ಬುಧವಾರ, ಜನವರಿ 27, 2021
21 °C

ಕೆಜಿಎಫ್‌ ಚಾಪ್ಟರ್‌ – 2 ಟೀಸರ್‌ ಒಂದೇ ದಿನದಲ್ಲಿ 6 ಕೋಟಿಗೂ ಅಧಿಕ ಮಂದಿ ವೀಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್ ಚಾಪ್ಟರ್‌– 2 ಟೀಸರ್ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ 6 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಟೀಸರ್ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿರುವ ‘ಕೆಜಿಎಫ್‌ ಚಾಪ್ಟರ್‌ – 2’ ಚಿತ್ರದ ಟೀಸರ್‌ ಒಂದು ದಿನ ಮೊದಲೇ (ಜ.7ರಂದು ರಾತ್ರಿ) ಬಿಡುಗಡೆ ಆಗಿದೆ. ಮೊದಲು ಜನವರಿ 8ಕ್ಕೆ ಟೀಸರ್‌ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಜನವರಿ 8 ಚಿತ್ರ ನಾಯಕ ಯಶ್ ಹುಟ್ಟುಹಬ್ಬವೂ ಹೌದು. ಯೂಟ್ಯೂಬ್‌ನಲ್ಲಿ ಬಿಡುಗಡೆಗಾಗಿ ವೇಳಾಪಟ್ಟಿ ಸಿದ್ಧಪಡಿಸಿ ಲೋಡ್‌ ಆಗಿದ್ದ ಟೀಸರ್‌ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿಬಿಟ್ಟಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಹೊಂಬಾಳೆ ಫಿಲ್ಮ್ಸ್‌ ತಾನೇ ಅಧಿಕೃತವಾಗಿ ಟೀಸರ್‌ ಅನ್ನು ಬಿಡುಗಡೆ ಮಾಡಿತು.

ಟೀಸರ್‌ ಬಿಡುಗಡೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹೇಳಿಕೆ ನೀಡಿದ ನಟ ಯಶ್‌ ‘ಯಾರೋ ಪುಣ್ಯಾತ್ಮರು ಒಂದು ದಿನ ಮೊದಲೇ ಟೀಸರ್‌ ಅನ್ನು ಹರಿಯಬಿಟ್ಟಿದ್ದಾರೆ. ಅದರಿಂದ ಅವರಿಗೇನು ಸಿಕ್ಕಿದೆಯೋ ಗೊತ್ತಿಲ್ಲ. ಅವರಿಗೆ ಒಳ್ಳೆಯದಾಗಲಿ. ಟೀಸರ್‌ ಅನ್ನು ನೋಡಿ, ಹಾಗೆಯೇ ಸಿನಿಮಾವನ್ನೂ ಪ್ರೋತ್ಸಾಹಿಸಿ’ ಎಂದು ವಿನಂತಿಸಿದ್ದಾರೆ.

ಚಿತ್ರದ ಯೂನಿವರ್ಸಲ್‌ ಟೀಸರ್‌ (ಎಲ್ಲ ಸಂದರ್ಭ, ಭಾಷೆ ಪ್ರದೇಶಗಳಿಗೆ ತಲುಪುವ ರೀತಿ) ಸಿದ್ಧಪಡಿಸಲಾಗಿದೆ. ‘ಕೆಜಿಎಫ್‌ ಚಾಪ್ಟರ್‌ 2’ನಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌, ನಟಿ ರವೀನಾ ಟಂಡನ್ ಇದ್ದಾರೆ. ವಿಜಯ್‌ ಕಿರಗಂದೂರು ನಿರ್ಮಿಸಿರುವ ಈ ಚಿತ್ರವನ್ನು ಪ್ರಶಾಂತ್ ನೀಲ್‌ ನಿರ್ದೇಶಿಸಿದ್ದಾರೆ. ಚಿತ್ರ ಬಿಡುಗಡೆಯ ದಿನಾಂಕ ಇನ್ನಷ್ಟೇ ಗೊತ್ತಾಗಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು