ಇದು ‘ಮಂಡ್ಯಹೈದ’ನ ಕಥೆ: ಅಭಯ್ ಚಂದ್ರಶೇಖರ್ ಹೊಸ ಸಿನಿಮಾದಲ್ಲಿ ಏನಿದೆ?

‘ಮನಸಾಗಿದೆ’ ಚಿತ್ರದ ಮುಖಾಂತರ ಚಂದನವನಕ್ಕೆ ಕಾಲಿಟ್ಟಿದ್ದ ಅಭಯ್ ಚಂದ್ರಶೇಖರ್ ಇದೀಗ ‘ಮಂಡ್ಯಹೈದ’ನಾಗಲು ಸಜ್ಜಾಗಿದ್ದಾರೆ. ಎಸ್. ಚಂದ್ರಶೇಖರ್ ನಿರ್ಮಾಣದ ಐದನೇ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು.
‘ತನ್ನ ಮಗನನ್ನೇ ನಾಯಕ ನಟನನ್ನಾಗಿ ಮಾಡಿ ನಾನು ನಿರ್ಮಾಣ ಮಾಡುತ್ತಿರುವ ಎರಡನೇ ಚಿತ್ರವಿದು. ಮಂಡ್ಯ ನನ್ನ ಊರು. ಚಿತ್ರದ ಕಥಾಹಂದರವೂ ಹಳ್ಳಿಯ ಕಥೆಯನ್ನು ಒಳಗೊಂಡಿದ್ದು, ಮಂಡ್ಯದಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ವಿ.ಶ್ರೀಕಾಂತ್ ನಿರ್ದೇಶನದ ಈ ಚಿತ್ರಕ್ಕೆ ಥ್ರಿಲ್ಲರ್ ಮಂಜು ಅವರು ಎರಡು ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಲಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ತಂಡದ 15 ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರೀತಿ, ಸ್ನೇಹದ ಕಥಾಹಂದರ ಹೊಂದಿರುವ ಈ ಚಿತ್ರವು ಮಾಸ್ ಸಬ್ಜೆಕ್ಟ್ ಒಳಗೊಂಡಿದೆ’ ಎನ್ನುತ್ತಾರೆ ಚಂದ್ರಶೇಖರ್.
ನಿರ್ದೇಶನ ಶ್ರೀಕಾಂತ್ ಮಾತನಾಡಿ, ‘ನನ್ನ ನಿರ್ದೇಶನದ ಎರಡನೇ ಚಿತ್ರವಿದು. ಕಮರ್ಷಿಯಲ್ ಎಂಟರ್‌ಟೈನರ್ ಹಾಗೂ ಪ್ರೇಮಕಥೆಯ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಚಿತ್ರದಲ್ಲಿದೆ. ಚಿತ್ರದ ಐದು ಹಾಡುಗಳಿಗೆ ಸುರೇಂದ್ರನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮನುಗೌಡ ಛಾಯಾಗ್ರಹಣ ಚಿತ್ರಕ್ಕಿದೆ’ ಎಂದರು.
ನಟ ಅಭಯ್ ಮಾತನಾಡಿ, ‘ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಶಿವ. ಆತ ಒಳ್ಳೆಯವರಿಗೆ ಒಳ್ಳೆಯವನು, ಕೆಟ್ಟವರಿಗೆ ಕೆಟ್ಟವನು. ಪ್ರೇಕ್ಷಕರು ಕೇಳುವಂಥ ಎಲ್ಲಾ ಕಂಟೆಂಟ್ ಚಿತ್ರದಲ್ಲಿದೆ. ನಾನು ಕೂಡ ಮಂಡ್ಯಹೈದನ ಪಾತ್ರಕ್ಕಾಗಿ ತುಂಬಾ ಹೋಮ್ ವರ್ಕ್ ಮಾಡಿಕೊಂಡಿದ್ದೇನೆ. ಪಕ್ಕಾ ಮಂಡ್ಯ ಸೊಗಡಿನ ಭಾಷೆ ನಮ್ಮ ಚಿತ್ರದಲ್ಲಿದೆ’ ಎಂದರು. ಕಿರುತೆರೆ ನಟಿ ಭೂಮಿಕಾ ಈ ಚಿತ್ರದ ಮುಖಾಂತರ ನಾಯಕಿಯಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.