‘ಮಾಸ್ಟರ್ ಎಂಬ ಗುರುತಿನ ಟ್ಯಾಗ್’

7

‘ಮಾಸ್ಟರ್ ಎಂಬ ಗುರುತಿನ ಟ್ಯಾಗ್’

Published:
Updated:
Deccan Herald

ಬಾಲನಟರಿಗೆ ‘ಮಾಸ್ಟರ್’ ಎಂದು ಯಾಕೆ ಕರೆಯುತ್ತಾರೋ ನನಗೆ ಗೊತ್ತಿಲ್ಲ. ‘ಬೇಬಿ ಶಾಮಿಲಿ’ ಅಂತಿದ್ದರಲ್ಲ; ಅದರ ಅರ್ಥ ಗೊತ್ತು.

ಆದರೆ, ನಾನು ‘ಮಾಸ್ಟರ್‌’ ಎಂಬ ಪದವನ್ನು ‘ರೆಕಗ್ನಿಷನ್ ಟ್ಯಾಗ್’ ಅಂತ ಭಾವಿಸಿದ್ದೇನೆ. ನನ್ನದು ವಿಶೇಷವಾದ ಹೆಸರಲ್ಲ. ಬರೀ ಆನಂದ್‌ ಎಂದು ಕರೆದರೆ ಯಾರಿಗೂ ಗೊತ್ತಾಗುವುದಿಲ್ಲ. ಶಾರುಖ್ ಅಂದರೆ ಜಗತ್ತಿನಲ್ಲಿ ಒಬ್ಬರೇ ಎಂದು ಹೆಸರಿಗೆ ‘ಐಡೆಂಟಿಟಿ’ ಇದೆ.

ಹೀಗಾಗಿ ‘ಮಾಸ್ಟರ್‌ ಆನಂದ್’ ಎನ್ನುವುದು ನನಗೆ ಸಿಕ್ಕಿರುವ ಗುರುತು. ಜನ ಈಗಲೂ ಅದೇ ಪ್ರೀತಿ, ಭಾವನೆಯಿಂದ ನೋಡುತ್ತಾರೆ. ನನ್ನನ್ನು, ಮಂಜುನಾಥ್‌ ಅವರನ್ನು ನೋಡಿದರೆ, ‘ನೀವಿಬ್ಬರೂ ದೊಡ್ಡವರಾಗಲೇಬಾರದಿತ್ತು’ ಅಂತಾರೆ.

ಅಷ್ಟೇ ಅಲ್ಲ, ‘ಡ್ರಾಮಾ ಜೂನಿಯರ್’ ರಿಯಾಲಿಟಿ ಷೋಗೆ ನನ್ನನ್ನೇ ನಿರೂಪಕನನ್ನಾಗಿ ಯಾಕೆ ಆರಿಸಿದರು ಹೇಳಿ? ಬಹುಶಃ ಮೊದಲು ಚಾನೆಲ್‌ನವರು ಆಡಿಷನ್‌ ನಡೆಸಿದ ಮೇಲೆ ‘ಮಾಸ್ಟರ್‌ ಅಚಿಂತ್ಯ’, ‘ಮಾಸ್ಟರ್‌ ಪುಟ್ಟರಾಜು’ ಅಂತ ಹೆಸರುಗಳನ್ನು ಪಟ್ಟಿ ಮಾಡಿಡಿರುತ್ತಾರೆ, ನಿರೂಪಕನಾಗಿ ‘ಮಾಸ್ಟರ್‌ ಆನಂದ್ ಆಗಬಹುದು’ ಅಂತ ಯೋಚಿಸಿರುತ್ತಾರೆ.

ಇಲ್ಲಿಯೂ ನನ್ನ ಹೆಸರಿನ ಜತೆ ಇರುವ ‘ಮಾಸ್ಟರ್’ ಎಂಬ ಪದವೇ ವರ್ಕ್‌ಔಟ್‌ ಆಗಿರುವುದು. ನಾನು ಬಾಲನಟನಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾಗ ನನ್ನ ತಂದೆ ನನ್ನನ್ನು ಚಿತ್ರೀಕರಣ ನಡೆಯುವ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಎಲ್ಲ ಮಕ್ಕಳಂತೆ ನಾನೂ ತೂಕಡಿಸುತ್ತಾ ಅವರ ಭುಜಕ್ಕೆ ಒರಗುತ್ತಿದ್ದೆ. ನನಗೂ ಶೌಚಾಲಯಕ್ಕೆ ಹೋಗಲು ಅವಸರ ಆಗುತ್ತಿತ್ತು. ಆಗ ಅವರು ಬಾಟಲ್‌ನಲ್ಲಿ ನೀರು ಹಿಡಿದುಕೊಂಡು ನನಗಾಗಿ ಕಾಯುತ್ತಿದ್ದರು.

‘ಡ್ರಾಮಾ ಜೂನಿಯರ್ಸ್‌’ ಚಿತ್ರೀಕರಣ ನಡೆಯುವಾಗಲೂ ಪೋಷಕರು ಬಿಡುವಿನಲ್ಲಿ ಮಕ್ಕಳಿಗೆ ಊಟ ಮಾಡಿಸುತ್ತಾರೆ. ಮರದ ನೆರಳಿನಲ್ಲಿ ಅವರ ನಡುವೆ ಬಾಂಧವ್ಯ ಅರಳುತ್ತದೆ. ಸೋಫಾ ಮೇಲೆಯೇ ಮಕ್ಕಳು ಜಾರಿಕೊಂಡು ಮಲಗಿಬಿಡುತ್ತಾರೆ. ಅವನ್ನೆಲ್ಲ ನೋಡಿದಾಗ ನನ್ನ ಬಾಲ್ಯದ ಆ ದಿನಗಳೂ ಕಣ್ಮುಂದೆ ಬರುತ್ತವೆ.

ನನಗೆ ‘ಮಾಸ್ಟರ್‌’ ಎಂಬ ಟ್ಯಾಗ್‌ ಯಾವಾಗ ಬಂದಿತು ಎನ್ನುವುದು ನೆನಪಿಲ್ಲ. ಮರಾಠಿಯ ರಂಗ ಹಾಗೂ ಸಿನಿಮಾ ನಿರ್ದೇಶಕ ಸಚಿನ್‌ ಈಗ ದೊಡ್ಡ ಹೆಸರು. ಅವರನ್ನು ಈಗಲೂ ‘ಮಾಸ್ಟರ್‌ ಸಚಿನ್‌’ ಎಂದೇ ಕರೆಯುತ್ತಾರೆ.

ಬಾಲನಟನಾಗಿ ಅವರು ಉಳಿಸಿರುವ ಛಾಪು ಅಂಥದ್ದು. ಇನ್ನು ‘ಮಾಸ್ಟರ್’ ಎಂಬ ಪದವನ್ನು ‘ಗುರು’ ಎಂಬುದಕ್ಕೆ ಅನ್ವಯಿಸಿ ನೋಡುವುದಾದರೆ, ಬದುಕಿನ ಬೇರೆ ಬೇರೆ ಹಂತಗಳಲ್ಲಿ ವಿವಿಧ ಗುರುಗಳನ್ನು ನೋಡಿದ್ದೇನೆ.

ನನಗೆ ನನ್ನ ತಂದೆ ಹರಿಹರನ್ ಅಭಿನಯ ಹೇಳಿಕೊಟ್ಟ ಮೊದಲ ಗುರು. ವೈಯಕ್ತಿಕ ಬದುಕಿನಲ್ಲಿ ವರ್ತನೆಯ ಮೇಲೆ ಹಲವರು ಪರಿಣಾಮ ಬೀರಿದ್ದಾರೆ. ಅದಕ್ಕೆ ಕೆಲವು ಉದಾಹರಣೆಗಳನ್ನು ಕೊಡಬಲ್ಲೆ. ‘ಗೌರಿ ಗಣೇಶ’ ಸಿನಿಮಾ ಮಾಡುವಾಗ ಫಣಿ ರಾಮಚಂದ್ರ ಅವರಿಂದ ಒಂದಿಷ್ಟು ವಿಷಯಗಳನ್ನು ಕಲಿತಿದ್ದೇನೆ. ‘ಶಿವಶಂಕರ್’ ಸಿನಿಮಾದಲ್ಲಿ ಬಾಲನಟನಾಗಿದ್ದಾಗ ಹಿರಿಯ ನಿರ್ದೇಶಕ ಭಾರ್ಗವ ಅವರು ನನ್ನನ್ನು ‘ಅಂಡೆ ರಾಮ’ ಎಂದೇ ಕರೆಯುತ್ತಿದ್ದರು.

ಕ್ಯಾಮೆರಾಗೆ ಅಂಡು ತೋರಿಸಿಕೊಂಡು ನಿಲ್ಲುತ್ತಿದ್ದೆ ಎಂಬ ಕಾರಣಕ್ಕೆ ತಮಾಷೆಗೆ ಅವರು ಆ ಹೆಸರಿಟ್ಟಿದ್ದರು. ‘ಕರ್ಪೂರದ ಗೊಂಬೆ’ ಸಿನಿಮಾದಲ್ಲಿ ದೊಡ್ಡಣ್ಣ ಅವರದ್ದು ಪುಟ್ಟರಂಗಣ್ಣ ಎಂಬ ಪಾತ್ರ. ನಾನು ಅವರನ್ನು ಕಿಚಾಯಿಸುವ ಪಾತ್ರವದು. ಆಗ ಅವರ ಮುಖಕ್ಕೆ ಮುಖ ಕೊಟ್ಟು ಮಾತನಾಡಲು ಹಿಂಜರಿಯುತ್ತಿದ್ದೆ. ಬೇರೆ ಎಲ್ಲೋ ನೋಡಿಕೊಂಡು ಮಾತನಾಡುತ್ತಿದ್ದೆ. ಆಗ ಅವರೇ ನನ್ನನ್ನು ತಿದ್ದಿದರು. ಸಿನಿಮಾ ನೋಡಿದಾಗ ಗೊತ್ತಾಯಿತು, ಮುಖಕ್ಕೆ ಮುಖ ಕೊಟ್ಟು ಮಾತನಾಡಿದರೆ ಪಾತ್ರಗಳ ಪ್ರಭಾವ ಹೇಗಿರುತ್ತದೆ ಎಂದು. ನಾನು ಹೈಸ್ಕೂಲು ಓದಿದ್ದು ಬೆಂಗಳೂರಿನ ವಿದ್ಯಾವರ್ಧಕ ಶಾಲೆಯಲ್ಲಿ. ಎಚ್‌. ಸತ್ಯನಾರಾಯಣರಾವ್, ಸತ್ಯಪ್ರಕಾಶ್, ಸಂಸ್ಕೃತ ಮೇಷ್ಟ್ರು ವೆಂಕಟೇಶ್ ಇವರೆಲ್ಲ ಪಾಠಗಳ ಜತೆಗೆ ಬದುಕಿನ ಸೂಕ್ಷ್ಮಗಳನ್ನು ಹೇಳಿಕೊಟ್ಟವರು. ನಾನು ಪಿಯು–ವಿಜ್ಞಾನದಲ್ಲಿ ಫೇಲಾದೆ. ಆಮೇಲೆ ದೂರಶಿಕ್ಷಣದ ಮೂಲಕ ಬಿ.ಕಾಂ ಪದವಿ ಪಡೆದೆ. ಆಗ ಗೋಪಿನಾಥ್, ಸಂದೀಪ್ ನಾಯರ್‌ ಎನ್ನುವವರಿಂದ ನನಗೆ ಬಿಡುವಿದ್ದಾಗ ಪಾಠ ಹೇಳಿಸಿಕೊಂಡೆ. ಪ್ರಥಮ ದರ್ಜೆಯಲ್ಲಿ ಪಾಸಾದೆ. ಅಕೌಂಟೆನ್ಸಿಯಲ್ಲಿ ನನಗೆ 95 ಅಂಕಗಳು ಬಂದಿದ್ದವು. ಹೀಗೆ ನಾನು ‘ಮಾಸ್ಟರ್ ಆನಂದ್’ ಆದರೂ ನನ್ನ ಮಾಸ್ಟರ್‌ಗಳು ಹಲವರಿದ್ದಾರೆ. ಅವರೆಲ್ಲರಿಗೆ ಸಲಾಂ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !