ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣದ ಸಿನಿಮಾಗಳನ್ನು ಕಂಡು ಬಾಲಿವುಡ್‌ನವರು ಹೆದರಿದ್ದಾರೆ: ಮನೋಜ್ ಬಾಜಪೇಯಿ

Last Updated 28 ಏಪ್ರಿಲ್ 2022, 11:21 IST
ಅಕ್ಷರ ಗಾತ್ರ

ಮುಂಬೈ: ದಕ್ಷಿಣ ಭಾರತದ ಭಾಷೆಗಳ ಸಿನಿಮಾಗಳ ಯಶಸ್ಸಿನ ಪರಿಣಾಮಹಿಂದಿ ಚಿತ್ರೋದ್ಯಮದ ಮೇಲೆ ಭಾರಿ ಪ್ರಮಾಣದಲ್ಲಿ ಆಗಿದೆ. ಅಲ್ಲಿನ (ದಕ್ಷಿಣ ಭಾಷೆಗಳ) ಸಿನಿಮಾಗಳನ್ನು ನೋಡಿ ಬಾಲಿವುಡ್‌ ಸಿನಿಮಾ ನಿರ್ಮಾಪಕರು ಹೆದರಿದ್ದಾರೆ ಎಂದು ನಟ ಮನೋಜ್‌ ಬಾಜಪೇಯಿ ಅಭಿಪ್ರಾಯಪಟ್ಟಿದ್ದಾರೆ.

ಮನೋಜ್‌ ಬಾಜಪೇಯಿ ಅವರು,ಕನ್ನಡದ 'ಕೆಜಿಎಫ್‌–2', ತೆಲುಗು ಸಿನಿಮಾಗಳಾದ 'ಪುಷ್ಪ' ಮತ್ತು 'ಆರ್‌ಆರ್‌ಆರ್‌' ಯಶಸ್ವಿನ ಬಗ್ಗೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದ ನಂತರದ ಸಮಯದಲ್ಲಿ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ; ದಿ ರೈಸ್‌' ಸಿನಿಮಾ ಯಶಸ್ಸು ಸಾಧಿಸಿತ್ತು. ಇದರೊಂದಿಗೆ ಹಿಂದಿ ಭಾಷಿಕ ಪ್ರದೇಶಗಳಲ್ಲಿ ದಕ್ಷಿಣದ ಸಿನಿಮಾಗಳ ಪ್ರಾಬಲ್ಯಕ್ಕೆ ನಾಂದಿ ಹಾಡಿತ್ತು. ಈ ಸಿನಿಮಾದ ಹಿಂದಿ ಅವತರಣಿಕೆಯು ₹ 100 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. ಇದರ ಬೆನ್ನಲ್ಲೇ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಮತ್ತು ಕನ್ನಡದ 'ಕೆಜಿಎಫ್‌–2' ಸಿನಿಮಾಗಳು 'ಪುಷ್ಪ' ದಾಖಲೆ ಮೀರಿ ₹ 300 ಕೋಟಿಗೂ ಹೆಚ್ಚಿನ ಸಂಪಾದನೆ ಮಾಡಿವೆ ಎಂದು ವರದಿಗಳು ಪ್ರಕಟವಾಗಿವೆ. ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಸೇರಿದಂತೆ ಹಲವರು ಇದೇ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿದ್ದಾರೆ.

ಮನೋಜ್‌ ಬಾಜಪೇಯಿ ಅವರು, 'ಸಾಕಷ್ಟು ಬ್ಲಾಕ್‌ಬಸ್ಟರ್‌ಗಳಿವೆ... ನಾನುಮತ್ತು ನನ್ನಂತಹ ಹಲವರನ್ನು ಒಂದು ಕ್ಷಣ ಮರೆತೇಬಿಡಿ.ಇದು (ದಕ್ಷಿಣದ ಸಿನಿಮಾಗಳ ಯಶಸ್ಸು) ಮುಂಬೈ ಸಿನಿಮಾ ಉದ್ಯಮದಲ್ಲಿನ ಪ್ರಮುಖರ ಬೆನ್ನುಮೂಳೆಯೊಳಗೆ ನೋವು ಉಂಟುಮಾಡಿದೆ. ಎಲ್ಲಿ ನೋಡಿಕೊಳ್ಳಬೇಕು ಎಂಬುದೇ ಅವರಿಗೆ ಗೊತ್ತಾಗುತ್ತಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅಭಿನಯದ, ಬಿಗ್‌ ಬಜೆಟ್‌ ಸಿನಿಮಾ 'ಸೂರ್ಯವಂಶಿ' ಭಾರತದಲ್ಲಿ ₹ 200 ಕೋಟಿ ಗಳಿಸಲು ತಿಣುಕಾಡುತ್ತಿರುವ ಹೊತ್ತಿನಲ್ಲಿ,ಕೆಜಿಎಫ್‌–2 ಅಥವಾ ಆರ್‌ಆರ್‌ಆರ್‌ ಚಿತ್ರಗಳ ಹಿಂದಿ ಅವತರಣಿಕೆಗಳೇ ₹ 300 ಕೋಟಿಗೂ ಅಧಿಕ ಗಳಿಕೆ ಕಂಡಿವೆ ಎಂಬುದನ್ನು ಮನೋಜ್‌ ಉಲ್ಲೇಖಿಸಿದ್ದಾರೆ. 'ಈ ಸಿನಿಮಾಗಳ ಯಶಸ್ಸು ಬಾಲಿವುಡ್‌ಗೆ ಪಾಠವಾಗಲಿದೆ. ಅದನ್ನು ಆದಷ್ಟು ಬೇಗನೆ ಕಲಿಯುವ ಅಗತ್ಯವಿದೆ' ಎಂದು ಕಿವಿಮಾತು ಹೇಳಿದ್ದಾರೆ.

ಮನೋಜ್‌ ಬಾಜಪೇಯಿ ಅಭಿನಯದ 'ಡಯಲ್‌ 100'ಜೀ5ನಲ್ಲಿ ಮತ್ತು 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸಿರೀಸ್‌ ಅಮೆಜಾನ್‌ ಪ್ರೈಂನಲ್ಲಿ ಕಳೆದ ವರ್ಷ ಬಿಡುಗಡೆಯಾಗಿದ್ದವು. ಸದ್ಯ ಅವರು 'ಡಿಸ್ಪ್ಯಾಚ್‌' ಮತ್ತು 'ಗುಲ್‌ಮೊಹರ್‌' ಸಿನಿಮಾಗಳಲ್ಲಿ ನಟಿಸುತ್ತಿದ್ದು,'ದಿ ಫ್ಯಾಮಿಲಿ ಮ್ಯಾನ್‌' ಸರಣಿಯ ಮೂರನೇ ಭಾಗದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT