ಸೋಮವಾರ, ಆಗಸ್ಟ್ 8, 2022
22 °C

ಕತ್ರಿನಾ ಕೈಫ್: ಬಾಲಿವುಡ್‌ ‘ಕ್ಯಾಟ್‌‘ಗೆ 37

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಹಜ ಸೌಂದರ್ಯ ಮತ್ತು ತುಂಟ ಮುಗುಳ್ನಗೆಯಿಂದಲೇ ಮನಗೆದ್ದ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಗುರುವಾರ‌ 37ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

‘ಹಿಂದಿ ಭಾಷೆ ಚೆನ್ನಾಗಿ ಬರಲ್ಲ‘ ಎಂಬ ಹಣೆಪಟ್ಟಿಯ ನಡುವೆಯೂ ಚಿತ್ರರಂಗದಲ್ಲಿ ಭದ್ರ ನೆಲೆ ಕಂಡುಕೊಂಡ  ಕತ್ರಿನಾ, ಸದ್ಯ ಬಾಲಿವುಡ್‌ನ ಬಹು ಬೇಡಿಕೆಯ ಮತ್ತು ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ. ಬಾಲಿವುಡ್‌ನಲ್ಲಿ ಎಲ್ಲರಿಂದಲೂ ಪ್ರೀತಿಯಿಂದ ‘ಕ್ಯಾಟ್‌’ಎಂದು ಕರೆಸಿಕೊಳ್ಳುವ ಈ ಬೆಡಗಿ ಫಿಟ್‌ನೆಸ್‌ ಮತ್ತು ಚೆಲುವಿನಿಂದಾಗಿ ಇಂದಿನ ತಲೆಮಾರಿನ ನಟಿಯರ ಜತೆಗೂ ರೇಸ್‌ನಲ್ಲಿದ್ದಾರೆ.

ಅಗ್ನಿಪಥ್‌‌ ಸಿನಿಮಾದಲ್ಲಿ 'ಚಿಕ್ನಿ ಚಮೇಲಿ‘ ಹಾಡಿಗೆ ಸೊಂಟ ಬಳುಕಿಸಿ ಫೇಮಸ್‌ ಆದ ಕತ್ರಿನಾಗೆ, ಬಾಲಿವುಡ್‌ನಲ್ಲಿ ದೊಡ್ಡ ಸ್ನೇಹಿತರ ಬಳಗವಿದೆ. ಅವರಲ್ಲಿ ಸ್ನೇಹಿತರಾದ ವರುಣ್‌ ಧವನ್‌, ನೇಹಾ ಧೂಪಿಯಾ, ಅರ್ಜುನ್ ಕಪೂರ್‌, ಸೋಫಿಯಾ ಚೌಧರಿ ಶುಭ ಕೋರಿದ್ದಾರೆ.  

ಲಂಡನ್‌ ಟು ಮುಂಬೈ

ಲಂಡನ್‌ನಲ್ಲಿ ಮಾಡೆಲಿಂಗ್‌ ಮಾಡಿಕೊಂಡಿದ್ದ ಕತ್ರಿನಾ ಆಕಸ್ಮಿಕವಾಗಿ ನಿರ್ದೇಶಕ ಕೈಜಾದ್‌ ಗುಸ್ತಾದ್ ಕಣ್ಣಿಗೆ ಬಿದ್ದರು. 1999ರಲ್ಲಿ ತಮ್ಮ ನಿರ್ದೇಶನದ ‘ಬೂಮ್’‌ ಚಿತ್ರಕ್ಕೆ ಗುಸ್ತಾದ್‌, ಲಂಡನ್‌ನಿಂದ ಕತ್ರಿನಾಳನ್ನು ಬಾಲಿವುಡ್‌ಗೆ ಕರೆತಂದರು. ಚಿತ್ರ ನೆಲಕಚ್ಚಿದರೂ, ಗ್ಲಾಮರಸ್‌ ಲುಕ್‌ನಿಂದ ಎಲ್ಲರ ಗಮನ ಸೆಳೆದರು.

ಸುಲಭವಾಗಿ ಬಾಲಿವುಡ್‌ ಒಪ್ಪಿಕೊಳ್ಳದ ಕಾರಣ ಟಾಲಿವುಡ್‌ಗೆ ಹಾರಿದ ಈ ಬೆಡಗಿ, ಅಲ್ಲಿ ಕೆಲವು ಯಶಸ್ವಿ ತೆಲುಗು ಚಿತ್ರಗಳಲ್ಲಿ ಅಭಿನಯಿಸಿ, ಮುಂಬೈ ಮರಳಿದರು. ಸಲ್ಮಾನ್‌ ಖಾನ್ ಜತೆ ‘ಮೈನೆ ಪ್ಯಾರ್‌ ಕ್ಯೂಂ ಕಿಯಾ’ ‌ಮತ್ತು ಅಕ್ಷಯ್‌ ಕುಮಾರ್‌ ಜತೆ ‘ಹಮ್ಕೊ ದಿವಾನಾ ಕರ್‌ಗಯಾ’ ಚಿತ್ರದಲ್ಲಿ ನಟಿಸಿದ ನಂತರ ಆಕೆಯ ಅದೃಷ್ಟ ಖುಲಾಯಿಸಿತು. 

‘ಹೊರಗಿನವಳು‘ ಎಂಬ ಮೈಚಳಿ ಬಿಟ್ಟು ಬಾಲಿವುಡ್‌ ಮಂದಿ ಜತೆಗೆ ಬೆರೆತ ಕತ್ರಿನಾ, ಎಲ್ಲ ತಲೆಮಾರಿನ ನಾಯಕ ನಟರ ಜತೆ ನಟಿಸಿದ ನಾಯಕಿ ನಟಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲ, ಎಲ್ಲ ನಿರ್ದೇಶಕರು, ಚಿತ್ರ ನಿರ್ಮಾಪಕರು, ಬ್ಯಾನರ್‌ ಮತ್ತು ಪ್ರೊಡಕ್ಷನ್‌ ಹೌಸ್‌ಗಳಿಗೆ ಈ ‘ಚಿಕನಿ ಚಮೇಲಿ’‌ ಅಚ್ಚುಮೆಚ್ಚಿನ ನಟಿಯಾಗಿದ್ದಾರೆ. ‌

ರೊಮ್ಯಾಂಟಿಕ್‌ ಕಾಮಿಡಿ ಚಿತ್ರಗಳ ಟ್ರೆಂಡ್‌

ಅಕ್ಷಯ್‌ ಕುಮಾರ್ ಜತೆ ನಮಸ್ತೆ ಲಂಡನ್‌, ವೆಲ್‌ಕಮ್‌, ಸಿಂಗ್‌ ಈಸ್‌ ಕಿಂಗ್ ಮುಂತಾದ ರೊಮ್ಯಾಂಟಿಕ್‌ ಕಾಮಿಡಿ ಚಿತ್ರಗಳಲ್ಲಿ ನಟಿಸಿದರು. ರೇಸ್, ನ್ಯೂಯಾರ್ಕ್, ಮೇರಿ ಬ್ರದರ್‌ ಕಿ ದುಲ್ಹನ್‌, ಜಿಂದಗಿ ನಾ ಮಿಲೇಗಿ ದೋಬಾರಾ, ರಾಜನೀತಿ, ಅಜಬ್‌ ಪ್ರೇಮ್‌ ಕಿ ಗಜಬ್‌ ಕಹಾನಿ, ಧೂಮ್‌ 3, ಜಬ್ ತಕ್‌ ಹೈ ಜಾನ್‌, ಏಕ್‌ ಥಾ ಟೈಗರ್‌, ಬ್ಯಾಂಗ್‌–ಬ್ಯಾಂಗ್ ಚಿತ್ರಗಳು ಯಶಸ್ವಿಯಾದವು.

ಆದರೆ, ಸಲ್ಮಾನ್‌ ಜತೆ ನಟಿಸಿದ 'ಟೈಗರ್‌ ಜಿಂದಾ ಹೈ' ನಂತರ ಕತ್ರಿನಾ ಚಿತ್ರಗಳು ಸೋಲು ಕಾಣುತ್ತಿವೆ. ಶಾರುಖ್‌ ಖಾನ್‌ ಜತೆ ನಟಿಸಿದ 'ಜೀರೊ', ಸಲ್ಮಾನ್‌ ಜತೆಗಿನ 'ಭಾರತ್‌',  ಆಮೀರ್‌ ಖಾನ್‌ ಜತೆ ತೆರೆಹಂಚಿಕೊಂಡ 'ಥಗ್ಸ್‌ ಆಫ್‌ ಹಿಂದೂಸ್ತಾನ್‌' ಚಿತ್ರಗಳು ನೆಲಕಚ್ಚಿವೆ. ಸದ್ಯ ಅಕ್ಷಯ್‌ ಕುಮಾರ್‌ ಜತೆ ನಟಿಸಿದ 'ಸೂರ್ಯವಂಶಿ' ನಿರೀಕ್ಷೆ ಮೂಡಿಸಿದೆ. ರೋಹಿತ್‌ ಶೆಟ್ಟಿ ನಿರ್ದೇಶನದ ‘ಸೂರ್ಯವಂಶಿ’‌ ಕತ್ರಿನಾಳನ್ನು ಸೋಲಿನ ಸರಣಿಯಿಂದ ಹೊರತರಬಹುದು ಎನ್ನುವುದು ಎಲ್ಲರ ನಿರೀಕ್ಷೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು