ಬುಧವಾರ, ಸೆಪ್ಟೆಂಬರ್ 22, 2021
23 °C

ಸೆ. 19ರಿಂದ ಮೈಸೂರಿನಲ್ಲಿ ‘ಮದಗಜ’ ಸಿನಿಮಾದ ಶೂಟಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಭರಾಟೆ’ ಸಿನಿಮಾದ ಬಳಿಕ ಶ್ರೀಮುರಳಿ ನಟಿಸುತ್ತಿರುವ ‘ಮದಗಜ’ ಚಿತ್ರ ಸಿನಿಪ್ರಿಯರ ಕುತೂಹಲದ ಕೇಂದ್ರಬಿಂದುವಾಗಿದೆ. ಲಾಕ್‌ಡೌನ್‌ಗೂ ಮುಂಚೆಯೇ ವಾರಾಣಸಿಯಲ್ಲಿ ಚಿತ್ರತಂಡ ಮೊದಲ ಹಂತದ ಶೂಟಿಂಗ್‌ ಪೂರ್ಣಗೊಳಿಸಿತ್ತು. ಅಲ್ಲಿ ಅಘೋರಿಗಳ ನಡುವೆ ಚಿತ್ರೀಕರಣ ನಡೆಸಲಾಗಿತ್ತು.

ಈಗ ಮೈಸೂರಿನಲ್ಲಿ ದ್ವಿತೀಯ ಹಂತದ ಶೂಟಿಂಗ್‌ಗೆ ಸಿದ್ಧತೆ ನಡೆಸಿದೆ. ಸೆಪ್ಟೆಂಬರ್‌ 19ರಿಂದ 25 ದಿನಗಳ ಕಾಲ ಶೂಟಿಂಗ್‌ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ. ಇದಾದ ಬಳಿಕ ಬೆಂಗಳೂರು ಮತ್ತು ಹೊಗೇನಕಲ್ ಜಲಪಾತ ಪ್ರದೇಶದ ಸುತ್ತಮುತ್ತ ಶೂಟಿಂಗ್‌ ನಡೆಸಲು ನಿರ್ಧರಿಸಿದೆ.

ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಎಸ್. ಮಹೇಶ್‌ ಕುಮಾರ್. ‘ಅಯೋಗ್ಯ’ ಚಿತ್ರದ ಬಳಿಕ ಅವರು ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಇದು. ಡಾರ್ಕ್‌ ಶೇಡ್‌ನಲ್ಲಿ ಸಾಗುವ ಕಥಾನಕ ಇದಾಗಿದೆ. ಭಾವುಕತೆಯ ಜೊತೆಗೆ ಕೌಟುಂಬಿಕ ಬಂಧವೂ ಇದರಲ್ಲಿ ಮಿಳಿತಗೊಂಡಿದೆಯಂತೆ.

ಮೈಸೂರಿನಲ್ಲಿ 18 ದಿನಗಳ ಕಾಲದ ಮಾತಿನ ಭಾಗದ ಶೂಟಿಂಗ್‌ ನಡೆಯಲಿದೆ. ಉಳಿದ ಏಳು ದಿನಗಳ ಕಾಲ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯಲಿದೆಯಂತೆ. ರಾಮ್‌–ಲಕ್ಷ್ಮಣ್‌ ಸಾಹಸ ನಿರ್ದೇಶನ ಮಾಡಲಿದ್ದಾರೆ. ಶ್ರೀಮುರಳಿ ಜೊತೆಗೆ ನಾಯಕಿ ಆಶಿಕಾ ರಂಗನಾಥ್‌ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕೋವಿಡ್‌–19 ಕಾಣಿಸಿಕೊಳ್ಳದಿದ್ದರೆ ಕಳೆದ ಏಪ್ರಿಲ್‌ನಲ್ಲಿಯೇ ಚಿತ್ರೀಕರಣ ಪೂರ್ಣಗೊಳಿಸಿ ಆಗಸ್ಟ್‌ನಲ್ಲಿ ಥಿಯೇಟರ್‌ಗೆ ಬರಲು ಚಿತ್ರತಂಡ ಯೋಜನೆ ರೂಪಿಸಿತ್ತು. ಕೊರೊನಾ ಸೋಂಕಿನ ಪರಿಣಾಮ ಶೂಟಿಂಗ್‌ ವಿಳಂಬವಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಚಿತ್ರೀಕರಣ ನಡೆಸಲು ಚಿತ್ರತಂಡ ಮುಂದಾಗಿದೆ. ಇಲ್ಲಿಯವರೆಗೆ ಚಿತ್ರದ ಶೇಕಡ 30ರಷ್ಟು ಶೂಟಿಂಗ್‌ ಪೂರ್ಣಗೊಂಡಿದೆಯಂತೆ.

ಇದಕ್ಕೆ ಬಂಡವಾಳ ಹೂಡಿರುವುದು ಉಮಾಪತಿ ಶ್ರೀನಿವಾಸ್‌ ಗೌಡ. ಚಿತ್ರದ ನಾಲ್ಕು ಹಾಡುಗಳಿಗೆ ರವಿ ಬಸ್ರೂರ್‌ ಸಂಗೀತ ಸಂಯೋಜಿಸಿದ್ದಾರೆ. ಚೇತನ್‌ ಕುಮಾರ್‌, ರವಿ ಬಸ್ರೂರ್‌, ಕಿನ್ನಾಲ್‌ ರಾಜ್‌ ಸಾಹಿತ್ಯ ರಚಿಸಿದ್ದಾರೆ. ನವೀನ್‌ಕುಮಾರ್‌ ಅವರ ಛಾಯಾಗ್ರಹಣವಿದೆ. ರಂಗಾಯಣ ರಘು, ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌. ಪೇಟೆ ತಾರಾಗಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು