ಬದುಕಿನ ಬೆಳಕಿಂಡಿ ‘ಕಾಂತಾರ್‌’

ಗುರುವಾರ , ಜೂಲೈ 18, 2019
29 °C

ಬದುಕಿನ ಬೆಳಕಿಂಡಿ ‘ಕಾಂತಾರ್‌’

Published:
Updated:
Prajavani

ಲವ್ವು–ಡವ್ವು, ಆ್ಯಕ್ಷನ್‌–ಕಾಮಿಡಿ ಎಂಬ ಸಿದ್ಧಸೂತ್ರ ಸಿನಿಮಾಗಳಿಗಿಂತ ಸಂಪೂರ್ಣ ಭಿನ್ನವಾಗಿರುವಂತಹ ಚಿತ್ರ ‘ಕಾಂತಾರ್‌’. ಯುವಜನತೆಯ ತವಕ–ತಲ್ಲಣಗಳನ್ನು ಅನಾವರಣಗೊಳಿಸುವುದರ ಜತೆಗೆ; ಶೇಕ್ಸ್‌ಪಿಯರ್‌ನ ‘ಎ ಶೋ ಮಸ್ಟ್‌ ಗೋ ಆನ್‌’ ಎಂಬ ಜನಪ್ರಿಯ ಮಾತಿನಂತೆ ಈ ಸಿನಿಮಾ ಮನುಷ್ಯನ ಬದುಕಿನ ವಿವಿಧ ಮಜಲುಗಳನ್ನು ಪ್ರೇಕ್ಷಕರಿಗೆ ದರ್ಶಿಸುತ್ತದೆ. ಪ್ಯಾರಲಲ್‌ ಸಿನಿಮಾ ಆಗಿದ್ದರೂ, ಗೋವನ್ನರ ಮನಗೆದ್ದ ಕೊಂಕಣಿ ಚಿತ್ರ ‘ಕಾಂತಾರ್‌’ ಆಗಸ್ಟ್‌ 9ರಿಂದ ಕರವಾಳಿ ಮಲ್ಟಿಪ್ಲೆಕ್ಸ್‌ಗಳಲ್ಲಿ ತೆರೆಕಾಣಲಿದೆ.

ಕೊಂಕಣಿ ಚಿತ್ರಗಳು ಕೂಡ ಕನ್ನಡ, ತೆಲುಗು, ತಮಿಳು ಸಿನಿಮಾಗಳಂತೆಯೇ ಶ್ರೀಮಂತ. ಮನರಂಜನೆಗಿಂತಲೂ ಚಿತ್ರದ ವಿಷಯವಸ್ತುವಿನ ಬಗ್ಗೆ ಹೆಚ್ಚು ಕೇಂದ್ರೀಕೃತವಾಗಿರುವ ಈ ಸಿನಿಮಾಗಳು ತುಳು ಚಿತ್ರಗಳಿಗಿಂತಲೂ ಒಂದು ಕೈ ಮೇಲು.

ವಿಭಿನ್ನ ಕಥಾಹಂದರದ ‘ಕಾಂತಾರ್‌’ ಸಿನಿಮಾ ರೆಗ್ಯುಲರ್‌ ಸಿನಿಮಾಗಳಿಗಿಂತ ಭಿನ್ನ. ಅದರಲ್ಲೂ ಪ್ಯಾರಲಲ್‌ ಸಿನಿಮಾ ಆಗಿ ಈ ಚಿತ್ರ ಮೂಡಿ ಬಂದಿರುವುದು ವಿಶೇಷ. ಚಿತ್ರದ ಮೇಕಿಂಗ್, ಕಲಾವಿದರ ಆಯ್ಕೆ, ಅಭಿನಯ, ಹಾಡುಗಳು, ಡಿಒಪಿ ಹೀಗೆ ಸಿನಿ ತಂತ್ರಜ್ಞಾನದ ಎಲ್ಲ ವಿಭಾಗದಲ್ಲೂ ಗುಣಮಟ್ಟ ಕಾಯ್ದುಕೊಂಡಿರುವ ಚಿತ್ರ ಇದು.

‘‘ಕಾಂತಾರ್‌’ ಸಿನಿಮಾ ಈಗಾಗಲೇ ಗೋವಾದಲ್ಲಿ ತೆರೆಕಂಡು ಸೂಪರ್‌ಹಿಟ್‌ ಆಗಿದೆ. ಸೂಪರ್‌ಹಿಟ್‌ ಎಂಬ ಪದವನ್ನು ನಾನು ಏಕೆ ಬಳಸುತ್ತಿದ್ದೇನೆ ಅಂದರೆ, ಅಲ್ಲಿ ಈಗಾಗಲೇ ಸಾಕಷ್ಟು ಹೌಸ್‌ಫುಲ್‌ ಶೋಗಳು ನಡೆದಿವೆ. ಚಿತ್ರದ ಕುರಿತಂತೆ ಗೋವನ್ನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಸಿನಿಮಾ ನೋಡಿದ ಜನರು, ಕೊಂಕಣಿ ಸಿನಿಮಾದಲ್ಲೇ ಇದು ಅತ್ಯುತ್ತಮ ಸಿನಿಮಾ ಎಂದು ಮೆಚ್ಚಿಕೊಂಡಿದ್ದಾರೆ. ‘ಕಾಂತಾರ್‌’ ಸಿನಿಮಾ ಜುಲೈನಲ್ಲಿ ಕೆನಡಾ, ಟೊರೊಂಟೊದಲ್ಲಿ ಪ್ರದರ್ಶನ ಕಾಣಲಿದೆ. ಅಂತೆಯೇ, ಸೆಪ್ಟೆಂಬರ್‌ನಲ್ಲಿ ವ್ಯಾಂಕೋವರ್‌, ಯುಕೆ, ಯುಎಇ, ಅಬುದಾಬಿ, ಬಾಂಬೆ, ಪೂನಾದಲ್ಲಿ ಶೋಗಳು ಬುಕ್‌ ಆಗಿವೆ. ಹಾಗಾಗಿ, ನಮ್ಮ ಚಿತ್ರ ಸೂಪರ್‌ಹಿಟ್‌ ಆಗಿದೆ’’ ಎನ್ನುತ್ತಾರೆ ಚಿತ್ರದ ನಾಯಕಿ ಎಸ್ತರ್‌ ನರೋನ್ಹಾ.

ನೀಲೇಶ್‌ ಮಾಲ್ಕರ್‌ ನಿರ್ದೇಶನದ ಈ ಸಿನಿಮಾಕ್ಕೆ ಜಾನೆಟ್‌ ನರೋನ್ಹಾ ಬಂಡವಾಳ ಹೂಡಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಜಾಕಿಶ್ರಾಫ್‌ ಈ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. 

‘‘ಕಾಂತಾರ್‌’ನ ವಿಶೇಷತೆ ಏನೆಂದರೆ, ನಾಯಕ–ನಾಯಕಿ ರೊಮ್ಯಾನ್ಸ್ ಮಾಡುವ, ಪ್ರೀತಿ–ಪ್ರೇಮ ಅಂತ ಓಡಾಡುವ ಸಾಮಾನ್ಯ ಕಥಾಹಂದರದ ಸಿನಿಮಾ ಇದಲ್ಲ. ಸಬ್ಜೆಕ್ಟ್‌ ಓರಿಯೆಂಟೆಡ್‌ ಚಿತ್ರವಿದು. ‘ಕಾಂತಾರ್‌’ ಅಂದರೆ ಹಾಡು ಎಂದರ್ಥ. ಹಾಡು ಅಂದರೆ ಕೇವಲ ಹಾಡುವುದಲ್ಲ. ಜೀವನವೇ ಒಂದು ಹಾಡು ಎಂಬುದು ಈ ಪದದ ಅಂತರಾರ್ಥ. ಶೇಕ್ಸ್‌ಪಿಯರ್‌ ಅವರು ‘ಎ ಶೋ ಮಸ್ಟ್‌ ಗೋ ಆನ್‌’ ಎಂದು ಹೇಳಿರುವಂತೆ, ಜೀವನ ನಮ್ಮಿಷ್ಟದ ಪ್ರಕಾರ ನಡೆಯುವಂತಹದ್ದಲ್ಲ. ಯಶಸ್ಸು, ಸೋಲು, ಸುಖ, ದುಃಖ ಇವೆಲ್ಲವೂ ನಾವು ಎಣಿಸಿದಂತೆಯೇ ಆಗಬೇಕು ಎಂಬುದು ತಪ್ಪು. ಜೀವನ ಹೇಗೆ ಬರುತ್ತದೆಯೋ ಆ ರೀತಿ ನಾವು ಬದುಕಬೇಕು. ಸಂತೋಷ ಬಂದಾಗ ಖುಷಿಯಿಂದ ಸ್ವಾಗತಿಸುವಂತೆ; ದುಃಖವನ್ನೂ ಸಮಚಿತ್ತದಿಂದ ಎದುರಿಸಬೇಕು. ಈ ರೀತಿಯ ಫಿಲಾಸಫಿಯನ್ನು ಹೇಳುವಂತಹ ಸಿನಿಮಾ ‘ಕಾಂತಾರ್‌’. ನಮ್ಮ ಮೇಲೆ, ದೇವರ ಮೇಲೆ ನಂಬಿಕೆ ಇದ್ದರೆ ಖಂಡಿತವಾಗಿಯೂ ನಮಗೆ ಒಳ್ಳೆಯದಾಗುತ್ತದೆ, ಯಶಸ್ಸು ಸಿಗುತ್ತದೆ. ಜೀವನದ ಬಗ್ಗೆ ಸಕಾರಾತ್ಮಕ ಧೋರಣೆ ಇರಬೇಕು ಎಂಬ ಸಂದೇಶ ನೀಡುತ್ತದೆ’ ಎನ್ನುತ್ತಾರೆ ಎಸ್ತರ್‌.

‘ಕಾಂತಾರ್‌’ ಚಿತ್ರ ಇಂದಿನ ಯುವಜನತೆಯನ್ನು ಪ್ರತಿನಿಧಿಸುವ ಚಿತ್ರ. ಸಿನಿಮಾ ನೋಡಿದ ಪ್ರತಿಯೊಬ್ಬ ಯುವಕ– ಯುವತಿ ಕೂಡ ಚಿತ್ರದ ಪಾತ್ರಗಳೊಂದಿಗೆ ತಮ್ಮನ್ನು ಹೋಲಿಕೆ ಮಾಡಿ ನೋಡಿಕೊಳ್ಳುತ್ತಾರಂತೆ.

‘ಈಗಿನ ಕಾಲದಲ್ಲಿ ಇಂತಹ ಸಿನಿಮಾಗಳು ಬರುವುದು ತುಂಬ ಮುಖ್ಯ ಅನಿಸುತ್ತದೆ. ವೇಗದ ಜಗತ್ತಿನಲ್ಲಿ ಎಲ್ಲರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಸ್ಪರ್ಧೆ ಎಂಬುದು ಉತ್ತುಂಗದಲ್ಲಿದೆ. ಸಣ್ಣ ಮಕ್ಕಳು ಶಾಲೆ ಹೋಗುವಾಗ ಆರಂಭಗೊಳ್ಳುವ ಸ್ಪರ್ಧೆ ಜೀವನದ ಕೊನೆವರೆಗೂ ಮುಂದುವರಿಯುತ್ತದೆ. ಜತೆಗೆ ಬೆಳೆಯುವವರನ್ನು ನೋಡಿ ಹೊಟ್ಟೆಕಿಚ್ಚು ಪಡುವುದು, ಕಾಲೆಳೆಯುವುದು ಎಲ್ಲ ವೃತ್ತಿಗಳಲ್ಲೂ ಕಾಣಬಹುದು. ಈಗಿನ ಕಾಲಕ್ಕೆ ತುಂಬ ಚೆನ್ನಾಗಿ ಹೊಂದುವ ಕಥಾಹಂದರದ ಸಿನಿಮಾ ಇದು. ‘ಕಾಂತಾರ್‌’ ಸಿನಿಮಾ ಜೀವನದ ಬಗ್ಗೆ ಮಾತನಾಡುತ್ತದೆ. ಸಂಬಂಧಗಳನ್ನು ವ್ಯಾಖ್ಯಾನಿಸುತ್ತದೆ. ರೆಗ್ಯುಲರ್‌ ಸಿನಿಮಾಗಳಿಗಿಂತ ಕಂಟೆಂಟ್‌ ಬೇಸ್ಡ್‌ ಸಿನಿಮಾ ಮಾಡಬೇಕು ಎಂಬುದು ನಿರ್ಮಾಪಕರ ಉದ್ದೇಶ ಆಗಿತ್ತು. ಜನ ನೋಡಿ ಇಷ್ಟಪಟ್ಟಿರುವುದು ನಮಗೆ ಖುಷಿ ತಂದಿದೆ’ ಎನ್ನುತ್ತಾರೆ ಪಂಚಭಾಷಾ ತಾರೆ ಎಸ್ತರ್‌.

ಗೋವನ್ನರ ಮನಗೆದ್ದ ‘ಕಾಂತಾರ್‌’ ಸಿನಿಮಾ ಆಗಸ್ಟ್‌ನಲ್ಲಿ ಕರಾವಳಿಯಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಆಗಸ್ಟ್‌ 9ರಿಂದ ಮಂಗಳೂರು ಮತ್ತು ಉಡುಪಿಯಲ್ಲಿರುವ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ತೆರೆಕಾಣಲಿದೆ. ಕರಾವಳಿ ಜನತೆ ಎಂದಿನಂತೆ ಪ್ರೋತ್ಸಾಹಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ ಅವರು.

Post Comments (+)