ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್‌ ಲಕ್ ‘ಕೀರ್ತಿ ಸುರೇಶ್ ’ ಅಲ್ಲಲ್ಲ... ಸಾಖಿ

Last Updated 10 ನವೆಂಬರ್ 2019, 19:35 IST
ಅಕ್ಷರ ಗಾತ್ರ

ಹತ್ತಾರು ವರ್ಷಗಳ ಹಿಂದೆ ನ್ಯೂಸ್‌ ಪೇಪರ್‌ನಲ್ಲಿ ಬಂದ ಇಬ್ಬರು ಮಹಿಳಾ ಶಾರ್ಪ್‌ಶೂಟರ್‌ಗಳ ಸುದ್ದಿ ನೋಡಿ, ‘ಇಂತವರ ಬಗ್ಗೆ ನಾನೂ ಸಿನಿಮಾ ಮಾಡಬೇಕು’ ಎಂದು ಅಂದುಕೊಂಡಿದ್ದನಿರ್ದೇಶಕ ನಾಗೇಶ್ ಕುಕುನೂರ್ ಕಡೆಗೂ ತಮ್ಮ ಆಸೆಯನ್ನು ‘ಗುಡ್ ಲಕ್ ಸಾಖಿ’ ಸಿನಿಮಾದ ಮೂಲಕ ಈಡೇರಿಸಿಕೊಂಡಿದ್ದಾರೆ.

‘ಗುಡ್ ಲಕ್ ಸಾಖಿ’ ಸಿನಿಮಾವು ಉತ್ತರಭಾರತದ ಸಣ್ಣ ಗ್ರಾಮವೊಂದರ ಯುವತಿ ಗನ್ ಹಿಡಿದು ಶಾರ್ಪ್ ಶೂಟರ್ ಆದ ಯುವತಿಯ ಯಶೋಗಾಥೆಯ ಕಥಾಹಂದರವನ್ನು ಹೊಂದಿದೆ.ಸಿನಿಮಾದಲ್ಲಿ ಗನ್ ಹಿಡಿದಿರುವುದು‘ಮಹಾನಟಿ’ ಖ್ಯಾತಿಯ ನಟಿ ಕೀರ್ತಿ ಸುರೇಶ್.

ಸಿನಿಮಾದ ಶೇಕಡ 60ರಷ್ಟು ಚಿತ್ರೀಕರಣವು ಮುಕ್ತಾಯವಾಗಿದ್ದು ಈ ತಿಂಗಳ ಅಂತ್ಯದೊಳಗೆ ಉಳಿದ ಭಾಗವೂ ಪೂರ್ಣಗೊಳ್ಳಲಿದೆ. ಕೀರ್ತಿ ಜೊತೆಯಲ್ಲಿ ಆದಿ ಪಿನಿಶೆಟ್ಟಿ ಮತ್ತು ಜಗಪತಿ ಬಾಬು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು 2020ರ ಪ್ರಾರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ನಾಗೇಶ್ ಕುಕುನೂರ್ ಅವರು ‘ಹೈದರಾಬಾದ್ ಬ್ಲೂಸ್’, ‘ಇಕ್ಬಾಲ್’, ‘ಡೋರ್’, ‘ಬಾಲಿವುಡ್ ಕಾಲಿಂಗ್’ ಸೇರಿದಂತೆ ಹಲವು ಚಿತ್ರಗಳು ನಿರ್ದೇಶಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಗುಡ್ ಲಕ್ ಸಾಖಿ’ ಅವರ ಮೊದಲ ತೆಲುಗು ನಿರ್ದೇಶನದ ಸಿನಿಮಾ ಆಗಿದೆ. ಈಚೆಗೆ ಅವರು ಹೈದರಾಬಾದ್‌ನಲ್ಲಿ ಚಿತ್ರದ ಬಗ್ಗೆ ಮಾತನಾಡಿದ್ದರು.

‘ನಾನು ಮೂಲತಃ ತೆಲುಗು ಭಾಷಿಕರ ಕುಟುಂಬಕ್ಕೆ ಸೇರಿದವ. ಆಂಧ್ರಪ್ರದೇಶದಲ್ಲಿಯೇ ನಾನು ನನ್ನ ಸಾಕಷ್ಟು ಜೀವನ ಕಳೆದಿದ್ದೇನೆ.ಸ್ವಲ್ಪ ದಿನ ಹೈದರಾಬಾದ್‌ನಲ್ಲೂ ಇದ್ದು ನಂತರ ಬೇರೆ ಬೇರೆ ಪ್ರದೇಶಗಳಿಗೆ ಹೋದೆ. ಬೇರೆ ಬೇರೆ ಕಾರಣಗಳಿಂದಾಗಿ ತೆಲುಗು ಭಾಷೆಯಲ್ಲಿ ಬರೆಯಲು ಹಾಗೂ ಓದಲು ನನಗೆ ಬರುವುದಿಲ್ಲ. ಆದರೆ, ಮಾತನಾಡಬಲ್ಲೆ’ ಎಂದು ನಾಗೇಶ್ ಹೇಳಿದ್ದಾರೆ.

‘ಹೆಸರಿಗಾಗಿ ನಾನು ಸಿನಿಮಾ ಮಾಡುವುದಿಲ್ಲ. ಆ ಸಿನಿಮಾದಲ್ಲಿ ಉತ್ತಮ ಸಂದೇಶ ಇರಬೇಕು. ನಾನು ಮಾಡುವ ಸಿನಿಮಾಗಳು ನನ್ನ ಕಡೆಯಿಂದ ಪರ್ಫೆಕ್ಟ್ ಆಗಿರಬೇಕು’ ಎಂಬ ಬಯಕೆಯುಳ್ಳ ಅವರು ಈ ಸಿನಿಮಾದ ಪ್ರೇರಣೆ ಬಗ್ಗೆ ಮಾತನಾಡಿದ್ದಾರೆ. ‘ಇಪ್ಪತ್ತು ವರ್ಷಗಳ ಹಿಂದಿನ ಕಥೆಯದು. ನ್ಯೂಸ್‌ ಪೇಪರ್‌ ಒಂದರಲ್ಲಿ, ಉತ್ತರ ಭಾರತದ ಸಣ್ಣ ಗ್ರಾಮವೊಂದರ ಇಬ್ಬರು ಮಹಿಳಾ ಶಾರ್ಪ್ ಶೂಟರ್‌ಗಳ ಬಗ್ಗೆ ಸುದ್ದಿ ನೋಡಿದ್ದೆ. ‘ಸಾಂದ್ ಕಿ ಆಂಕ್’ ಸಹ ಅವರ ಬಗ್ಗೆಯೇ ರೂಪಿತವಾಗಿರುವ ಸಿನಿಮಾ. ಎರಡು ದಶಕದ ಹಿಂದೆ ಮಹಿಳೆಯೊಬ್ಬಳು ಗನ್ ಹಿಡಿಯುವುದೆಂದರೆ ಸಾಧಾರಣ ವಿಚಾರವಾಗಿರಲಿಲ್ಲ. ಆಗಿನಿಂದಲೂ ನಾನು ಶಾರ್ಪ್ ಶೂಟಿಂಗ್ ಬಗ್ಗೆ ಸಿನಿಮಾ ಮಾಡಬೇಕೆನ್ನುವ ಮನಸ್ಸಾಯಿತು. ಅದು ಈಗ ಸಾಧ್ಯವಾಗಿದೆ’ ಎನ್ನುತ್ತಾರೆ.

ಕೀರ್ತಿ ಸುರೇಶ್ ಅವರ ನಟನೆ ಬಗ್ಗೆ ಹಾಡಿಹೊಗಳಿರುವ ಅವರು, ‘ಕೀರ್ತಿ ಅವರು ನಟಿಸಿದ ‘ಮಹಾನಟಿ’ ಸಿನಿಮಾ ನೋಡಿದ್ದೆ. ಸಾಕಷ್ಟು ಮಹಿಳೆಯರು ಸಾವಿತ್ರಿ ರೀತಿಯೇ ಡ್ರೆಸ್ ಮಾಡಿಕೊಂಡು ಚಿತ್ರಮಂದಿರಗಳಿಗೆ ಹೋಗುತ್ತಿದ್ದದ್ದನ್ನೂ ಕಂಡಿದ್ದೆ. ನನ್ನ ಸಿನಿಮಾ ತಂಡವು ಕೀರ್ತಿ ಹೆಸರನ್ನು ಈ ಸಿನಿಮಾಕ್ಕೆ ತಿಳಿಸಿತು. ‘ಮಹಾನಟಿ’ಯಲ್ಲಿ ಅವರ ಅಭಿನಯ ನೋಡಿದ್ದರಿಂದ ಮರು ಮಾತನಾಡದೇ ಅವರನ್ನೇ ನಾಯಕಿಯಾಗಿ ಸೆಲೆಕ್ಟ್ ಮಾಡಿದೆ’ ಎಂದರು.

‘ಕೀರ್ತಿ, ನಟನೆ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಾರೆ. ನಟನೆಯ ಬಗ್ಗೆ ಸದಾ ಮುಕ್ತವಾಗಿ ಚರ್ಚಿಸುತ್ತಾರೆ. ತನ್ನ ಅಭಿನಯದಲ್ಲಿ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕೇ ಅಥವಾ ಇನ್ನೂ ಉತ್ತಮ ಪಡಿಸಿಕೊಳ್ಳಬೇಕಾ ಎಂಬುದನ್ನು ನೇರವಾಗಿ ಕೇಳುತ್ತಾರೆ’ ಎಂದು ಹೊಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT