ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ | ಇಲ್ಲೂ ‘ಕಾಂತಾರ’ದ್ದೇ ಚಮತ್ಕಾರ

Published 8 ಜೂನ್ 2023, 11:40 IST
Last Updated 8 ಜೂನ್ 2023, 11:40 IST
ಅಕ್ಷರ ಗಾತ್ರ

2022 ರ ಸೆಪ್ಟೆಂಬರ್‌ ಮೊದಲ ವಾರ. ಕರಾವಳಿಯ ದೈವದ ಸುತ್ತ ಹೆಣೆದಿರುವ ಸಿನಿಮಾದ ಕಥೆ ಹಾಗೂ ತನ್ನನ್ನು ‘ಪ್ಯಾನ್‌ ಇಂಡಿಯಾ’ ಎಂಬ ತಕ್ಕಡಿಯಲ್ಲಿ ಇಟ್ಟು ತೂಗುವುದಕ್ಕೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹಿಂದೇಟು ಹಾಕಿದ್ದರು. ಆದರೆ 2022ರ ಸೆ.30ರ ನಂತರ ಆಗಿದ್ದು ಅನಿರೀಕ್ಷಿತವೇ. ಕರಾವಳಿಯ ಮಣ್ಣಿನ ಘಮಲು ಎಲ್ಲೆಡೆ ಹಬ್ಬಿತು. ಕನ್ನಡದಲ್ಲಷ್ಟೇ ತೆರೆಕಂಡ ‘ಕಾಂತಾರ’ ನಂತರ ಪ್ಯಾನ್‌ ಇಂಡಿಯಾ ಸ್ವರೂಪ ಪಡೆಯಿತು. 

‘ಒಂದು ದಂತಕಥೆ’ ಚಿತ್ರದ ಅಡಿಬರಹದಂತೆಯೇ ಸಿನಿಮಾ ಚಂದನವನದ ದಂತಕಥೆಗಳ ಪಟ್ಟಿಗೆ ಸೇರ್ಪಡೆಯಾಯಿತು. ಅಡವಿಯೊಳಗೆ ಹೆಜ್ಜೆ ಹಾಕುತ್ತಾ, ಕೆರಾಡಿಯನ್ನೇ ತಮ್ಮ ಫಿಲ್ಮ್‌ ಸಿಟಿ ಮಾಡಿಕೊಂಡು ನಿರ್ದೇಶಕ ರಿಷಬ್‌ ಶೆಟ್ಟಿ ‘ಕಾಂತಾರ’ ಕಟ್ಟಿದರು. ‘ಡಿವೈನ್‌ ಬ್ಲಾಕ್‌ಬಸ್ಟರ್‌’ ಎಂಬ ಹೆಗ್ಗುರುತು ಪಡೆಯುವಂತೆ ಹೊಂಬಾಳೆ ಅದನ್ನು ಪಸರಿಸಿತು. 

ಹೊಂಬಾಳೆಯಂತಹ ಬೃಹತ್‌ ನಿರ್ಮಾಣ ಸಂಸ್ಥೆಯಿಂದ ಕಡಿಮೆ ಬಜೆಟ್‌ನಲ್ಲಿ ತಯಾರಾದ ಸಿನಿಮಾ ‘ಕಾಂತಾರ’. ಆದರೆ ಇದೇ ಸಿನಿಮಾ ‘ಕೆ.ಜಿ.ಎಫ್‌’ ದಾಖಲೆಯನ್ನೂ ಮುರಿದದ್ದು ಚಿತ್ರಕಥೆಯ ಸಾಮರ್ಥ್ಯವನ್ನು ಪ್ರದರ್ಶಿಸಿತು. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆ ಹೊತ್ತ ಸಿನಿಮಾವನ್ನು ಬಿಡುಗಡೆಯಾಗದ 25 ದಿನಗಳಲ್ಲೇ ರಾಜ್ಯದ 77 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದರು.  

‘ರಿಕ್ಕಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾಗಳಲ್ಲಿ ಮಣ್ಣಿನ ಘಮವನ್ನೇ ಕಥಾಹಂದರವಾಗಿಸಿದ್ದ ರಿಷಬ್‌ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಲ್ಲಿ ಕರಾವಳಿಯ ಸಂಸ್ಕೃತಿ, ಆಚರಣೆಯ ಆಳಕ್ಕಿಳಿದಿದ್ದರು. ಪ್ರಕೃತಿ ಹಾಗೂ  ಮನುಷ್ಯನ ನಡುವಿನ ಸಂಬಂಧ, ಭೂತಾರಾಧನೆ, ಕಂಬಳ, ಹಳ್ಳಿಗಳಲ್ಲಿ ಅರಣ್ಯ ಇಲಾಖೆ ಹಾಗೂ ಜನರ ನಡುವಿನ ಸಂಘರ್ಷ, ಸಮಾಜದಲ್ಲಿರುವ ದುರಾಸೆ ಮತ್ತದರ ಪರಿಣಾಮ, ಅಸ್ಪೃಶ್ಯತೆಯನ್ನು ಸೂಕ್ಷ್ಮವಾಗಿ ‘ಕಾಂತಾರ’ ತೋರಿತ್ತು. ಹೀಗಾಗಿಯೇ ಜನರನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿತ್ತು. 

ತಾಂತ್ರಿಕವಾಗಿಯೂ ಸಿನಿಮಾ ಗೆದ್ದಿತ್ತು. ಅರವಿಂದ್‌ ಕಶ್ಯಪ್‌ ಅವರ ಛಾಯಾಚಿತ್ರಗ್ರಹಣ, ಅಜನೀಶ್‌ ಲೋಕನಾಥ್‌ ಅವರ ಸಂಗೀತ ಸಿನಿಮಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿದ್ದವು.

‘ಪ್ರಜಾವಾಣಿ ಇಷ್ಟು ಅದ್ಧೂರಿಯಾಗಿ ಕನ್ನಡ ಸಿನಿ ಸಮ್ಮಾನ ಆಯೋಜಿಸಿರುವುದು ಖುಷಿ ತಂದಿದೆ. ಗಿರೀಶ್‌ ಕಾಸರವಳ್ಳಿ ಅವರಂಥ ಮೇರು ನಿರ್ದೇಶಕರಿಂದ ಈ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ‘ಕಾಂತಾರ’ ಎನ್ನುವುದು ರಿಷಬ್‌ ಶೆಟ್ಟಿ ಅವರ ಮನಸ್ಸಿಗೆ ಬಹಳ ಹತ್ತಿರವಾದ ಸಿನಿಮಾ. ಈ ಸಿನಿಮಾ ಪಯಣವೇ ಒಂದು ದೈವಿಕ ಪಯಣವಾಗಿತ್ತು. ದೈವದ ಆಶೀರ್ವಾದದಿಂದ ಈ ಸಿನಿಮಾ ಆಗಿದೆ. ಕನ್ನಡದ ಜನರು ಈ ಸಿನಿಮಾ ಕೈಹಿಡಿದರು. ಕೇವಲ ಕನ್ನಡದಲ್ಲಷ್ಟೇ ಈ ಸಿನಿಮಾ ಮಾಡಲು ಹೊರಟಿದ್ದೆವು. ಜನರ ಪ್ರೀತಿ ಇದನ್ನು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿದೆ. ‘ಕಾಂತಾರ’ದ ಪ್ರೀಕ್ವೆಲ್‌ ಸಿದ್ಧವಾಗುತ್ತಿದೆ. ಚಿತ್ರಕಥೆಯಲ್ಲಿ ರಿಷಬ್‌ ತೊಡಗಿಸಿಕೊಂಡಿದ್ದಾರೆ. ಅವರ ಮೇಲಿನ ಜವಾಬ್ದಾರಿಯೂ ಹೆಚ್ಚಿದೆ’ ಎಂದು ರಿಷಬ್‌ ಶೆಟ್ಟಿ ಅವರ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಪ್ರಗತಿ ರಿಷಬ್‌ ಶೆಟ್ಟಿ ಹೇಳಿದರು.

ಡಿಜಿಟಲ್‌ ಯುಗದಲ್ಲೂ ‘ಪ್ರಜಾವಾಣಿ’ ಪತ್ರಿಕೆ 75 ವರ್ಷಗಳನ್ನು ಪೂರೈಸಿ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿರುವುದು ಪತ್ರಿಕೆಯ ಶ್ರೇಷ್ಠತೆಯನ್ನು ತೋರಿಸುತ್ತದೆ. ‘ಪ್ರಜಾವಾಣಿ’ಯಲ್ಲಿ ಬರುವ ಸಿನಿಮಾ ವಿಮರ್ಶೆಯನ್ನು ನೋಡಿಕೊಂಡು ಜನ ಚಿತ್ರಮಂದಿರಕ್ಕೆ ಬರುತ್ತಿದ್ದರು. ಚಿತ್ರರಂಗಕ್ಕೆ ಪ್ರಜಾವಾಣಿಯ ಕೊಡುಗೆ ಬಹಳ ದೊಡ್ಡದು. ಇಂತಹ ಇತಿಹಾಸವುಳ್ಳ ಪತ್ರಿಕೆ ನೀಡುವ ಪ್ರಶಸ್ತಿಯ ಮೌಲ್ಯವೂ ಅಷ್ಟೇ ಶ್ರೇಷ್ಠವಾಗಿರುತ್ತದೆ. ‘ಕಾಂತಾರ’ಕ್ಕೆ 9 ಪ್ರಶಸ್ತಿಗಳು ದೊರಕಿರುವುದು ಖುಷಿ ತಂದಿದೆ. ಇದು ಇಡೀ ತಂಡದ ಪರಿಶ್ರಮ. ಈ ಪ್ರಶಸ್ತಿಯನ್ನು ನಾನು ಪುನೀತ್‌ ರಾಜ್‌ಕುಮಾರ್‌ ಅವರಿಗೆ, ದೈವ ನರ್ತಕರು ಹಾಗೂ ಅವರ ಕುಟುಂಬದವರು ಹಾಗೂ ರಾಜ್ಯದ ಜನತೆಗೆ ಅರ್ಪಿಸುತ್ತೇನೆ.
ರಿಷಬ್‌ ಶೆಟ್ಟಿ, ನಟ

ವರ್ಷದ ಅತ್ಯುತ್ತಮ ಚಿತ್ರ: ಕಾಂತಾರ
ನಿರ್ದೇಶನ: ರಿಷಬ್‌ ಶೆಟ್ಟಿ
ನಿರ್ಮಾಣ: ಹೊಂಬಾಳೆ ಫಿಲ್ಮ್ಸ್‌

ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಸಿನಿಮಾಗಳು
* ತಲೆದಂಡ
* 777 ಚಾರ್ಲಿ
* ಗುರು ಶಿಷ್ಯರು
* ಕಾಂತಾರ
* ಧರಣಿ ಮಂಡಲ ಮಧ್ಯದೊಳಗೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT