ಶುಕ್ರವಾರ, ಸೆಪ್ಟೆಂಬರ್ 17, 2021
25 °C
ತೆರೆಗೆ ಬಂದ ಕೊಡವ ಸಿನಿಮಾ ‘ನಾಡ ಪೆದ ಆಶಾ’, ಮನಸೋತ ಪ್ರೇಕ್ಷಕರು

‘ನಾಡ ಪೆದ ಆಶಾ’ ತೆರೆಗೆ: ಹುತಾತ್ಮ ಯೋಧನ ಪತ್ನಿಯ ಜೀವನಗಾಥೆ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮೂರ್ನಾಡು (ಮಡಿಕೇರಿ): ಬಹುನಿರೀಕ್ಷೆಯ ಕೊಡವ ಸಿನಿಮಾ ‘ನಾಡ ಪೆದ ಆಶಾ’ ತೆರೆಗೆ ಬಂದಿದ್ದು, ಕೋವಿಡ್‌ನ ದುರಿತ ಕಾಲದಲ್ಲಿ ನಾಡಿಗೆ ಸಂದೇಶ ಹೊತ್ತುತಂದ ಚಿತ್ರ ಇದಾಗಿದೆ. ತಾಲ್ಲೂಕಿನ ಮೂರ್ನಾಡಿನ ಕೊಡವ ಸಮಾಜದಲ್ಲಿ ಸೋಮವಾರ ಮೊದಲ ದಿನದ ಪ್ರದರ್ಶನ ನಡೆಯಿತು. ಪ್ರೇಕ್ಷಕರು ಚಿತ್ರದ ಸಂದೇಶಕ್ಕೆ ಮನಸೋತರು.

ನುರಿತ ಹಾಗೂ ಹೊಸ ಕಲಾವಿದರ ತಂಡವು ಚಿತ್ರ ನಿರ್ಮಿಸಿದ್ದು, ಹುತಾತ್ಮ ಯೋಧನ ಪತ್ನಿ ಜೀವನಗಾಥೆಯನ್ನು ತೆರೆಗೆ ತರಲಾಗಿದೆ.

ಇದುವರೆಗೂ ಪ್ರಾದೇಶಿಕ ಕೊಡವ ಭಾಷೆಯಲ್ಲಿ ಅಂದಾಜು 20 ಚಿತ್ರಗಳು ತೆರೆಗೆ ಬಂದಿದ್ದು ಇದು 21ನೇ ಚಿತ್ರವಾಗಿದೆ. ಪ್ರಾದೇಶಿಕ ಭಾಷೆಯಲ್ಲಿ ಚಿತ್ರ ನಿರ್ಮಿಸಿ ಉತ್ತಮ ಸಂದೇಶದೊಂದಿಗೆ ಸ್ಥಳೀಯ ಆಚಾರ, ವಿಚಾರ ಹಾಗೂ ಸಂಸ್ಕೃತಿ ಉಳಿಸುವ ಪ್ರಯತ್ನಕ್ಕೆ ಚಿತ್ರತಂಡವು ಮುಂದಾಗಿರುವುದು ವಿಶೇಷ.

ನಾಗೇಶ್‌ ಕಾಲೂರು ಅವರ ‘ನಾಡ ಪೆದ ಆಶಾ’ ಕಾದಂಬರಿ ಆಧರಿಸಿ, ಕೊಟ್ಟಕತ್ತಿರ ಪ್ರಕಾಶ್‌ ಕಾರ್ಯಪ್ಪ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ.

ಹುತಾತ್ಮ ಯೋಧನ ಪತ್ನಿಯಾಗಿ ನೆಲ್ಲಚಂಡ ರಿಷಿ ಪೂವಮ್ಮ ಅವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಆಕೆ ಅಂಗನವಾಡಿ ಕಾರ್ಯಕರ್ತೆಯಾಗಿ ‘ಕಾವೇರಿ’ ಪಾತ್ರದ ಮೂಲಕ ಬದುಕಿನಲ್ಲಿ ಎದುರಾಗುವ ಕೌಟುಂಬಿಕ ಸವಾಲು, ಅತ್ತೆಯ ಅಬ್ಬರ ಎದುರಿಸುತ್ತಲೇ ಬದುಕು ಕಟ್ಟಿಕೊಳ್ಳುವ ಬಗೆ, ಶಾಂತಿ ಪಡೆಯಲ್ಲಿ ಪತಿ ಕರ್ತವ್ಯ ನಿರ್ವಹಿಸುವಾಗಲೇ ಹುತಾತ್ಮರಾದ ನೋವಿನ ನಡುವೆಯೇ ಮಹಿಳೆ ಸಮಾಜಮುಖಿ ಕೆಲಸದಲ್ಲಿ ತೊಡಗುವ ಕಥೆಯನ್ನು ಪ್ರಕಾಶ್‌ ಅವರು ಅತ್ಯಂತ ನಾಜೂಕಿನಿಂದ ತೆರೆಗೆ ತಂದಿದ್ದಾರೆ. ಕಾವೇರಿ ಸ್ವಂತ ಬದುಕಿನಲ್ಲಿ ನೋವುಂಡರೂ ಸೇವಾ ಕಾರ್ಯ ಬಿಡುವುದಿಲ್ಲ. ಕೊನೆಗೆ ಊರಿನ ಮಂದಿಯೇ ಅಕೆಯನ್ನು ಗೌರವಿಸಿ ಕೊಂಡಾಡುವ ಬಗೆ ಚಿತ್ರದಲ್ಲಿದೆ. ಕಾವೇರಿಯದ್ದೇ ಪ್ರಧಾನ ಪಾತ್ರ. ಅದರಲ್ಲಿ ನಾಯಕಿಯಾಗಿ ರಿಷಿ ಅವರು ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಿದ್ದಾರೆ.

ಯೋಧನ ಪಾತ್ರದಲ್ಲಿ ಬೊಳ್ಳಜಿರ ಬಿ. ಅಯ್ಯಪ್ಪ ಸಂಚಲನ ಮೂಡಿಸುತ್ತಾರೆ. ನಿರ್ದೇಶಕ ಪ್ರಕಾಶ ಅವರೂ ಬಣ್ಣ ಹಚ್ಚಿದ್ದಾರೆ. ಚಿತ್ರದುದ್ದಕ್ಕೂ ಅವರು ನಟನೆಯು ಮನಸೋಲುವಂತೆ ಮಾಡುತ್ತದೆ. ದ್ವಿತೀಯಾರ್ಧದಲ್ಲಿ ಕಾವೇರಿ ಪಾತ್ರದಲ್ಲಿ ಅನಿತಾ ಕಾರ್ಯಪ್ಪ ಅವರೂ ಗಮನ ಸೆಳೆಯುತ್ತಾರೆ. ಉಳಿದಂತೆ ಎಲ್ಲಾ ಪಾತ್ರಗಳೂ ಚಿತ್ರಕ್ಕೆ ಜೀವತುಂಬಿವೆ.

‘ಸಿನಿಮಾಕ್ಕೆ ಭಾಷೆ ಹಂಗಿಲ್ಲ; ಲಾಭದ ಉದ್ದೇಶಕ್ಕೂ ನಮ್ಮ ತಂಡ ಚಿತ್ರ ನಿರ್ಮಿಸಿಲ್ಲ. ಪ್ರಾದೇಶಿಕ ಭಾಷೆ ಉಳಿಸುವ ಪ್ರಯತ್ನದ ಭಾಗವಾಗಿ ಚಿತ್ರ ನಿರ್ಮಿಸಲಾಗಿದೆ. ಇದು ಕೊಡವ ಭಾಷೆಯ ಚಿತ್ರವಾಗಿದ್ದರೂ, ಬೇರೆ ಭಾಷಿಕರೂ ನೋಡುವ ಸಿನಿಮಾ. ಚಿತ್ರದ ತಿರುಳೇ ಹಾಗಿದೆ‘ ಎಂದು ನಿರ್ದೇಶಕ ಕೊಟ್ಟಕತ್ತಿರ ಪ್ರಕಾಶ್‌ ಹೇಳುತ್ತಾರೆ.

ಇನ್ನು ಕೊಡಗಿನಲ್ಲಿದ್ದ ಒಂದೊಂದೇ ಚಿತ್ರಮಂದಿರಗಳು ಬಾಗಿಲು ಮುಚ್ಚಿತ್ತಿವೆ. ಪ್ರಾದೇಶಿಕವಾಗಿ ನಿರ್ಮಾಣವಾದ ಚಿತ್ರಗಳ ಪ್ರದರ್ಶನಕ್ಕೆ ಕೊಡವ ಹಾಗೂ ಗೌಡ ಸಮಾಜಗಳೇ ವೇದಿಕೆ. ಈ ಚಿತ್ರಕ್ಕೆ ಜಿಲ್ಲೆಯ ವಿವಿಧ ಸಮಾಜಗಳು ಉಚಿತವಾಗಿ ಸಮಾಜಗಳನ್ನು ಒದಗಿಸುತ್ತಿರುವುದು ವಿಶೇಷ ಎಂದು ಚಿತ್ರತಂಡವು ತಿಳಿಸಿದೆ. ಜಿಲ್ಲೆಯ ವಿವಿಧ ಸಮಾಜಗಳಲ್ಲಿ ಈ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ನಮ್ಮ ತಂಡಕ್ಕೆ ಪ್ರೋತ್ಸಾಹಿಸಿ ಎಂದು ಕೋರಿದೆ.

ಮೂರ್ನಾಡಿನಲ್ಲಿ ಸಿನಿಮಾ ಬಿಡುಗಡೆ ಸಮಾರಂಭದಲ್ಲಿ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಫೋರಂನ ಅಧ್ಯಕ್ಷರೂ ಆಗಿರುವ (ನಿವೃತ್ತ) ಕರ್ನಲ್‌ ಸುಬ್ಬಯ್ಯ, ಸಾಹಿತಿ ನಾಗೇಶ್‌ ಕಾಲೂರು, ನಿರ್ಮಾಪಕಿ ಈರಮಂಡ ಹರಿಣಿ ವಿಜಯ್‌, ನೆರವಂಡ ಅನೂಪ್‌, ಅಶೋಕ್‌ ಅಯ್ಯಪ್ಪ, ಅರುಣ್‌ ಅಪ್ಪಚ್ಚು, ಪಾಣತ್ತಲೆ ಹರೀಶ್‌, ವಿಜು ತಿಮ್ಮಯ್ಯ ಮೊದಲಾದವರು ಹಾಜರಿದ್ದರು.

ಕೊಡಗರ ಸಿಪಾಯಿ, ಮಹಾವೀರ ಅಚ್ಚುನಾಯಕ, ನಾಡಮಣ್ಣೇ ನಾಡ ಕೂಳ್‌, ಮಂದಾರಪೂ, ನಾಬಯಂದಪೂ, ಜಡಿಮಳೆ, ಪೊಣ್ಣ್‌ರ ಮನಸ್ಸು, ನಿರೀಕ್ಷೆ, ಮಕ್ಕಡ ಮನಸ್ಸ್‌ ಸೇರಿದಂತೆ ಹಲವು ಚಿತ್ರಗಳು ಕೊಡವ ಭಾಷೆಯಲ್ಲಿ ಇದುವರೆಗೆ ಬಿಡುಗಡೆಗೊಂಡು ಸಿನಿ ರಸಿಕರ ಮನ ಗೆದ್ದಿವೆ. ಪ್ರಾದೇಶಿಕ ವಿಭಾಗದಲ್ಲಿ ಹಲವು ಚಿತ್ರಗಳಿಗೆ ರಾಜ್ಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳೂ ಲಭಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು