ಶುಕ್ರವಾರ, ಆಗಸ್ಟ್ 7, 2020
25 °C

ನಿರ್ದೇಶನಕ್ಕೂ ಸೈ: ಕಾವ್ಯಾ

ಕೆ.ಎಂ.ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಸಿನಿಮಾ, ಕಿರುತೆರೆಯಲ್ಲಿ ಅಭಿನಯ ಮತ್ತು ಟಿ.ವಿ ಕಾರ್ಯಕ್ರಮಗಳ ನಿರೂಪಣೆಯಲ್ಲಿ ವೀಕ್ಷಕರ ಗಮನ ಸೆಳೆದ ನಟಿ, ನಿರೂಪಕಿ ಕಾವ್ಯಾ ಶಾಸ್ತ್ರಿ. ಕನ್ನಡದಲ್ಲಿ ಅಷ್ಟೇ ಅಲ್ಲ, ತಮಿಳು, ತೆಲುಗಿನಲ್ಲೂ ಕಿರುತೆರೆ ಇಂಡಸ್ಟ್ರಿಯಲ್ಲಿ ತಮ್ಮ ಅಭಿನಯ, ವಾಕ್ಚಾತುರ್ಯದಿಂದ ವೀಕ್ಷಕರನ್ನು ಮೋಡಿ ಮಾಡಿದ್ದಾರೆ.  ಜೀ ಕನ್ನಡದಲ್ಲಿನ ‘ಶುಭ ವಿವಾಹ’, ತೆಲುಗಿನ ‘ಪೆಳ್ಳಿನಾಟಿ ಪ್ರಮಾಣಲು’, ತಮಿಳಿನ ‘ಮಹಾಲಕ್ಷ್ಮಿ’ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ‘ಯುಗ’ ಸಿನಿಮಾದಲ್ಲಿ ದುನಿಯಾ ವಿಜಯ್‌ ಎದುರು ನಾಯಕಿಯಾಗಿ ನಟಿಸಿದ್ದ ಅವರು ಸಿನಿಮಾ ನಟನೆಯಿಂದ ವಿಮುಖರಾದರೂ ಕಿರುತೆರೆಯಲ್ಲೇ ಗಟ್ಟಿಯಾಗಿ ನೆಲೆ ನಿಂತಿದ್ದಾರೆ.

ಸದ್ಯ ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ರಮೇಶ್‌ ಅರವಿಂದ್‌ ನಿರ್ಮಾಣದ ‘ನಂದಿನಿ‘ ಧಾರಾವಾಹಿಯ ‘ದೇವಸೇನಾ’ ಪಾತ್ರದಲ್ಲಿ ಕಾವ್ಯಾ ಅವರ ಮುದ್ದುಮುದ್ದಾದ ಅಭಿಯನಕ್ಕೆ ವೀಕ್ಷಕರು ಮನಸೋತಿದ್ದಾರೆ. ಬಿಗ್‌ಎಫ್‌ಎಂನಿಂದ ಉತ್ತಮ ನಿರೂಪಕಿ, ಜೀ ಕನ್ನಡ ವಾಹಿನಿ, ಮಹಿಳಾಪುರ್‌ ಅಕಾಡೆಮಿಯಿಂದ ಉತ್ತಮ ನಟಿ ಪುರಸ್ಕಾರಗಳಿಗೂ ಅವರು ಭಾಜನರಾಗಿದ್ದಾರೆ.‌ ನಟನೆ, ನಿರೂಪಣೆಯ ಜತೆಗೆ ಈಗ ನಿರ್ದೇಶನದತ್ತ ಕಾವ್ಯಾ ಚಿತ್ತ ಹರಿಸಿದ್ದಾ‌ರೆ. 15 ವರ್ಷಗಳಿಂದ ಬಣ್ಣದ ಲೋಕದಲ್ಲಿ ನಡೆದು ಬಂದ ತಮ್ಮ ಹೆಜ್ಜೆಯ ಬಗ್ಗೆ ಸಿನಿಮಾ ಪುರವಣಿಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.

‘ನಾನು ತುಂಬಾ ಸಾದಾ, ಸೀದಾ ಹಾಗೂ ಸಿಂಪಲ್‌ ಹುಡುಗಿ. ಬಣ್ಣದ ಲೋಕಕ್ಕೆ ಬರುವ ಉದ್ದೇಶವೇ ಇರಲಿಲ್ಲ. ಆಕಸ್ಮಿಕವಾಗಿ ಬಂದವಳು ನಾನು. ಕಿರುತೆರೆ ಬಿಟ್ಟು ಎಲ್ಲಿಯೂ ಹೋಗಿಲ್ಲ. ‘ನಂದಿನಿ’ ಧಾರಾವಾಹಿಯ ‘ದೇವಸೇನಾ’ ಪಾತ್ರ ಎರಡು ಜನರೇಷನ್‌ ನಡುವಿನ ಸೇತುವೆಯಂತಿದೆ. ಗಟ್ಟಿತನವಿರುವ, ಪರಿಪೂರ್ಣವಾದ ಹಾಗೂ ತುಂಬಾ ಚಾಲೆಂಜಿಂಗ್‌ ಇರುವ ಪಾತ್ರವೂ ಹೌದು. ಹಾಗಾಗಿ ‘ದೇವಸೇನಾ’ ಪಾತ್ರದ ಆಫರ್ ನಿರಾಕರಿಸಲು ನನ್ನ ಮುಂದೆ ಕಾರಣಗಳೇ ಇರಲಿಲ್ಲ’ ಎಂದು ಮಾತು ವಿಸ್ತರಿಸುತ್ತಾ ಹೋದರು. 

ಸಿನಿಮಾದಲ್ಲಿ ಸೂಕ್ತ ಅವಕಾಶ ಸಿಗಲಿಲ್ಲವೇ ಎಂದರೆ, ‘ನಾನು ಮಾಡಲೇಬೇಕಾದ ಪಾತ್ರ ಸಿಗಲಿಲ್ಲ ಅಷ್ಟೆ. ಹಾಗಾಗಿ ನಾನು ‘ಯುಗ’ ಸಿನಿಮಾದ ನಂತರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಕಲಾವಿದರಿಗೆ ನಿರ್ದಿಷ್ಟ ಜಾಗವಿಲ್ಲ. ಕಲಾವಿದರು ನಿಂತ ನೀರಾಗಬಾರದೆಂದುಕೊಂಡವಳು ನಾನು. ನಾನು ಧರಿಸುವ ಬಟ್ಟೆಯಿಂದ ಹಿಡಿದು, ತಿನ್ನುವ ಆಹಾರದವರೆಗೂ ನನ್ನ ಇಷ್ಟದ್ದೇ ಆಗಿರಬೇಕು. ಒಲ್ಲದ್ದನ್ನು ಒಪ್ಪಿಕೊಳ್ಳುವ ಜಾಯಮಾನ ನನ್ನದಲ್ಲ. ನಾವು ನಾವಾಗಿರಬೇಕು’ ಎನ್ನುವುದು ಅವರ ನಿಲುವು.

‘ನಾನು ದೃಶ್ಯಕಲಾ ಪದವೀಧರೆ (ವಿಜುಯಲ್‌ ಆರ್ಟ್ಸ್‌). ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ ಇತ್ತು. ಒಂದು ವೇಳೆ ಬಣ್ಣದ ಬುದುಕಿಗೆ ಕಾಲಿಡದಿದ್ದರೆ ಚಿತ್ರಕಲಾವಿದೆ ಆಗಿರುತ್ತಿದ್ದೆ. ಈಗಲೂ ಬಿಡುವಿನ ವೇಳೆಯಲ್ಲಿ ರೇಖಾಚಿತ್ರಗಳನ್ನು (ಸ್ಕೆಚ್‌) ಬರೆಯುವುದೆಂದರೆ ನನಗೆ ತುಂಬಾ ಇಷ್ಟ. ಓದು, ಬರವಣಿಗೆಯಲ್ಲಿ ಹೆಚ್ಚು ಸಮಯ ಕಳೆಯುತ್ತೇನೆ. ನನಗೆ ಪ್ರವಾಸ, ಒಳ್ಳೆಯ ತಾಣಗಳ ಸುತ್ತಾಟ ಬಲು ಇಷ್ಟ. ಅದರಲ್ಲೂ ಬೀಚುಗಳೆಂದರೆ ಎಲ್ಲಿಲ್ಲದ ಇಷ್ಟ. ಬಿಡುವು ಸಿಕ್ಕಿತೆಂದರೆ ಉಡುಪಿಯತ್ತ ಬೀಚುಗಳಿಗೆ ಲಗ್ಗೆ ಇಟ್ಟುಬಿಡುತ್ತೇನೆ’ ಎಂದು ಹವ್ಯಾಸದ ಗುಟ್ಟು ಬಿಟ್ಟುಕೊಟ್ಟರು.

‘ನಮ್ಮ ತಂದೆ ಕೃಷ್ಣಮೂರ್ತಿ ಶಾಸ್ತ್ರಿ ಕೋಲಾರದವರು. ಹೈಸ್ಕೂಲಿನಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ತಾಯಿ ಆಶಾ ಶಾಸ್ತ್ರಿ ಶೃಂಗೇರಿಯವರು, ಪ್ರೈಮರಿ ಶಾಲೆ ಶಿಕ್ಷಕಿಯಾಗಿದ್ದರು. ಇಬ್ಬರೂ ನಿವೃತ್ತರಾಗಿದ್ದಾರೆ. ನಮ್ಮದು ಪುಟ್ಟ ಕುಟುಂಬ. ನಾನು ಮತ್ತು ಅಪ್ಪ, ಅಮ್ಮ ಅಷ್ಟೆ. ಫ್ರೆಂಡ್ಸ್‌ ಸರ್ಕಲ್‌ ಕೂಡ ಚಿಕ್ಕದು. ಪಾರ್ಟಿ, ಪಬ್ಬು, ಕ್ಲಬ್‌ ಕಲ್ಚರ್‌ ನನಗೆ ಇಷ್ಟವಿಲ್ಲ’ ಎಂದು ತಮ್ಮ ವೈಯಕ್ತಿಕ ಬದುಕಿನ ಬಗ್ಗೆಯೂ ಒಂದಿಷ್ಟು ಮಾಹಿತಿ ಹಂಚಿಕೊಂಡರು. 

‘ನಿರೂಪಣಾ ಕ್ಷೇತ್ರಕ್ಕೆ ಬಂದಿದ್ದು ಕೂಡ ತುಂಬಾ ಇಂಟರೆಸ್ಟಿಂಗ್‌ ಆಗಿದೆ. ಸ್ನೇಹಿತೆಯೊಬ್ಬಳು ಉದಯ ಟಿ.ವಿಗೆ ಆಡಿಷನ್‌ ಕೊಡಲು ಜತೆಯಲ್ಲಿ ಕರೆದುಕೊಂಡು ಹೋಗಿದ್ದಳು. ಅಲ್ಲಿ ರಿಸೆಪ್ಷನಿಸ್ಟ್‌ ಆಡಿಷನ್‌ ಕೊಡ್ತೀರಾ ಅಂಥ ನನಗೂ ಕೇಳಿದಾಗ ಕುತೂಹಲಕ್ಕೆ ಆಡಿಷನ್‌ ನೀಡಿದೆ. ಅದೃಷ್ಟವಶಾತ್‌ ಆಯ್ಕೆ ಕೂಡ ಆದೆ. ಅಲ್ಲಿಂದ ಉದಯ ಟಿ.ವಿ, ಯು2 ಚಾನೆಲ್‌ಗಳಲ್ಲಿ ಆ್ಯಂಕರಿಂಗ್‌ ಪಯಣ ಆರಂಭವಾಯಿತು. ಇದುವರೆಗೆ ಸುಮಾರು 2,500ಕ್ಕೂ ಹೆಚ್ಚು ಟಿ.ವಿ ಮತ್ತು ಸ್ಟೇಜ್‌ ಕಾರ್ಯಕ್ರಮ ನೀಡಿರಬಹುದು’ ಎಂದು ಕಾವ್ಯಾ ತಮ್ಮ ಬಣ್ಣದ ಬದುಕಿನ ಹಿಂದಣ ಹೆಜ್ಜೆ ಮೆಲುಕು ಹಾಕಿದರು.

ಗಾಸಿಪ್‌ಗಳೆಂದರೆ ನಿಮಗೆ ತುಂಬಾ ಸಿಟ್ಟು ಬರುತ್ತಾ ಎಂದು ಕೆಣಕಿದಾಗ ಅಷ್ಟೇ ತಣ್ಣನೆಯ ಸಿಟ್ಟಿನ ಉತ್ತರ ನೀಡಿದ ಅವರು, ‘ನನ್ನ ಬಗ್ಗೆ ಇದುವರೆಗೆ ಗಾಸಿಪ್‌ ಇಲ್ಲ ಎಂದುಕೊಂಡಿದ್ದೇನೆ. ಬಿಗ್‌ಬಾಸ್‌ ಕಾರ್ಯಕ್ರಮದ ನಂತರ ಕೆಲವು ದಿನಗಳ ಕಾಲ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಅದಕ್ಕೆ ಕೆಲವರು ಕಾವ್ಯಾ ಶಾಸ್ತ್ರಿ ಮದುವೆಯಾಗಿ ಹೋಗಿದ್ದಾರೆ ಎಂಬ ಪುಕಾರು ಹುಟ್ಟಿಸಿದರು. ಆದರೆ, ಆಗ ನಾನು ತಮಿಳು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದೆ’ ಎನ್ನುವ ಸಮಜಾಯಿಷಿ ನೀಡಿದರು.

‘ನನಗೆ ನೆಗೆಟಿವ್‌  ಸುದ್ದಿ ಇಷ್ಟವಾಗುವುದಿಲ್ಲ. ನನ್ನ ಪರ್ಫಾಮೆನ್ಸ್‌ ಬಗ್ಗೆ ಯಾರು ಬೇಕಾದರೂ ಮಾತನಾಡಲಿ. ವೈಯಕ್ತಿಕವಾಗಿ, ಅಸಭ್ಯವಾಗಿ ಮಾತನಾಡಿದರೆ ನಾನು ಸಹಿಸಿಕೊಳ್ಳುವವಳಲ್ಲ. ಆ ರೀತಿ ನಡೆದುಕೊಂಡವರಿಗೆ, ಸೋಷಿಯಲ್‌ ಮೀಡಿಯಾದಲ್ಲಿ ಸ್ಟೇಟಸ್‌ ಹಾಕಿದವರಿಗೆ ತಕ್ಕ ಉತ್ತರವನ್ನು ಮಾತು ಮತ್ತು ಕೃತಿ ಮೂಲಕವೇ ಕೊಟ್ಟು ಬಂದಿದ್ದೀನಿ. ಗಾಸಿಪ್‌, ನೆಗೆಟಿವ್‌ ಸುದ್ದಿಗಳ ಮೂಲಕ ಚಳಿ ಕಾಯಿಸಿಕೊಳ್ಳುವಂತಹ ಬುದ್ಧಿಯವಳಲ್ಲ ನಾನು. ಅಂತಹ ಫೇಮು, ಪಬ್ಲಿಸಿಟಿಯೂ ಬೇಕಾಗಿಲ್ಲ. ಬೇರೆಯವರು ನನ್ನ ವೈಯಕ್ತಿಕ ಬದುಕಿನಲ್ಲಿ ಇಣುಕುವುದು ಇಷ್ಟವಾಗುವುದಿಲ್ಲ’ ಎಂದು ತಮ್ಮ ವಿರುದ್ಧ ಗಾಸಿಪ್‌ ಹುಟ್ಟು ಹಾಕಿದವರಿಗೂ ಖಡಕ್‌ ಉತ್ತರ ನೀಡಿದ್ದಾರೆ.

ಸಂಸಾರದ ಬಗ್ಗೆ ಕೇಳಿದಾಗ, ‘ಮದುವೆ ಯೋಚನೆ ಸದ್ಯಕ್ಕಿಲ್ಲ. ಈಗ ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್‌ ಪೂರ್ಣಗೊಳಿಸಬೇಕು. ನನ್ನ ದೃಷ್ಟಿಯಲ್ಲಿ ಮದುವೆ ಎನ್ನುವುದು ವಯಸ್ಸಿಗೆ ಸಂಬಂಧಿಸಿದಲ್ಲ, ಮನಸಿಗೆ ಸಂಬಂಧಿಸಿದ್ದು. ಎರಡೂ ಮನೆಗಳ ಜನರ ಭಾವನೆಗಳನ್ನು ಗೌರವಿಸುವುದು, ಸಂಬಂಧ‌ ಬೆಸೆಯುವ ದೊಡ್ಡ ಜವಾಬ್ದಾರಿ ಎಂದುಕೊಂಡಿದ್ದೀನಿ. ವಯಸ್ಸಾಗೋಯ್ತು ಎನ್ನುವ ಒತ್ತಡಕ್ಕೆ ಮದುವೆಯಾಗಬಾರದು. ಇದು ನನ್ನ ನಿಲುವು’.

ಸಿನಿಮಾ ನಿರ್ದೇಶನದ ಕನಸಿದೆ

ರವಿಚಂದ್ರನ್‌ ಅವರ ಜತೆಗೆ ಐದಾರು ವರ್ಷಗಳ ಕಾಲ ಸ್ಕ್ರಿಪ್ಟ್‌ ರೈಟರ್‌ ಆಗಿ ಕೆಲಸ ಮಾಡಿದೆ. ಅವರು ಯಾವಾಗಲೂ ಒಂದು ಮಾತು ಹೇಳುತ್ತಿರುತ್ತಾರೆ, ‘ನಿರ್ದೇಶಕರಾಗಲು ಬರೀ 10 ಪರ್ಸೆಂಟ್‌ ಪ್ರತಿಭೆ ಇದ್ದರೆ ಸಾಕು, ಆದರೆ, ಕಾಮನ್‌ಸೆನ್ಸ್‌ ಅನ್ನೋದು 90 ಪರ್ಸೆಂಟ್‌ ಇರಲೇಬೇಕು’ ಎನ್ನುತ್ತಾರೆ. ಇದು ಎಷ್ಟೊಂದು ನಿಜ ಅಲ್ವೆ ಎನ್ನುತ್ತಾರೆ ಕಾವ್ಯಾ. ಲೇಖಕ ನಾಗರಾಜ ವಸ್ತಾರೆ ಅವರ ‘ಬೋರಲು’ ಸಣ್ಣಕಥೆ ಆಧರಿಸಿ ಒಂದು ಶಾರ್ಟ್‌ ಮೂವಿ ನಿರ್ದೇಶಿಸಿದ್ದೇನೆ. ಇದು ಅಂತರರಾಷ್ಟ್ರೀಯ ಚಿತ್ರೋತ್ಸವ ಸ್ಪರ್ಧೆಗೆ ಹೋಗಿದೆ. ಇನ್ನೊಬ್ಬ ಲೇಖಕರ ಸಣ್ಣಕಥೆ ಆಧರಿಸಿ ಮತ್ತೊಂದು ಶಾರ್ಟ್‌ ಮೂವಿ ನಿರ್ದೇಶಿಸುತ್ತಿದ್ದೇನೆ. ಅದು ಮುಂದೆ ಸಿನಿಮಾ ಆಗಿ ರೂಪಾಂತರವಾಗುವ ನಿರೀಕ್ಷೆ ಇದೆ. ಹಾಗಾಗಿ ಆ ಬಗ್ಗೆ ಹೆಚ್ಚಿನ ವಿವರ ನೀಡಲಾರೆ. ಸದ್ಯ ವೆಬ್‌ ಸಿರೀಸ್‌ನ ಪ್ರಾಜೆಕ್ಟ್‌ ಒಂದನ್ನು ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕಿಯಾಗಿ ಸಿನಿಮಾ ನಿರ್ದೇಶಿಸುತ್ತೇನೆ ಎನ್ನುವ ಕನಸುಗಳನ್ನು ತೆರೆದಿಟ್ಟರು ಕಾವ್ಯಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು