ಟಕ್ಕೆ ಹೋಗಲು ಹೊಂಬಾಳೆ ಕಾರಣ. ಕಥೆಗೆ ಬೇಕಾದ ಬಜೆಟ್‌ ಅನ್ನು ವಿಜಯ ಕಿರಗಂದೂರ್‌ ನೀಡಿದ್ದಾರೆ’ ಎನ್ನುತ್ತಾರೆ ರಿಷಬ್‌ ಶೆಟ್ಟಿ. 

‘ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ, ಅರವಿಂದ್‌ ಎಸ್‌.ಕಶ್ಯಪ್‌ ಅವರ ಛಾಯಾಚಿತ್ರಗ್ರಹಣ ಸೇರಿದಂತೆ ಮೊದಲ ಭಾಗದಲ್ಲಿ ಕಾರ್ಯನಿರ್ವಹಿಸಿದ್ದ ತಾಂತ್ರಿಕ ತಂಡವೇ ಪ್ರೀಕ್ವೆಲ್‌ನಲ್ಲೂ ಇರಲಿದೆ. ಸ್ಕ್ರಿಪ್ಟ್‌ ಕೆಲಸ ಮುಗಿದಿದ್ದು, ಪ್ರಿಪ್ರೊಡಕ್ಷನ್‌ ಆರಂಭಿಸಿದ್ದೇವೆ’ ಎಂದು ರಿಷಬ್‌ ಮಾಹಿತಿ ನೀಡಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT