ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್‌ ಕನ್ನಡ ಸಿನಿಮಾ ನಾಯಕಿ

Last Updated 5 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ಪಡ್ಡೆಹುಲಿ’ ನಾನು ನಿರೀಕ್ಷಿಸಿದ ಮಟ್ಟಕ್ಕೆ ಥಿಯೇಟರ್‌ನಲ್ಲಿ ಘರ್ಜಿಸಲಿಲ್ಲ. ಹಾಗೆಂದು ನಾನು ಎದೆಗುಂದಿಲ್ಲ. ನವಿರಾದ ಪ್ರೇಮ ಕಥೆಯೊಂದಿಗೆ ಮತ್ತೆ ಜನರ ಮುಂದೆ ಬರಲು ಉತ್ಸುಕನಾಗಿದ್ದೇನೆ’ ಎಂದ ನಟ ಶ್ರೇಯಸ್‌ ಮಂಜು, ಪಕ್ಕದಲ್ಲಿದ್ದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯಸ್‌ ಅವರತ್ತ ನೋಟ ನೆಟ್ಟರು.

ಕನ್ನಡ ಅರ್ಥ ಮಾಡಿಕೊಂಡವರಂತೆ ಪ್ರಿಯಾ ಕೂಡ ಕಣ್ಣರಳಿಸಿ ನಕ್ಕರು. ನಿರ್ಮಾಪಕ ಕೆ. ಮಂಜು ಅವರು ತಮ್ಮ ಬ್ಯಾನರ್‌ನಡಿ ಪುತ್ರನ ಎರಡನೇ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರಕ್ಕೆ ‘ವಿಷ್ಣು ಪ್ರಿಯ’ ಎಂದು ಹೆಸರಿಡಲಾಗಿದೆ.

ಮುಂದಿನ ವಾರದಿಂದ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಆರಂಭಿಸುವ ತಯಾರಿಯಲ್ಲಿರುವ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದಿತ್ತು.

‘ನನ್ನ ಮೊದಲ ಸಿನಿಮಾ ನೋಡಿದ ಚಿತ್ರರಂಗದ ಹಲವರು ಕ್ಯೂಟ್‌ ಆದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ಸಲಹೆ ನೀಡಿದ್ದರು. ಹಾಗಾಗಿಯೇ, ಹಲವು ಕಥೆಗಳನ್ನು ಕೇಳಿದೆ. ಕೊನೆಗೆ, ಹುಬ್ಬಳ್ಳಿಯ ಸಿಂಧುಶ್ರೀ ಎಂಬುವರು ಹೇಳಿದ ಕಥೆ ಇಷ್ಟವಾಯಿತು’ ಎಂದು ವಿವರಿಸಿದರು ಶ್ರೇಯಸ್‌.

‘ವಿಷ್ಣು ಪ್ರಿಯ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿರುವ ಖುಷಿ ಪ್ರಿಯಾ ವಾರಿಯರ್‌ ಅವರ ಮೊಗದಲ್ಲಿತ್ತು. ‘ಕನ್ನಡ ಕಲಿಯಲು ಪ್ರಯತ್ನಿಸುತ್ತಿರುವೆ. ಕಣ್ಸನ್ನೆಗೆ ಈ ಸಿನಿಮಾದಲ್ಲಿಯೂ ಅವಕಾಶ ಸಿಕ್ಕಿದರೆ ಅದನ್ನು ತಪ್ಪಿಸಿಕೊಳ್ಳುವುದಿಲ್ಲ’ ಎಂದು ನಕ್ಕರು.

ಮಲಯಾಳ, ತಮಿಳಿನ ಹಲವು ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ವಿ.ಕೆ. ಪ್ರಕಾಶ್‌ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ‘ಮಂಜು ಅವರು ಕಥೆಯ ಎಳೆಯೊಂದನ್ನು ಮಾತ್ರ ಹೇಳಿದ್ದರು. ಅದು ತುಂಬಾ ಇಷ್ಟವಾಯಿತು. 90ರ ದಶಕದಲ್ಲಿ ನಡೆಯುವ ಕಥೆ ಇದು’ ಎಂದು ಮಾಹಿತಿ ನೀಡಿದರು.

ನಿರ್ಮಾಪಕ ಕೆ. ಮಂಜು, ‘ನಾನು ವಿಷ್ಣುವರ್ಧನ್‌ ಅವರ ಆಪ್ತ ಬಳಗದಲ್ಲಿದ್ದೆ. ಅದಕ್ಕಾಗಿ ಈ ಶೀರ್ಷಿಕೆ ಇಟ್ಟಿರುವೆ. ನೈಜ ಘಟನೆ ಆಧಾರಿತ ಸಿನಿಮಾ ಇದು. ಮಲಯಾಳ, ತಮಿಳು, ತೆಲುಗಿನಲ್ಲಿಯೂ ಇದನ್ನು ನಿರ್ಮಿಸುವ ಆಲೋಚನೆಯಿದೆ’ ಎಂದು ವಿವರಿಸಿದರು.

ಚಿತ್ರದ ನಾಲ್ಕು ಹಾಡುಗಳಿಗೆ ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿದ್ದು, ಗೋಪಿ ಸುಂದರ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿನೋದ್‌ ಭಾರ್ತಿ ಅವರದು. ಸುಚೇಂದ್ರಪ್ರಸಾದ್‌, ಅಚ್ಯುತ್‌ಕುಮಾರ್‌, ಅಶ್ವಿನಿ ಗೌಡ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT