ಬುಧವಾರ, ಜೂನ್ 29, 2022
24 °C

ಕನ್ನಡ ಚಿತ್ರರಂಗಕ್ಕೆ 'ಚಾರ್ಲಿ ಶೆಟ್ಟಿ'ಯನ್ನು ಪರಿಚಯಿಸಿದ ಕಿಚ್ಚ ಸುದೀಪ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

YouTube/777 Charlie

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಕನ್ನಡ ಚಿತ್ರರಂಗಕ್ಕೆ 'ಚಾರ್ಲಿ ಶೆಟ್ಟಿ'ಯನ್ನು ಪರಿಚಯಿಸಿದ್ದಾರೆ. ಚಾರ್ಲಿ ಶೆಟ್ಟಿಯ ಹೊಸ ಚಿತ್ರದ ಟೀಸರ್‌ ಹಂಚಿಕೊಂಡಿರುವ ಸುದೀಪ, 'ಯಾರಿಗೂ ಚಾರ್ಲಿ ಶೆಟ್ಟಿಯನ್ನು ಇಷ್ಟ ಪಡದೆ ಇರಲು ಸಾಧ್ಯವೇ ಇಲ್ಲ' ಎಂದು ಶ್ಲಾಘಿಸಿದ್ದಾರೆ.

ಜೊತೆಗೆ ರಕ್ಷಿತ್‌ ಶೆಟ್ಟಿ ಜನ್ಮ ದಿನಕ್ಕೆ ಶುಭ ಕೋರಿದ್ದಾರೆ. 777 ಚಾರ್ಲಿ ಸಿನಿಮಾದ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಮುದ್ದಾದ ನಾಯಿಯೇ ಚಾರ್ಲಿ. ರಕ್ಷಿತ್‌ ಶೆಟ್ಟಿ ಹೆಸರಿಗೆ ತಕ್ಕಂತೆ ಚಾರ್ಲಿಯನ್ನು ಸುದೀಪ ಶೆಟ್ಟಿಯನ್ನಾಗಿಸಿದ್ದಾರೆ. ಎರಡು ನಿಮಿಷದ ಟೀಸರ್‌ನಲ್ಲಿ ಮೀನಿನ ಮಾರುಕಟ್ಟೆಯಲ್ಲಿ ಬಂಗುಡೆ ಮೀನು ಕದಿಯುವ ಚಾರ್ಲಿಯ ತುಂಟತನ, ಮುಗ್ಧತೆ, ಏಕತಾನತೆಯ ಭಾವಗಳು ಅದ್ಭುತವಾಗಿ ಮೂಡಿಬಂದಿದೆ.

ರಕ್ಷಿತ್‌ ಶೆಟ್ಟಿಗೆ ಜನ್ಮದಿನದ ಉಡುಗೊರೆಯಾಗಿ ಚಿತ್ರತಂಡ 777 ಚಾರ್ಲಿ ಚಿತ್ರದ ಅಧಿಕೃತ ಟೀಸರ್‌ಅನ್ನು ಪರಂವಾ ಸ್ಟುಡಿಯೊಸ್‌ ಯೂಟ್ಯೂಬ್‌ ಖಾತೆಯಲ್ಲಿ ಬಿಡುಗಡೆ ಮಾಡಿದೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಟೀಸರ್‌ ಬಿಡುಗಡೆಯಾಗಿದೆ. ಶೀಘ್ರದಲ್ಲೇ ತೆರೆ ಕಾಣಲಿರುವ ಪಂಚಭಾಷೆಯ ಚಿತ್ರ 777 ಚಾರ್ಲಿ ಹೊಸ ಟ್ರೆಂಡ್‌ಅನ್ನು ಸೃಷ್ಟಿಸಿದೆ.

'ಅವನೇ ಶ್ರೀಮನ್ನಾರಾಯಣ' ಚಿತ್ರದ ನಂತರ ತೆರೆ ಕಾಣುತ್ತಿರುವ ರಕ್ಷಿತ್‌ ಶೆಟ್ಟಿ ನಟನೆಯ ಚಿತ್ರ ಇದಾಗಿದೆ. ಸಿಂಪಲ್‌ ಆಗಿ ಒಂದು ಲವ್‌ ಸ್ಟೋರಿ, ಉಳಿದವರು ಕಂಡಂತೆ, ಕಿರಿಕ್‌ ಪಾರ್ಟಿ ಚಿತ್ರಗಳನ್ನು ಇಷ್ಟ ಪಟ್ಟ ಅಭಿಮಾನಿಗಳು ಚಾರ್ಲಿಯ ಸಿನಿಮಾ ನೋಡಲು ಕಾತರದಿಂದ ಕಾದಿದ್ದಾರೆ. 

777 ಚಾರ್ಲಿ ಸಿನಿಮಾದಲ್ಲಿ ಸಂಗೀತಾ ಶೃಂಗೇರಿ, ರಾಜ್‌ ಬಿ ಶೆಟ್ಟಿ, ಬಾಬಿ ಸಿಂಹ, ಡ್ಯಾನಿಶ್ ಶೇಠ್‌ ಮತ್ತಿತರ ಪಾತ್ರವರ್ಗವಿದೆ. ಕಿರಣ್ ರಾಜ್‌ ಕೆ ರಚನೆ ಮತ್ತು ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು